ಶುಕ್ರವಾರ, ಏಪ್ರಿಲ್ 3, 2020
19 °C
847ನೇ ಜಯಂತ್ಯುತ್ಸವ– ಸಾವಿರಾರು ಮಂದಿ ಭಾಗಿ, ಮೇಳೈಸಿದ ಸಂಭ್ರಮ

‘ಸಿದ್ಧರಾಮೇಶ್ವರ ಕಾಯಕ ಆದರ್ಶವಾಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಜ್ಜಂಪುರ: ಪಟ್ಟಣ ಸಮೀಪದ ಸೊಲ್ಲಾಪುರದಲ್ಲಿ ಮಂಗಳವಾರ ನಡೆದ 847ನೇ ಸಿದ್ಧರಾಮೇಶ್ವರ ಜಯಂತ್ಯುತ್ಸವವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು.

ಯಳನಾಡು ಸಂಸ್ಥಾನದ ಜ್ಞಾನಪ್ರಭು ಸಿದ್ಧರಾಮದೇಶೀಕೇಂದ್ರ ಸ್ವಾಮೀಜಿ, ಚಿತ್ರದುರ್ಗದ ಮುರುಘಾ ಶರಣರು, ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗೋಡೆಕೆರೆ ಸಂಸ್ಥಾನದ ಸಿದ್ಧರಾಮದೇಶೀಕೇಂದ್ರ ಸ್ವಾಮೀಜಿ, ಮನಗುಂಡಿಯ ಬಸವಾ
ನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಬಸವಣ್ಣ, ಅಲ್ಲಮಪ್ರಭು, ಸಿದ್ಧರಾಮರು ಸಾಮಾಜಿಕ ಕ್ರಾಂತಿಗೆ ಕಾರಣರಾದರು. ಅನುಭವ ಮಂಟದ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದರು. ಶರಣರು ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನರ ಧ್ವನಿಯಾದವರು. ಸಿದ್ಧರಾಮರು ಜಾತಿ ಭೇದವನ್ನು ಹೋಗಾಲಾಡಿಸುವ ಚಿಂತನೆ ನಡೆಸಿದ್ದರು ಎಂದು ಸ್ಮರಿಸಿದರು.

‘ನಿರ್ಭಯ ಪ್ರಕರಣ, ಹೈದರಾಬಾದ್‌ನ ಘಟನೆ ಮಹಿಳೆಯರಿಗೆ ನೋವು ತಂದಿತ್ತು. ಬಸವಣ್ಣನ ತತ್ವ ನಂಬಿದ್ದ ವ್ಯಕ್ತಿಯೇ ಕ್ರೌರ್ಯ ಎಸಗಿದ ವ್ಯಕ್ತಿಗಳನ್ನು ಕೊಂದಿದ್ದು ಸಂತಸದ ವಿಚಾರ’ ಎಂದರು.

ಗೃಹ ಸಚಿವ ಜಿ.ಎಸ್. ಬಸವರಾಜ ಬೊಮ್ಮಾಯಿ ಮಾತನಾಡಿ, ‘ಸಿದ್ಧರಾಮ ಶಿವಯೋಗಿಗಳು, ಬಾಲ್ಯದಲ್ಲಿಯೇ ಆಧ್ಯಾತ್ಮಿಕ ವಿಷಯಕ್ಕೆ ಒಲವು ನೀಡಿದರು. ಮುಂದೆ ಕಾಯಕವೇ ಧರ್ಮ ಎಂಬ ಮಾತಿನಂತೆ ಬಾಳಿದರು. ಕೆರೆ-ಕಟ್ಟೆ ನಿರ್ಮಾಣದಂತಹ ಪರೋಪಕಾರಿ ಕಾರ್ಯದಲ್ಲಿ ತೊಡಗಿದರು. ಅವರ ಸ್ಫೂರ್ತಿಯ ಫಲವಾಗಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು 2008ರಿಂದಲೇ ರಾಜ್ಯದಲ್ಲಿ ಜಲಾಶಯದಿಂದ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದರು. ಈಗಲೂ ಜಿಲ್ಲೆಯ ಹಲವು ತಾಲ್ಲೂಕಿನ ನೂರಾರು ಕೆರೆ ತುಂಬಿಸುವ ಗೊಂದಿ ಏತ ನೀರಾವರಿ ಯೋಜನೆ ಮಂಜೂರಾತಿಗೆ ಅವರು ಆದೇಶಿಸಿದ್ದಾರೆ’ ಎಂದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಮಾತನಾಡಿ, ‘ಇಂದಿನ ಕೌಟುಂಬಿಕ, ಸಾಮಾಜಿಕ, ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿಯ ವಿದ್ಯಮಾನ ಕಳವಳಕಾರಿಯಾಗಿದೆ. ಇದಕ್ಕೆ ಜನರ ಅಜ್ಞಾನ ಕಾರಣವಾಗಿದ್ದರೆ, ಜನಜಾಗೃತಿ ಮದ್ದಾಗಿದೆ’ ಎಂದರು.

ಸೊ.ಸಿ. ಸತ್ಯನಾರಾಯಣದಾಸ್ ರಚನೆಯ ‘ಕಾಯಕಯೋಗಿ ಸಿದ್ಧರಾಮ ಗ್ರಂಥ’ವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಡುಗಡೆಗೊಳಿಸಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ‘ನೊಳಂಬವಾಣಿ’ ತ್ರೈಮಾಸಿಕ ಪತ್ರಿಕೆ ಬಿಡುಗಡೆ ಮಾಡಿದರು. ಸಚಿವ ಸಿ.ಟಿ.ರವಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.

ಮಡಿವಾಳ ಮಾಚಿದೇವ ಕ್ಯಾಲೆಂಡರ್ ಅನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಾಸಕ ರೇಣುಕಾಚಾರ್ಯ ಬಿಡುಗಡೆಗೊಳಿಸಿದರು. ಸಂಸದೆ ಶೋಭಾ ಕರಂದ್ಲಾಜೆ ‘ಸಿದ್ಧರಾಮರ ಭಕ್ತಿ ಗೀತೆ’ಯ ಧ್ವನಿಸುರಳಿಯನ್ನು ಬಿಡುಗಡೆಗೊಳಿಸಿದರು.

ಇದೇ ವೇಳೆ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಬಸವರಾಜ ನೆಲ್ಲಿಸರ ಅವರಿಗೆ ಮೇಗಳ ಮಠದ ಲಿಂಗೈಕ್ಯ ಸಿದ್ಧಣ್ಣಯ್ಯ ಮತ್ತು ಗಂಗಮ್ಮ ಸ್ಮಾರಕ ಟ್ರಸ್ಟ್ ನೀಡುವ ‘ಸಿದ್ಧರಾಮ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಡಾ. ಜಿ.ಎಸ್.ಚಂದ್ರಶೇಖರ್, ಎನ್.ರಘುಮೂರ್ತಿ, ಮೋಹನ್ ಕುಮಾರ್, ಬಿ.ಎಸ್.ಪರಮಶಿವಯ್ಯ, ಜಿ.ಎಸ್.ನಿರಂಜನಮೂರ್ತಿ, ಜಿ.ಟಿ. ರಮೇಶ್ ಬಾಬು, ಓಂಕಾರಮೂರ್ತಿ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಗ್ಯಾಸ್ ರಾಜಣ್ಣ, ನೊಳಂಬ ವೀರಶೈವ ಸಂಘ ರಾಜ್ಯ ಘಟಕದ ಅಧ್ಯಕ್ಷ ಎಸ್.ಎಂ.ನಾಗರಾಜ್, ಕಾರ್ಯದರ್ಶಿ ರಾಮಲಿಂಗಪ್ಪ, ಶಾಸಕ ಡಿ.ಎಸ್.ಸುರೇಶ್, ಬೆಳ್ಳಿ ಪ್ರಕಾಶ್, ಕುಮಾರಸ್ವಾಮಿ, ಲಿಂಗೇಶ್, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಮುಖಂಡ ಲೋಕೇಶ್ವರ್, ಶಂಭೈನೂರು ಆನಂದಪ್ಪ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು