ಶುಕ್ರವಾರ, ಡಿಸೆಂಬರ್ 2, 2022
20 °C

ಬೀರೂರು | ಪ್ರತಿಭಾ ಕಾರಂಜಿ ಮಕ್ಕಳ ಪ್ರತಿಭೆಯ ಮೆಟ್ಟಿಲು: ಬಿ.ಆರ್.ಮೋಹನಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀರೂರು: ‘ಶಿಕ್ಷಣ ಮತ್ತು ಕಲೆ ಮಕ್ಕಳಲ್ಲಿ ಸ್ಫೂರ್ತಿಯನ್ನು ತುಂಬುವ ಶಕ್ತಿ ಹೊಂದಿದ್ದು ಪ್ರತಿಭಾ ಕಾರಂಜಿ ಮಕ್ಕಳಲ್ಲಿರುವ ಸುಪ್ತಚೇತನ ಅನಾವರಣಗೊಳಿಸುವ ವೇದಿಕೆ ಆಗಿದೆ’ ಎಂದು ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್.ಮೋಹನಕುಮಾರ್ ಹೇಳಿದರು.

ಪಟ್ಟಣದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಗುರುಭವನದಲ್ಲಿ ಶುಕ್ರವಾರ ಬೀರೂರು ಶೈಕ್ಷಣಿಕ ವಲಯದ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಕಲೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳು ಓದಿನ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಸಾಧನೆಗೆ ಮುಂದಾಗಬೇಕು, ಮಕ್ಕಳ ಮನೋಲ್ಲಾಸಕ್ಕಾಗಿ ಪ್ರತಿಭಾ ಕಾರಂಜಿ ಏರ್ಪಡಿಸುವ ಶಿಕ್ಷಣ ಇಲಾಖೆಯ ಉದ್ದೇಶವೂ ವಿದ್ಯಾರ್ಥಿಗಳು ಎಲ್ಲ ವಿಧದಲ್ಲೂ ಸಮರ್ಥರಾಗಬೇಕು’ ಎನ್ನುವುದೇ ಆಗಿದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಾಜ್‍ಕುಮಾರ್, ‘ಪ್ರತಿಭಾ ಕಾರಂಜಿಯು ಕ್ಲಸ್ಟರ್ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೆ ಮಕ್ಕಳಿಗೆ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿದೆ’ ಎಂದರು.

ಪುರಸಭೆ ಅಧ್ಯಕ್ಷ ಎಂ.ಪಿ.ಸುದರ್ಶನ್ ಮಾತನಾಡಿ, ‘ಯುವ ಪೀಳಿಗೆಯಿಂದ ಭಾರತದ ಸೌಹಾರ್ದ ಎತ್ತಿಹಿಡಿಯುವ ಕೆಲಸವಾಗಬೇಕು. ಮಕ್ಕಳು ದೇಶಾಭಿಮಾನದ ಪ್ರಜ್ಞೆ ರೂಢಿಸಿಕೊಂಡು ಕಲಿಯುವಿಕೆಗೆ ಹೆಚ್ಚಿನ ಆಸಕ್ತಿ ನೀಡಿ, ಪಠ್ಯೇತರ ಚಟುವಟಿಕೆಗಳಲ್ಲೂ ಸಾಧನೆ ಮಾಡಿ’ ಎಂದು ಹಾರೈಸಿದರು.

ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್ ರಾಜ್, ಬೀರೂರು ಶೈಕ್ಷಣಿಕ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಗೀತಾ ವೇದಮೂರ್ತಿ, ಪದಾಧಿಕಾರಿಗಳಾದ ಮಲ್ಲಿಕಾರ್ಜುನ್, ಬಸಪ್ಪ ಮಾತನಾಡಿದರು.

ಶಿಕ್ಷಕರ ಸಂಘದ ಪದಾಧಿಕಾರಿಗಳು, ಪ್ರೌಢಶಾಲಾ ವಿಭಾಗದ 34 ಶಾಲೆಗಳ 1050 ಮತ್ತು ಪ್ರಾಥಮಿಕ ಶಾಲೆಯ 570 ಮಕ್ಕಳು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದರು.

ಪುರಸಭೆ ಸದಸ್ಯ ಮಲ್ಲಿಕಾರ್ಜುನ್, ಕೆಎಲ್‍ಕೆ ಶಾಲೆ ಮುಖ್ಯಶಿಕ್ಷಕಿ ಪುಷ್ಪಾಂಜಲಿ, ಎಸ್‍ಜೆಎಂ ಮುಖ್ಯಶಿಕ್ಷಕ ಈಶಾ ನಾಯ್ಕ, ಶಿಕ್ಷಕರ ಸಂಘದ ಮೈಲಾರಪ್ಪ, ಉಮಾ ಮಹೇಶ್, ಬಿ.ಟಿ.ಅಜ್ಜಯ್ಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು