ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ ಕೆಎಸ್‌ಆರ್‌ಟಿಸಿ ಘಟಕ ಸ್ಥಾಪನೆ ನನೆಗುದಿಗೆ

Last Updated 17 ಡಿಸೆಂಬರ್ 2019, 10:16 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲ್ಲೂಕು ಕೇಂದ್ರದಲ್ಲಿ ಕೆಎಸ್‌ಆರ್‌ಟಿಸಿ ಘಟಕ (ಡಿಪೊ) ಸ್ಥಾಪನೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಘಟಕಕ್ಕೆ ಜಾಗ, ಅನುದಾನ ಮಂಜೂರಾಗಿದ್ದರೂ ಪ್ರಕ್ರಿಯೆ ಶುರುವಾಗಿಲ್ಲ.

ಕಾಫಿನಾಡಿನ ಮಲೆನಾಡು ಭಾಗದ ಧಾರ್ಮಿಕ ಮತ್ತು ಪ್ರೆಕ್ಷಣೀಯ ಕ್ಷೇತ್ರ ಶೃಂಗೇರಿಯಲ್ಲಿ ಕೆಎಸ್‌ಆರ್‌ಟಿಸಿ ಘಟಕ ನಿರ್ಮಿಸಬೇಕು ಎಂಬುದು ಈ ಭಾಗದ ಜನರ ಬೇಡಿಕೆಯಾಗಿದೆ. ಕಸಬಾ ಹೋಬಳಿಯ ಮೆಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸಿಗೆ ಗ್ರಾಮದ ಸರ್ವೆ ನಂಬರ್‌ 416ರಲ್ಲಿ (ಸೊಪ್ಪಿನಬೆಟ್ಟ ಸರ್ಕಾರಿ ಜಮೀನು) ಐದು ಎಕರೆ ಜಾಗ ಈ ಘಟಕಕ್ಕೆ ಮಂಜೂರಾಗಿದೆ. 2016–17ನೇ ಸಾಲಿನಲ್ಲೇ ಜಾಗ ನೀಡಲಾಗಿದೆ.

ಘಟಕ ನಿರ್ಮಾಣ ಕಾಮಗಾರಿಗೆ 2019–20ನೇ ಸಾಲಿನಲ್ಲಿ ಮೊದಲ ಹಂತದಲ್ಲಿ ₹ 5 ಕೋಟಿ ಅನುದಾನವೂ ಮಂಜೂರಾಗಿದೆ. ಪ್ರಕ್ರಿಯೆ ಶುರು ಮಾಡಲು ಮೀನಮೇಷ ಎಣಿಸಲಾಗುತ್ತಿದೆ.

‘ಹಲವರ ಪ್ರಯತ್ನದಿಂದ ಶೃಂಗೇರಿಗೆ ಕೆಎಸ್‌ಆರ್‌ಟಿಸಿ ಡಿಪೊ ಮಂಜೂರಾಗಿದೆ, ಸ್ಥಾಪನೆ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಇದರ ಹಿಂದೆ ಖಾಸಗಿ ಬಸ್ಸುಗಳವರ ಲಾಬಿ ಇರಬಹುದೆಂಬ ಶಂಕೆಯೂ ಇದೆ. ಇಚ್ಛಾಶಕ್ತಿ ಕೊರತೆಯಿಂದ ಪ್ರಕ್ರಿಯೆ ಶುರುವಾಗಿಲ್ಲ’ ಎಂದು ಮೆಣಸೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಸಿಮನೆ ಶಿವಶಂಕರ್‌ ಬೇಸರ ವ್ಯಕ್ತಪಡಿಸಿದರು.

ಶೃಂಗೇರಿ ಭಾಗದಲ್ಲಿ ಪ್ರವಾಸಿಗರು, ಭಕ್ತರ ದಾಂಗುಡಿ ವರ್ಷಪೂರ್ತಿ ಇರುತ್ತದೆ. ಡಿಪೊ ನಿರ್ಮಾಣವಾದರೆ ಬಸ್ಸುಗಳ ಸಂಖ್ಯೆ ಹೆಚ್ಚಾಗಿ, ಮಲೆನಾಡಿನಲ್ಲಿ ಬಸ್‌ ಸೌಕರ್ಯ ಹೆಚ್ಚುತ್ತದೆ ಎಂಬುದು ಜನರ ನಿರೀಕ್ಷೆ.

‘ಜಾಗ ಪರಿಶೀಲನೆ ಮಾಡಿದ್ದೇವೆ. ಇಳಿಜಾರು, ತಗ್ಗುದಿಣ್ಣೆಗಳಿಂದ ಕೂಡಿದೆ. ಸಮತಟ್ಟು ಮಾಡಿಕೊಳ್ಳಬೇಕು. ಮಣ್ಣು ಪರೀಕ್ಷೆ ಮಾಡಬೇಕಿದೆ’ ಎಂದು ಕೆಎಸ್‌ಆರ್‌ಟಿಸಿ ಸೆಕ್ಷನ್‌ ಎಂಜಿನಿಯರ್‌ ಅರವಿಂದ್‌ ತಿಳಿಸಿದರು.

‘ಒಟ್ಟಾರೆ ₹ 12 ಕೋಟಿ ಅಂದಾಜು ವೆಚ್ಚದ ಪ್ರಸ್ತಾವ ಇದು. ಮೊದಲ ಹಂತದಲ್ಲಿ ₹ 5 ಕೋಟಿ ಮಂಜೂರಾಗಿದೆ. ಅಂದಾಜು ಪಟ್ಟಿ ಸಿದ್ಧಪಡಿಸಿ ಈಗಾಗಲೇ ಕೇಂದ್ರ ಕಚೇರಿಗೆ ಕಳಿಸಿದ್ದೇವೆ’ ಎಂದು ಕೆಎಸ್‌ಆರ್‌ಟಿಸಿ ಚಿಕ್ಕಮಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ದೇವರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದೆ. ಫೆಬ್ರುವರಿ–ಮಾರ್ಚ್ ಹೊತ್ತಿಗೆ ಟೆಂಡರ್‌ ಅಂತಿಮವಾದರೆ, ಏಪ್ರಿಲ್‌ನಲ್ಲಿ ಕಾಮಗಾರಿ ಶುರುವಾಗುತ್ತದೆ. ಕಾಮಗಾರಿ ಶುರುವಾದರೆ ಹಂತಹಂತವಾಗಿ ಅನುದಾನ ಬಿಡುಗಡೆಯಾಗುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT