ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀರೂರು: 4200 ಕ್ವಿಂಟಲ್‌ ಕೊಬ್ಬರಿ ಖರೀದಿ

ನಾಫೆಡ್‌ನಿಂದ ಖರೀದಿ: ಜೂನ್‌ 14 ಕೊನೆಯ ದಿನ
Published 14 ಮೇ 2024, 15:45 IST
Last Updated 14 ಮೇ 2024, 15:45 IST
ಅಕ್ಷರ ಗಾತ್ರ

ಬೀರೂರು: ಪಟ್ಟಣದ ಎಪಿಎಂಸಿ ಆವರಣದಲ್ಲಿ ರಾಷ್ಟ್ರೀಯ ಕೃಷಿ ಮಾರಾಟ ಸಹಕಾರ ಮಹಾಮಂಡಳದ ವತಿಯಿಂದ ಕೊಬ್ಬರಿ ಖರೀದಿ ಪ್ರಗತಿಯಲ್ಲಿದೆ. ಮಾರ್ಚ್‌ ತಿಂಗಳಲ್ಲಿ ಇಲ್ಲಿ ನೋಂದಣಿ ಕೇಂದ್ರ ಆರಂಭಿಸಲಾಗಿತ್ತು.

ಬೀರೂರು ಕೇಂದ್ರದಲ್ಲಿ ಕಡೂರು ತಾಲ್ಲೂಕಿನ ವಿ.ಯರದಕೆರೆ, ಯಗಟಿ, ಬೀರೂರು, ಮಲ್ಲಿದೇವಿಹಳ್ಳಿ, ಚಟ್ಟನಹಳ್ಳಿ, ಹಿರೇನಲ್ಲೂರು ಮೊದಲಾದೆಡೆಯ 762 ರೈತರು ಕೊಬ್ಬರಿ ಮಾರಾಟಕ್ಕೆ ನೋಂದಾಯಿಸಿಕೊಂಡಿದ್ದರು. ಇವರಿಂದ ತಲಾ 15 ಕ್ವಿಂಟಲ್‌ನಂತೆ  9,502 ಕ್ವಿಂಟಲ್‌ ಉಂಡೆ ಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ನಿರ್ಧರಿಸಲಾಗಿತ್ತು.

ರೈತರು ಬಂದು ಕಾಯಬಾರದು ಎನ್ನುವ ಉದ್ದೇಶದಿಂದ ನಿತ್ಯ 25 ಅಥವಾ 30 ರೈತರಿಗೆ ಅವಕಾಶ ನೀಡಲಾಗುತ್ತಿದೆ. ಈ ಹಿಂದೆ ನೋಂದಾಯಿಸಿಕೊಂಡಿದ್ದ ರೈತರಿಗೆ ಇಂತಹ ದಿನಾಂಕದಂದು ಕೊಬ್ಬರಿ ತರುವಂತೆ ಸೂಚಿಸಲಾಗಿದೆ. ಈವರೆಗೆ 355 ರೈತರಿಂದ 4200 ಕ್ವಿಂಟಲ್‌ ಕೊಬ್ಬರಿ ಖರೀದಿಸಲಾಗಿದೆ. ಇಲ್ಲಿ ರೈತರಿಂದ ಖರೀದಿಸಿದ ಕೊಬ್ಬರಿಯನ್ನು ಮಂಡಳದ ಗೋಣಿಚೀಲಗಳಲ್ಲಿ ತುಂಬಿ ಕಡೂರು ಮತ್ತು ಮಾಚೇನಹಳ್ಳಿಗಳಲ್ಲಿ ಸಂಗ್ರಹಿಸಲಾಗುತ್ತಿದ್ದು ನಾಫೆಡ್‌ ಟೆಂಡರ್‌ ಮೂಲಕ  ವಿಲೇವಾರಿ ನಡೆಯಲಿದೆ. ಮಳೆ, ಸರ್ಕಾರಿ ರಜೆ ಇದ್ದಾಗ ಮಾತ್ರ ಖರೀದಿಗೆ ಅಡಚಣೆಯಾಗುತ್ತದೆ ಎಂದು ನಾಫೆಡ್‌ ಅಧಿಕಾರಿ ಬಾಗಪ್ಪ ಕಟ್ಟೀಮನಿ ಮಾಹಿತಿ ನೀಡಿದರು.

ಗ್ರಾಮೀಣ ಪ್ರದೇಶಗಳ ನೋಂದಾಯಿಸಿಕೊಂಡ ರೈತರು ಪ್ರತಿದಿನ ಬೆಳಿಗ್ಗೆ ಎಪಿಎಂಸಿ ಆವರಣಕ್ಕೆ ಟೆಂಪೊ, ಟ್ರ್ಯಾಕ್ಟರ್‌ ಮೊದಲಾದ ವಾಹನಗಳಲ್ಲಿ ಕೊಬ್ಬರಿಯೊಂದಿಗೆ ಬರುತ್ತಿದ್ದು, ಅವರ ಸರತಿ ಬರುವ ವೇಳೆಗೆ ಸಂಜೆಯಾಗುತ್ತಿದೆ. ವಾಪಸಾಗುವ ವೇಳೆಗೆ ಕತ್ತಲಾಗುತ್ತಿದೆ. ಮಳೆ ಸುರಿದರೆ ವಾಪಸ್‌ ಹೋಗುವುದು ಕಷ್ಟವಾಗುತ್ತದೆ. ಖರೀದಿಗೆ ಇನ್ನಷ್ಟು ಸಿಬ್ಬಂದಿ ನಿಯೋಜಿಸಿ ಬೇಗನೆ ಖರೀದಿ ಪ್ರಕ್ರಿಯೆ ಮುಗಿಸಬೇಕು ಎನ್ನುವುದು ಹಲವರ ಒತ್ತಾಯ.

‘ಹಣ ಪಾವತಿಯ ವೇಳೆಗೆ ಸುಮಾರು 1 ತಿಂಗಳು ತಗಲುತ್ತದೆ, ಮುಂಗಾರು ಸಮಯವಾಗಿರುವುದರಿಂದ ಆದಷ್ಟು ಬೇಗನೆ ಹಣ ಪಾವತಿಸಿದರೆ ಅನುಕೂಲ ಎನ್ನುವುದು ರೈತರ ಒತ್ತಾಯ. ಇದಕ್ಕೆ ಪ್ರತಿಕ್ರಿಯಿಸಿದ ನಾಫೆಡ್‌ ಅಧಿಕಾರಿ, ‘ಕಡೂರು, ಬೀರೂರು, ಪಂಚನಹಳ್ಳಿ, ತರೀಕೆರೆ ಮತ್ತು ಚಿಕ್ಕಮಗಳೂರಿನಲ್ಲಿ ಖರೀದಿ ನಡೆದಿದ್ದು ,ಖರೀದಿ ಸಮಯದಲ್ಲಿ ಗುಣಮಟ್ಟದ ಮೇಲೆ ಕೊಬ್ಬರಿಯನ್ನು ಆರಿಸಿ ವಿಂಗಡಿಸುವ ವೇಳೆಗೆ ಸಮಯ ತಗಲುತ್ತದೆ. ಹೀಗಾಗಿ ಈಗ ನಡೆದಿರುವ ಪ್ರಕ್ರಿಯೆಯೇ ಸುಗಮವಾಗಿದೆ. ಹಣ ಬಿಡುಗಡೆ ಸರ್ಕಾರದ ಮಟ್ಟದ್ದಾಗಿದ್ದು ಎಲ್ಲ ಪ್ರಕ್ರಿಯೆ ಮುಗಿದ ನಂತರ ಹಣ ಪಾವತಿ ಆಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT