ಭಾನುವಾರ, ಸೆಪ್ಟೆಂಬರ್ 22, 2019
25 °C
ಐಡಿಎಸ್‌ಜಿ ಸರ್ಕಾರಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಖಕ ಡಾ.ಸಂಪತ್ ಬೆಟ್ಟಗೆರೆ

ಮಲೆನಾಡು ಅಮೂಲ್ಯ ಜೀವವೈವಿಧ್ಯ ತಾಣ

Published:
Updated:
Prajavani

ಚಿಕ್ಕಮಗಳೂರು: ‘ಮಲೆನಾಡು ಅಮೂಲ್ಯವಾದ ಜೀವವೈವಿಧ್ಯಗಳ ತಾಣ. ಒಳಹೊಕ್ಕು ನೋಡಿದರೆ ನೂರಾರು ಕುತೂಹಲಗಳಿಂದ ಗಮನ ಸೆಳೆಯುತ್ತದೆ’ ಎಂದು ಲೇಖಕ ಡಾ.ಸಂಪತ್ ಬೆಟ್ಟಗೆರೆ ಹೇಳಿದರು.

ನಗರದ ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಸ್ನಾತಕೋತ್ತರ ಸಸ್ಯವಿಜ್ಞಾನ ವಿಭಾಗದಿಂದ ಪ್ರಥಮ ವರ್ಷದ ವಿದ್ಯಾಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು. ಸಸ್ಯವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮೊದಲು ಸ್ಥಳೀಯಗಿಡ, ಮರ, ಬಳ್ಳಿ ಬಗ್ಗೆ ಅಧ್ಯಯನಶೀಲರಾಗಬೇಕು. ಬಿಜಿಎಲ್.ಸ್ವಾಮಿ ಅವರ ‘ಹಸಿರು ಹೊನ್ನು’ ಕೃತಿಯನ್ನು ಓದಿ ಪ್ರೇರಣೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

‘ಪಶ್ಚಿಮಘಟ್ಟದ ತಪ್ಪಲಿನಲ್ಲಿ ಬೆಳೆಯುವ ಗ್ಲೋರಿಯಸ್ ಸುಪರ್ಬಾ ಎಂಬ ವೈಜ್ಞಾನಿಕ ಹೆಸರಿನ ಕಾಡುಬಳ್ಳಿ
ಯಲ್ಲಿ ಅರಳಿಕೊಳ್ಳುವ ಸೀಸನ್ ಪುಷ್ಪ ಗೌರಿಹೂವು ತಮಿಳುನಾಡಿನ ರಾಜ್ಯಪುಷ್ಪವಾಗಿದೆ. ಜೊತೆಗೆ ಜಿಂಬಾಬ್ವೆ ದೇಶದ ರಾಷ್ಟ್ರೀಯ ಪುಷ್ಪ ಎನಿಸಿದೆ. ಅದೇ ರೀತಿ ಗಿರಿಶ್ರೇಣಿ, ದೇವರಮನೆಯಲ್ಲಿ ಕೆಲವಾರು ವರ್ಷಗಳಿಗೊಮ್ಮೆ ಹೂಬಿಡುವ ಕುರಿಂಜಿಗೂ ತಮಿಳುನಾಡಿನಲ್ಲಿ ವಿಶೇಷವಾಗಿ ಮಹತ್ವ ನೀಡುತ್ತಾರೆ’ ಎಂದರು.

‘ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ತಮಗೆ ಸುಲಭವಾಗಿ ಸಿಗಬಹುದಾಗಿದ್ದ ಅಧ್ಯಾಪಕ ವೃತ್ತಿಯನ್ನು ನಿರ್ವಹಿಸದೆ, ಪರಿಸರ ಪ್ರಜ್ಞೆಯೊಂದಿಗೆ ಲೇಖಕರಾಗಿ ಮಲೆನಾಡಿನ ಹಾದಿ ಹಿಡಿದರು. ಅದರಿಂದ ಅವರಿಗೆ ಗುರಿಯ ಬಗ್ಗೆ ಸ್ಪಷ್ಟತೆ ಇದ್ದುದು ತೋರುತ್ತದೆ. ಸಾಹಿತಿ ದೇವನೂರ ಮಹಾದೇವ ಕೂಡ ಅಧ್ಯಾಪಕ ಕೆಲಸವನ್ನು ತೊರೆದು ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ಗುರಿಯ ಬಗ್ಗೆ ಸ್ವಂತ ಅರಿವು ಇರಬೇಕಾದದ್ದು ಅಗತ್ಯ. ಕೆಲವೊಮ್ಮೆ ಈ ಗುರಿಯನ್ನು ತಲುಪುವ ದೊಡ್ಡ ರಹದಾರಿಯು ದುರ್ಗಮವಾದ ಕಲ್ಲುಮುಳ್ಳಿನ ಹಾದಿಯಂತೆ ನಮ್ಮನ್ನು ಕಾಡಿ ತೊಂದರೆಗೀಡುಮಾಡಲೂ ಬಹುದು. ಆಗ ನಾವು ನಮ್ಮ ಮಿತಿಯಲ್ಲಿ ಸಣ್ಣ ಕಿರು ಕಾಲುದಾರಿಗಳನ್ನು ದೊಡ್ಡ ಮಾರ್ಗಗಳನ್ನಾಗಿ ಪರಿಭಾವಿಸಿ ಮುನ್ನಡೆಯಬೇಕಾಗುತ್ತದೆ. ಇದು ನಮ್ಮನ್ನು ಅನಾಯಸವಾಗಿ ಟೀಕಿಸುವವರಿಗೆ ಅಡ್ಡಮಾರ್ಗದಂತೆ ಕಂಡುಬಂದರೂ ಅದೇ ನಮ್ಮನ್ನು ಮಹಾ
ಗುರಿಯನ್ನು ತಲುಪಿಸುವ ದೊಡ್ಡಮಾರ್ಗವಾಗಿರುತ್ತದೆ ಎಂಬುವುದನ್ನು ನೆನಪಿಡಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಂಶುಪಾಲ ಡಾ. ಎಸ್.ಸಿ. ನಟರಾಜ್ ಅಧ್ಯಕ್ಷತೆ ವಹಿಸಿದ್ದರು. ಸಸ್ಯವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ಸಿ.ಚಾಂದಿನಿ, ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕರಾದ ಪ್ರೊ.ವಿ.ಎನ್.ಸುಧಾಮ ಇದ್ದರು.

Post Comments (+)