ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ತಿದ್ದುಪಡಿ ಕಾಯ್ದೆ ರೈತರಿಗೆ ಮಾರಕ: ಎಚ್‌.ಎನ್‌.ನಾಗಮೋಹನ್‌ ದಾಸ್‌

ರೈತರನ್ನು ರಕ್ಷಿಸಿ, ಭಾರತದ ಸಂವಿಧಾನ ಉಳಿಸಿ ವಿಚಾರ ಸಂಕಿರಣ
Last Updated 27 ಅಕ್ಟೋಬರ್ 2021, 15:57 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಕೃಷಿ ತಿದ್ದುಪಡಿ ಕಾಯ್ದೆಗಳು ರೈತರಿಗೆ ಮಾರಕವಾಗಿವೆ, ಅವು ಅಪ್ರಜಾಪ್ರಭುತ್ವ ಕಾಯ್ದೆಗಳು. ಎಲ್ಲರೂ ಒಗ್ಗಟ್ಟಾಗಿ ಈ ಕಾಯ್ದೆಗಳ ವಿರುದ್ಧ ಐಕ್ಯ ಹೋರಾಟ ಮಾಡಬೇಕು’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ ದಾಸ್‌ ಹೇಳಿದರು.

ಜನ ಸಂಸ್ಕೃತಿ ವೇದಿಕೆ ವತಿಯಿಂದ ಕುವೆಂಪು ಕಲಾ ಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ‘ರೈತರನ್ನು ರಕ್ಷಿಸಿ, ಭಾರತದ ಸಂವಿಧಾನ ಉಳಿಸಿ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಜನರ ಸಮಸ್ಯೆಗಳಿಗೆ ಜನಪರ ಚಳಿವಳಿಗಳೇ ಮದ್ದು. ರೈತರು ದಿವಾಳಿಯಾದರೆ ದೇಶ ದಿವಾಳಿಯಾಗುತ್ತದೆ. ರೈತರನ್ನು ದಿವಾಳಿ ಮಾಡಿ ಭದ್ರ, ಭವ್ಯವಾದ ದೇಶ ಕಟ್ಟಲು ಸಾಧ್ಯ ಇಲ್ಲ’ ಎಂದು ಹೇಳಿದರು.

‘ರೈತರು ರಸ್ತೆಯಲ್ಲಿ ಹೋರಾಟದಲ್ಲಿ ತೊಡಗಿರುವುದು ಸರಿಯಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ರೈತರ ಸಂಕಷ್ಟವನ್ನು ಸುಪ್ರೀಂ ಕೋರ್ಟ್‌ ಅರ್ಥಮಾಡಿಕೊಳ್ಳಬೇಕು. ಅದಕ್ಕೆ ಸ್ಪಂದಿಸಬೇಕು. ಸರ್ಕಾರದ ಕಿವಿ ಹಿಂಡಬೇಕು, ಬುದ್ಧಿ ಹೇಳಿ ಸಮಸ್ಯೆ ಪರಿಹರಿಸಬೇಕು’ ಎಂದರು.

‘ಈ ಕೃಷಿ ಕಾಯ್ದೆಗಳು ಕಾರ್ಪೊರೇಟ್‌ ಕಂಪನಿಗಳಿಗೆ ಅನುಕೂಲವಾಗಿವೆ. ರೈತರಿಗೆ ಮಾರಕವಾಗಿವೆ. ಕೃಷಿಕರನ್ನು ಕೂಲಿಕಾರರನ್ನಾಗಿಸುತ್ತವೆ. ಕೂಲಿಕಾ ರರನ್ನು ಗುಲಾಮರಾಗಿಸುತ್ತವೆ. ನಿರುದ್ಯೋಗ ಹೆಚ್ಚುತ್ತದೆ. ಆಹಾರ ಭದ್ರತೆಗೆ ಧಕ್ಕೆಯಾಗುತ್ತದೆ. ಸಂವಿಧಾ ನಕ್ಕೂ ಏಟು ಬೀಳುತ್ತದೆ’ ಎಂದು ವಿಶ್ಲೇಷಿಸಿದರು.

‘ಎಪಿಎಂಸಿ ರಾಜ್ಯಪಟ್ಟಿಯಲ್ಲಿ ಇದೆ. ಕೇಂದ್ರ ಸರ್ಕಾರವು ಎಪಿಎಂಸಿ ತಿದ್ದುಪಡಿ ಕಾಯ್ದೆ ರೂಪಿಸಿದ್ದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ರಾಜ್ಯ ಸರ್ಕಾರವು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಈ ಕಾಯ್ದೆ ಪ್ರಕಾರ ಯಾರೂ ಬೇಕಾದರೂ ಭೂಮಿ ಖರೀದಿಸಲು ಅವಕಾಶ ಇದೆ. ಈ ತಿದ್ದುಪಡಿ ಕಾಯ್ದೆಯಿಂದ ನಿರುದ್ಯೊಗ ಹೆಚ್ಚಲಿದೆ. ರೈತ ಭೂಮಿ ಕಳೆದುಕೊಳ್ಳುವ ಅಪಾಯ ಎದುರಾಗುತ್ತದೆ. ಸರ್ಕಾರವು ಕಾಯ್ದೆ ಹಿಂಪಡೆದು ಮರುಪರಿಶೀಲನೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ವಿಜ್ಞಾನದ ಸಾಧನೆಗಳನ್ನು ಅವೈಜ್ಞಾನಿಕವಾಗಿ ಬಳಸಿದ್ದರಿಂದ ಕೃಷಿ ಕ್ಷೇತ್ರದಲ್ಲಿ ಬಿಕ್ಕಟ್ಟು ಶುರುವಾಗಿದೆ. ಭೂಮಿಯ ಸುಧಾರಣೆಗೆ ಸರ್ಕಾರ ಆದ್ಯತೆ ನೀಡಬೇಕು’ ಎಂದರು.

‘ನಿಯಮ, ಹಕ್ಕುಗಳು, ಕರ್ತವ್ಯಗಳು, ಸಂಬಂಧಗಳು, ಮೌಲ್ಯಗಳು ಎಲ್ಲವನ್ನು ಒಟ್ಟಾಗಿ ಸಂವಿಧಾನ ಎನ್ನುತ್ತೇವೆ. ಜನರು ಉತ್ತಮ ಜೀವನ ನಡೆಸುವುದಕ್ಕೆ ಸಂವಿಧಾನ ಕಾರಣ. ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದೆ. ಸಂವಿಧಾನ ಎಲ್ಲ ಭಾರತೀಯರ ಮಹಾನ್ ಗ್ರಂಥ’ ಎಂದರು.

ದೇಶ ಎದುರಿಸುತ್ತಿರುವ ಸವಾಲುಗಳು, ಸಮಸ್ಯೆಗಳ ಪರಿಹಾರಕ್ಕೆ ಸಂವಿಧಾನವೊಂದೇ ಮಾರ್ಗ. ಸಂವಿಧಾನವನ್ನು ಪ್ರತಿಯೊಬ್ಬರೂ ಓದಬೇಕು. ಅದರಂತೆ ಎಲ್ಲರೂ ನಡೆದುಕೊಳ್ಳಬೇಕು’ ಎಂದರು.

‘ನಾವು ಬಂದಿರುವುದು ಸಂವಿಧಾನ ಬದಲಾಯಿಸಲು ಕೆಲವರು ಹೇಳಿದ್ದಾರೆ. ಅದನ್ನು ಸುಟ್ಟಿದ್ದಾರೆ. ಸಂವಿಧಾನವನ್ನು ಕಳೆದುಕೊಂಡರೆ ಪ್ರಜಾಪ್ರಭುತ್ವ ಧ್ವಂಸವಾಗುತ್ತದೆ. ಸಂವಿಧಾನವನ್ನು ರಕ್ಷಿಸಬೇಕು’ ಎಂದು ಹೇಳಿದರು.

ಮುಖಂಡ ರವೀಶ್‌ ಕ್ಯಾತನಬೀಡು ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT