ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು| ಕಾಫಿ ಉದ್ಯಮ ಸಢೃಡಕ್ಕೆ ಹತ್ತು ವರ್ಷದ ಕಾರ್ಯ ಯೋಜನೆ: ದಿನೇಶ್

Published 6 ಡಿಸೆಂಬರ್ 2023, 14:51 IST
Last Updated 6 ಡಿಸೆಂಬರ್ 2023, 14:51 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಾಫಿ ಉದ್ಯಮದಲ್ಲಿ ವೈಜ್ಞಾನಿಕತೆ, ತಾಂತ್ರಿಕತೆಗೆ ಮಹತ್ವ ನೀಡಿ ಉತ್ಪಾದನೆ ಪ್ರಮಾಣವನ್ನು ದ್ವಿಗುಣಗೊಳಿಸಲಾಗುವುದು. ಈ ಮೂಲಕ ದೇಶದ ಕಾಫಿ ವಿಶ್ವದಲ್ಲಿ ಮನ್ನಣೆ ಗಳಿಸುವಂತೆ ಮಾಡಲು ಹತ್ತು ವರ್ಷದ ಕಾರ್ಯಯೋಜನೆ ರೂಪಿಸಲಾಗಿದೆ ಎಂದು ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಹೇಳಿದರು.

‘ಬೆಳೆಗಾರರು, ಕಾರ್ಮಿಕರು ಒಳಗೊಂಡಂತೆ ಕಾಫಿ ಉದ್ಯಮ ಹತ್ತು ಹಲವು ಸಂಕಷ್ಟಗಳನ್ನು ಎದುರಿಸುತ್ತಿದೆ. ಈ ನಡುವೆಯೂ ಕಾಫಿ ಉತ್ಪಾದನೆಯಲ್ಲಿ ಭಾರತ ಏಳನೇ ಸ್ಥಾನದಲ್ಲಿದ್ದು, ಮನ್ನಣೆ ಪಡೆದಿದೆ. ವಿಶ್ವಕಾಫಿ ಸಮ್ಮೇಳನದ ಬಳಿಕ ಇದಕ್ಕೆ ಹೆಚ್ಚಿನ ಪ್ರಾಧಾನ್ಯತೆ ದೊರಕಿದ್ದು, ಮುಂದಿನ ಹತ್ತು ವರ್ಷಗಳಲ್ಲಿ ಕಾಫಿ ಉತ್ಪಾದನೆ ಮತ್ತು ರಫ್ತು ಪ್ರಮಾಣವನ್ನು ದ್ವಿಗುಣಗೊಳಿಸಿ ಉದ್ಯಮವನ್ನು ಸದೃಢವಾಗಿಸುವ ಗುರಿ ಹೊಂದಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಪ್ರಮುಖವಾಗಿ ಮಂಡಳಿಯಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ಮಣ್ಣಿನಿಂದ–ಕಪ್‌ನವರೆಗೂ ಕಾಫಿ ಬೆಳೆ ಉತ್ಪಾದನೆ ಅಗತ್ಯವಿರುವ ವಿಷಯದ ಕುರಿತು ಬೆಳೆಗಾರರಿಗೆ ಕಾರ್ಯಾಗಾರ ಕೈಗೊಳ್ಳುವ ಚಿಂತನೆ ಇದೆ. ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದಲ್ಲಿ ಎರಡು ವರ್ಷದ ಡಿಪ್ಲೊಮಾ ಕೋರ್ಸ್ ಆರಂಭಿಸಿ ಯುವ ಜನತೆಗೆ ಕಾಫಿ ಉದ್ಯಮದ ಪರಿಣಿತಿ ನೀಡಿ ಉದ್ಯೋಗ ಕಲ್ಪಿಸುವುದು. ಇದಕ್ಕಾಗಿ ಬೇರೆ, ಬೇರೆ ವಿಶ್ವವಿದ್ಯಾಲಯಗಳ ಜತೆ ಒಪ್ಪಂದಕ್ಕೆ ಮಂಡಳಿ ಮುಂದಾಗಿದೆ ಎಂದರು.

ಕಾಫಿ ಉತ್ಪಾದನೆಯಿಂದ ಬಳಕೆವರೆಗೂ ತಾಂತ್ರಿಕತೆ ಅಳವಡಿಸಿಕೊಂಡು ಇಳುವರಿ ದ್ವಿಗುಣಗೊಳಿಸಲು ಹಾಗೂ ಮಾರುಕಟ್ಟೆ ವಿಸ್ತರಣೆ ಸಂಬಂಧ 2024 ರಿಂದ 2034 ವರೆಗೆ ಹತ್ತು ವರ್ಷದ ಕಾರ್ಯಯೋಜನೆ ತಯಾರಿಸಲಾಗುವುದು. ಈ ಮೂಲಕ ದೇಶದ ಕಾಫಿ ಉದ್ಯಮವನ್ನು ಯುರೋಪ್ ರಾಷ್ಟ್ರ ಒಳಗೊಂಡಂತೆ ವಿಶ್ವಕ್ಕೆ ಪರಿಚಯಿಸಲಾಗುವುದು ಎಂದು ಹೇಳಿದರು.

ಕಾಫಿ ರಫ್ತು ಮಾಡುವಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಕಾಫಿ ಉದ್ಯಮದಿಂದಲೇ ವಿದೇಶಿ ವಿನಿಮಯವನ್ನು ₹1.50 ಲಕ್ಷ ಕೋಟಿ ತರುವ ಗುರಿ ಹೊಂದಲಾಗಿದೆ. ಅಲ್ಲದೇ ದೇಶದಲ್ಲಿ ಐದು ಸಂಶೋಧನಾ ಕೇಂದ್ರಗಳಿದ್ದು, ಹವಾಮಾನ, ಇಳುವರಿ ಕುಂಠಿತ, ತಂತ್ರಜ್ಞಾನ ಅಳವಡಿಕೆ ಕುರಿತು ಪ್ರಗತಿಪರ ಬೆಳೆಗಾರರು, ಎಂಜಿನಿಯರಿಂಗ್ ಕಾಲೇಜುಗಳಿಂದ ಒಪ‍್ಪಂದ ಮಾಡಿಕೊಂಡು ಕಾಫಿ ಉದ್ಯಮ ಪ್ರಗತಿಗೆ ಶ್ರಮಿಸಲಾಗುವುದು ಎಂದರು.

ಹವಾಮಾನ ಆಧಾರಿತ ಬೆಳೆವಿಮೆ ಕಾಳುಮೆಣಸು, ಅಡಕೆಗೆ ಇದೆ. ಇದನ್ನು ಕಾಫಿಗೂ ಅನ್ವಯಿಸುವಂತೆ ಮಾಡಲು ಪ್ರಯತ್ನ ನಡೆಸಲಾಗುವುದು. ಸೆರ್ಫಾಸಿ ಕಾಯ್ದೆ ಕುರಿತು ಕೇಂದ್ರದೊಂದಿಗೆ ಚರ್ಚೆ ನಡೆಸಿ ಕಾಯ್ದೆ ಕೈಬಿಡುವಂತೆ ಒತ್ತಾಯಿಸಲಾಗುವುದು. ಒಟ್ಟಾರೆ ಬದಲಾವಣೆ ತರಲಾಗುವುದು ಎಂದರು.

ಕಾಫಿ ಮಂಡಳಿ ಸದಸ್ಯ ಮಹಾಬಲ ಮಾತನಾಡಿ, ಜಿಲ್ಲೆಯ ಕಾಫಿ ಉದ್ಯಮದಲ್ಲಿ ಶೇ 97ರಷ್ಟು ಸಣ್ಣ ಬೆಳೆಗಾರರಿದ್ದಾರೆ. ಆದ್ದರಿಂದ ಕಾಫಿಯನ್ನು ಕೃಷಿ ವ್ಯಾಪ್ತಿಗೆ ತಂದು ಸಣ್ಣ ರೈತರಿಗೆ ಸಿಗುವ ಸವಲತ್ತುಗಳನ್ನು ಕಲ್ಪಿಸಬೇಕು ಎಂದು ಕೋರಿದರು.

ಗೋಷ್ಠಿಯಲ್ಲಿ ಕಾಫಿ ಮಂಡಳಿ ಸದಸ್ಯ ಪ‍್ರದೀಪ್ ಪೈ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT