ಚಿಕ್ಕಮಗಳೂರು: ಶ್ರಾವಣ ಮಾಸದ ಸಾಲು ಸಾಲು ಹಬ್ಬಗಳ ನಡುವೆ ಬಂಪರ್ ಬೆಲೆಯ ನಿರೀಕ್ಷೆಯಲ್ಲಿದ್ದ ಟೊಮೆಟೊ ಬೆಳೆಗಾರರಿಗೆ ಮಾರುಕಟ್ಟೆಯಲ್ಲಿ ತಗ್ಗಿದ ದರ ಇಳಿಕೆಯಿಂದ ನಿರಾಸೆ ತಂದಿದೆ.
ನಿರಂತರ ಮಳೆ ಹಾಗೂ ಹವಾಮಾನ ವೈಪರೀತ್ಯದ ನಡುವೆಯೂ ಈ ಬಾರಿಯ ಉತ್ತಮ ಫಸಲು ಬಂದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಹೆಚ್ಚು ಇಳುವರಿಯಿಂದ ಈಗ ಮಾರುಕಟ್ಟೆಯಲ್ಲಿ ಟೊಮೆಟೊ ಆವಕ ಅಧಿಕವಾಗಿದ್ದು, ಪ್ರತಿ ಕೆ.ಜಿ.ಗೆ ₹15ರ ದರದಲ್ಲಿ ಮಾರಾಟವಾಗುವ ಮೂಲಕ ಏಕಾಏಕಿ ಬೆಲೆ ಇಳಿಮುಖವಾಗಿದೆ.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಸಗಟು ವ್ಯಾಪಾರಿಗಳಲ್ಲಿ ಟೊಮೆಟೊ ದರ ಪ್ರತಿ ಕ್ರೇಟ್ (25ರಿಂದ 28 ಕೆ.ಜಿ) ಗುಣಮಟ್ಟ (ಬಣ್ಣ ಹಾಗೂ ದಪ್ಪ) ಆಧಾರದಲ್ಲಿ ಕನಿಷ್ಠ ₹250ರಿಂದ ಗರಿಷ್ಠ ₹500 ಮಾರಾಟವಾಗುತ್ತಿದೆ. ಆದರೆ, ನಿರೀಕ್ಷೆಯಂತೆ ರೈತರಿಗೆ ಬೆಲೆ ಸಿಗದಿದ್ದರೂ ಅನಿವಾರ್ಯವಾಗಿ ಮಾರಾಟ ಮಾಡುವ ಸನ್ನಿವೇಶ ಸೃಷ್ಟಿಯಾಗಿದೆ. ಇದರಿಂದಾಗಿ ಟೊಮೆಟೊ ಬೆಳೆಯ ಲಾಭ ರೈತರಿಗೆ ದಕ್ಕುತ್ತಿಲ್ಲ.
ಜಿಲ್ಲೆಯಲ್ಲಿ ಈ ಬಾರಿ ಒಟ್ಟು 1,170 ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆ ಬೆಳೆಯಲಾಗಿದೆ. ಈ ಪೈಕಿ ಕಡೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು 930 ಹೆಕ್ಟೇರ್, ಚಿಕ್ಕಮಗಳೂರು ತಾಲ್ಲೂಕಿನಲ್ಲಿ 212 ಹೆಕ್ಟೇರ್, ಅಜ್ಜಂಪುರ ಭಾಗದಲ್ಲಿ 21 ಹೆಕ್ಟೇರ್, ತರೀಕೆರೆಯಲ್ಲಿ 77 ಹೆಕ್ಟೇರ್‌ನಲ್ಲಿ ಟೊಮೆಟೊ ಬೆಳೆಯಲಾಗಿದೆ.
ಮುಂಗಾರು ಪೂರ್ವ ಉತ್ತಮ ಮಳೆಯಾಗಿದ್ದು, ನಿರೀಕ್ಷೆಯಂತೆ ಉತ್ತಮ ಫಸಲು ಕೂಡ ಬಂದಿದೆ. ಆರಂಭದಲ್ಲಿ ಪ್ರತಿ ಕ್ರೇಟ್ ಟೊಮೆಟೊ ದರ ₹1,600 ದರ ಇತ್ತು ಈಗ ಏಕಾಏಕಿ ₹500ಕ್ಕೆ ಕುಸಿತ ಕಂಡಿದೆ ಎಂದು ಜಾವಗಲ್‌ನ ಕೊಳಗುಂದ ಗ್ರಾಮದ ಟೊಮೆಟೊ ಬೆಳೆಗಾರ ಕುಮಾರಸ್ವಾಮಿ ಹೇಳಿದರು.
‘ಒಂದು ಎಕರೆ ನೀರಾವರಿ ಪ್ರದೇಶದಲ್ಲಿ ಟೊಮೆಟೊ ಬೆಳೆದಿದ್ದೆ. ರಸಗೊಬ್ಬರ, ಕೂಲಿ ಕಾರ್ಮಿಕರ ಖರ್ಚು ಸೇರಿ ಗರಿಷ್ಠ ₹1 ಲಕ್ಷ ಖರ್ಚಾಗಿತ್ತು. ಈಗ ಬೆಳೆಗೆ ಹಾಕಿದ ಬಂಡವಾಳವೂ ಸಿಗದೆ 26 ಕೆ.ಜಿಯ ಟೊಮೆಟೊ ಬಾಕ್ಸ್‌ಗೆ ₹200 ದರದಲ್ಲಿ ಮಾರಾಟವಾಗಿದೆ. ₹30 ಸಾವಿರ ನಷ್ಟ ಅನುಭವಿಸಿದ್ದೇನೆ’ ಎಂದು ಹಳೇಬೀಡು ಗ್ರಾಮದ ರೈತ ಬಸವರಾಜು ಹೇಳಿದರು.
ಭಾರಿ ಮಳೆಗಾಳಿಯ ಹೊಡೆತದಿಂದ ಕೆಲವೆಡೆ ಟೊಮೆಟೊ ಬೆಳೆ ಹಾನಿಯಾಗಿದೆ. ಮಳೆಗಾಲದಲ್ಲಿ ಬೆಳೆ ಕೊಯ್ಲು ಮಾಡಿ ರಕ್ಷಣೆ ಮಾಡುವುದೇ ದೊಡ್ಡ ಸವಾಲು. ಈಗ ಫಸಲು ಹೆಚ್ಚಿದೆಯಾದರೂ ದರ ಇಳಿಕೆ ಆಗಿರುವುದು ಬೇಸರದ ಸಂಗತಿ ಎಂದರು.
ಉತ್ತಮ ಮಳೆಯಿಂದಾಗಿ ಹೊರ ರಾಜ್ಯಗಳಲ್ಲಿಯೂ ತರಕಾರಿ ಬೆಳೆ ಸಮೃದ್ಧಿಯಾಗಿದೆ. ಸದ್ಯ ಹಸಿರು ಮೆಣಸಿನಕಾಯಿ ಪ್ರತಿ ಕೆ.ಜಿ.ಗೆ ₹35, ಕ್ಯಾರೇಟ್ ₹40, ಈರುಳ್ಳಿ ₹35, ಹಿರೇಕಾಯಿ ₹25 ದರ ಇದೆ. ಉಳಿದಂತೆ ಬೀನ್ಸ್, ಬೀಟ್‌ರೋಟ್ ದರ ಕೂಡ ಕಡಿಮೆಯಾಗಿದೆ ಎಂದು ವರ್ತಕ ನಾಗರಾಜ್ ತಿಳಿಸಿದರು.
ಹಣ್ಣುಗಳ ದರದಲ್ಲಿ ಏರಿಕೆ
ಸ್ವಾತಂತ್ರ್ಯ ದಿನಾಚರಣೆ ಜೊತೆಗೆ ನಾಗರ ಪಂಚಮಿ ಶ್ರಾವಣ ಗೌರಿಗಣೇಶ ಸೇರಿದಂತೆ ಸಾಲು ಸಾಲು ಹಬ್ಬಗಳು ಎದುರಾಗಲಿದ್ದು ಮಾರುಕಟ್ಟೆಯಲ್ಲಿ ಹಣ್ಣುಗಳ ದರವೂ ಏರಿಕೆಯತ್ತ ಸಾಗಿದೆ. ಸೇಬು ಕೆ.ಜಿಗೆ ₹180 ರಿಂದ ₹200 ದಾಳಿಂಬೆ ₹160 ಬಾಳೆಹಣ್ಣು ₹100 ಕಲ್ಲಂಗಡಿ ₹25 ಮೂಸಂಬಿ ₹80 ದರ ಇದೆ. ಹಬ್ಬದ ಕಾರಣ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಂಭವವಿದೆ ಎಂದು ಹಣ್ಣಿನ ವ್ಯಾಪಾರಿ ಜಾಮಾನ್ ತಿಳಿಸಿದರು.
ಚಿಕ್ಕಮಗಳೂರು ಎಪಿಎಂಸಿ ಸಗಟು ಧಾರಣೆ( ಕ್ವಿಂಟಲ್‌ಗೆ ₹ಗಳಲ್ಲಿ) ಉತ್ಪನ್ನ; ಕನಿಷ್ಠ; ಗರಿಷ್ಠ ಟೊಮೆಟೊ; 2015; 2251 ಈರುಳ್ಳಿ; 3326; 3526 ಕ್ಯಾರೇಟ್; 3772; 3972 ಆಲೂಗಡ್ಡೆ; 2778; 3526 ಹಿರೇಕಾಯಿ; 2841; 3041 ಹಸಿರು ಮೆಣಸಿನಕಾಯಿ; 3063; 3263
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.