ಸೋಮವಾರ, ನವೆಂಬರ್ 30, 2020
20 °C
ಮದ್ಯ ವ್ಯಸನಿಗಳ ತಾಣವಾದ ಶಾಲಾ ಆವರಣ– ಕಟ್ಟಡ ರಕ್ಷಣೆಗೆ ಒತ್ತಾಯ

ಮುಚ್ಚಿದ ಶಾಲೆಯಲ್ಲಿ ಅನೈತಿಕ ಚಟುವಟಿಕೆ

ವಿಶೇಷ ವರದಿ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: ತಾಲ್ಲೂಕಿನ ಬಿಳಗುಳ ದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅನುದಾನಿತ ಪ್ರೌಢಶಾಲೆಯ ಕಟ್ಟಡದಲ್ಲಿ ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೆ ಸಾಗಿದ್ದು, ಸ್ಥಳೀಯರು ಕಿರಿಕಿರಿ ಅನುಭವಿಸುವಂತಾಗಿದೆ.

ಮೂರುವರೆ ದಶಕಗಳ ಹಿಂದೆ ಬಿಳಗುಳ, ಸುಭಾಷ್ ನಗರ, ಕೊರಚರ ಹಟ್ಟಿ, ಹಳ್ಳಿಬೈಲು, ಹೆಸ್ಗಲ್ ಸೇರಿದಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪಟ್ಟಣದಿಂದ ಕೂಗಳತೆ ದೂರದಲ್ಲಿರುವ ಬಿಳಗುಳದಲ್ಲಿ ಸುಮಾರು ಐದು ಎಕರೆ ವಿಸ್ತೀರ್ಣದಲ್ಲಿ ಖಾಸಗಿ ಪ್ರೌಢಶಾಲೆಯನ್ನು ನಿರ್ಮಿಸಲಾಗಿತ್ತು. ಕಾಲಾನಂತರದಲ್ಲಿ ಶೈಕ್ಷಣಿಕ ಪ್ರಗತಿ, ವಿದ್ಯಾರ್ಥಿಗಳ ಸಂಖ್ಯೆಯಲ್ಲಾದ ಹೆಚ್ಚಳದಿಂದ ಸರ್ಕಾರದ ಅನುದಾನಕ್ಕೆ ಒಳಪಟ್ಟು, ಶಾಲೆಯನ್ನು ಅನುದಾನಿತ ಸಂಸ್ಥೆಯನ್ನಾಗಿ ಮಾರ್ಪಡಿಸಲಾಯಿತು.

‘ಎರಡು ದಶಕಗಳ ಕಾಲ ಅನು ದಾನಿತ ಸಂಸ್ಥೆಯಾಗಿ ಮುಂದುವರೆದ ಡಾ. ಬಿ.ಆರ್. ಅಂಬೇಡ್ಕರ್ ಪ್ರೌಢಶಾಲೆ ಯು ಸುತ್ತಮುತ್ತಲ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯ ಕೇಂದ್ರವಾಗಿತ್ತು. ಆದರೆ, 6 ವರ್ಷಗಳಿಂದೀಚೆಗೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದು, ವಿದ್ಯಾರ್ಥಿಗಳ ದಾಖ ಲಾತಿಯಲ್ಲೂ ಇಳಿಮುಖವಾಗಿದ್ದರಿಂದ ಎರಡು ವರ್ಷದ ಹಿಂದೆ ಶಾಲೆ ಮುಚ್ಚಿದೆ. ಸುಸ್ಥಿತಿಯಲ್ಲಿರುವ ಶಾಲಾ ಕಟ್ಟಡ, ಬಿಸಿಯೂಟದ ಕೊಠಡಿ, ರಂಗಮಂದಿರ ಮುಂತಾದ ಕಟ್ಟಡಗಳು ಅನೈತಿಕ ಚಟುವಟಿಕೆಯ ತಾಣವಾಗಿದ್ದು, ಸರ್ಕಾರದ ಅನುದಾನ ಪಡೆದ ಕಟ್ಟಡಕ್ಕೆ ರಕ್ಷಣೆಯಿಲ್ಲದಂತಾಗಿದೆ’ ಎಂಬುದು ಸ್ಥಳೀಯರ ಆರೋಪವಾಗಿದೆ.

ಎರಡು ದಿನಗಳ ಹಿಂದೆ ‘ಪ್ರಜಾವಾಣಿ’ಯು ಶಾಲಾ ಆವರಣಕ್ಕೆ ಭೇಟಿ ನೀಡಿದ ವೇಳೆ ಬೆಳ್ಳಂಬೆಳಿಗ್ಗೆ ಇಬ್ಬರು ಮದ್ಯವ್ಯಸನಿಗಳು ಶಾಲಾ ಆವರಣದಲ್ಲಿ ಮದ್ಯ ಸೇವನೆ ಮಾಡುತ್ತಿದ್ದದ್ದಲ್ಲದೇ, ಬಿಸಿಯೂಟದ ಕೊಠಡಿ ಮುಂಭಾಗದಲ್ಲೇ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಮಲಗಿದ್ದ ದೃಶ್ಯ ಕಂಡು ಬಂದಿತು. ಅಲ್ಲದೆ, ಶಾಲಾ ಕಟ್ಟಡದ ಎರಡು ಕೊಠಡಿಗಳ ಬಾಗಿಲು ಮುರಿದಿದ್ದು, ಕೊಠಡಿಯೊಳಗೆ ಮದ್ಯದ ಬಾಟಲಿಗಳು, ಗುಟ್ಕಾ, ಸಿಗರೇಟ್ ತುಂಡುಗಳು, ಅನೈತಿಕ ಚಟುವಟಿಕೆಯ ವಸ್ತುಗಳು ಕೊಠಡಿ ತುಂಬೆಲ್ಲಾ ಹರಡಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು