ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಡೂರು: ಬಗೆಹರಿಯದ ವಾಹನ ನಿಲುಗಡೆ ಸಮಸ್ಯೆ; ಸುಗಮ ಸಂಚಾರಕ್ಕೆ ಪೊಲೀಸರ ಶ್ರಮ

Published : 28 ಸೆಪ್ಟೆಂಬರ್ 2024, 6:25 IST
Last Updated : 28 ಸೆಪ್ಟೆಂಬರ್ 2024, 6:25 IST
ಫಾಲೋ ಮಾಡಿ
Comments

ಕಡೂರು: ಪಟ್ಟಣದಲ್ಲಿ ವಾಹನ ನಿಲುಗಡೆ ಸಮಸ್ಯೆ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ರಸ್ತೆ ಬದಿಯಲ್ಲೇ 24 ಗಂಟೆ  ನಿಂತಿರುವ ವಾಹನಗಳಿಂದ ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಪೊಲೀಸರು ವಾಹನ ನಿಲುಗಡೆ ಸಮಸ್ಯೆ ಪರಿಹಾರಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದ್ದರೂ, ಸಾರ್ವಜನಿಕರ ಸಹಕಾರ ಇಲ್ಲದ ಕಾರಣ, ಇದು ನಿರೀಕ್ಷಿತ ಫಲ ನೀಡುತ್ತಿಲ್ಲ. 

ಪಟ್ಟಣದ ಪ್ರವಾಸಿ ಮಂದಿರದ ರಸ್ತೆಯಲ್ಲಿ ಬರುವ ವಾಹನಗಳು ಅಂಬೇಡ್ಕರ್ ಪ್ರತಿಮೆ ಬಳಿ ಎಡ ತಿರುವು ತೆಗೆದುಕೊಂಡು, ಆಸ್ಪತ್ರೆ ಮುಂಭಾಗದಲ್ಲಿ ಯು ಟರ್ನ್‌ ತೆಗೆದುಕೊಂಡು ಬರಬೇಕಿದೆ. ಇದಕ್ಕಾಗಿ ಸೂಚನಾ ಫಲಕವನ್ನೂ ಹಾಕಲಾಗಿದೆ. ಆದರೆ, ಇದನ್ನು ವಾಹನ ಸವಾರರು ಲೆಕ್ಕಿಸುವುದಿಲ್ಲ. ಇದರಿಂದ ಹೆದ್ದಾರಿಯಲ್ಲಿ ನಿತ್ಯ ದಟ್ಟಣೆ ಉಂಟಾಗುತ್ತಿದೆ.

ತಾಲ್ಲೂಕು ಕಚೇರಿ ಎದುರು ರಸ್ತೆಯ ಎರಡೂ ಬದಿಯಲ್ಲಿ ದ್ವಿಚಕ್ರ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತದೆ. ರಸ್ತೆ ಒಂದು ಬದಿ ಮಾತ್ರ (ಪ್ರತಿ ದಿನ ಬದಲಾಗುತ್ತದೆ) ವಾಹನ ನಿಲ್ಲಿಸುವ ಸೂಚನೆ ಇದ್ದರೂ, ಅದನ್ನು ಯಾರೂ ಪಾಲಿಸುತ್ತಿಲ್ಲ.  ಕೆ.ಎಲ್.ವಿ.ವೃತ್ತದಿಂದ ವಿಜಯಲಕ್ಷ್ಮಿ ಟಾಕೀಸ್ ತನಕ ’ವಾಹನ ನಿಲುಗಡೆ ನಿಷೇಧಿತ ವಲಯ’ವಾಗಿ ಗುರುತಿಸಿ ಆರು ತಿಂಗಳು ಕಳೆದಿವೆ. ಆದರೆ, ಈ ಜಾಗದಲ್ಲೇ ಗರಿಷ್ಠ ಸಂಖ್ಯೆಯಲ್ಲಿ ವಾಹನಗಳನ್ನು ನಿಲ್ಲಿಸಲಾಗಿರುತ್ತದೆ. 

ಪುರಸಭೆ ಕಚೇರಿಯಿಂದ ಬಸ್ ನಿಲ್ದಾಣದವರೆಗೆ ಜೋಡಿ ರಸ್ತೆಯ ಒಂದು ಬದಿಯಲ್ಲಿ ದಿನವಿಡೀ ತಳ್ಳುಗಾಡಿಗಳನ್ನು ನಿಲ್ಲಿಸಲಾಗುತ್ತದೆ. ಈ‌ ರಸ್ತೆಯಲ್ಲಿ ಪುರಸಭೆ, ಸಾರಿಗೆ ಸಂಸ್ಥೆ ಮಳಿಗೆಗಳಿವೆ. ಈ ಮಳಿಗೆಗಳ ಮುಂದೆ ವಾಹನ ನಿಲುಗಡೆ ಜಾಗದಲ್ಲಿ ಈ ತಳ್ಳುಗಾಡಿಗಳು ನಿಂತಿರುತ್ತವೆ. ಇದರಿಂದ ಇಲ್ಲಿ ಬೇರೆ ವಾಹನಗಳನ್ನು ನಿಲುಗಡೆ ಮಾಡಲು ತೊಂದರೆಯಾಗಿದೆ.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗದಲ್ಲಿರುವ ’ವಾಹನ ನಿಲುಗಡೆ ನಿಷೇಧ’ ಫಲಕದ ಎದುರೇ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಮೆಸ್ಕಾಂ ಕಚೇರಿ ಮುಂದೆ ಪ್ರತಿ ದಿನ ಕ್ರೇನ್‌ಗಳು ರಸ್ತೆ ಬದಿ ನಿಂತಿರುತ್ತವೆ.

ಪಟ್ಟಣದ ಪ್ರಮುಖ ರಸ್ತೆಯೊಂದರಲ್ಲಿ ಸರ್ಕಾರದ  ಮಳಿಗೆಗಳನ್ನು ₹15 ರಿಂದ ₹20 ಸಾವಿರದವರೆಗೆ  ಬಾಡಿಗೆಗೆ ನೀಡಲಾಗಿದೆ. ಈ ಮಳಿಗೆಗಳ ಮುಂದೆ ತಳ್ಳುಗಾಡಿಗಳಲ್ಲಿ ವ್ಯಾಪಾರ ಮಾಡುವವರು ದಿನಕ್ಕೆ ₹300ರಂತೆ ಮಳಿಗೆಯವರಿಗೆ ಬಾಡಿಗೆ ಪಾವತಿಸುವುದು ರಹಸ್ಯವಾಗಿ ಉಳಿದಿಲ್ಲ. ಕೆಲವು ಮಳಿಗೆ ಮುಂದೆ ಎರಡೆರಡು ತಳ್ಳು ಗಾಡಿಗಳು ನಿಂತಿರುತ್ತವೆ. ಈ ತಳ್ಳುಗಾಡಿಗಳಲ್ಲಿ ವ್ಯಾಪಾರ ಮಾಡುವರು ಉಳಿಸಿ ಹೋಗುವ ಕಸವನ್ನು ಪುರಸಭೆ ಸಿಬ್ಬಂದಿ ಸ್ವಚ್ಛಗೊಳಿಸುತ್ತಾರೆ. ತಳ್ಳುಗಾಡಿಗಳಿಂದ ಆಹಾರ ಸೇವಿಸಲು ಬರುವವರು ತಮ್ಮ ವಾಹನಗಳನ್ನು ರಸ್ತೆಯಲ್ಲೇ  ನಿಲ್ಲಿಸುವುದರಿಂದ ಸಂಚಾರ ದುಸ್ಥರವಾಗಿದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂದೆ ನೋ ಪಾರ್ಕಿಂಗ್ ಫಲಕವಿದ್ದರೂ ಉಪಯೋಗವಿಲ್ಲದಂತಾಗಿದೆ
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂದೆ ನೋ ಪಾರ್ಕಿಂಗ್ ಫಲಕವಿದ್ದರೂ ಉಪಯೋಗವಿಲ್ಲದಂತಾಗಿದೆ
ಪಟ್ಟಣದಲ್ಲಿ ಸುಗಮ‌ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಸಂಚಾರ ವಿಭಾಗದ ಪೊಲೀಸರು ಕೈಗೊಳ್ಳಲಿದ್ದಾರೆ. ಸಾರ್ವಜನಿಕರು ಸಹಕಾರ ಮುಖ್ಯ.
-ಕೆ.ಎಸ್.ಆನಂದ್,ಶಾಸಕ
ಶಾಸಕರು ಮತ್ತು ಪುರಸಭೆ ಜೊತೆ ಸಮಾಲೋಚನೆ ನಡೆಸಿ ಪಟ್ಟಣದ ವಾಹನ ನಿಲುಗಡೆ ಸಮಸ್ಯೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು
-ರಫೀಕ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ ಕಡೂರು
ಸಂಚಾರಿ ನಿಯಮಗಳನ್ನು ರೂಪಿಸಿರುವುದು ಸಾರ್ವಜನಿಕರ ಉಪಯೋಗಕ್ಕಾಗಿ. ಅದನ್ನು ಪಾಲಿಸುವುದು ಸಾರ್ವಜನಿಕರ ಕರ್ತವ್ಯ. ಸಮಸ್ಯೆಗೆ ಪೊಲೀಸರನ್ನು ದೂರುವುದು ಸರಿಯಲ್ಲ
-ಉಮಾಶಂಕರ್, ಕಡೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT