ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಕಸ ಸಂಗ್ರಹ ಸುಲಭ: ವಿಲೇವಾರಿ ತಿಣುಕಾಟ

Published 28 ಆಗಸ್ಟ್ 2023, 6:28 IST
Last Updated 28 ಆಗಸ್ಟ್ 2023, 6:28 IST
ಅಕ್ಷರ ಗಾತ್ರ

ವಿಜಯಕುಮಾರ್ ಎಸ್.ಕೆ.

ಚಿಕ್ಕಮಗಳೂರು: ಜಿಲ್ಲೆಯಲ್ಲಿರುವ ಎಲ್ಲಾ ಪಟ್ಟಣ ಮತ್ತು ನಗರಗಳಲ್ಲಿ ಮನೆ–ಮನೆಯಿಂದ ಕಸ ಸಂಗ್ರಹ ಕಾರ್ಯವನ್ನು ನಗರ ಸ್ಥಳೀಯ ಸಂಸ್ಥೆಗಳು ಮಾಡುತ್ತಿವೆ. ಆದರೆ, ರಸ್ತೆಗಳಲ್ಲಿ ಕಸ ಬೀಳುವುದು ತಪ್ಪಿಲ್ಲ. ಇನ್ನು ಸಂಗ್ರಹವಾದ ಕಸವನ್ನು ಸಂಸ್ಕರಿಸುವ ಕೆಲಸ ಚಿಕ್ಕಮಗಳೂರು ನಗರ ಸೇರಿ ಎಲ್ಲಿಯೂ ಸಮರ್ಪಕವಾಗಿ ನಡೆಯುತ್ತಿಲ್ಲ.

ಚಿಕ್ಕಮಗಳೂರು ನಗರದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ 35 ವಾರ್ಡ್‌ಗಳಿದ್ದು, ಎಲ್ಲಾ ವಾರ್ಡ್‌ಗಳಲ್ಲೂ ಕಸ ಮನೆ–ಮನೆಯಿಂದ ಸಂಗ್ರಹವಾಗುತ್ತಿದೆ. ಹಸಿ ಮತ್ತು ಒಣ ಕಸ ವಿಂಗಡಣೆ ಮಾಡುವ ಕೆಲಸ ಅಧಿಕಾರಿಗಳ ಪ್ರಕಾರ 30 ವಾರ್ಡ್‌ಗಳಲ್ಲಿ ನಡೆಯುತ್ತಿದೆ. ಇನ್ನು ಐದು ವಾರ್ಡ್‌ಗಳಲ್ಲಿ ನಡೆಯುತ್ತಿಲ್ಲ. ವಾಸ್ತವದಲ್ಲಿ ಬಹುತೇಕ ವಾರ್ಡ್‌ಗಳಲ್ಲಿ ಕಸ ವಿಂಗಡಣೆಯಾಗುತ್ತಿಲ್ಲ.

ನಗರದಲ್ಲಿ ಪ್ರತಿನಿತ್ಯ 54 ಟನ್ ಕಸ ಸಂಗ್ರಹವಾಗುತ್ತಿದ್ದು, 23 ಟನ್ ಕಸ ಸಂಸ್ಕರಣೆಯಾಗುತ್ತಿದೆ. ಉಳಿದ ಕಸ ಇಂದಾವರ ಬಳಿ ಇರುವ ಕಸ ಸಂಸ್ಕರಣೆ ಘಟಕದಲ್ಲೇ ರಾಶಿ ಬೀಳುತ್ತಿದೆ. ಸುಮಾರು 54 ಸಾವಿರ ಟನ್‌ನಷ್ಟು ಕಸ ರಾಶಿ ಬಿದ್ದಿದೆ. ಇದನ್ನು ಕರಗಿಸುವುದು ನಗರಸಭೆಗೆ ದೊಡ್ಡ ಸವಾಲಾಗಿದೆ.

ಕಡೂರುನಲ್ಲಿ 15 ಟನ್, ತರೀಕೆರೆಯಲ್ಲಿ 16 ಟನ್, ಬೀರೂರಿನಲ್ಲಿ 9, ಎನ್‌.ಆರ್‌.ಪುರದಲ್ಲಿ 4 ಟನ್, ಕೊಪ್ಪದಲ್ಲಿ 2.35 ಟನ್, ಶೃಂಗೇರಿಯಲ್ಲಿ 4.30 ಟನ್, ಮೂಡಿಗೆರೆಯಲ್ಲಿ 5.20 ಟನ್, ಅಜ್ಜಂಪುರದಲ್ಲಿ 5.2 ಟನ್ ಸೇರಿ ಒಟ್ಟು 115 ಟನ್ ಕಸ ಸಂಗ್ರಹವಾಗುತ್ತಿದೆ. ಈ ಪೈಕಿ 51 ಟನ್ ಮಾತ್ರ ಸಂಸ್ಕರಣೆಯಾಗುತ್ತಿದೆ ಎಂಬುದು ಅಧಿಕಾರಿಗಳು ನೀಡಿರುವ ಅಂಕಿ–ಅಂಶ. 

‘ಚಿಕ್ಕಮಗಳೂರು ನಗರದಲ್ಲಿ ಸಂಗ್ರಹವಾದ ಕಸವನ್ನು ಸಂಪೂರ್ಣವಾಗಿ ಸಂಸ್ಕೃರಿಸಲು ಯೋಜನೆ ರೂಪಿಸಲಾಗಿದೆ. ಸದ್ಯ ರಾಶಿ ಬಿದ್ದಿರುವ 54 ಸಾವಿರ ಟನ್ ಕಸ ಕರಗಿಸುವ ಕೆಲಸ ಸದ್ಯದಲ್ಲೇ ಆರಂಭವಾಗಲಿದ್ದು, ಯಂತ್ರಗಳ ಖರೀದಿಗೆ ಸದ್ಯದಲ್ಲೇ ಟೆಂಡರ್ ಕರೆಯಲಾಗುತ್ತಿದೆ’ ಎಂದು ನಗರಸಭೆ ಆಯುಕ್ತ ಬಸವರಾಜ್ ತಿಳಿಸಿದರು.

ಒಮ್ಮೆ ಈ ರಾಶಿ ವಿಲೇವಾರಿಯಾದರೆ ಸಂಗ್ರಹವಾಗುವ ಅಷ್ಟೂ ಕಸ ಸಂಸ್ಕರಣೆಯಾಗಲಿದೆ. ಕೆಲ ವಾರ್ಡ್‌ಗಳಲ್ಲಿ ಹಸಿ ಮತ್ತು ಒಣ ಕಸ ವಿಂಗಡಣೆಯಾಗುತ್ತಿಲ್ಲ, ಸರಿಪಡಿಸಲಾಗುವುದು ಎಂದು ಹೇಳಿದರು.

ಕೊಪ್ಪ:‌ ವಿಲೇವಾರಿಗೆ ಸವಾಲು

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 11 ವಾರ್ಡ್‌ಗಳಿದ್ದು ವಾಹನಗಳ ಮೂಲಕ ಪ್ರತಿ ಮನೆಗಳಿಂದ ಕಸ ಸಂಗ್ರಹಿಸುವ ಕೆಲಸ ನಿರಂತರ ನಡೆಯುತ್ತಿದೆ. ತಾಲ್ಲೂಕಿನ ಸಿಗದಾಳು ಘಾಟಿಯಲ್ಲಿ ಕಸ ಸಂಗ್ರಹಗಾರ ಘಟಕವಿದ್ದು ಅಲ್ಲಿ ಹಸಿಕಸ ಒಣಕಸ ವಿಲೇವಾರಿ ಮಾಡಲಾಗುತ್ತಿದೆ. ತ್ಯಾಜ್ಯ ಸಂಸ್ಕರಿಸಿ ಗೊಬ್ಬರ ತಯಾರಿಸುವ ಕೆಲಸ ನಡೆಯುತ್ತದೆ. ಇಲ್ಲಿ ಕಸದ ಗುಡ್ಡೆಯೇ ಬೃಹದಾಕಾರವಾಗಿದ್ದು ವಿಲೇವಾರಿ ಸವಾಲಾಗಿದೆ. ಪ್ಲಾಸ್ಟಿಕ್ ವಸ್ತುಗಳು ತಲೆನೋವಾಗಿ ಪರಿಣಮಿಸಿದೆ. ಈ ಕೆಲಸವನ್ನು ಖಾಸಗಿ ಸಂಸ್ಥೆಗೆ ವಹಿಸುವ ಪ್ರಕ್ರಿಯೆಯೂ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 169 ಪಕ್ಕದಲ್ಲೇ ತ್ಯಾಜ್ಯ ವಿಲೇವಾರಿ ಘಟಕ ಇರುವುದರಿಂದ ಆ ಪ್ರದೇಶದಲ್ಲಿ ಮೂಗುಮುಚ್ಚಿ ಓಡಾಡುವ ಪರಿಸ್ಥಿತಿಯೂ ಇದೆ. ಈ ಹಿಂದೆ ಸ್ವಚ್ಛ ಪಟ್ಟಣ ಎಂಬ ಹೆಸರು ಪಡೆದಿದ್ದರೂ ಪಟ್ಟಣಕ್ಕೆ ಹೊಂದಿಕೊಂಡ ಪ್ರದೇಶಗಳಲ್ಲಿ ತ್ಯಾಜ್ಯ ಸುರಿದು ಮಾಲಿನ್ಯ ಸೃಷ್ಟಿಸುವ ಕೆಲಸವೂ ನಡೆದಿದೆ. ಇದನ್ನು ನಿಯಂತ್ರಿಸುವ ಜತೆಗೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಲು ಶ್ರಮಿಸುತ್ತಿರುವ ಪಟ್ಟಣ ಪಂಚಾಯಿತಿ ಕೆಲಸಕ್ಕೆ ‘ಗಾರ್ಬೇಜ್ ಕೊಪ್ಪ ಟು ಗಾರ್ಡನ್ ಕೊಪ್ಪ’ ಎಂಬ ಸಮಾನ ಮನಸ್ಕರ ವಾಟ್ಸ್‌ಆ್ಯಪ್‌ ತಂಡ ಕೈ ಜೋಡಿಸಿದೆ. ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಗುರುತಿಸಿ ಅವರಿಂದಲೇ ಸ್ವಚ್ಛಗೊಳಿಸುವಂತಹ ಕೆಲಸ ಮಾಡಿದ ಉದಾಹರಣೆ ಇದೆ.

ನರಸಿಂಹರಾಜಪುರ: ಹಸಿಕಸ ಒಣ ಕಸ ಸಂಗ್ರಹಣೆ

ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 11 ವಾರ್ಡ್‌ಗಳಿದ್ದು ಹಸಿಕಸ ಮತ್ತು ಒಣಕಸ ಸಂಗ್ರಹಿಸುವುದಕ್ಕೆ ಆದ್ಯತೆ ನೀಡಲಾಗಿದೆ.ಹಸಿಕಸ ಮತ್ತು ಒಣಕಸವನ್ನು ಬೇರ್ಪಡಿಸಿ ಕೊಡಕು ಪಟ್ಟಣದ ವ್ಯಾಪ್ತಿಯ ಎಲ್ಲಾ ಮನೆಗಳಿಗೂ ಎರಡು ಕಸ ಸಂಗ್ರಹಣೆಯ ಬಕೇಟ್‌ಗಳನ್ನು ನೀಡಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಡಸ್ಟ್ ಬಿನ್‌ಗಳನ್ನು ಇಡಲಾಗಿದೆ.   11 ವಾರ್ಡ್‌ಗಳಿರುವುದರಿಂದ ಒಂದು ದಿನ 6 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಹಾಗೂ ಮತ್ತೊಂದು ದಿನ 5 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಟ್ರಾಕ್ಟರ್ ಮೂಲಕ ಕಸ ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದರೂ ಹಸಿಕಸ ಮತ್ತು ಒಣ ಕಸ ಬೇರ್ಪಡಿಸಿಕೊಡುವ ಪ್ರಮಾಣ ಶೇಕಡ 50ರಷ್ಟು ಮಾತ್ರ ಆಗುತ್ತಿದೆ. ಈ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಾಗಿದೆ. ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರಿಗೂ ಹಸಿಕಸ ಮತ್ತು ಒಣಕಸ ಪ್ರತ್ಯೇಕವಾಗಿ ಸಂಗ್ರಹಿಸುವಂತೆ ಅರಿವು ಮೂಡಿಸಲಾಗಿದೆ  ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹೇಳುತ್ತಾರೆ. ಪ್ರತಿನಿತ್ಯ ಸಂಗ್ರವಾಗುವ 4 ಟಿಪಿಡಿ ಕಸವನ್ನು ತಾಲ್ಲೂಕಿನ ಲಿಂಗಾಪುರ ಗ್ರಾಮದ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕದಲ್ಲಿ ಸೂಕ್ತ ವಿಲೇವಾರಿ ಮಾಡಲು ಸಸೇರಾ ಕಂಪನಿಗೆ ವಹಿಸಲಾಗಿದೆ. ಸದ್ಯಕ್ಕೆ ಹಸಿ ಕಸ ಮತ್ತು ಒಣ ಕಸ  ವಿಂಗಡಿಸಿ ಹರ್ಮಿಕಾಪೋಸ್ಟ್ ಗೊಬ್ಬರವನ್ನು ತಯಾರಿಸಲಾಗುತ್ತಿದೆ. ಕರಗದೆ ಇರುವ ಕಸವನ್ನು ಸೂಕ್ತ ವಿಲೇವಾರಿ ಮಾಡಲು ಟ್ರಾಮೋಲ್ ಯಂತ್ರದ ಅವಶ್ಯಕತೆಯಿದ್ದು ಇದನ್ನು ಖರೀದಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ವಿಜಯಕುಮಾರ್ ತಿಳಿಸಿದರು. ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿ ಘಟಕದಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಯಾಗದೆ ಇರುವುದರಿಂದ ಲಿಂಗಾಪುರ ಗ್ರಾಮದ ವ್ಯಾಪ್ತಿಯಲ್ಲಿ ದುರ್ನಾತ ಬೀರುತ್ತಿರುತ್ತದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸುತ್ತಾರೆ. ಸಮರ್ಪಕ ಕಸವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಾರೆ.

ಬೀರೂರು: ಆಶ್ರಯ ಬಡಾವಣೆಯೇ ವಿಲೇವಾರಿ ಘಟಕ

ಪುರಸಭೆಯಲ್ಲಿ 23 ವಾರ್ಡ್‌ಗಳಿದ್ದು ಐದು ಆಟೊರಿಕ್ಷಾಗಳ ಸಹಕಾರದಿಂದ ಮನೆ ಮನೆಗೂ ತೆರಳಿ ಕಸ ಸಂಗ್ರಹಿಸಲಾಗುತ್ತಿದೆ. ಪುರಸಭೆಯು ಮನೆ ಮನೆಗಳಿಗೆ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಹಸಿ ಕಸ ಮತ್ತು ಒಣ ಕಸ ವಿಂಗಡಿಸಲು ಪ್ಲಾಸ್ಟಿಕ್ ಬಕೆಟ್ ಗಳನ್ನು ವಿತರಿಸಿದ್ದರು ಕೂಡ ಹಸಿ ಕಸ ಮತ್ತು ಒಣ ಕಸ ವಿಂಗಡಣೆಯಾಗಿ ಸಂಗ್ರಹವಾಗುತ್ತಿಲ್ಲ. ಪಟ್ಟಣದ ಮಾರುಕಟ್ಟೆ ಪ್ರಾಂಗಣದಲ್ಲಿ ಒಂದು ಹಸಿ ಕಸ ಒಣ ಕಸ ವಿಂಗಡಣಾ ಘಟಕವನ್ನು ಈ ಮೊದಲು ಪುರಸಭೆ ಸ್ಥಾಪಿಸಿತ್ತು. ಅಲ್ಲಿ ಪ್ಲಾಸ್ಟಿಕ್ ಸಂಗ್ರಹಿಸಿ ಅದನ್ನು ಮರು ಬಳಕೆಗೆ ವಿಲೇವಾರಿ ಮಾಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆ ಘಟಕ ಪ್ರಯೋಜನಕ್ಕೆ ಬಂದಿಲ್ಲ. ಬೀರೂರು ಹೊರವಲಯದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕಸ ವಿಂಗಡಣೆ ಮತ್ತು ವಿಲೇವಾರಿ ಘಟಕಕ್ಕೆ ಡಿಪಿಆರ್ ಅನುಮೋದನೆ ದೊರೆಯದ ಕಾರಣ ಈವರೆಗೆ ಘಟಕ ಸ್ಥಾಪನೆ ಮತ್ತು ಸೂಕ್ತವಾಗಿ ಕಸ ವಿಲೇವಾರಿ ಸಾಧ್ಯವಾಗಿಲ್ಲ. ಬೀರೂರು ಹೊರವಲಯದ ಹಿರಿಯಂಗಳ ಗ್ರಾಮದ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕಕ್ಕೆಂದು ಸುಮಾರು 8 ಎಕರೆ ಜಾಗ ಮಂಜೂರಾಗಿದ್ದು ಘಟಕ ಸ್ಥಾಪನೆಗೆ ಡಿಪಿಆರ್ ಸಿದ್ಧವಾಗಿದೆ. ಅದಕ್ಕೆ ಅನುಮೋದನೆ ದೊರೆಯದ ಕಾರಣ ಪುರಸಭೆ ಕಾಂಪೌಂಡ್ ಮಾತ್ರ ನಿರ್ಮಿಸಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ತರೀಕೆರೆ: ವಾಹನ ಕೊರತೆ ನಡುವೆ ನಿರ್ವಹಣೆ

ಪಟ್ಟಣದಲ್ಲಿ 23 ವಾರ್ಡಗಳಿದ್ದು ಪ್ರತಿಯೊಂದು ಮನೆಗೂ ಹಸಿ ಒಣ ಕಸ ವಿಂಗಡಣಿ ಮಾಡಲು ಪ್ಲಾಸ್ಟಿಕ್ ಬಕೆಟ್ ಗಳನ್ನು ಒದಗಿಸಲಾಗಿದೆ. ಪಟ್ಟಣದ ಹೊರ ಹೊಲಯದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಇದೆ. ಇಲ್ಲಿ ಮರು ಬಳಕೆಯಾಗುವ ತ್ಯಾಜ್ಯ ವಿಂಗಡಿಸಿ. ಹಸಿ ಕಸದಿಂದ ಕಾಂಪೋಸ್ಟ್ ಗೊಬ್ಬರ ಮಾಡಲಾಗುತ್ತಿದೆ. ಆದರೂ ಸುಂದರೇಶ ಬಡಾವಣೆ ಬನಶಂಕರಿ ದೇವಾಲಯ ಸಮೀಪ ತ್ಯಾಜ್ಯ ವಿಲೇವಾರಿ ವಾಹನಗಳು ಪ್ರತಿ ದಿನ ಬರುವುದಿಲ್ಲ. ಇದರಿಂದ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ ಎಂಬುದು ನಾಗರೀಕರ ಅಳಲು. 23 ವಾರ್ಡ್‌ಗೆ ನಾಲ್ಕು ಆಟೊರಿಕ್ಷಾ ಎರಡು ಟ್ಯಾಕ್ಟರ್ ಇರುವುದರಿಂದ ಕೆಲವು ವಾರ್ಡನಲ್ಲಿ ಸಮಸ್ಯೆಯಾಗಿದೆ. ಶೀಘ್ರದಲ್ಲಿ ವಾಹನ ಕೊರತೆ ಸಮಸ್ಯೆ ಬಗೆಹರಿಯಲಿದೆ ಎಂದು ಪುರಸಭಾ ಸದಸ್ಯ ಅಶೋಕ ಕುಮಾರ್ ತಿಳಿಸಿದರು.

ಮೂಡಿಗೆರೆ: ಮರೀಚಿಕೆಯಾದ ಕಸ ವಿಂಗಡಣೆ

ಪಟ್ಟಣದಲ್ಲಿರುವ ಹನ್ನೊಂದು ವಾರ್ಡ್‌ಗಳಲ್ಲಿ ಪ್ರತಿದಿನವೂ ಕಸವನ್ನು ಸಂಗ್ರಹಿಸಲಾಗುತ್ತಿದೆಯಾದರೂ ಹಸಿಕಸ ಒಣಕಸವನ್ನು ವಿಂಗಡಣೆ ಮಾಡುವ ಕಾರ್ಯ ಮರೀಚಿಕೆಯಾಗಿದೆ. ಒಂದುವರೆ ದಶಕಗಳ ಹಿಂದೆಯೇ ನಂದೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಟ್ಟಣ ಪಂಚಾಯಿತಿಯ ಕಸ ವಿಂಗಡಣೆ ಘಟಕವನ್ನು ನಿರ್ಮಿಸಲಾಗಿದ್ದು ಪಟ್ಟಣದಲ್ಲಿ ನಿತ್ಯವೂ ಸಂಗ್ರಹವಾಗುವ ಕಸವನ್ನು ಆಟೊ ಟ್ರ್ಯಾಕ್ಟರ್ ಮೂಲಕ ಸಂಗ್ರಹಿಸಿ ಟಿಪ್ಪರ್ ವಾಹನದ ಮೂಲಕ ಕಸ ನಿರ್ವಹಣೆ ಘಟಕಕ್ಕೆ ಕಳುಹಿಸಲಾಗುತ್ತದೆ. ಆದರೆ ಕಸ ವಿಂಗಡಣೆಯ ಪದ್ಧತಿ ಇಲ್ಲದಿರುವುದರಿಂದ ಸಂಗ್ರಹಿಸದ ಕಸವನ್ನು ಘಟಕದಲ್ಲಿ ರಾಶಿ ಹಾಕಲಾಗುತ್ತಿದೆ. ಸುತ್ತಮುತ್ತಲ ಆವರಣವು ವಾಸನೆಯುಕ್ತವಾಗಿದ್ದು ರೋಗ ಹರಡುವ ತಾಣವಾಗಿ ಪರಿಣಮಿಸಿದೆ. ಪಟ್ಟಣ ಪಂಚಾಯಿತಿಯಲ್ಲಿ ನಿತ್ಯವೂ ಕಸ ಸಂಗ್ರಹಿಸುವ ಕಾರ್ಯವಾಗುತ್ತಿದ್ದರೂ ರಸ್ತೆ ಬದಿಯಲ್ಲಿ ಕಸ ಎಸೆಯುವ ಪರಿಪಾಠ ನಿಂತಿಲ್ಲ. ಅಂಬೇಡ್ಕರ್ ಭವನ ಟಿಎಪಿಸಿಎಂಎಸ್ ಕಟ್ಟಡದ ಮುಂಭಾಗ ಬೀಜುವಳ್ಳಿ ರಸ್ತೆ ಬಸ್ ನಿಲ್ದಾಣದ ಬಳಿ ಪ್ರತಿ ದಿನವೂ ಬೆಳಗಾಗುವಷ್ಟರಲ್ಲಿ ಕಸದ ರಾಶಿ ನಿರ್ಮಾಣವಾಗುತ್ತದೆ. ಹಸಿಕಸ ಒಣಕಸವನ್ನು ಒಟ್ಟಿಗೆ ಬಿಸಾಡುವುದರಿಂದ ಅದನ್ನು ತೆರವುಗೊಳಿಸಲು ಪೌರಕಾರ್ಮಿಕರು ನಿತ್ಯ ಹೈರಾಣಾಗುತ್ತಿದ್ದಾರೆ. ‘ಪಟ್ಟಣದಲ್ಲಿ ಹಿಂದೆ ವಾರದಲ್ಲಿ ಮೂರು ದಿನ ಹಸಿಕಸ ಹಾಗೂ ನಾಲ್ಕು ದಿನ ಒಣ ಕಸವನ್ನು ಸಂಗ್ರಹಿಸುವ ಪದ್ಧತಿಯನ್ನು ಅಳವಡಿಸಲಾಗಿತ್ತು. ಮೂಲದಲ್ಲಿಯೇ ಕಸವನ್ನು ವಿಂಗಡಿಸಲು ಪ್ರತಿ ಮನೆಗಳಿಗೂ ಮಾಹಿತಿ ನೀಡಲಾಗಿತ್ತು. ಒಂದಷ್ಟು ದಿನ ಯಶಸ್ವಿಯಾಗಿಯೇ ನಡೆಯಿತು. ಆದರೆ ನಂತರ ಎರಡೂ ಕಸವನ್ನು ಒಟ್ಟಿಗೆ ಸಂಗ್ರಹಿಸಲಾಗುತ್ತಿದೆ. ಸ್ಯಾನಿಟರಿ ಪ್ಯಾಡ್ ಗಳು ಔಷಧದ ಬಾಟಲಿಗಳು ಸೇರಿದಂತೆ ಅಪಾಯಕಾರಿ ವಸ್ತುಗಳನ್ನು ಮಿಶ್ರಮಾಡಿ ಕಸದಲ್ಲಾಕುವುದರಿಂದ ವಿಂಗಡನೆ ಅಸಾಧ್ಯವಾಗಿದೆ ಸಿಬ್ಬಂದಿಗಳ ಕೊರತೆಯೂ ಕಸವಿಂಗಡಣೆಗೆ ಅಡ್ಡಿಯಾಗುತ್ತಿದೆ’ ಎನ್ನುತ್ತಾರೆ ಹೆಸರನ್ನೇಳಲು ಇಚ್ಚಿಸದ ಪೌರ ಕಾರ್ಮಿಕರೊಬ್ಬರು. 

ಶೃಂಗೇರಿ: ಒಂದೇ ಕಡೆ ವಿಲೇವಾರಿ

ಪಟ್ಟಣದ 11 ವಾರ್ಡ್‌ಗಳಲ್ಲಿ 8 ವಾರ್ಡ್‌ಗಳಲ್ಲಿ ಮಾತ್ರ ಹಸಿ ಕಸ ಮತ್ತು ಒಣ ಕಸದ ವಿಂಗಡಣೆ ನಡೆಯುತ್ತಿದೆ. ಒಣ ಮತ್ತು ಹಸಿ ಕಸವನ್ನು ಒಂದೇ ಕಡೆ ವಿಲೇವಾರಿ ಮಾಡಲಾಗುತ್ತಿದೆ. ಪಟ್ಟಣದ ಹನುಮಂತ ನಗರದಲ್ಲಿ ಎಲ್ಲ ಕಸವನ್ನು ಒಂದೇ ಕಡೆ ರಾಶಿ ಹಾಕಲಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯ ದನಗಳ ಹೊಟ್ಟೆ ಸೇರುತ್ತಿದೆ. ಕಸ ವಿಲೇವಾರಿ ಮಾಡುವ ಹನುಮಂತ ನಗರದಲ್ಲಿ ಜನರು ವಾಸಿಸುತ್ತಿದ್ದು ವಾಸನೆಯಿಂದಾಗಿ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಸ ವಿಲೇವಾರಿ ಮಾಡಿದ ಸ್ಥಳದಿಂದ ಕೊಳಚೆ ನೀರು ಹಳ್ಳಗಳ ಮೂಲಕ ತುಂಗಾ ನದಿ ಸೇರುತ್ತಿದೆ. ಈ ನದಿ ನೀರನ್ನು ಜನರು ಕುಡಿಯಲು ಉಪಯೋಗಿಸುತ್ತಾರೆ. ಪಟ್ಟಣ ಪಂಚಾಯಿತಿಗೆ ದೂರು ನೀಡಿದರೂ ಅಧಿಕಾರಿಗಳು ಮೌನವಾಗಿ ಕುಳಿತಿದ್ದಾರೆ ಎಂದು ಪಟ್ಟಣದ ನಿವಾಸಿಗಳು ದೂರಿದರು

ಕಡೂರು: ಹರಳಘಟ್ಟದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ

ಪಟ್ಟಣದಲ್ಲಿರುವ 23 ವಾರ್ಡ್‌ಗಳಿಂದ ನಿತ್ಯ ಕಸ ಸಂಗ್ರಹಿಸಿ ಒಣ ಮತ್ತು ಹಸಿ ಕಸವನ್ನು ವಿಂಗಡಿಸುವ ಕಾರ್ಯವನ್ನು ಪುರಸಭೆ ಮಾಡುತ್ತಿದೆ. ಪಟ್ಟಣದಲ್ಲಿ ಸಂಗ್ರಹವಾಗುವ ವಾಣಿಜ್ಯ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ಕಾರ್ಯವನ್ನು ಬುದ್ಧ ಫೌಂಡೇಷನ್ ಎಂಬ ಸಂಸ್ಥೆಗೆ ಕಡೂರು ಪುರಸಭೆ ಗುತ್ತಿಗೆ ನೀಡಿದೆ. ನಾಲ್ಕು ಟಿಪ್ಪರ್ ಆಟೊಗಳಲ್ಲಿ ಕಸ ಸಂಗ್ರಹಣೆ ಮಾಡಿ ಅದನ್ನು ಪಟ್ಟಣದಿಂದ ಸುಮಾರು 8 ಕಿ.ಮೀ.ದೂರವಿರುವ ಹರಳಘಟ್ಟದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಕೊಂಡೊಯ್ಯಲಾಗುತ್ತಿದೆ. ಹರಳಘಟ್ಟದ ಬಳಿಯಿರುವ ಘನತ್ಯಾಜ್ಯ ವಿಲೇವಾರಿ ಘಟಕ 10 ಎಕರೆ ವಿಸ್ತೀರ್ಣ ಹೊಂದಿದೆ. ಈಗಾಗಲೇ ಅಲ್ಲಿ 32 ಟನ್ ಕಸ ಸಂಗ್ರಹವಾಗಿದ್ದು ಅದನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸುವ ಕಾರ್ಯ ಆರಂಭವಾಗಿದೆ.ಪುರಸಭೆ ವತಿಯಿಂದಲೇ ಪ್ರತಿ ಮನೆಗೆ ಒಣ ಮತ್ತು ಹಸಿ ಕಸ ಸಂಗ್ರಹಿಸಲು ಎರಡು ಬಕೆಟ್ ನೀಡಲಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಸಮರ್ಪಕವಾಗಿ ನಡೆಯುತ್ತಿದೆಯಾದರೂ ಪುರಸಭೆ ವ್ಯಾಪ್ತಿಯಲ್ಲಿರುವ ಮಲ್ಲೇಶ್ವರ ಬಳಿಯ ನಾಲ್ಕು ಬಡಾವಣೆಗಳಲ್ಲಿ ಕಸ ಸಂಗ್ರಹ ತೃಪ್ತಿಕರವಾಗಿಲ್ಲ. ಪ್ರತಿನಿತ್ಯ ಕಸ ಸಂಗ್ರಹಕ್ಕೆ ಆಟೊಗಳು ಬರುತ್ತಿಲ್ಲ. ಅಂಬೇಡ್ಕರ್ ವೃತ್ತದಿಂದ ಬಿಜಿಎಸ್ ಶಾಲೆಯ ತನಕ ರಸ್ತೆಯ ಬದಿ ಸದಾ ಕಸ ತುಂಬಿರುತ್ತದೆ. ಇದರ ಬಗ್ಗೆ ಪುರಸಭೆ ಗಮನ ಹರಿಸುತ್ತಿಲ್ಲ ಎಂಬ  ಆಕ್ಷೇಪಣೆ ಸಾರ್ವಜನಿಕರದ್ದಾಗಿದೆ.

ಚಿಕ್ಕಮಗಳೂರಿನ ಷರೀಫ್ ಗಲ್ಲಿಯಲ್ಲಿ ಕಸ ಬಿದ್ದಿರುವುದು
ಚಿಕ್ಕಮಗಳೂರಿನ ಷರೀಫ್ ಗಲ್ಲಿಯಲ್ಲಿ ಕಸ ಬಿದ್ದಿರುವುದು
ಬೀರೂರು ಪಟ್ಟಣದ ಯಗಟಿ ರಸ್ತೆಯ ಆಶ್ರಯ ಬಡಾವಣೆಯೆ  ಸದ್ಯಕ್ಕೆ ಪುರಸಭೆಯ ಕಸ ವಿಲೇವಾರಿ ಘಟಕವಾಗಿರುವುದು
ಬೀರೂರು ಪಟ್ಟಣದ ಯಗಟಿ ರಸ್ತೆಯ ಆಶ್ರಯ ಬಡಾವಣೆಯೆ  ಸದ್ಯಕ್ಕೆ ಪುರಸಭೆಯ ಕಸ ವಿಲೇವಾರಿ ಘಟಕವಾಗಿರುವುದು
ಕೊಪ್ಪದ ಸಿಗದಾಳಿನಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೆಟ್ಟದಂತಿರುವ ಪ್ಲಾಸ್ಟಿಕ್ ರಾಶಿ 
ಕೊಪ್ಪದ ಸಿಗದಾಳಿನಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೆಟ್ಟದಂತಿರುವ ಪ್ಲಾಸ್ಟಿಕ್ ರಾಶಿ 
ಮೂಡಿಗೆರೆಯ ಅಂಬೇಡ್ಕರ್ ಭವನದ ಬಳಿ ಕುಡಿಯುವ ನೀರಿನ ತಾಣದ ಬಳಿಯೆ ಕಸದ ರಾಶಿ ನಿರ್ಮಾಣವಾಗಿರುವುದು
ಮೂಡಿಗೆರೆಯ ಅಂಬೇಡ್ಕರ್ ಭವನದ ಬಳಿ ಕುಡಿಯುವ ನೀರಿನ ತಾಣದ ಬಳಿಯೆ ಕಸದ ರಾಶಿ ನಿರ್ಮಾಣವಾಗಿರುವುದು
ಶೃಂಗೇರಿ ಪಟ್ಟಣ ಮತ್ತು ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ವ್ಯಾ‍ಪ್ತಿಯಲ್ಲಿ ಒಣ ಕಸ ಮತ್ತು ಹಸಿ ಕಸ ಬೇರ್ಪಡಿಸದೆ ವಿಲೇವಾರಿ ಮಾಡಿರುವುದು
ಶೃಂಗೇರಿ ಪಟ್ಟಣ ಮತ್ತು ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ವ್ಯಾ‍ಪ್ತಿಯಲ್ಲಿ ಒಣ ಕಸ ಮತ್ತು ಹಸಿ ಕಸ ಬೇರ್ಪಡಿಸದೆ ವಿಲೇವಾರಿ ಮಾಡಿರುವುದು
ಕಡೂರಿನ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಘಟಕ
ಕಡೂರಿನ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT