ಭಾನುವಾರ, ಸೆಪ್ಟೆಂಬರ್ 19, 2021
26 °C
ಷಿಕಾಗೊ ಉಪನ್ಯಾಸದ 125ನೇ ವರ್ಷಾಚರಣೆ

ಸ್ವಾಮಿ ವಿವೇಕಾನಂದ ಯುವಪೀಳಿಗೆಯ ಪ್ರೇರಕಶಕ್ತಿ: ಸುಜಾತ ಕೃಷ್ಣಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಿಕ್ಕಮಗಳೂರು: ಸ್ವಾಮಿ ವಿವೇಕಾನಂದ ಅವರು ಸ್ಫೂರ್ತಿಯ ಚಿಲುಮೆಯಾಗಿದ್ದರು. ಅವರ ವಿಚಾರಧಾರೆಗಳು ಅನುಕರಣೀಯ ಎಂದು ಜಿಲ್ಲಾಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ ಸಹಯೋಗಲದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಅವರ ಷಿಕಾಗೊ ಉಪನ್ಯಾಸದ 125ನೇ ವರ್ಷಾಚರಣೆ ಸಮಾರಂಭದಲ್ಲಿ ಮಾತನಾಡಿದರು.

‘ವಿವೇಕಾನಂದ ಅವರು ಶ್ರೇಷ್ಠ ಮಾನವತಾವಾದಿಯಾಗಿದ್ದರು. ಅವರ ವಿಚಾರಧಾರೆಗಳನ್ನು ಯುವಪೀಳಿಗೆ ಪಾಲಿಸಬೇಕು. ಜೀವನದಲ್ಲಿ ಗುರಿ ಇಟ್ಟುಕೊಂಡು ಮುನ್ನಡೆಯಬೇಕು. ಆತ್ಮ ವಿಶ್ವಾಸದಿಂದ ಗುರಿ ಸಾಧನೆಯತ್ತ ಚಿತ್ತ ಹರಿಸಬೇಕು. ಆಲಸ್ಯ ಇರಬಾರದು. ದೇಶದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಹೇಳಿದರು.

ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಮಾತನಾಡಿ, ‘ಸ್ವಾಮಿ ವಿವೇಕಾನಂದ ಅವರು ಯುವಪೀಳಿಗೆಗೆ ಮಾದರಿಯಾಗಿದ್ದರು. ರಾಷ್ಟ್ರ ನಿರ್ಮಾಣ ಕಾರ್ಯವು ಯುವಪೀಳಿಗೆಯಿಂದ ಸಾಧ್ಯ ಎಂದು ನಂಬಿದ್ದರು. ಬಡತನ, ಅಸಮಾನತೆ ನಿವಾರಣೆಗೆ ಹೋರಾಡಿದರು. ಯುವಜನರಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡಿದರು’ ಎಂದು ಹೇಳಿದರು.

‘ಷಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ಯಾವುದರ ಬಗ್ಗೆ ಬೆಳಕು ಚೆಲ್ಲಬೇಕು ಎನ್ನುವುದನ್ನು ಕನ್ಯಾಕುಮಾರಿಯ ಬಂಡೆಯ ಮೇಲೆ ಕುಳಿತು ಚಿಂತನೆ ಮಾಡಿದ್ದರು. ಅದ್ಭುತ ಭಾಷಣದ ಮೂಲಕ ಇಡೀ ಸಮ್ಮೇಳನದ ಗಮನಸೆಳೆದಿದ್ದರು’ ಎಂದು ಹೇಳಿದರು.

‘ಷಿಕಾಗೊ ಸಮ್ಮೇಳನದಲ್ಲಿ ಅವರು ಮಾಡಿದ ಭಾಷಣ ಧ್ವನಿಮುದ್ರಿಕೆ ಕೇಳಿದರೆ ಈಗಲೂ ರೋಮಾಂಚನವಾಗುತ್ತದೆ. ಜೀವನೋತ್ಸವ, ದೇಶ ಪ್ರೇಮ ಬಿತ್ತುತ್ತದೆ. ಅವರ ಆದರ್ಶಗಳನ್ನು ಯುವಪೀಳಿಗೆ ಪಾಲಿಸಬೇಕು’ ಎಂದರು.

ಶಾರದಾ ಮಠದ ಪ್ರವರಾಜಿತಶುಭವೃತಪ್ರಾಣ ಮಾತಾಜೀ ಮಾತನಾಡಿ, ವಿವೇಕಾನಂದ ಅವರಿಗೆ ಮಹಿಳೆಯರು, ಬಡವರ ಬಗ್ಗೆ ಕಾಳಜಿ ಇತ್ತು. ಜಪ, ತಪದ ಜೊತೆಗೆ ಜನಸೇವೆ ಮಾಡಲು ಯುವಪೀಳಿಗೆಗೆ ಪ್ರೇರಣೆಯಾಗಿದ್ದರು’ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಮಾತನಾಡಿ, ಷಿಕಾಗೊ ಭಾಷಣದ 125ನೇ ವರ್ಷದ ಅಂಗವಾಗಿ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಪ್ರಬಂಧ ರಚನೆ, ಇತರ ಚಟುವಟಿಕೆಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಷಿಕಾಗೊ ಸಮ್ಮೇಳನದ ಭಾಷಣದ ಧ್ವನಿಮುದ್ರಿಕೆಯನ್ನು ಕಾರ್ಯಕ್ರಮದಲ್ಲಿ ‌ಕೇಳಿಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನೆಟ್ಟೇಕೆರೆಹಳ್ಳಿ ಜಯಣ್ಣ, ಸಾಹಿತಿ ಬೆಳವಾಡಿ ಮಂಜುನಾಥ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು