ಮಂಗಳವಾರ, ಮೇ 24, 2022
22 °C
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಿದ್ಧತೆ ಪ್ರಗತಿ ಪರಿಶೀಲನಾ ಸಭೆ

ಸಾರಿಗೆ ವ್ಯವಸ್ಥೆ, ಕೇಂದ್ರಗಳಲ್ಲಿ ಸುರಕ್ಷತೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷಾ ದಿನಗಳಂದು ಮಾರ್ಗದ ಎಲ್ಲ ಬಸ್‍ಗಳನ್ನು ಓಡಾಡಿಸಬೇಕು. ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ಸಿದ್ಧಪಡಿಸಿ ತುರ್ತಾಗಿ ಸಾರಿಗೆ ಘಟಕಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಿದ್ಧತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಪರೀಕ್ಷಾರ್ಥಿಗಳು ಸಕಾಲದಲ್ಲಿ ಕೇಂದ್ರಗಳಿಗೆ ತಲುಪುವಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಸಿದ್ಧತೆ ಕೈಗೊಳ್ಳಬೇಕು ಎಂದು ತಿಳಿಸಿದರು.

ಕೇಂದ್ರಗಳಲ್ಲಿ ಎಲ್ಲ ಮೂಲಸೌಲಭ್ಯ ಕಲ್ಪಿಸಿರುವ ಬಗ್ಗೆ ಪರಿಶೀಲಿಸಬೇಕು. ಪ್ರತಿ ಬ್ಲಾಕ್‌ಗೆ ಒಂದೊಂದು ಆಂಬುಲೆನ್ಸ್ ಮೀಸಲು ಇಡಬೇಕು. ಥರ್ಮಲ್ ಸ್ಕ್ಯಾನರ್, ಪಲ್ಸ್ ಆಕ್ಸಿಮೀಟರ್, ಮಾಸ್ಕ್, ಸ್ಯಾನಿಟೈಸರ್ ಎಲ್ಲ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಪರೀಕ್ಷಾರ್ಥಿಗಳಿಗೆ ಮುಂಚಿತವಾಗಿಯೇ ಕೇಂದ್ರದಲ್ಲಿನ ಅವರ ಕೊಠಡಿ ಮಾಹಿತಿ ತಿಳಿಸಬೇಕು. ಅಂತರ ಪಾಲನೆಗೆ ಕ್ರಮ ವಹಿಸಬೇಕು. ಸೋಂಕು ನಿವಾರಣ ದ್ರಾವಣ ಸಿಂಪಡಿಸಿ ಕೇಂದ್ರವನ್ನು ಶುಚಿಗೊಳಿಸಲು ಸ್ಥಳೀಯ ಸಂಸ್ಥೆಗಳಿಗೆ ಮನವಿ ಸಲ್ಲಿಸಬೇಕು. ಕೇಂದ್ರದ ಸಿಬ್ಬಂದಿ, ಅಗತ್ಯವಿರುವ ಮಕ್ಕಳಿಗೆ ಫೇಸ್‌ಶೀಲ್ಡ್‌ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಪರೀಕ್ಷಾ ಕೇಂದ್ರದ ಸಿಬ್ಬಂದಿಗಳಿಗೆ ವ್ಯಾಕ್ಷಿನೇಷನ್ ಆಗಿರುವ ಬಗ್ಗೆ ಮಾಹಿತಿ ಪಡೆದು, ಎಲ್ಲರಿಗೂ ಕನಿಷ್ಠ ಒಂದು ಡೋಸ್ ಆದರೂ ಪಡೆಯಲು ತುರ್ತು ಕ್ರಮವಹಿಸಬೇಕು. ಪರೀಕ್ಷಾ ಸಿಬ್ಬಂದಿ ಇದೇ 16ರಂದು ಕೋವಿಡ್‌ ತಪಾಸಣೆ ಮಾಡಿಸಿಕೊಳ್ಳಬೇಕು. ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ವ್ಯಾಟ್ಸಪ್‌ ಗ್ರೂಪ್‌ ರಚಿಸಿಕೊಂಡು ತುರ್ತು ಮಾಹಿತಿಗಳ ರವಾನೆಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಜಯಣ್ಣ ಮಾತನಾಡಿ, ಜಿಲ್ಲೆಯಲ್ಲಿ 86 ಪರೀಕ್ಷಾ ಕೇಂದ್ರಗಳಿವೆ, 14109 ಪರೀಕ್ಷಾರ್ಥಿಗಳು ಇದ್ದಾರೆ. 1,300 ಪರೀಕ್ಷಾ ಕೊಠಡಿಗಳು, 14,109 ಡೆಸ್ಕುಗಳನ್ನು ಸಜ್ಜುಗೊಳಿಸಲಾಗಿದೆ. ಪರೀಕ್ಷಾ ಕಾರ್ಯಕ್ಕೆ ಒಟ್ಟು 2,795 ಸಿಬ್ಬಂದಿ ಅಗತ್ಯ ಇದೆ. ಒಂದು ಡೆಸ್ಕ್‌ಗೆ ಒಬ್ಬರು, ಡೆಸ್ಕ್‌ನಿಂದ ಡೆಸ್ಕ್‌ 6 ಅಡಿ ಅಂತರ ಕಾಪಾಡಿ ಆಸನ ವ್ಯವಸ್ಥೆಗೆ ಕ್ರಮ ವಹಿಸಲಾಗಿದೆ ಎಂದು ವಿವರ ನೀಡಿದರು.

ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ, ಡಿಡಿಪಿಐ ಬಿ.ವಿ.ಮಲ್ಲೇಶಪ್ಪ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ನಾಗರಾಜ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್‌.ಎನ್‌.ಉಮೇಶ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.