ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗೆಯ ಸೆರಗಲ್ಲೇ ಇದ್ದರೂ ಭಯ, ಆಶ್ಚರ್ಯ ಮೂಡಿಸಿದ್ದ 1982ರ ಮಹಾ ನೆರೆ

Last Updated 11 ಆಗಸ್ಟ್ 2019, 11:25 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಈಗ ಮಳೆ–ಪ್ರವಾಹದ್ದೇ ಮಾತು. ಇಂಥ ಮಾತುಗಳು ಹಿರಿಯರಿಗೆ ತಾವು ಕಂಡ ಪ್ರವಾಹದ ನೆನಪುಗಳನ್ನು ಮೊಗೆದುಕೊಡುತ್ತಿವೆ. ತೀರ್ಥಹಳ್ಳಿಯ ಬರಹಗಾರ ಟಿ.ಕೆ.ರಮೇಶ್‌ ಶೆಟ್ಟಿ ಅವರ ಮನಸ್ಸಿನಲ್ಲಿಈಗ ತಾವು ಕಂಡ1982ರ ತುಂಗಾ ನೆರೆ ಮತ್ತೆ ಮೇಲೆದ್ದು ಬಂದಿದೆ.

---

ಹುಟ್ಟಿದಾಗಿನಿಂದಲೂ ತುಂಗಾ ನದಿಯ ಸಹವಾಸದಲ್ಲಿಯೇ ಬದುಕು ಕಟ್ಟಿಕೊಂಡವನು ನಾನು. ಪ್ರತಿ ವರ್ಷ ಮಳೆಗಾಲದಲ್ಲಿ ಎರಡೋ,ಮೂರೋ ಬಾರಿ ನೆರೆ ಬರುವುದು; ಒಂದೆರಡು ದಿನಗಳು ರಸ್ತೆಯ ಮೇಲೆ ನೀರು ನುಗ್ಗಿ ವಾಹನ ಸಂಚಾರ ಸ್ಥಗಿತಗೊಳ್ಳುವುದು ಮಾಮೂಲಿಯಾದ ಸಂಗತಿಗಳಾಗಿದ್ದವು.

ತೀರ್ಥಹಳ್ಳಿಯ ಹೊರವಲಯದ ಶಿವರಾಜಪುರದಲ್ಲಿ ನೆರೆ ನೀರು ರಸ್ತೆಯ (ಈಗ ರಸ್ತೆ ಏರಿಸಲಾಗಿದೆ) ಮೇಲೆ ಮೂರ್ನಾಲ್ಕು ಅಡಿ ಬಂದಾಗ, ಅಲ್ಲಿಗೆ ತೆರಳಿ ಈ ಕಡೆಯಿಂದ ಆ ಕಡೆಗೆ ಆ ಕಡೆಯಿಂದ ಈ ಕಡೆಗೆ ನೆರೆ ನೀರಲ್ಲಿ ಓಡಾಡುವುದೇ ಮಜಾ. ಅಲ್ಲಿನ ಸ್ಥಳೀಯರ ಸಹಕಾರದೊಂದಿಗೆ ರಸ್ತೆಯ ಮೇಲಿರುವ ನೆರೆ ನೀರನ್ನು ಸೀಳಿಕೊಂಡು ವಾಹನಗಳು (ಆಗೆಲ್ಲ ಕಾರು - ಬೈಕುಗಳು ಕಮ್ಮಿ) ದಾಟುವುದನ್ನು ನೋಡುವುದೇ ಅದೇನೋ ರೋಮಾಂಚನ!

ಹೀಗಾಗಿ ಈ ಸಾಧಾರಣ ನೆರೆಗಳಿಗೆಲ್ಲ ಯಾವತ್ತೂ ಅಷ್ಟು ಆತಂಕವಾಗುತ್ತಿರಲಿಲ್ಲ. ಈ ಮಳೆ- ನೆರೆಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳಂತಾಗಿದ್ದವು. ಆದರೆ 82ರಲ್ಲಿ ಬಂದ ಮಾರಿ ನೆರೆ ಮಾತ್ರ ನಮ್ಮನೆಯವರನ್ನೆಲ್ಲ ತುಂಬಾ ಭಯಭೀತರನ್ನಾಗಿಸಿತ್ತು. ನನಗಾಗ ಇನ್ನೂ 21 ರ ಹರೆಯ.

ಸ್ವಾರಸ್ಯಕರ ಸಂಗತಿಯೆಂದರೆ ನೆರೆ ಬಂದಿದ್ದ ಹಿಂದಿನ ದಿನ ರಾತ್ರಿ ನಾನು ಶಿವಮೊಗ್ಗದಲ್ಲಿ (ಎಚ್.ಪಿ.ಸಿ. ಟಾಕೀಸೋ ಮಲ್ಲಿಕಾರ್ಜುನವೋ ನೆನಪಾಗುತ್ತಿಲ್ಲ. ಹಿಂದಿ ಸಿನಿಮಾಗಳು ಈ ಟಾಕೀಸಿಗೇ ಬರುತ್ತಿದ್ದವು) ಫಸ್ಟ್ ಷೋ ಅಮಿತಾಬ್ ಬಚ್ಚನ್ ಮತ್ತು ಶತ್ರುಘ್ನ ಸಿನ್ಹಾ ಅಭಿನಯದ ‘ಕಾಲಾ ಪತ್ತರ್’ಸಿನಿಮಾವನ್ನು ಗುರುರಾಜ ಬಸ್ಸಿನ ಸಾಹುಕಾರರ ಜೊತೆ ವೀಕ್ಷಿಸುತ್ತಿದ್ದೆ. ಆಗ ಗುರುರಾಜ ಬಸ್ಸಿನ ಬುಕಿಂಗ್ ಅನ್ನು ನಮ್ಮ ತಂದೆಯವರೇ ಮಾಡುತ್ತಿದ್ದರು. ನಾನು ಕೂಡ ಆಗ ಕಾಲೇಜಿಗೆ ಹೋಗುತ್ತಲೇ ತಂದೆಯ ಜೊತೆ ಬಸ್‌ಸ್ಟ್ಯಾಂಡ್‌ನಲ್ಲಿಬುಕ್ಕಿಂಗ್ ಕೆಲಸ ನಿರ್ವಹಿಸುತ್ತಿದ್ದೆ.

ಈ ಚಿತ್ರದಲ್ಲಿ ಹಿರಿಯ ನಟ ಪ್ರಾಣ್ ಕೂಡ ಅದ್ಭುತವಾಗಿ ನಟಿಸಿದ್ದರು.ನಾವು ಚಿತ್ರಮಂದಿರದಲ್ಲಿ ಒಳಗಡೆ ಸಿನಿಮಾ ನೋಡುತ್ತಿದ್ದರೆ ಹೊರಗಡೆ ಎಡೆಬಿಡದೆ ಮಳೆ ಸುರಿಯುತ್ತಿತ್ತು. ಚಿತ್ರದ ಸಂಗೀತ,ಡೈಲಾಗುಗಳ ನಡುವೆಯೂ ಹೊರಗಡೆಯ ಮಳೆಯ ರಭಸದ ಸಪ್ಪಳ ಕಿವಿಗೆ ಬಡಿಯುತ್ತಿತ್ತೆಂದರೆ ಅದೆಂಥಮಳೆಯಿರಬಹುದು ಯೋಚಿಸಿ.

ಆಗ ನನಗೆ ಅದೇನೋ ಒಂದು ಸಿಕ್ಸ್ತ್ ಸೆನ್ಸ್ ಅಂಥ ಇರುತ್ತಂಥಲ್ವಾ ಅದು... ಇಲ್ಲೇ ಇಷ್ಟು ಜೋರು ಮಳೆ ಸುರಿಯುತ್ತಿರುವಾಗ ನಮ್ಮೂರಿನಲ್ಲಿ ಏನೋ ಗ್ರಾಚಾರ ಖಂಡಿತಾ ಕಾದಿದೆ ಎಂದು ನನಗೆ ಹೇಳುತ್ತಿತ್ತು. ಸಿನಿಮಾ ನೋಡಿ ಬಸ್ಸಿನ ಸಾಹುಕಾರರ ಶಿವಮೊಗ್ಗದ ಮನೆಯಲ್ಲಿಯೇ ಉಳಿದಿದ್ದರೂ, ಆ ಮಳೆಯ ಬಿರುಸು ನನ್ನನ್ನ ತೀವ್ರ ಆತಂಕಕ್ಕೆ ತಳ್ಳಿತ್ತು. ಬೆಳಗಾಗುವುದನ್ನೇ ಕಾಯುತ್ತಿದ್ದೆ.
ಶಿವಮೊಗ್ಗ ಬಸ್‌ಸ್ಟ್ಯಾಂಡ್‌ಗೆಬೆಳಿಗ್ಗೆ ಬಂದರೆ ಬಸ್ಸುಗಳೆಲ್ಲ ಆಯನೂರು -ರಿಪ್ಪನಪೇಟೆ ಮೇಲೆ ತೀರ್ಥಹಳ್ಳಿಗೆ ಸಂಚರಿಸುತ್ತಿವೆ. ಏಕೆಂದರೆ ಮಂಡಗದ್ದೆ, ತೂದೂರು ಮುಂತಾದೆಡೆ ರಸ್ತೆಯ ಮೇಲೆ ಐದಾರು ಅಡಿಗಳಷ್ಟು ನೀರು ಬಂದು ನಿಂತು ಬಿಟ್ಟಿತ್ತು.

ಇದು ಗೊತ್ತಾಗುತ್ತಿದ್ದಂತೆಯೇ ನನ್ನ ಎದೆಬಡಿತವೂ ಜಾಸ್ತಿಯಾಗಿತ್ತು. ಮನೆಯ ಕಥೆ ಏನೋ ಎಂತೋ ಎಂಬ ದಿಗಿಲು. ನಮ್ಮೂರಿನಲ್ಲಿ ಬಸ್ಸಿಳಿದವನೆ ಪೇಟೆಯಿಂದ ನಮ್ಮೂರು ಬಾಳೇಬೈಲಿನತ್ತ ಹೆಜ್ಜೆ ಹಾಕಿದರೆ ಅಬ್ಬಾಬ್ಬ! ಹುಟ್ಟಿದ ಮೇಲೆ ಎಂದೂ ಕಂಡಿರಲಿಲ್ಲ. ದೊಡ್ಡಮನೆಕೇರಿ - ಬಾಳೇಬೈಲು ನಡುವಿನ ಉದ್ದದ ರಸ್ತೆಯ ಅಕ್ಕಪಕ್ಕ ಗದ್ದೆಗಳಲ್ಲಿ ನೀರು ತುಂಬಿ ಸಾಗರವಾಗಿದೆ. ರಸ್ತೆಯಮೇಲೆ ನಾಲ್ಕೈದು ಅಡಿಗಳು ನೀರು ನಿಂತಿದೆ. ಹೊಳೆ ಬದಿಯಲ್ಲೇ ಇದ್ದಿದ್ದರಿಂದ ಬಾಲ್ಯದಲ್ಲೇ ಈಜು ಕರಗತವಾಗಿತ್ತೆನ್ನಿ. ಹಾಗಾಗಿ ಹೆದರುವ ಪ್ರಶ್ನೆಯೇನಿರಲಿಲ್ಲ. ಸೊಂಟದ ತನಕ ನೀರಿತ್ತು. ಬಾಳೇಬೈಲು ಸೇತುವೆಯ ಮೇಲೆಯೂ ನಾಲ್ಕೈದು ಅಡಿ ನೀರು.

ಮನೆಗೆ ಬಂದು ಅಪ್ಪ ಅಮ್ಮ ಅಜ್ಜಿ ತಂಗಿಯರನ್ನೆಲ್ಲ ನೋಡುವ ತವಕ. ಏನಾಗಿದಿಯೋ ಎನ್ನುವ ಢವಢವ ಬೇರೆ.ಮನೆಯ ಬಳಿಯಲ್ಲಿ ಕೆಲವು ಜನರಿದ್ದರು. ಮನೆಯೊಳಗೆ ಪ್ರವೇಶಿಸುತ್ತಿದ್ದಂತೆಯೇ ಬೇರೆಡೆಗೆ ಸಾಗಿಸುವುದಕ್ಕಾಗಿ ಕಣಜದಿಂದ ಭತ್ತವನ್ನು ತೆಗೆದು ಮೂಟೆ ಮಾಡುತ್ತಿದ್ದರು. ಆಗ ನಾವು ಭತ್ತವನ್ನು ಬೆಳೆಯುತ್ತಿದ್ದೆವು.

ಮನೆಯ ಹಿಂದುಗಡೆ ಹೋಗಿ ನೋಡಿದರೆ ಎದೆ ಝಲ್ ಎನ್ನುವ ರುದ್ರಭೀಕರನೋಟ.ತುಂಗೆಯು ತುಂಬಿ ಮನೆಯ ಗೋಡೆಗೇ ಬಂದು ತಾಗುತ್ತಿದೆ. ನಮ್ಮಜ್ಜ ದಿವಂಗತವೆಂಕಪ್ಪ ಶೆಟ್ಟರು ಹೊಳೆ ದಂಡೆಯಲ್ಲಿಯೇ ಮನೆ ಮಾಡುವಾಗ ಪ್ರವಾಹದ ಮುನ್ನೆಚ್ಚರಿಕೆಯಿಂದ ಗೋಡೆಗಳನ್ನೆಲ್ಲ ಕಲ್ಲಿನಲ್ಲೇ ಮಾಡಿದ್ದರು.

ಮತ್ತೊಂದು ಸ್ವಾರಸ್ಯವೆಂದರೆ, ನಮ್ಮಜ್ಜ ಇಲ್ಲಿ ಮನೆ ಕಟ್ಟುವಾಗ ನೆರೆಯ ಭೀತಿಯಿಂದಾಗಿ ನದಿ ದಂಡೆಯಲ್ಲಿ ಯಾರೂ ಜಾಗ ಕೊಳ್ಳಲು ಮುಂದಾಗುತ್ತಿರಲಿಲ್ಲವಂತೆ. ನಮ್ಮನ್ನೆಲ್ಲ ಹೊಳೆ ಬದಿ ಮನೆಯವರು ಎಂದು ಒಂದಿಷ್ಟು ತಾತ್ಸಾರದಿಂದಲೇ ಹೇಳುವ ವಾಡಿಕೆಯೂ ಆಗ ಇತ್ತೆನ್ನಿ. ಆದರೆ ಆಶ್ಚರ್ಯವೆಂದರೆ, ಒಂದೆರಡು ದಶಕಗಳಿಂದೀಚೆಗೆ ಈ ಹೊಳೆ ಬದಿಯ ಜಾಗವನ್ನು ಖರೀದಿಸಲು ಅರಸಿ ಬರುವವರ ಸಂಖ್ಯೆ ಹೆಚ್ಚಾಗಿತ್ತು.

ಅದೇನೇ ಇರಲಿ, ಭತ್ತದ ಮೂಟೆಗಳನ್ನೆಲ್ಲ ಬೇರೆ ಸ್ಥಳಗಳಿಗೆ ಸಾಗಿಸಲಾಗುತ್ತಿತ್ತು. ಕೊಟ್ಟಿಗೆಯಲ್ಲಿದ್ದ ಜಾನುವಾರಗಳನ್ನು ಹೇಗೂ ಬೆಳಗಾಗಿದ್ದರಿಂದ ಅವುಗಳನ್ನು ವಾಡಿಕೆಯಂತೆ ಬಿಡಲಾಗಿತ್ತು. ಒಂದೇ ಒಂದು ಪೂರಕ ಅಂಶವೆಂದರೆ ರಾತ್ರಿಯೆಲ್ಲ ನದಿಯ ಮೇಲಿನ ಭಾಗಗಳಲ್ಲಿ ಎಡೆಬಿಡದೆ ಮಳೆ ಸುರಿದಿದ್ದರಿಂದ ಬೆಳಿಗ್ಗೆಯಾಗುವಾಗ ಪ್ರವಾಹದ ನೀರು ಮೇಲೇರಿತ್ತು. ಒಂದು ವೇಳೆ ಇದು ರಾತ್ರಿಯೇ ಆಗಿದ್ದರೆ ರಾತ್ರಿಯ ಕಗ್ಗತ್ತಲ ಕಾರ್ಮೋಡಗಳ ಅಡಿಯಲ್ಲಿ ಆತಂಕ ಇನ್ನೂ ಜಾಸ್ತಿಯಿರುತ್ತಿತ್ತು.

ನಮ್ಮ ಅದೃಷ್ಟಕ್ಕೆ ಆವತ್ತು ಮಧ್ಯಾಹ್ನ ವಾಗುತ್ತಿರುವಾಗ ಮಳೆ ಕಡಿಮೆಯಾಗತೊಡಗಿತ್ತು. ಸೂರ್ಯದೇವನೂ ದರ್ಶನ ಕೊಡಲಾರಂಭಿಸಿದ್ದ. ಅಂತೆಯೇ ನಿಧಾನವಾಗಿ ಆತಂಕದ ಕಾರ್ಮೋಡವೂ ಸರಿಯತೊಡಗಿತ್ತು. ಈ ನೆರೆಯಲ್ಲಿಯೇ ತೀರ್ಥಹಳ್ಳಿಯ ನೆಹರೂ ಪಾರ್ಕಿನೆದುರಿನ ಶಿವಮೊಗ್ಗದ ರಸ್ತೆ ಹಾಗೂ ಕುರುವಳ್ಳಿ ಪೇಟೆಯ ರಸ್ತೆಯ ಮೇಲೂ ನಾಲ್ಕೈದು ಅಡಿಗಳಷ್ಟು ನೀರು ಬಂದಿತ್ತು.

ಆ ನಂತರದಲ್ಲಿ ಈ ವರುಣ ಮತ್ತು ತುಂಗೆ ಆತಂಕ ಹುಟ್ಟಿಸುತ್ತಿರುವುದು ಈವಾಗಲೇ. ಹಾಗಂತ ಈ ನಡುವೆ, ನೆರೆ- ಸಿಕ್ಕಾಪಟ್ಟೆ ಮಳೆ ಬರಲೇ ಇಲ್ಲವೆಂದೇನಲ್ಲ. ಆದರೆ ಈ ಸಲದಂತೆ ನಿರಂತರ ನಾಲ್ಕೈದು ದಿನಗಳ ಕಾಲ ಗಾಬರಿ ಮೂಡಿಸಿರಲಿಲ್ಲ. ಅರವೊತ್ತೊಂದರ ಜುಲೈ 11 ನನ್ನ ಹುಟ್ಟಿದ ದಿನಾಂಕ. ಆ ಸಂದರ್ಭದಲ್ಲಿಯೂ ದೊಡ್ಡ ನೆರೆ ಬಂದಿತ್ತೆಂದು ಮನೆಯಲ್ಲಿ ಹಿರಿಯರು ಹೇಳಿದ್ದನ್ನು ಕೇಳಿದ್ದೇನೆ.
ಈಗಲೂ 82ರಲ್ಲಿ ಬಂದಷ್ಟು ನೆರೆ ನೀರು ಬಂದಿಲ್ಲ. ಒಂದು ದಿನ ಅಥವಾ ಒಂದು ರಾತ್ರಿಯಿಡಿ ಒಂದು ನಿಮಿಷವೂ ಬಿಡದೆ ಮಳೆ ಸುರಿದರೆ ಭೀಕರ ಪ್ರವಾಹ ಕಟ್ಟಿಟ್ಟ ಬುತ್ತಿ. ಅದೃಷ್ಟಕ್ಕೆ ಇವಾಗ ಏನಾಗುತ್ತಿದೆಯೆಂದರೆ- ಒಂದು ದೊಡ್ಡ ಮಳೆ ಬಂದು ನಿಲ್ಲುತ್ತದೆ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಬರುತ್ತದೆ. ಹೀಗೆ ಮಧ್ಯದಲ್ಲಿ ಸ್ವಲ್ಪ ಬಿಡುವಿದ್ದರೂ ನದಿಯಲ್ಲಿ ನೀರು ಹರಿದು ಹೋಗುವುದರಿಂದ ನೆರೆ ಏರಿಕೆ ಪ್ರಮಾಣ ಕಡಿಮೆಯಾಗುತ್ತದೆ ಎಂದು ನಾನು ಕಂಡುಕೊಂಡ ಲಾಜಿಕ್.

ಕಳೆದ ನಾಲ್ಕಾರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ತಗ್ಗು ಪ್ರದೇಶದಲ್ಲಿ ಮತ್ತು ನದಿ ದಂಡೆಯ ಮೇಲಿರುವವರಿಗೆ ಭಯ ಹುಟ್ಟಿಸಿರುವುದಂತೂ ಸತ್ಯ.

ಇಲ್ಲಿರುವ ನಮ್ಮನೆಯ ಹಿಂದಿನ ಚಿತ್ರಗಳು 82 ರ ನೆರೆಯದ್ದಲ್ಲ ಈಗಿನದ್ದು.ಹಾಗೆಯೇ ಭರತ್ ಆರ್ ಶೆಟ್ಟಿ ಎನ್ನುವ ನನ್ನ ಸ್ನೇಹಿತರು 82 ರ ನೆರೆಯ ಕಪ್ಪುಬಿಳಿಪು ಚಿತ್ರಗಳನ್ನು ಕಳುಹಿಸಿದ್ದಾರೆ. ಇದು ಕುರುವಳ್ಳಿ ರಸ್ತೆಯ ಮೇಲೆ ನೆರೆ ನೀರು ಬಂದಿರುವ ಚಿತ್ರಗಳು. ಭರತ್‌ಗೆಧನ್ಯವಾದಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT