ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ಸಂಪರ್ಕಕ್ಕೆ ಚಾರ್ಮಾಡಿಯೇ ಗತಿ!

ಶಿಶಿಲ- ಭೈರಾಪುರ ಯೋಜನೆಗೆ ಸಿಗದ ಅನುಮತಿ– ಸ್ಥಳೀಯರಿಗೆ ನಿರಾಸೆ
Last Updated 9 ಸೆಪ್ಟೆಂಬರ್ 2020, 3:02 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಭೈರಾಪುರದಿಂದ ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಗೆ ಸಂರ್ಪಕ ಕಲ್ಪಿಸುವ ಶಿಶಿಲ– ಭೈರಾಪುರ ರಸ್ತೆ ನಿರ್ಮಾಣ ಯೋಜನೆಗೆ ಹೈಕೋರ್ಟ್ ಅನುಮತಿ ನಿರಾಕರಿಸಿರುವುದು ಸ್ಥಳೀಯರಲ್ಲಿ ನಿರಾಸೆ ಉಂಟುಮಾಡಿದೆ.

ದಶಕಗಳಿಗೂ ಅಧಿಕ ಕಾಲದಿಂದ ಶಿಶಿಲ– ಭೈರಾಪುರ ರಸ್ತೆ ನಿರ್ಮಾಣಕ್ಕೆ ಹೋರಾಟ ನಡೆಸಲಾಗುತ್ತಿತ್ತು. ಮೂರು ವರ್ಷಗಳ ಹಿಂದೆ ಸಂಸದೆ ಶೋಭಾ ಕರಂದ್ಲಾಜೆ, ಅಂದಿನ ಶಾಸಕ ಬಿ.ಬಿ. ನಿಂಗಯ್ಯ ಸೇರಿದಂತೆ ಹಲವು ರಾಜಕೀಯ ಮುಖಂಡರು ಹಾಗೂ ಸ್ಥಳೀಯರು ಭೈರಾಪುರದ ನಾಣ್ಯಭೈರವೇಶ್ವರ ದೇವಾಲಯದ ಬಳಿ ಸಭೆ ನಡೆಸಿ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿದ್ದರು.

ಕೇಂದ್ರ ಸರ್ಕಾರದ ಸುವರ್ಣ ಚತುಷ್ಪಥ ಯೋಜನೆಯಲ್ಲಿ ₹ 5,358 ಕೋಟಿ ವೆಚ್ಚದಲ್ಲಿ ಚಿತ್ರದುರ್ಗದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕಿಸುವ ಹೆದ್ದಾರಿ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗಿತ್ತು.

ಈ ಹೆದ್ದಾರಿಯು ಹೊಳಲ್ಕೆರೆ, ಕಡೂರು, ಚಿಕ್ಕಮಗಳೂರು, ಮೂಡಿಗೆರೆಯಿಂದ ಭೈರಾಪುರದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಗೆ ಸಂಪರ್ಕ ಕಲ್ಪಿಸುತ್ತಿತ್ತು. ಈ ಯೋಜನೆಯ ಆಕ್ಷೇಪಣೆಗಳಿಗಾಗಿ ಪ್ರತಿ ತಾಲ್ಲೂಕಿನಲ್ಲಿಯೂ ಸಭೆ ನಡೆಸಲಾಗಿತ್ತು.

ಯೋಜನೆಯಂತೆ ಹೆದ್ದಾರಿ ಹಾದು ಹೋಗುತ್ತಿದ್ದ ಪ್ರದೇಶಗಳಾದ ಬಿಳ್ಳೂರು, ಗೌಡಳ್ಳಿ, ಊರುಬಗೆ, ಹೊಸ್ಕೆರೆ, ಭೈರಾಪುರ ಗ್ರಾಮಗಳು ಸೇರಿದಂತೆ ಅಕ್ಕಪಕ್ಕದ ಸತ್ತಿಗನಹಳ್ಳಿ, ಮಡ್ಡಿಕೆರೆ, ಹೇರಿಕೆ, ಮೇಕನಗದ್ದೆ, ಹಳೆಕೆರೆ ಗ್ರಾಮಗಳು ಪ್ರತಿ ವರ್ಷವೂ ಅತಿವೃಷ್ಟಿ ಪ್ರದೇಶಗಳು. ಇಲ್ಲಿ ಕೃಷಿ ಉದ್ಯಮವು ಪ್ರತಿ ವರ್ಷವೂ ರೈತರನ್ನು ನಷ್ಟದ ಬಾಗಿಲಿಗೆ ತಳ್ಳುತ್ತದೆ.

ನಾಲ್ಕು ವರ್ಷಗಳ ಹಿಂದೆ ನಷ್ಟದಿಂದ ಬೇಸತ್ತ ಊರುಬಗೆ ಗ್ರಾಮಸ್ಥರು ಬದಲಿ ಕೃಷಿ ಭೂಮಿಯನ್ನು ನೀಡಿ ಸ್ಥಳಾಂತರ ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಆದರೆ, ಯೋಜನೆಗೆ ಜೀವ ಬರುತ್ತಿದ್ದಂತೆ ಹೆದ್ದಾರಿ ಹಾದು ಹೋದರೆ ಆರ್ಥಿಕ ವಹಿವಾಟು ಚಿಗುರಬಹುದು ಎಂಬ ಕನಸು ಸ್ಥಳೀಯರಲ್ಲಿ ಗರಿಗೆದರ ತೊಡಗಿತ್ತು. ಹೀಗಾಗಿಯೇ ಹೆದ್ದಾರಿ ಹಾದು ಹೋಗುವ ಪ್ರದೇಶದಲ್ಲಿ ಜಮೀನು ಖರೀದಿಗೆ ಹಲವಾರು ಆಸಕ್ತಿ ಹೊಂದಿದ್ದರು.

ಆದರೆ, ಉದ್ದೇಶಿತ ಹೆದ್ದಾರಿ ನಿರ್ಮಾಣ ವಿರೋಧಿಸಿ ಪರಿಸರವಾದಿ ಗಳು ಹೈಕೋರ್ಟ್ ಮೆಟ್ಟಿಲೇರಿದ್ದು, ಯೋಜನೆಯನ್ನು ಕೈಬಿಡುವಂತೆ ಹೈಕೋರ್ಟ್ ಆದೇ ಶಿಸಿದೆ. ಅರಣ್ಯ ಇಲಾಖೆ ಕೂಡ ಯೋಜನೆ ಜಾರಿಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಶಿಶಿಲ– ಭೈರಾಪುರ ಹೆದ್ದಾರಿ ನಿರ್ಮಾಣವು ಕನಸಾಗಿಯೇ ಉಳಿದಿದ್ದು, ಸ್ಥಳೀಯರಿಗೆ ನಿರಾಸೆ ಮೂಡಿದೆ. ಯೋಜನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರ– ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿವೆ.

‘ಈ ಹೆದ್ದಾರಿ ನಿರ್ಮಾಣದಿಂದ ಮೂಡಿ ಗೆರೆಯಿಂದ ಸುಲಭವಾಗಿ ಕರಾವಳಿಯನ್ನು ಸಂಪರ್ಕಿಸಬಹುದಿತ್ತು. ಚಾರ್ಮಾಡಿ ಘಾಟಿಯಲ್ಲಿ ವರ್ಷದಲ್ಲಿ ಆರು ತಿಂಗಳು ವಾಹನ ಸಂಚಾರಕ್ಕೆ ಪದೇ ಪದೇ ಅಡ್ಡಿಯಾಗುತ್ತಿರುತ್ತದೆ. ಚಾರ್ಮಾಡಿ ಘಾಟಿಯ ಮೇಲಿನ ಒತ್ತಡ ಕಡಿಮೆ ಮಾಡಲು ಈ ಹೆದ್ದಾರಿ ಪರ್ಯಾಯವಾಗಿತ್ತು. ಅಲ್ಲದೇ ಈ ಪ್ರದೇಶದಲ್ಲಿ ಕೃಷಿ ನಷ್ಟದ ಹಂಚಿನಲ್ಲಿದ್ದು, ಕೃಷಿಕರಿಗೆ ಅತಿವೃಷ್ಟಿ, ಕಾಡು ಪ್ರಾಣಿಗಳ ಹಾವಳಿ ಬದುಕನ್ನೇ ಕಸಿದುಕೊಂಡಿದೆ. ಈ ಹೆದ್ದಾರಿ ನಿರ್ಮಾಣದಿಂದ ಕೃಷಿಕರಿಗೆ ಆರ್ಥಿಕ ಚಟುವಟಿಕೆ ನಡೆಸಲು ದಾರಿಯಾಗಬಹುದು ಎಂಬ ನಿರೀಕ್ಷೆಯೂ ಹುಸಿಯಾಯಿತು’ ಎನ್ನುತ್ತಾರೆ ಹೊಸ್ಕೆರೆಯ ಸಂದೀಪ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT