ಮಂಗಳವಾರ, ಮೇ 24, 2022
27 °C
ಶೃಂಗೇರಿಯ ಬಾಲಕಿ ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು ಯತ್ನ: ಆರೋಪ

ತನಿಖಾಧಿಕಾರಿಯಿಂದ ಬೆದರಿಕೆ; ಸಿಡಬ್ಲ್ಯುಸಿ ಅಧ್ಯಕ್ಷ ದೂರು ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲ್ಲೂಕಿನಲ್ಲಿ ಸುಮಾರು 30 ಮಂದಿ 15 ವರ್ಷದ ಬಾಲಕಿಯನ್ನು ಸತತವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣವನ್ನು ಮುಚ್ಚಿಹಾಕಲು ತನಿಖಾಧಿಕಾರಿ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

‘ಪ್ರಕರಣದ ತನಿಖಾಧಿಕಾರಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಿದ್ರಾಮಯ್ಯ ಅವರು ಫೋನ್‌ ಮಾಡಿ ಬೆದರಿಕೆ ಹಾಕಿದ್ದಾರೆ, ಸಮಿತಿಯ ಆದೇಶ ಧಿಕ್ಕರಿಸಿದ್ದಾರೆ, ಅವರ ನಡೆ ಅನುಮಾನಾಸ್ಪದವಾಗಿದೆ’ ಎಂದು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಅಧ್ಯಕ್ಷ ಜಿ.ಸುಬ್ರಹ್ಮಣ್ಯ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಗುರುವಾರ ದೂರು ನೀಡಿದ್ದಾರೆ. ದೂರಿನ ಸಾರಾಂಶ ಇಂತಿದೆ.

‘ಈ ತನಿಖಾಧಿಕಾರಿಯನ್ನು ಬದಲಾಯಿಸಬೇಕು. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹೊರ ಜಿಲ್ಲೆಗೆ ವರ್ಗಾಯಿಸಬೇಕು’ ಎಂದು ಕೋರಿದ್ದಾರೆ.

‘ಪೊಲೀಸರು ಬಾಲಕಿಯನ್ನು ರಕ್ಷಿಸಿದಾಗ (ಜ.28ರಂದು) ಸಮಿತಿಯ ಗಮನಕ್ಕೆ ತಂದಿರಲಿಲ್ಲ. ಎರಡು ದಿನ ಸಾಂತ್ವನ ಕೇಂದ್ರದಲ್ಲೇ ಇರಿಸಿಕೊಂಡಿದ್ದರು. ಲೈಂಗಿಕ ಶೋಷಣೆ ನಡೆದಿದೆ ಎಂದು ಬಾಲಕಿ ತಿಳಿಸಿದರೂ ದೂರು ದಾಖಲಿಸಿಕೊಳ್ಳಲು ಮುಂದಾಗಿಲ್ಲ. ಬಾಲಕಿಯನ್ನು ಕಳುಹಿಸಿ ಪ್ರಕರಣವನ್ನೇ ಮುಚ್ಚಿಹಾಕುವ ಉದ್ದೇಶ ತನಿಖಾಧಿಕಾರಿಗೆ ಇತ್ತು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದು ಆರೋಪಿಸಿದ್ದಾರೆ.

ಆದೇಶ ಪಾಲಿಸದ ತನಿಖಾಧಿಕಾರಿ: ‘ಪೊಲೀಸರು ಬಾಲಕಿಯನ್ನು ವೈದ್ಯಕೀಯ (ವಿಧಿವಿಜ್ಞಾನ ಪ್ರಯೋಗಾಲಯ) ತಪಾಸಣೆಗೆ ಮಣಿಪಾಲಕ್ಕೆ ಕರೆದೊಯ್ದಿದ್ದರು. ಶೃಂಗೇರಿ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ಕೊಡಿಸಿರುವ ವಿಚಾರವನ್ನು ಸಮಿತಿಯ ಗಮನಕ್ಕೆ ತಂದಿಲ್ಲ. ಬಾಲಕಿಯನ್ನು ಚಿಕ್ಕಮಗಳೂರಿನ ಸ್ವಧಾರ್‌ ಕೇಂದ್ರಕ್ಕೆ ಕರೆತಂದು ಬಿಡಬೇಕು ಎಂಬ ಆದೇಶವನ್ನು ಪಾಲಿಸಿಲ್ಲ. ಆದೇಶ ಉಲ್ಲಂಘಿಸಿರುವುದು ಅನುಮಾನಗಳಿಗೆ ಎಡೆಮಾಡಿದೆ’ ಎಂದು ಉಲ್ಲೇಖಿಸಿದ್ದಾರೆ.

ಬೆದರಿಕೆ, ನಿಂದನೆ: ‘ಆದೇಶ ಪಾಲನೆ ವಿಚಾರಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಸಿದ್ರಾಮಯ್ಯ ಫೋನ್‌ ಮಾಡಿ, ‘ನೀನು ಯಾರೋ ಹೇಳೋಕೆ, ನಾನು ತನಿಖಾಧಿಕಾರಿ ನನಗೆ ಗೊತ್ತಿದೆ. ನಿನ್ನ ಮೇಲೆ ಸ್ವಯಂ ಪ್ರೇರಿತ ಎಫ್‌ಐಆರ್ ದಾಖಲಿಸುತ್ತೇನೆ. ನಿನ್ನನ್ನು ಅದರಲ್ಲಿ ಸೇರಿಸುತ್ತೇನೆ ನೋಡು’ ಎಂದು ಬೆದರಿಕೆ ಹಾಕಿದರು. ಅವಾಚ್ಯ ಪದಗಳಿಂದ ನಿಂದಿಸಿದರು’ ಎಂದು ದೂರಿದ್ದಾರೆ.

ದೂರು ದಾಖಲಿಸಿಕೊಳ್ಳಲು ಹಿಂದೇಟು: ‘ಶೃಂಗೇರಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಜ.29ರಂದು ಬಾಲಕಿಯ ವಿಚಾರ ತಿಳಿಸಿದರು. ಸೂಚನೆ ಮೇರೆಗೆ ಮಕ್ಕಳ ಕಲ್ಯಾಣ ಸಮಿತಿಗೆ ಜ.30ರಂದು ಹಾಜರುಪಡಿಸಿದರು. ಆಪ್ತ ಸಮಾಲೋಚನೆ ನಡೆಸಿ ಬಾಲಕಿಯ ಹೇಳಿಕೆ ಪಡೆದು ದೂರು ದಾಖಲಿಸುವಂತೆ ನಿರ್ದೇಶನ ನೀಡಲಾಗಿತ್ತು. ದೂರು ದಾಖಲಿಸಿಕೊಳ್ಳಲು ಪೊಲೀಸರು ತಕ್ಷಣ ಸ್ಪಂದಿಸಿಲ್ಲ. ಒತ್ತಾಯಿಸಿದ ನಂತರ ದಾಖಲಿಸಿಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.

‘ನಾನು ದೂರುದಾರನಾಗಿರದಿದ್ದರೂ ನನ್ನನ್ನೇ ದೂರುದಾರನಾಗಿ ಮಾಡಿರುವ ಬಗ್ಗೆ ಇನ್‌ಸ್ಪೆಕ್ಟರ್‌ ಸಿದ್ರಾಮಯ್ಯಗೆ ಫೋನ್‌ ಮಾಡಿದಾಗ, ಯಾರನ್ನು ಬೇಕಾದರೂ ದೂರುದಾರರಾಗಿ ಮಾಡಬಹುದು ಅದು ನನ್ನಿಷ್ಟ. ನಿನ್ಯಾವನೋ ನನಗೆ ಹೇಳೋಕೆ, ಕೇಳೋಕೆ, ಅದು ನನ್ನ ಅಧಿಕಾರ ಎಂದು ಹೇಳಿ ಫೋನ್‌ ಕಟ್‌ ಮಾಡಿದರು’ ಎಂದು ತಿಳಿಸಿದ್ದಾರೆ.

‘ಬಾಲಕಿಯು ಸಮಿತಿಯ ಸುಪರ್ದಿಯಲ್ಲಿದ್ದು ತನಿಖಾಧಿಕಾರಿಯ ಮನವಿ ಮೇರೆಗೆ ತನಿಖೆ ಪ್ರಕ್ರಿಯೆಗಳಿಗೆ ಬೆಂಬಲ ವ್ಯಕ್ತಿಯ ಜತೆಗೆ ಕಳಿಸಲಾಗಿದೆ. ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಶೃಂಗೇರಿ ಕಳಿಸುವಂತೆ ತನಿಖಾಧಿಕಾರಿ ಕೋರಿದ್ದರು. ಚಿಕ್ಕಮಗಳೂರಿನಲ್ಲಿಯೇ ಬೆಂಬಲ ವ್ಯಕ್ತಿ ಎದುರಿನಲ್ಲಿ ಮಾಡುವಂತೆ ಸಮಿತಿ ತಿಳಿಸಿತ್ತು. ಶೃಂಗೇರಿಗೆ ಕಳಿಸಿಲ್ಲ ಎಂಬ ಕಾರಣಕ್ಕೆ ಅವರ ಈ ವರ್ತಿಸುತ್ತಿರಬಹುದೇ ಎಂಬ ಅನುಮಾನ ಕಾಡುತ್ತಿದೆ’ ಎಂದು ತಿಳಿಸಿದ್ದಾರೆ.

‘ದೂರಿನಲ್ಲಿ ಅವರ ಹೆಸರನ್ನು ಸೇರಿಸಿಲ್ಲ, ಇವರನ್ನು ಬಿಟ್ಟಿದ್ದೀರಾ? ಎಂದು ತನಿಖಾಧಿಕಾರಿ ನಮ್ಮನ್ನು ಪ್ರಶ್ನಿಸಿದ್ದಾರೆ. ತನಿಖೆ ಮಾಡುವುದು ಸಮಿತಿಯ ಕೆಲಸವಲ್ಲ. ಇದೇ ತನಿಖಾಧಿಕಾರಿ ಮುಂದುವರಿದರೆ ತನಿಖೆ ಸರಿದಾರಿಯಲ್ಲಿ ನಡೆಯವುದು, ಸಂತ್ರಸ್ತೆಗೆ ನ್ಯಾಯ ದೊರಕುವುದು ಕಷ್ಟ ಎಂಬುದು ಸಮಿತಿ ಅಭಿಪ್ರಾಯ’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು