ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಾರ್ಥ ಕಾಫಿ ಉದ್ಯಮದ ಹಾದಿ...

ಮಾನವೀಯತೆ ಗಣಿ, ತೂಕದ ವ್ಯಕ್ತಿತ್ವದ ವ್ಯಕ್ತಿ: 7 ರಾಷ್ಟ್ರಗಳಲ್ಲಿ ಕಾಫಿ ಘಮಲು
Last Updated 30 ಜುಲೈ 2019, 20:01 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಗೌತಹಳ್ಳಿಯ (ಚೇತನಹಳ್ಳಿ ಎಸ್ಟೇಟ್‌) ಉದ್ಯಮಿ ವಿ.ಜಿ. ಸಿದ್ಧಾರ್ಥ ಅವರು ಕಾಫಿ ಉದ್ಯಮದಿಂದ ಚಿರಪರಿಚಿತರು. ಕಾಫಿ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆಗಳನ್ನಿಟ್ಟು ಉದ್ಯಮಕ್ಕೆ ಬಹು ಆಯಾಮ ನೀಡಿದ್ದರು.

ಸಿದ್ಧಾರ್ಥ ಅವರು ಸ್ನಾತಕೋತ್ತರ ಪದವಿ ನಂತರ ಮುಂಬೈನಲ್ಲಿ ಷೇರು ಕ್ಷೇತ್ರದಲ್ಲಿ ಕೆಲವರ್ಷ ಕಾರ್ಯನಿರ್ವಹಿಸಿದ್ದರು. ಬೆಂಗಳೂರಿನಲ್ಲಿ ‘ಸಿವನ್‌ ಸೆಕ್ಯುರಿಟಿಸ್‌ ಎಂಟರ್‌ಪ್ರೈಸಸ್‌’ ಸ್ಥಾಪಿಸಿ, ಮುನ್ನಡೆಸಿದ್ದರು. ಕಾಫಿಗೆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಅನುಷ್ಠಾನವಾದಾಗ ಕಾಫಿ ಉದ್ಯಮಕ್ಕೆ ಕಾಲಿಟ್ಟರು.

ತಂದೆ ಜಮೀನುದಾರರು. ಮೂಡಿಗೆರೆ ಭಾಗದ ಕುದುರೆಗಂಡಿಯ ಪ್ರದೇಶದಲ್ಲಿ ಅಮಾಲ್ಗಮೇಟೆಡ್‌ ಬೀನ್‌ ಕಂಪನಿ ಲಿಮಿಟೆಡ್‌ (ಎಬಿಸಿಎಲ್‌) ಒಡೆತನದಲ್ಲಿದ್ದ 220 ಎಕರೆ ಕಾಫಿ ತೋಟವನ್ನು 1993ರಲ್ಲಿ ಸಿದ್ಧಾರ್ಥ ಖರೀದಿಸಿದ್ದರು. ಕಾಫಿ ತೋಟಗಳ ಖರೀದಿ ಉದ್ಯಮ ವಿಸ್ತರಣೆಗೆ ಟೊಂಕ ಕಟ್ಟಿದ್ದರು.

ಜಿಲ್ಲೆಯ ಕತ್ತಲೆಖಾನ್‌, ಗಿರಿಖಾನ್‌, ಬಾಳೆಹೊನ್ನೂರು, ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ ಸುತ್ತಮುತ್ತಲಿನ ಭಾಗಗಳಲ್ಲಿ ಕಾಫಿ ತೋಟಗಳನ್ನು ಖರೀದಿಸಿದ್ದರು. ಸುಮಾರು 12 ಸಾವಿರ ಎಕರೆ ತೋಟ ಪ್ರದೇಶಗಳ ಒಡೆಯರಾಗಿದ್ದರು. ಬೆಳೆಗಾರರಿಗೆ ಹೊಸ ತಳಿಗಳನ್ನು ಪರಿಚಯಿಸಿದ್ದರು.

ಕಾಫಿ ಕ್ಯೂರಿಂಗ್‌, ರೋಸ್ಟಿಂಗ್‌, ಖರೀದಿ, ಮಾರಾಟ ಶುರು ಮಾಡಿದರು. ಎಬಿಸಿಎಲ್‌ನಿಂದ ಕಾಫಿ ಡೇ ಗ್ಲೊಬಲ್‌ ಲಿಮಿಟೆಡ್‌ ಆಯಿತು. ಕಾಫಿ ಕ್ಷೇತ್ರದಲ್ಲಿ ಸಂಶೋಧನೆ, ಅಭಿವೃದ್ಧಿ ಎಲ್ಲದಕ್ಕೂ ವ್ಯವಸ್ಥೆ ಕಲ್ಪಿಸಿದ್ದರು. 12ಕ್ಕೂ ಹೆಚ್ಚು ದೇಶಗಳಿಗೆ ಕಾಫಿ ರಫ್ತು ಮಾಡುತ್ತಾ ಬಂದಿದ್ದಾರೆ. ಅವರ ಒಡೆತನದಲ್ಲಿ ಉದ್ಯಮಗಳಲ್ಲಿ ಪ್ರಸ್ತುತ ಸುಮಾರು 40 ಸಾವಿರ ನೌಕರರು ಇದ್ದಾರೆ.

1996ರಲ್ಲಿ ಕೆಫೆ ಕಾಫಿ ಡೇ ಪರಿಚಯಿಸಿ ವಿವಿಧ ರಾಷ್ಟ್ರಗಳಿಗೆ ಕಾಫಿ ಪರಿಮಳ ಹಬ್ಬಿಸಿದ್ದರು. ವಿಯೆನ್ನಾ, ಮಲೇಷ್ಯಾ, ಸಿಂಗಪುರ, ಝಕೊಸ್ಲೊವಾಕಿಯ ಸಹಿತ 7 ರಾಷ್ಟ್ರಗಳಲ್ಲಿ 1,800ಕ್ಕೂ ಹೆಚ್ಚು ಕಾಫಿ ಡೇ ಕೆಫೆಗಳಿವೆ. 2002ರಲ್ಲಿ ಕಾಫಿ ತಯಾರಿ ಯಂತ್ರ ಪರಿಚಯಿಸಿದ್ದರು. ದೇಶದ ವಿವಿಧ ಸಂಸ್ಥೆಗಳಲ್ಲಿ ಸುಮಾರು 70 ಸಾವಿರ ಯಂತ್ರಗಳಿವೆ.

2012ರಲ್ಲಿ ಚಿಕ್ಕಮಗಳೂರಿನಲ್ಲಿ ‘ಡಾಫ್ಕೊ’ ಪೀಠೋಪಕರಣ ತಯಾರಿಕೆ ಕೈಗಾರಿಕೆ ಶುರು ಮಾಡಿದ್ದರು. ಅಂಬರ್‌
ವ್ಯಾಲಿ ಶಾಲೆ ಬಳಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಕೈ ಹಾಕಿದ್ದರು. ಕಟ್ಟಡ ನಿರ್ಮಾಣ ಹಂತದಲ್ಲಿದೆ. ಉಚಿತ ಚಿಕಿತ್ಸೆ ಸೌಕರ್ಯದ ಕನಸು ಕಟ್ಟಿದ್ದರು. ನಗರದ ಹೊರವಲಯದಲ್ಲಿ ಅವರ ಒಡೆತನದ ಸೆರಾಯ್‌ ಐಷಾರಾಮಿ ರೆಸಾರ್ಟ್‌ ಇದೆ.

‘ಕಾಫಿ ಡೇ ಗ್ಲೊಬಲ್‌ ಲಿಮಿಟೆಡ್‌ 2016ರಿಂದ ಕಾಫಿ ಡೇ ಎಂಟರ್‌ಪ್ರೈಸಸ್‌ ಎಂದಾಗಿದೆ. ವಾರ್ಷಿಕ 40 ಸಾವಿರ ಟನ್‌ಗೂ ಹೆಚ್ಚು ಕಾಫಿ ವಹಿವಾಟು ನಡೆಯುತ್ತದೆ. ಅವರ ಸ್ವಂತದ್ದೇ ಐದು ಸಾವಿರ ಟನ್‌ಗೂ ಹೆಚ್ಚು ಕಾಫಿ ಉತ್ಪಾದನೆಯಾಗುತ್ತದೆ. ಕಾಫಿ ವಹಿವಾಟು ಒಂದು ಸಾವಿರ ಕೋಟಿಗೂ ಹೆಚ್ಚು ಇದೆ’ ಸಂಸ್ಥೆಯ ನೌಕರರೊಬ್ಬರು ತಿಳಿಸಿದರು.

‘ಸಿದ್ಧಾರ್ಥ ಅವರಿಗೆ ಕೋಟ್ಯಧಿಪತಿ ಎಂಬ ಗತ್ತುಗೈರತ್ತುಗಳಿಲ್ಲ. ದಿನದಲ್ಲಿ 18 ಗಂಟೆ ಕೆಲಸ ಮಾಡುತ್ತಾರೆ. ನಿದ್ದೆ ಮಾಡುವುದೇ ಐದಾರು ಗಂಟೆ ಮಾತ್ರ’ ಎಂದು ಕೆಫೆ ಕಾಫಿ ಡೇ ಸಂಸ್ಥೆಯ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ವಿಜ್ಞಾನಿ ಡಾ. ಪ್ರದೀಪ್‌ ಕೆಂಜಿಗೆ ಹೇಳಿದರು.

‘ಸಹಾಯ ಕೇಳಿ ಬಂದವರನ್ನು ಬರಿಗೈಲಿ ಕಳಿಸಲ್ಲ. ನೌಕರರು, ತೋಟದ ಕೆಲಸಗಾರರ ಹೆಸರು ಕರೆದೇ ಮಾತನಾಡಿಸುವ ಸ್ವಭಾವ. ಹಬ್ಬಹರಿದಿನಗಳಲ್ಲಿ ಮಕ್ಕಳ ಸಹಿತ ತೋಟದಲ್ಲಿ ಕೆಲಸಗಾರರ ಜೊತೆ ಊಟ ಮಾಡುತ್ತಾರೆ. ಮಾನವೀಯತೆ ಗಣಿ, ತೂಕದ ವ್ಯಕ್ತಿತ್ವ. ಸಹಸ್ರಾರು ಮಂದಿಗೆ ಉದ್ಯೋಗ ನೀಡಿ ಮಾದರಿಯಾಗಿದ್ದಾರೆ’ ಎಂದರು.

ವಿದ್ಯಾಭ್ಯಾಸ, ಕುಟುಂಬ

ಸಿದ್ಧಾರ್ಥ ಅವರು ಚಿಕ್ಕಮಗಳೂರಿನ ಮೌಂಟೇನ್‌ವ್ಯೂ ವಿದ್ಯಾಲಯದಲ್ಲಿ ಶಾಲಾ ವ್ಯಾಸಂಗ ಮಾಡಿದ್ದರು. ಮಂಗಳೂರಿನಲ್ಲಿ ಕಾಲೇಜು ವ್ಯಾಸಂಗ ಮಾಡಿದ್ದಾರೆ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

ಗಂಗಯ್ಯ ಹೆಗ್ಡೆ ಮತ್ತು ವಾಸಂತಿ ದಂಪತಿ ಪುತ್ರ. ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಪುತ್ರಿ ಮಾಳವಿಕಾ ಅವರನ್ನು ವಿವಾಹವಾಗಿದ್ದಾರೆ. ಚಿಕ್ಕಮಗಳೂರು, ಹಾಸನ ಮೊದಲಾದ ಕಡೆಗಳಲ್ಲಿ ಕಾಫಿ ಕ್ಯೂರಿಂಗ್‌, ರೋಸ್ಟಿಂಗ್‌, ಖರೀದಿ, ಮಾರಾಟ ಘಟಕಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT