ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡಿಗೆರೆ | ಅಬ್ಬರಿಸಿದ ಮುಂಗಾರು: ಜನಜೀವನ ಅಸ್ತವ್ಯಸ್ತ

Published 28 ಜೂನ್ 2024, 15:49 IST
Last Updated 28 ಜೂನ್ 2024, 15:49 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನಾದ್ಯಂತ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯು ಶುಕ್ರವಾರವೂ ಮುಂದುವರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.  ಗುರುವಾರ ತಡರಾತ್ರಿಯಿಂದ ಪ್ರಾರಂಭಗೊಂಡ ಮಳೆಯು ಶುಕ್ರವಾರ ಬೆಳಿಗ್ಗೆವರೆಗೆ ಎಡಬಿಡದೇ ಸುರಿಯಿತು.

ಸತತ ಮಳೆಯಿಂದ ಬಹತೇಕ ನದಿ, ಹಳ್ಳಗಳಲ್ಲಿ ನೀರಿನ ಹರಿಯುವ ಮಟ್ಟ ಹೆಚ್ಚಳವಾಗಿದೆ. ತಾಲ್ಲೂಕಿನ ಅಂಗನವಾಡಿ ಹಾಗೂ ಶಾಲೆಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿತ್ತು. ಬೆಳಿಗ್ಗೆ 8 ಗಂಟೆಯ ಬಳಿಕ ಮಳೆಯ ಪ್ರಮಾಣ ಇಳಿಕೆಯಾಗಿ ಬಿಸಿಲು ಕಾಣಿಸಿಕೊಂಡಿತು. ಮಳೆ ದೂರವಾಗಬಹುದು ಎಂದು ಅಂದಾಜಿಸಿದ್ದ ಜನರಿಗೆ 10 ಗಂಟೆಯ ಬಳಿಕ ಮತ್ತೆ ಮಳೆ ಆರ್ಭಟಿಸಲು ಪ್ರಾರಂಭಿಸಿತು. ಇಡೀ ದಿನ ಮಳೆ ಸುರಿದು ಜನರು ಮನೆಯಿಂದ ಹೊರಗೆ ಬರದಂತೆ ಮಾಡಿತು.

ಕೊಲ್ಲಿಬೈಲ್‌ನಿಂದ ಭೂತನಕಾಡಿಗೆ ಸಂರ್ಪ ಕಲ್ಪಿಸುವ ಗ್ರಾಮೀಣ ರಸ್ತೆಯು ಮಳೆಯಿಂದ ಹಾಳಾಗಿದ್ದು ವಾಹನಗಳು ಓಡಾಡಲು ತೊಂದರೆಯಾಗಿದೆ. ತಾಲ್ಲೂಕಿನ ಬಾಳೂರು ಗ್ರಾಮದ ಕಲ್ಲಕ್ಕಿಯಲ್ಲಿ ವಿಜೇಂದ್ರ ಎಂಬುವವರ ಮನೆಯ ಮೇಲೆ ಮರ ಬಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ. ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಡ್ಡಿಯಾಗಿದ್ದು, ಮಳೆಯ ನಡುವೆಯೇ ಮೆಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು.

ಮಳೆಯಿಂದ ಹೇಮಾವತಿ, ಜಪಾವತಿ, ಚಿಕ್ಕಳ್ಳ, ದೊಡ್ಡಳ್ಳ, ಸುಣ್ಣದ ಹೊಳೆ, ಸುಂಡೇಕೆರೆ ನದಿ ಸೇರಿದಂತೆ ಬಹುತೇಕ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಬೆಟ್ಟದಮನೆ ಗ್ರಾಮದ ಬಳಿ ಹೇಮಾವತಿ ನದಿಯು ರಭಸವಾಗಿ ಹರಿಯುತ್ತಿದೆ. ಸ್ಥಳೀಯರು ನೀರಿನ ಹರಿವನ್ನು ಕಣ್ತುಂಬಿಕೊಂಡರು.

ಮಧ್ಯಾಹ್ನ ಎರಡು ಗಂಟೆಯ ರಭಸವಾಗಿ ಸುರಿದ ಮಳೆಗೆ ಸಿಲುಕಿ ವಾರದ ಸಂತೆಯಲ್ಲಿ ಹಾಕಿದ್ದ ತರಕಾರಿ, ಹಣ್ಣುಗಳು ಕೊಚ್ಚಿ ಹೋದವು. ಮಳೆ ಹೆಚ್ಚಾಗಿದ್ದರಿಂದ ವಾರದ ಸಂತೆಗೆ ಜನರು ಬಾರದೇ ವರ್ತಕರು ನಷ್ಟ ಅನುಭವಿಸಿದರು.

ತಾಲ್ಲೂಕಿನಲ್ಲಿ ಕಾಲೇಜುಗಳಿಗೆ ರಜೆ ಘೋಷಿಸಿರಲಿಲ್ಲ. ಕಾಲೇಜುಗಳು ಎಂದಿನಂತೆ ಇದ್ದರೂ  ವಿದ್ಯಾರ್ಥಿಗಳ ಸಂಖ್ಯೆ ವಿರಳವಾಗಿತ್ತು. ಕಾಲೇಜು ಬಿಡುವ ಸಮಯದಲ್ಲೂ ಮಳೆ ಸುರಿದಿದ್ದರಿಂದ ಕಾಲೇಜನಿಂದ ಮನೆಗೆ ತೆರಳಲು ವಿದ್ಯಾರ್ಥಿಗಳು ಪರದಾಡಿದರು.

ಮೂಡಿಗೆರೆ ತಾಲ್ಲೂಕಿನ ಬಾಳೂರು ಗ್ರಾಮದ ವಿಜೇಂದ್ರ ಎಂಬುವವರ ಮನೆಯ ಮೇಲೆ ಮರ ಬಿದ್ದಿರುವುದು
ಮೂಡಿಗೆರೆ ತಾಲ್ಲೂಕಿನ ಬಾಳೂರು ಗ್ರಾಮದ ವಿಜೇಂದ್ರ ಎಂಬುವವರ ಮನೆಯ ಮೇಲೆ ಮರ ಬಿದ್ದಿರುವುದು
‘ಕೊನೆ ಕ್ಷಣದಲ್ಲಿ ರಜೆ ಕೊಟ್ಟರೆ ತೊಂದರೆ’
‘ಶುಕ್ರವಾರ ಬೆಳಿಗ್ಗೆ 7. 30ಕ್ಕೆ ಶಾಲೆ ಅಂಗನವಾಡಿಗಳಿಗೆ ರಜೆ ಘೋಷಿಸಿದ್ದಕ್ಕೆ ವಿದ್ಯಾರ್ಥಿಗಳು ಪೋಷಕರು ಬೇಸರ ವ್ಯಕ್ತಪಡಿಸಿದರು. ‘ಗ್ರಾಮೀಣ ಭಾಗದಿಂದ ಮನೆಗಳಿಂದ ಬೆಳಿಗ್ಗೆ 7 ಗಂಟೆಗೇ ವಿದ್ಯಾರ್ಥಿಗಳು ಹೊರಡುತ್ತಾರೆ. ಆದರೆ ಕೊನೆ ಕ್ಷಣದಲ್ಲಿ ರಜೆ ಘೋಷಿಸಿದರೆ ಶಾಲೆಗೆ ಬಂದ ಮಕ್ಕಳು ವಾಪಸ್‌ ಹೋಗಲು ಕಷ್ಟವಾಗುತ್ತದೆ. ಕೆಲವೆಡೆ ಬೆಳಗಿನ ಬಸ್ ಹೊರತು ಪಡಿಸದರೆ ಸಂಜೆಯೇ ಬಸ್ ವ್ಯವಸ್ಥೆಯಿರುವುದರಿಂದ ರಜೆಯ ಅರಿವಿಲ್ಲದೇ ಶಾಲೆಗೆ ಬಂದ ವಿದ್ಯಾರ್ಥಿಗಳು ಸಂಜೆವರೆಗೂ ಅಲೆಯಬೇಕಾಗುತ್ತದೆ. ಮಳೆ ಹೆಚ್ಚಾದಾಗ ಹಿಂದಿನ ದಿನವೇ ರಜೆ ಘೋಷಿಸಿದರೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ಹಲವು ಪೋಷಕರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT