ಕಾಫಿಡೇ ಮಲ್ನಾಡ್‌ ಅಲ್ಟ್ರಾ ಮ್ಯಾರಥಾನ್‌: ಗುರಿ ತಲುಪಲು ಓಟಗಾರರ ಕಸರತ್ತು

7

ಕಾಫಿಡೇ ಮಲ್ನಾಡ್‌ ಅಲ್ಟ್ರಾ ಮ್ಯಾರಥಾನ್‌: ಗುರಿ ತಲುಪಲು ಓಟಗಾರರ ಕಸರತ್ತು

Published:
Updated:
Deccan Herald

ಚಿಕ್ಕಮಗಳೂರು: ಕಾಫಿನಾಡಿನ ಕೆಮ್ಮಣ್ಣುಗುಂಡಿ ಸಮೀಪದ ಕಾಫಿತೋಟಗಳ ಹಾದಿಯಲ್ಲಿ ದೇಶವಿದೇಶಗಳ ಓಟಗಾರರ ಕಲರವ ಮೇಳೈಸಿದೆ. ಮಲೆನಾಡಿನ ಓರೆಕೋರೆ, ಏರು, ಇಳಿಜಾರಿನ ಮಾರ್ಗ ಹಾದು ಗುರಿ ತಲುಪಲು ಸ್ಪರ್ಧಿಗಳು ಕಸರತ್ತು ನಡೆಸಿದ್ದಾರೆ.

ತರೀಕೆರೆ ತಾಲ್ಲೂಕಿನ ಲಾಲ್‌ಬಾಗ್‌ ಎಸ್ಟೇಟ್‌ನಲ್ಲಿ ಕಾಫಿಡೇ ಮಲ್ನಾಡ್‌ ಅಲ್ಟ್ರಾ ಮ್ಯಾರಥಾನ್‌ಗೆ ಶನಿವಾರ ಚಾಲನೆ ನೀಡಲಾಗಿದೆ. 50 ಕಿ.ಮೀ ವಿಭಾಗದಲ್ಲಿ 496 ಸ್ಪರ್ಧಿಗಳು (111 ಮಹಿಳೆಯರು), 80 ಕಿ.ಮೀ ವಿಭಾಗದಲ್ಲಿ 96 ಮಂದಿ (17 ಮಹಿಳೆಯರು) ಹಾಗೂ 110 ಕಿ.ಮೀ ವಿಭಾಗದಲ್ಲಿ 229 ಸ್ಪರ್ಧಿಗಳು (15 ಮಹಿಳೆಯರು) ಭಾಗವಹಿಸಿದ್ದಾರೆ.

50 ಕಿ.ಮೀ ಕ್ರಮಿಸಲು ಗರಿಷ್ಠ 9 ಗಂಟೆ, 80 ಕಿ.ಮೀ ಕ್ರಮಿಸಲು 15 ಗಂಟೆ ಮತ್ತು 110 ಕಿ.ಮೀ ಕ್ರಮಿಸಲು ಗರಿಷ್ಠ 24 ಗಂಟೆ ಸಮಯ ಮಿತಿ ನಿಗದಿಪಡಿಸಲಾಗಿದೆ. ಸ್ಪರ್ಧಿಗಳು ಗುರಿ ತಲುಪುವ ನಿಟ್ಟಿನಲ್ಲಿ ವೇಗ ಕಸರತ್ತಿನಲ್ಲಿ ತೊಡಗಿದ್ದಾರೆ.

ಬಾನಾಡಿಗಳ ಚಿಲಿಪಿಲಿ ಕಲರವ, ತೊರೆಝರಿಗಳ ಜುಳುಜುಳು ನಿನಾದ, ಕಾಫಿಗಿಡಗಳ ಕಂಪು, ಕಾನನದ ತಂಪಿನ ಹಿತಕರ ವಾತಾವರಣದಲ್ಲಿ ಗುಡ್ಡಗಾಡಿನ ಹಾದಿ ಕ್ರಮಿಸುವ ಸವಾಲಿಗೆ ಸ್ಪರ್ಧಿಗಳು ಒಡ್ಡಿಕೊಂಡಿದ್ದಾರೆ. ಗಿರಿಶ್ರೇಣಿಯ ಸೊಬಗು ಓಟಗಾರರ ಉತ್ಸಾವವನ್ನು ಇಮ್ಮಡಿಗೊಳಿಸಿದೆ.

50ಕಿ.ಮೀ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ರಾಜಶೇಖರ ರಾಜೇಂದ್ರನ್‌ ‘ಪ್ರಜಾವಾಣಿ’ಯೊಂದಿಗೆ ಮಾತಾಡಿ, ದಟ್ಟಕಾಡು, ಗುಡ್ಡ ಪ್ರದೇಶ ಮನಸ್ಸಿಗೆ ಮುದ ನೀಡುತ್ತದೆ. ಗುಡ್ಡ, ಇಳಿಜಾರು, ತಿರುವುಗಳನ್ನು ಸವೆಸುವುದೇ ದೊಡ್ಡ ಸವಾಲು. ಈ ಮಾರ್ಗದಲ್ಲಿ ಕಡಿದಾದ ತಿರುವುಗಳು ಇವೆ. ಅಲ್ಟ್ರಾ ಮ್ಯಾರಥಾನ್‌ನಲ್ಲಿ ಇದೇ ಮೊದಲ ಬಾರಿಗೆ ಭಾಗವಹಿಸಿದ್ದೇನೆ. ಮೊದಲ ಪ್ರಯತ್ನದಲ್ಲಿ ದ್ವಿತೀಯ ಸ್ಥಾನ ಸಂದಿರುವುದು ಖುಷಿ ನೀಡಿದೆ’ ಎಂದು ಹೇಳಿದರು.

‘ನಮ್ಮದು ತಮಿಳುನಾಡು. ಬೆಂಗಳೂರಿನಲ್ಲಿ ಟಿಸಿಎಸ್‌ನಲ್ಲಿ ಸಾಫ್ಟ್‌ವೇರ್‌ ಉದ್ಯೋಗದಲ್ಲಿದ್ದೇನೆ. 5 ಕಿ.ಮೀ, 10 ಕಿ.ಮೀ ಮ್ಯಾರಥಾನ್‌ ಭಾಗವಹಿಸಿ ಬಹುಮಾನ ಗಳಿಸಿದ್ದೇನೆ. ಇಂಥ ಸ್ಪರ್ಧೆಗಳು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತೇವೆ’ ಎಂದರು.

ವೃತ್ತ ಶಿಕ್ಷಕಿ 75 ವರ್ಷದ ಶಾಂತಾಕುಮಾರಿ ಅವರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಮಾರ್ಗದಲ್ಲಿ ವಿಶ್ರಾಂತಿ ತಾಣ, ಆಹಾರ ವ್ಯವಸ್ಥೆ, ಕುಡಿಯುವ ನೀರು ಎಲ್ಲ ವ್ಯವಸ್ಥೆಗಳನ್ನ ಮಾಡಲಾಗಿದೆ. ಭಾನುವಾರ ಬೆಳಿಗ್ಗೆ ಹೊತ್ತಿಗೆ 110 ಕಿ.ಮೀ ವಿಭಾಗದ ಸ್ಪರ್ಧೆ ಮುಗಿಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !