ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಸರ್ಕಾರದಿಂದ ಪಾಠ ಕಲಿಯಬೇಕಿಲ್ಲ

ಕನಕದಾಸ ಜಯಂತಿ: ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
Last Updated 8 ಜನವರಿ 2021, 6:14 IST
ಅಕ್ಷರ ಗಾತ್ರ

ಅಜ್ಜಂಪುರ: ‘ನಾನು ಮುಖ್ಯಮಂತ್ರಿ ಯಾಗಿದ್ದಾಗ ಜಾರಿಗೆ ತಂದಿದ್ದ ಜನಪರ ಯೋಜನೆಗಳನ್ನು ರದ್ದು ಮಾಡಿದ ಈ ಸರ್ಕಾರದಿಂದ ನಾನು ಪಾಠ ಕಲಿಯಬೇಕಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹರಿಹಯ್ದರು.

ತಾಲ್ಲೂಕಿನ ಚೌಳಹಿರಿಯೂರು ಗ್ರಾಮದಲ್ಲಿ ಗುರುವಾರ ನಡೆದ ಕನಕ ದಾಸರ 533ನೇ ಜಯತ್ಯುತ್ಸವವನ್ನು ಅವರು ಉದ್ಘಾಟಿಸಿ ಮಾತನಾಡಿದರು.

‘ನಾನು ಮುಖ್ಯಮಂತ್ರಿಯಾಗಿದ್ದಾಗ ಕುರಿ ಸತ್ತರೆ ₹ 5 ಸಾವಿರ, ಎತ್ತು ಎಮ್ಮೆ ಸತ್ತರೆ ₹ 10 ಸಾವಿರ ಪರಿಹಾರ ನೀಡಲು ಆದೇಶ ನೀಡಿದ್ದೆ. ಈಗಿನ ಸರ್ಕಾರ ಅದನ್ನು ರದ್ದುಗೊಳಿಸಿದೆ’ ಎಂದು ಹೇಳಿದರು.

ಹೆಬ್ಬಾಳ ಶಾಸಕ ಬೈರತಿ ಸುರೇಶ್ ಮಾತನಾಡಿ, ‘ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಸಿದ್ದರಾಮಯ್ಯರ ಬೆಂಬಲವಿದೆ. ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿ, ಕುರುಬರಿಗೆ ಶೇ 7.5 ಮೀಸಲಾತಿ ಕಲ್ಪಿಸಬೇಕು ಎಂಬುದು ಅವರ ಸ್ಪಷ್ಟ ನಿಲುವು. ಇದನ್ನು ತಪ್ಪಾಗಿ ಬಿಂಬಿಸಿ, ಸಮಾಜವನ್ನು ಸಿದ್ದರಾಮಯ್ಯ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ’ ಎಂದು ಆರೋಪಿಸಿದರು.

ಮಾಜಿ ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ, ‘ಸಚಿವ ಕೆ.ಎಸ್‌. ಈಶ್ವರಪ್ಪ ಅವರನ್ನು ಮುಂದಿಟ್ಟುಕೊಂಡು ಕುರುಬ ಸಮುದಾಯ ಒಡೆಯಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ಕುತಂತ್ರ ಹೆಣೆದಿವೆ. ಇದಕ್ಕೆ ಸಮಾಜದವರು ಅವಕಾಶ ಕೊಡಬಾರದು’ ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ಕೆ.ಎಸ್. ಆನಂದ್, ‘ಹಾವನೂರು ವರದಿ ಮತ್ತು ಚಿನ್ನಪ್ಪ ರೆಡ್ಡಿ ವರದಿ ಜಾರಿಗೊಳಿಸಿದ ಸಿದ್ದರಾಮಯ್ಯ, ಕುರುಬ ಸಮಾಜದ ಏಳಿಗೆಗೆ ನೆರವಾದರು. ಹಾಗೆಯೇ ಪ್ರತಿ ಜಾತಿಗೂ ಜಯಂತ್ಯುತ್ಸವ ಆಚರಣೆಗೆ ಅವಕಾಶ ಕಲ್ಪಿಸಿ, ಸಮುದಾಯದ ಜಾಗೃತಿಗೆ ಕಾರಣರಾದರು’ ಎಂದರು.

ಹೊಸದುರ್ಗ ಮಾಜಿ ಶಾಸಕ ಬಿ. ಜಿ. ಗೋವಿಂದಪ್ಪ, ‘ಈಗಿನ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ಕಡೆಗಣಿಸಿದೆ. ಯೋಜನೆಗೆ ಅಗತ್ಯ ಭೂ-ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ’ ಎಂದು ದೂರಿದರು.

ಚಿತ್ರದುರ್ಗ ಯಾದವ ಗುರುಪೀಠದ ಕೃಷ್ಣಯಾದವಾನಂದ ಸ್ವಾಮೀಜಿ, ‘ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಉಳಿಸಿಕೊಂಡಾಗ ಮಾತ್ರ ಅಹಿಂದ ಸಮುದಾಯಕ್ಕೆ ನೆಲೆ-ಬೆಲೆ. ಅದಕ್ಕಾಗಿ ಎಲ್ಲರೂ ಒಗ್ಗೂಡೋಣ’ ಎಂದರು.

ಕಾರ್ಯಕ್ರಮದಲ್ಲಿ ಕೆ.ಆರ್.ನಗರ ಕನಕ ಗುರುಪೀಠದ ಶಿವಾನಂದಪುರಿ ಸ್ವಾಮೀಜಿ, ಬಿ.ವಿ ನಗರದ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಚಿತ್ರದುರ್ಗದ ಬಂಜಾರ ಗುರುಪೀಠದ ಸರದಾರ್ ಸೇವಾಲಾಲ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಭೋಗ ನಂಜುಂಡೇಶ್ವರ ವಿಶ್ವಸ್ಥ ಮಂಡಳಿ ಅಧ್ಯಕ್ಷ ಎಚ್.ಸಿ. ರುದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್. ಆನಂದ್ ಅವರು ಭಕ್ತ ಕನಕದಾಸರ ಭಾವಚಿತ್ರ ಅನಾವರಣಗೊಳಿಸಿದರು.

ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್ , ಜಿಲ್ಲಾ ಪಂಚಾಯಿತಿ ಸದಸ್ಯೆ ವನಮಾಲಾ ದೇವರಾಜ್, ರೇಣುಕಾ ನಟರಾಜ್, ರೇಖಾ ಹುಲಿಯಪ್ಪ ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ತಿಪ್ಪೇರುದ್ರಯ್ಯ, ಮಾಜಿ ಸದಸ್ಯ ಎಂ. ಕೃಷ್ಣಮೂರ್ತಿ, ಬೋಗನಂಜುಂಡೇಶ್ವರ ವಿಶ್ವಸ್ಥ ಮಂಡಳಿ ಕಾರ್ಯದರ್ಶಿ ಎಚ್.ಟಿ. ಕೃಷ್ಣಮೂರ್ತಿ, ಪ್ರಕಾಶ್ ಪಾಲ್ಗೊಂಡಿದ್ದರು.

ಭೋಗನಂಜುಂಡೇಶ್ವರ ಸ್ವಾಮಿ ವಿಶ್ವಸ್ಥ ಮಂಡಳಿ, ಕಡೂರು ತಾಲ್ಲೂಕು ಗ್ರಾಮೀಣ ಕುರುಬರ ಸಂಘ, ಅಜ್ಜಂಪುರ ತಾಲ್ಲೂಕು ಕನಕ ನೌಕರ ಸಂಘ ಸಂಯುಕ್ತವಾಗಿ ಕಾರ್ಯಕ್ರಮ ಆಯೋಜಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT