ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲ್ದೂರು | ಆಟದ ಮೈದಾನ: ಕಂದಾಯ ಇಲಾಖೆ– ಗ್ರಾ.ಪಂ. ನಡುವೆ ಜಟಾಪಟಿ

ಜೋಸೆಫ್.ಎಂ
Published 6 ನವೆಂಬರ್ 2023, 7:59 IST
Last Updated 6 ನವೆಂಬರ್ 2023, 7:59 IST
ಅಕ್ಷರ ಗಾತ್ರ

ಆಲ್ದೂರು: ಸರ್ಕಾರಿ ಶಾಲೆಗೆ ಹೊಂದಿಕೊಂಡಿದ್ದ ಆಟದ ಮೈದಾನ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಮುಂದಾಗಿದ್ದು, ಈಗ ಜಾಗದ ವಿಷಯಕ್ಕೆ ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ನಡುವೆ ಜಟಾಪಟಿಗೆ ಆರಂಭವಾಗಿದೆ.

ಹವ್ವಳ್ಳಿ ಗ್ರಾಮದ ಸರ್ವೆ ನಂಬರ್ 5ರಲ್ಲಿ 1937ನೇ ಸಾಲಿನಿಂದ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಇದೆ. ಗ್ರಾಮ ಪಂಚಾಯಿತಿಯಿಂದ ಕಾಂಪೌಂಡ್ ಕೂಡ ನಿರ್ಮಾಣವಾಗಿದೆ. ಶಾಲೆಯಲ್ಲಿ ಸದ್ಯ 130 ವಿದ್ಯಾರ್ಥಿಗಳಿದ್ದು, ಪಕ್ಕದಲ್ಲೇ ಇರುವ ಉರ್ದು ಶಾಲೆಯಲ್ಲಿ 20 ಮಕ್ಕಳು ಕಲಿಯುತ್ತಿದ್ದಾರೆ.

ಈ ಶಾಲೆಗೆ ಹೊಂದಿಕೊಂಡಂತೆ ಇದ್ದ ಆಟದ ಮೈದಾನದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಅಡಿಯಲ್ಲಿ ₹5 ಲಕ್ಷ ವೆಚ್ಚದಲ್ಲಿ ಮೈದಾನ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ. ಥ್ರೋಬಾಲ್, ವಾಲಿಬಾಲ್ ಅಂಕಣಗಳನ್ನು ನಿರ್ಮಿಸಲಾಗುತ್ತಿದೆ.

ಪಕ್ಕದಲ್ಲಿರುವ ಮಹಿಳಾ ಸಮಾಜದ ಕಟ್ಟಡದಲ್ಲಿ ನಾಡ ಕಚೇರಿ ನಡೆಯುತ್ತಿದೆ. ಇದರ ಹಿಂಭಾಗದಲ್ಲಿ ಈಗ ಈ ಅಂಕಣಗಳನ್ನು ನಿರ್ಮಿಸಲಾಗುತ್ತಿದ್ದು, ಕಾಮಗಾರಿಯನ್ನು ಕಂದಾಯ ಇಲಾಖೆ ಅಧಿಕಾರಿಗಳು ತಡೆಹಿಡಿದಿದ್ದಾರೆ.

ನಾಡ ಕಚೇರಿ ಕಟ್ಟಡ ನಿರ್ಮಾಣಕ್ಕೆ ಮಂಜೂರಾಗಿರುವ ಜಾಗದಲ್ಲಿ ಅಂಕಣ ನಿರ್ಮಿಸಲಾಗುತ್ತಿದೆ ಎಂಬುದು ಕಂದಾಯ ಇಲಾಖೆ ಅಧಿಕಾರಿಗಳ ವಾದ. ಸರ್ವೆ ಕಾರ್ಯವನ್ನೂ ನಡೆಸಿದ್ದು, ಕಾಮಗಾರಿ ನಡೆಯುತ್ತಿರುವ ಜಾಗದಲ್ಲೆ ಹದ್ದುಬಸ್ತು ಕಲ್ಲುಗಳನ್ನು ಹಾಕಲಾಗಿದೆ.

‘ನಾಡಕಚೇರಿ ನಿರ್ಮಾಣಕ್ಕೆ 10 ಗುಂಟೆ ಜಾಗ ಮಂಜೂರಾಗಿದೆ. ಕಟ್ಟಡ ನಿರ್ಮಾಣಕ್ಕೆ ಅನುದಾನ ಕೋರಲಾಗಿದೆ.  ಒಂದು ವಾರದಿಂದ ಗ್ರಾಮ ಪಂಚಾಯಿತಿಯಿಂದ ಸರ್ಕಾರಿ ಬೀಳು ಮತ್ತು ನಾಡಕಚೇರಿಗೆ ಮಂಜೂರಾದ ಜಾಗದಲ್ಲೂ ಕಾಮಗಾರಿ ಆರಂಭಿಸಿದೆ. ಮೌಖಿಕವಾಗಿ ತಿಳಿಸಿದ್ದರೂ ಕಾಮಗಾರಿ ಮುಂದುವರಿಸಿದ್ದಾರೆ’ ಎಂಬುದು ಕಂದಾಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ.

‘ಶಾಲಾ ಆಟದ ಮೈದಾನದ ಕಾಂಪೌಂಡ್ ಒಳಗೆ ಇರುವ 10 ಗುಂಟೆ ಜಾಗವನ್ನು ಯಾರ ಅಭಿಪ್ರಾಯವನ್ನೂ ಕೇಳದೆ, ಯಾರಿಗೂ ಮಾಹಿತಿಯನ್ನೂ ನೀಡದೆ ನಾಡಕಚೇರಿ ಅಧಿಕಾರಿಗಳು ಮಂಜೂರು ಮಾಡಿಕೊಂಡಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದಿರುವ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಪರಮೇಶ್, ಪೊಲೀಸ್ ಠಾಣೆಗೂ ದೂರು  ನೀಡಿದ್ದಾರೆ.  

‘ಗ್ರಾಮಠಾಣ ವ್ಯಾಪ್ತಿಯಲ್ಲಿ ಜಾಗ ಇಲ್ಲ. ಕಂದಾಯ ಭೂಮಿ ಆಗಿರುವುದರಿಂದ ಯಾರ ಅನುಮತಿಯನ್ನೂ ಪಡೆದು ಸರ್ಕಾರಿ ಕಟ್ಟಡಕ್ಕೆ ಜಾಗ ಮಂಜೂರು ಮಾಡಬೇಕಿಲ್ಲ. ಸರ್ಕಾರಿ ಕಟ್ಟಡ ನಿರ್ಮಾಣವಾದರೆ ಅದು ಸಾರ್ವಜನಿಕರಿಗೇ ಅನುಕೂಲ’ ಎಂಬುದು ಕಂದಾಯ ಇಲಾಖೆ ಅಧಿಕಾರಿಗಳ ವಾದ.

ಯಾರು ಏನಂದರು?

ಮಂಜೂರಾತಿ ರದ್ದುಪಡಿಸಿ ಆಟದ ಮೈದಾನಕ್ಕೆ ಜಾಗ ಬಿಟ್ಟುಕೊಡಬೇಕು. ಆಟದ ಮೈದಾನದಲ್ಲೇ ಪಂಚಾಯಿತಿ ಅಧ್ಯಕ್ಷೆ ಜಯಶೀಲ ಚಿದಂಬರ್ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ.  ಉಪಾಧ್ಯಕ್ಷ ಡಿ.ಬಿ. ಅಶೋಕ್ ಮತ್ತು ಸದಸ್ಯರ ಉಪಸ್ಥಿತಿಯಲ್ಲಿ ಸಭೆ ನಡೆಯಲಿದ್ದು ಸಾರ್ವಜನಿಕರು ಮತ್ತು ಪೋಷಕರು ಪಾಲ್ಗೊಳ್ಳಬೇಕು - ಎಸ್.ಡಿ.ಎಂ.ಸಿ ಅಧ್ಯಕ್ಷ ಪರಮೇಶ್ ಮನವಿ ಮಾಡಿದ್ದಾರೆ.

ಹಲವು ವರ್ಷಗಳಿಂದ ನಾಡ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಒಂದು ಬಾರಿಯೂ ವಿದ್ಯಾರ್ಥಿಗಳು ಆಟ ಆಡುವುದನ್ನು ನಾವು ನೋಡಿಲ್ಲ. ನಿಯಮಾನುಸಾರ ಮೇಲಾಧಿಕಾರಿಗಳಿಗೆ ತಿಳಿಸಿ ಮಂಜೂರು ಮಾಡಿಸಿಕೊಂಡಿದ್ದೇವೆ. –ಸುಮಿತ್ರಾ ಉಪತಹಶೀಲ್ದಾರ್

ಗ್ರಾಮ ಪಂಚಾಯತಿಯವರು ತಪ್ಪಾಗಿ ಗ್ರಹಿಸಿ ಕಾಮಗಾರಿ ಆರಂಭಿಸಿದ್ದು ಕಾಮಗಾರಿ ನಿಲ್ಲಿಸುವಂತೆ ಪಿಡಿಒಗೆ ಸೂಚಿಸಲಾಗಿದೆ. ನೋಟಿಸ್ ಜಾರಿ ಮಾಡಲಾಗುವುದು –ಸುಮಂತ್ ತಹಶೀಲ್ದಾರ್

ಗ್ರಾಮಠಾಣ ವ್ಯಾಪ್ತಿಗೆ ಬಾರದ ಜಾಗದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನರೇಗಾ ಕಾಮಗಾರಿ ಆರಂಭಿಸಿದ್ದಾರೆ. ಕಾಮಗಾರಿ ನಿಲ್ಲಿಸಲು ಸೂಚಿಸಲಾಗಿದೆ –ಎಚ್.ಡಿ.ರಾಜೇಶ್ ಉಪವಿಭಾಗಾಧಿಕಾರಿ 

ಕಾಮಗಾರಿ ಆರಂಭವಾಗಿರುವ ಜಾಗದಲ್ಲಿ ಸರ್ವೆ ನಡೆಸಿ ಕಂದಾಯ ಇಲಾಖೆ ಅಧಿಕಾರಿಗಳು ಹದ್ದುಬಸ್ತು ಕಲ್ಲುಗಳನ್ನು ಹಾಕಿದರು
ಕಾಮಗಾರಿ ಆರಂಭವಾಗಿರುವ ಜಾಗದಲ್ಲಿ ಸರ್ವೆ ನಡೆಸಿ ಕಂದಾಯ ಇಲಾಖೆ ಅಧಿಕಾರಿಗಳು ಹದ್ದುಬಸ್ತು ಕಲ್ಲುಗಳನ್ನು ಹಾಕಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT