ಶನಿವಾರ, ಡಿಸೆಂಬರ್ 3, 2022
19 °C
ದಶಕದಿಂದ ಪರಿಹಾರಕ್ಕೆ ಪರಿತಪಿಸುತ್ತಿರುವ ಜಯ ಆಚಾರ್

ಬದುಕು ಕಸಿದ ಕಾಡಾನೆ: ನರಕಯಾತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: ತಾಲ್ಲೂಕಿನ ಸಬ್ಬೇನಹಳ್ಳಿ ಗ್ರಾಮದಲ್ಲಿ 2012 ರಲ್ಲಿ ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ಜಯ ಆಚಾರ್ ದಶಕದಿಂದ ಪರಿಹಾರಕ್ಕಾಗಿ ಪರಿತಪಿಸುತ್ತಿದ್ದಾರೆ.

2012 ರಲ್ಲಿ ಕೂಲಿ ಕೆಲಸಕ್ಕಾಗಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಜಯ ಆಚಾರ್ ಮೇಲೆ ಕಾಫಿ ತೋಟದಿಂದ ರಸ್ತೆಗಿಳಿದ ಕಾಡಾನೆಯು ದಾಳಿ ನಡೆಸಿ ಗಾಯಗೊಳಿಸಿತ್ತು. ಜಯ ಆಚಾರ್ ಅವರ ತೊಡೆಯ ಭಾಗಕ್ಕೆ ಗಂಭೀರವಾದ ಗಾಯವಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಿ, ಸುಮಾರು ಎಂಟು ತಿಂಗಳಿಗೂ ಅಧಿಕ ಕಾಲ ಚಿಕಿತ್ಸೆ ಪಡೆದಿದ್ದರು. ₹3 ಲಕ್ಷಕ್ಕೂ ಅಧಿಕ ಹಣವನ್ನು ವೆಚ್ಚ ಮಾಡಿದ್ದರೂ, ಸಂಪೂರ್ಣವಾಗಿ ಗುಣಮುಖವಾಗದೇ ಹತ್ತು ವರ್ಷಗಳಿಂದ ಕುಟುಂಬವು ಸಂಕಷ್ಟವನ್ನು ಎದುರಿಸುತ್ತಿದೆ.

‘ಹತ್ತು ವರ್ಷಗಳ ಹಿಂದೆ ಕಾಡಾನೆ ದಾಳಿಯಿಂದ ಕಾಲನ್ನು ಕಳೆದುಕೊಂಡಿದ್ದು, ಚಿಕಿತ್ಸೆ ಪಡೆದರೂ ಸಂಪೂರ್ಣವಾಗಿ ನಡೆಯಲು ಸಾಧ್ಯವಾಗುತ್ತಿಲ್ಲ.  ತುಂಬಾ ಸಮಯ ನಿಂತುಕೊಳ್ಳಲು ಸಾಧ್ಯವಾಗುವುದಿಲ್ಲ. ಆಸ್ಪತ್ರೆಗೆ ಸೇರಿದ್ದ ವೇಳೆ ಆಸ್ಪತ್ರೆಗೆ ಬಂದಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಚಿಕಿತ್ಸಾ ವೆಚ್ಚ ಭರಿಸುವುದಾಗಿ ತಿಳಿಸಿದ್ದರು. ಆದರೆ ಚಿಕಿತ್ಸಾ ವೆಚ್ಚವನ್ನೂ ಸಂಪೂರ್ಣವಾಗಿ ನೀಡಲಿಲ್ಲ. ಈಗಲೂ ಎರಡು ತಿಂಗಳಿಗೆ, ಮೂರು ತಿಂಗಳಿಗೊಮ್ಮೆ ಆಸ್ಪತ್ರೆಗೆ ಹೋಗಬೇಕಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ. ಮರಗೆಲಸವನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದೆ. ಆದರೆ ಈಗ ನಿಲ್ಲಲು, ನಡೆಯಲು ಆಗದ ಕಾರಣ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಯಾವುದೇ ಪರಿಹಾರ ನೀಡಿಲ್ಲ. ಕುಟುಂಬ ನಿರ್ವಹಿಸುವುದೇ ಕಷ್ಟವಾಗುತ್ತಿದೆ’ ಎನ್ನುತ್ತಾರೆ ಕಾಡಾನೆ ದಾಳಿಗೆ ಸಿಲುಕಿದ ಜಯ ಆಚಾರ್.

‘ಘಟನೆ ನಡೆದ ದಿನ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗಿತ್ತು. ಅಂದು ಸ್ಥಳಕ್ಕೆ ಬಂದಿದ್ದ ಅಧಿಕಾರಿಗಳು ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಇಂದಿಗೂ ಪರಿಹಾರವನ್ನು ನೀಡದೆ ಕುಟುಂಬ ಸಂಕಷ್ಟವನ್ನು ಎದುರಿಸುತ್ತಿದೆ. ದಾಳಿಯ ವೇಳೆ ಭರವಸೆ ನೀಡುವ ಅಧಿಕಾರಿಗಳು ನಂತರ ನುಣುಚಿಕೊಳ್ಳುವುದರಿಂದ ದಾಳಿಗೊಳಗಾದ ಕುಟುಂಬಗಳು ಪರಿತಪಿಸುವಂತಾಗುತ್ತದೆ. ಅರಣ್ಯ ಇಲಾಖೆ ಹಾಗೂ ಸರ್ಕಾರ ಜಯ ಆಚಾರ್ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು. ಜಯ ಆಚಾರ್ ಅವರ ಕಾಲು ಊನವಾಗಿದ್ದು ವಿಶೇಷ ವೇತನವನ್ನು ನೀಡಬೇಕು’ ಎಂದು ಮುಖಂಡ ಪಿ.ಕೆ ಮಂಜುನಾಥ್ ಒತ್ತಾಯಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು