ಬುಧವಾರ, ಮೇ 25, 2022
27 °C
ಸ್ವಾತಂತ್ರ್ಯೋತ್ಸವ, ಸಂವಿಧಾನ ದಿವಸ, ಗಣರಾಜ್ಯೋತ್ಸವ

ಚಿಕ್ಕಮಗಳೂರು: ‘ಸಾರ್ವಭೌಮತ್ವ ಎತ್ತಿಹಿಡಿವ ಸಂಕಲ್ಪ ತೊಡುವ ದಿನಗಳು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ‘ಭಾರತೀಯ ಪರಂಪರೆಯಲ್ಲಿ ಆ.15– ಸ್ವಾತಂತ್ರ್ಯೋತ್ಸವ, ನ.26– ಸಂವಿಧಾನ ದಿವಸ, ಜ.26– ಗಣರಾಜ್ಯೋತ್ಸವ ಮಹತ್ವದ ಮೂರು ದಿನಗಳು. ಈ ದಿನಗಳ ಕುರಿತು ಎಲ್ಲರಿಗೂ ಅರಿವು ಮೂಡಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ನಗರದ ಜಿಲ್ಲಾ ಆಟದ ಮೈದಾನದಲ್ಲಿ ಬುಧವಾರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು. ‘ಈ ಮೂರು ದಿನಗಳು ಸಂಭ್ರಮದ ದಿನಗಳು ಮಾತ್ರವಲ್ಲ, ಪ್ರತಿಯೊಬ್ಬ ಭಾರತೀಯನ ಪಾಲಿಗೂ ಆತ್ಮವಾಲೋಕನದ ದಿನಗಳು. ಭೂತಕಾಲದ ಪರಂಪರೆ, ವರ್ತಮಾನದ ಸಮಸ್ಯೆ–ಸವಾಲುಗಳು, ಭವಿಷ್ಯದ ಕನಸು ಈ ಮೂರು ಕಾಲದ ಅರಿವನ್ನು ಮನನ ಮಾಡುವ ಪವಿತ್ರ ದಿನಗಳು. ಭಾರತದ ಶ್ರೀಮಂತ ಪರಂಪರೆಯ ಹೆಜ್ಜೆಗಳನ್ನು ಅನುಸರಿಸಿ ನಡೆಯಬೇಕಾದ, ದೇಶದ ಘನತೆ– ಸಾರ್ವಭೌಮತೆ ಎತ್ತಿ ಹಿಡಿಯುವ ಸಂಕಲ್ಪ ಮಾಡಬೇಕಾದ ಅಪೂರ್ವ ದಿನಗಳು’ ಎಂದು ಬಣ್ಣಿಸಿದರು.

ಭಾರತವು 75 ವರ್ಷಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಸಾಮಾಜಿಕ ನ್ಯಾಯವು ಸರ್ವರಿಗೂ ದೊರೆತಾಗ ಸಂವಿಧಾನಕ್ಕೆ ನಿಜವಾದ ಗೌರವ ಸಲ್ಲುತ್ತದೆ ಎಂದು ಹೇಳಿದರು.

1949 ನ. 26ರಂದು ಸಂವಿಧಾನ ರಚನೆ ಪೂರ್ಣಗೊಂಡಿತ್ತು. ಆ ದಿನದ ಸ್ಮರಣೆ ನಿಮಿತ್ತ ಪ್ರಧಾನಿ ಮೋದಿ ಅವರು 2015 ರಿಂದ ನ.26 ಅನ್ನು ಸಂವಿಧಾನ ದಿವಸ ಎಂದು ಘೋಷಿಸಿ ಸಂವಿಧಾನದ ಅರಿವಿನ ಆಚರಣೆ ಮಾಡುವಂತೆ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ 3710 ಜನವಸತಿ ಗ್ರಾಮಗಳಿದ್ದು, 2.27 ಲಕ್ಷ ಕುಟುಂಬಗಳಿವೆ. ಈವರೆಗೆ 1.23 ಲಕ್ಷ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರಿನ ನಳ ಸಂಪರ್ಕ ಕಲ್ಪಿಸಲಾಗಿದೆ.

ತರೀಕೆರೆ, ಅಜ್ಜಂಪುರ, ಕಡೂರು, ಚಿಕ್ಕಮಗಳೂರು ತಾಲ್ಲೂಕುಗಳ 930 ಜನವಸತಿ ಪ್ರದೇಶಗಳಿಗೆ 1040 ಕೋಟಿ ವೆಚ್ಚದಲ್ಲಿ ‘ಜಲ-ಜೀವನ ಮಿಷನ್‍’ ಅಡಿ ಕುಡಿಯುವ ನೀರು ಒದಗಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಆಯುಷ್ಮಾನ್ ಭಾರತ ಯೋಜನೆಯಲ್ಲಿ ಅಸಾಂಕ್ರಾಮಿಕ ರೋಗಗಳನ್ನು ಗುರುತಿಸುವ ಕಾರ್ಯ ರಾಷ್ಟ್ರದಲ್ಲೇ ಪ್ರಥಮವಾಗಿ ಚಿಕ್ಕಮಗಳೂರು ಜಿಲ್ಲೆಯ‌ಲ್ಲಿ ಪೂರ್ಣಗೊಂಡಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಐದು ಲಕ್ಷ ಮಂದಿಗೆ ಆರೋಗ್ಯ ಕಾರ್ಡ್‌ ವಿತರಿಸಲಾಗಿದೆ ಎಂದರು.

ಚಿಕ್ಕಮಗಳೂರು ಮತ್ತು ಹಾಸನ ರೈಲು ಮಾರ್ಗದ ಭೂಸ್ವಾಧೀನವು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೂರ್ಣಗೊಂಡಿದೆ. ಬೇಲೂರು– ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ಭಾರತ ಮಾಲಾ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲು ಕೇಂದ್ರ ಭೂ ಸಾರಿಗೆ ಸಚಿವಾಲಯ ಒಪ್ಪಿಗೆ ನೀಡಿದೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಎಸ್‌.ಶ್ರುತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್‌.ಆನಂದ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.