ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು | ನಿರ್ವಹಣೆ ಕೊರತೆ: ರಾತ್ರಿ ಹೊತ್ತು ಉರಿಯದ ಬೀದಿ ದೀಪಗಳು

Published 23 ನವೆಂಬರ್ 2023, 6:03 IST
Last Updated 23 ನವೆಂಬರ್ 2023, 6:03 IST
ಅಕ್ಷರ ಗಾತ್ರ

ಕಡೂರು: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿರುವ ಬೀದಿ ದೀಪಗಳು ನಿರ್ವಹಣೆ ಕೊರತೆಯಿಂದ ರಾತ್ರಿ ಹೊತ್ತು ಉರಿಯದೆ ವಾಹನ ಸಂಚಾರಕ್ಕೆ ತುಸು ಅಡಚಣೆ ಉಂಟಾಗಿದೆ. 

ಪಟ್ಟಣದ ಆಕರ್ಷಣೆಯ ರಸ್ತೆಯಾಗಿರುವ ಮತ್ತು ರಾಷ್ಟ್ರೀಯ ಹೆದ್ದಾರಿ 206 ಮತ್ತು 157 ಸಂಪರ್ಕಿಸುವ ಡಿ.ದೇವರಾಜ ಅರಸು ರಸ್ತೆ (ಯು.ಬಿ.ರಸ್ತೆ)ಯ ಒಂದು ಕೊನೆಯಲ್ಲಿ ಬಸವಣ್ಣ ಮತ್ತೊಂದು ಕೊನೆಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗಳಿವೆ. ಸಣ್ಣ ರಸ್ತೆಯಾಗಿದ್ದ ಈ ರಸ್ತೆಯನ್ನು ಹಿಂದಿನ ಶಾಸಕ ಬೆಳ್ಳಿಪ್ರಕಾಶ್ ಅವರ ಅಸ್ಥೆಯಿಂದ ಚತುಷ್ಪಥ ರಸ್ತೆಯಾಗಿ ಎರಡು ಸರ್ವೀಸ್ ರಸ್ತೆಯೊಂದಿಗೆ ಸುಸಜ್ಜಿತವಾಗಿತ್ತು. ರಸ್ತೆಯ ಮಧ್ಯದಲ್ಲಿ ಮತ್ತು ಸರ್ವೀಸ್ ರಸ್ತೆ ಎರಡೂ ಕಡೆ ಎತ್ತರದ ಬೀದಿ ದೀಪಗಳನ್ನು ಮತ್ತು ಪಾರ್ಕಿಂಗ್ ಲೈಟ್ ಅಳವಡಿಸಲಾಗಿತ್ತು.

ಆದರೆ ಇತ್ತೀಚೆಗೆ ಸುಮಾರು 1 ತಿಂಗಳಿನಿಂದ ಈ ರಸ್ತೆ ಮಧ್ಯದ ಬೀದಿ ದೀಪಗಳಲ್ಲಿ ಶೇ 80ರಷ್ಟು ದೀಪಗಳು ಉರಿಯದೆ ಕೇವಲ ಸರ್ವೀಸ್ ರಸ್ತೆಯ ದೀಪಗಳು ಮಾತ್ರ ಉರಿಯುತ್ತಿವೆ. ಎರಡೂ ಬದಿಯ ವಾಣಿಜ್ಯ ಮಳಿಗೆಗಳ ಪ್ರಖರ ದೀಪಗಳ ನಡುವೆ ಪ್ರಮುಖ ರಸ್ತೆಯ ಮಧ್ಯೆ ಮಂದಬೆಳಕು ಇರುವುದು ವಾಹನ ಸವಾರರಿಗೆ ತುಸು ತೊಂದರೆಯಾಗುತ್ತಲಿದೆ. ಈ ದೀಪಗಳ ನಿರ್ವಹಣೆ ಯಾರದ್ದೆಂಬ ಬಗ್ಗೆಯೇ ಗೊಂದಲಗಳಿವೆ.

ಇನ್ನೂ ಪಟ್ಟಣದ ಒಳಗೆ ಕೆಲ ಬೀದಿಗಳಲ್ಲಿ ದೀಪಗಳ ನಿರ್ವಹಣೆ ಸಮರ್ಪಕವಾಗಿಲ್ಲವೆಂಬ ದೂರು ಇವೆ. ಕೆಲವೆಡೆ ವಿದ್ಯುತ್ ಕಂಬಗಳಲ್ಲಿ ಅಳವಡಿಸಿರುವ ಕೇಬಲ್ ಕಳಪೆಯಾಗಿದ್ದು ಅಧಿಕ ಒತ್ತಡದಿಂದ ಪದೇ ಪದೇ ಸುಟ್ಟುಹೋಗುತ್ತಿರುತ್ತದೆ. ಕೇಬಲ್ ಅಳವಡಿಸಲು ಅನುಮತಿ ಪಡೆದವರು ಉತ್ತಮ ಗುಣಮಟ್ಟದ ಕೇಬಲ್ ಅಳವಡಿಸುತ್ತಿಲ್ಲವೆಂಬ ಮಾತು ಸಾರ್ವಜನಿಕರಲ್ಲಿ ಕೇಳಿಬರುತ್ತಿದ್ದು, ಬಸ್ ನಿಲ್ದಾಣದ ಪಕ್ಕದಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ಮತ್ತು ರೈಲ್ವೆ ನಿಲ್ದಾಣದಿಂದ ಹಳೇ ಬಸ್ ಸ್ಯಾಂಡ್ ತನಕ ಹೋಗುವ ರಸ್ತೆಯಲ್ಲಿ ರಾತ್ರಿ 8 ಗಂಟೆ ನಂತರ ಬೀದಿ ದೀಪಗಳು ಉರಿಯದೆ ಸಂಪೂರ್ಣ ಕತ್ತಲಾಗಿರುತ್ತದೆ. ಪ್ರಯಾಣಿಕರು ರೈಲಿಳಿದು ಕತ್ತಲೆಯಲ್ಲೇ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ರೈಲು ಗಾಡಿ ಬಂದಾಗ ಮಾತ್ರ ನಿಲ್ದಾಣದ ಮುಂದಿನ ಮೆಟ್ಟಿಲುಗಳ ಬಳಿಯಿರುವ ದೀಪಗಳನ್ನು ಹಾಕಿ ಆರಿಸಲಾಗುತ್ತದೆ.

ಒಟ್ಟಾರೆ ಪಟ್ಟಣದ ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲದಿರುವುದು ಸಾರ್ವಜನಿಕರಿಗೆ ತೊಂದರೆದಾಯಕವಾಗಿ ಪರಿಣಮಿಸಿದೆ.

ಯು.ಬಿ.ರಸ್ತೆ ನಿರ್ಮಾಣವಾದ ನಂತರ ಎರಡು ವರ್ಷಗಳ ತನಕ ದೀಪಗಳ ನಿರ್ವಹಣೆ ಲೋಕೋಪಯೋಗಿ ಇಲಾಖೆಯದ್ದು. ಪುರಸಭೆಗೆ ಹಸ್ತಾಂತರಗೊಳಿಸಲು ಇನ್ನೂ 6 ತಿಂಗಳು ಸಮಯವಿದೆ. ರೈಲ್ವೆ ನಿಲ್ದಾಣದ ಬೀದಿ ದೀಪಗಳ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳುತ್ತೇವೆ.
ಮಂಜುನಾಥ್, ಮುಖ್ಯಾಧಿಕಾರಿ ಕಡೂರು
ಯು.ಬಿ.ರಸ್ತೆಯ ಬೀದಿ ದೀಪಗಳು ಪ್ರತಿದಿನವೂ ಉರಿಯುವಂತೆ ನಿರ್ವಹಣೆ ಮಾಡಲು ಪುರಸಭೆ ಗಮನ ಹರಿಸಬೇಕು
ಗಣೇಶ ಡಿ.ಎನ್, ಕಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT