ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್– ಆರೋಪಿ ನಡುವೆ ಘರ್ಷಣೆ

ಮೂಲ್ಕಿ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲು
Last Updated 9 ಏಪ್ರಿಲ್ 2021, 2:08 IST
ಅಕ್ಷರ ಗಾತ್ರ

ಮೂಲ್ಕಿ: ಎರಡು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಲು ಹೋದಾಗ ಮನೆಯವರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ದೂರು– ಪ್ರತಿದೂರು ದಾಖಲಾಗಿದೆ.

ಎರಡು ಪ್ರಕರಣಕ್ಕೆ ಬೇಕಾಗಿದ್ದ ಆರೋಪಿ ಅನ್ಸಾರ್ (20) ಎಂಬಾತನಿಗೆ ನೋಟಿಸ್ ಜಾರಿ ಮಾಡಲು ಮುಲ್ಕಿ ಪೊಲೀಸರು ಕೆ.ಎಸ್.ರಾವ್ ನಗರದ ಮಸೀದಿ ಬಳಿಯ ಆರೋಪಿಯ ಸಂಬಂಧಿಕರ ಮನೆಗೆ ಬರುತ್ತಿದ್ದಂತೆ ಮನೆಮಂದಿ ಬಾಗಿಲನ್ನು ಮುಚ್ಚಿದ್ದಾರೆ ಎನ್ನಲಾಗಿದೆ.

ಈ ಸಂದರ್ಭ ಪೊಲೀಸರು ಎಚ್ಚರಿಕೆಗಳನ್ನು ನೀಡಿದರೂ ಮನೆಮಂದಿ ಜಗ್ಗದ ಕಾರಣ, ಬಾಗಿಲು ಒಡೆದು ಪೊಲೀಸರು ಒಳಗೆ ಪ್ರವೇಶ ಮಾಡಿದ್ದಾರೆ. ಈ ವೇಳೆ ಮನೆಮಂದಿಗೆ ಹಾಗೂ ಮೂಲ್ಕಿ ಪೊಲೀಸರಿಗೂ ನೂಕಾಟ ತಳ್ಳಾಟ ನಡೆದಿದೆ. ಈ ನಡುವೆ ಆರೋಪಿಯು ಕತ್ತಿಯಿಂದ ಮೂಲ್ಕಿ ಎಎಸ್ಐ ಅಶೋಕ ಅವರಿಗೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಅಶೋಕ ಅವರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

‘ಮನೆಯ ಒಳಗೆ ಆರೋಪಿಗಳಾದ ಅನ್ಸಾರ್, ಸಾದಿಕ್, ಮತ್ತಿಬ್ಬರು ಮಹಿಳೆಯರು ಸೇರಿ ನನ್ನ ಕುತ್ತಿಗೆ ಹಿಡಿದು, ಕತ್ತಿಯಿಂದ ಕೈಗೆ ಹಲ್ಲೆ ನಡೆಸಲಾಗಿದೆ ಅವಾಚ್ಯ ಶಬ್ದ ಪ್ರಯೋಗಿಸಿ, ಜೀವ ಬೆದರಿಕೆ ಹಾಕಲಾಗಿದೆ’ ಎಂದು ಅಶೋಕ ಮೂಲ್ಕಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅನ್ಸಾರ್‌ನ ದೊಡ್ಡಮ್ಮ ಮುಮ್ತಾಜ್ ಅವರು ಎಎಸ್ಐ ಅಶೋಕ್ ಆರೋಪವನ್ನು ನಿರಾಕರಿಸಿದ್ದು, ‘ತಮ್ಮ ಮೇಲೆ ಮೂಲ್ಕಿ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಚಾಕು ಇರಿತದಿಂದ ಗಾಯಗೊಂಡಿರುವ ಅನ್ಸಾರ್‌ನನ್ನು ಮುಕ್ಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ಅನ್ಸಾರ್ ತಂದೆ ಸಾದಿಕ್, ದೊಡ್ಡಮ್ಮ ಮುಮ್ತಾಜ್ ಮೂಲ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆರೋಪ-ಪ್ರತ್ಯಾರೋಪಗಳ ಬಗ್ಗೆ ಮೂಲ್ಕಿ ಠಾಣೆಗೆ ದೂರು ನೀಡಲಾಗಿದೆ.

ಪಣಂಬೂರು ಎಸಿಪಿ ಮಹೇಶ್ ಕುಮಾರ್, ಇನ್‌ಸ್ಪೆಕ್ಟರ್‌ ಅಜ್ಮತ್ ಆಲಿ, ಸುರತ್ಕಲ್ ಇನ್‌ಸ್ಪೆಕ್ಟರ್ ಚಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಗಾಯಾಳು ಚೇತರಿಕೆ

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಅಜ್ಜಿಬೆಟ್ಟು ತಿರುವು ಬಳಿ ಚಾಕು ಇರಿತದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮನೋಜ್ ಗಾಣಿಗ ಚೇತರಿಸಿಕೊಂಡು ಗುರುವಾರ ಬಿಡುಗಡೆಯಾಗಿದ್ದಾರೆ.

ಈ ಮಧ್ಯೆ ಎಸ್ಪಿ ಋಷಿಕೇಶಿ ಭಗವಾನ್ ಸೋನವಾನೆ ಅವರನ್ನು ಗಾಯಾಳು ತಂದೆ ಭೋಜ ಸಪಲ್ಯ ಬ್ರಹ್ಮರಕೂಟ್ಲು ಬುಧವಾರ ಭೇಟಿಯಾಗಿ, ತ್ವರಿತವಾಗಿ ನ್ಯಾಯ ದೊರಕಿಸಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT