ಬುಧವಾರ, ಮೇ 27, 2020
27 °C
ಗಾಂಧೀಜಿ, ಅಂಬೇಡ್ಕರ್ ವಿಚಾರಧಾರೆ, ಆರ್ಥಿಕ ನೀತಿ ಪಾಲನೆಗೆ ಮೊರೆ

ಚಿಕ್ಕಮಗಳೂರು: ದಲಿತರ ಮನೆಯಲ್ಲಿ ದತ್ತ ಉಪವಾಸ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ‘ತಪ್ಪು ಆರ್ಥಿಕ ನೀತಿಯ ಪರಿಣಾಮವಾಗಿ ಬಡವರು ಉಪವಾಸ ಅನುಭವಿಸುವಂತಾಗಿದೆ. ‘ಪಾಪ ಪ್ರಜ್ಞೆ’ ಮತ್ತು ‘ಪ್ರಾಯಶ್ಚಿತ್ತಾರ್ಥವಾಗಿ’ ಇದೇ 10ರಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಉಪವಾಸ ಮಾಡಿ ಆತ್ಮವಿಮರ್ಶೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ’ ಎಂದು ಮಾಜಿ ಶಾಸಕ ವೈ.ಎಸ್‌.ವಿ. ದತ್ತ ಇಲ್ಲಿ ಗುರುವಾರ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಗರದ ಶಂಕರಪುರದ ಐದನೇ ಅಡ್ಡರಸ್ತೆಯ ಸಾವಿತ್ರಮ್ಮ ಎಂಬ ದಲಿತ ಮಹಿಳೆಯ ಮನೆಯಲ್ಲಿ ಉಪವಾಸ ಮಾಡುತ್ತೇವೆ. ಮುಖಂಡರಾದ ಜಮೀಲ್‌ ಅಹಮದ್‌, ಕೆ.ಟಿ. ರಾಧಾಕೃಷ್ಣ ಸಾಥ್‌ ನೀಡುತ್ತಾರೆ’ ಎಂದು ತಿಳಿಸಿದರು.

ರಂಗಕರ್ಮಿ ಗ್ರಾಮಸೇವಾ ಸಂಘದ ಪ್ರಸನ್ನ ಅವರು ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಆರ್ಥಿಕ ನೀತಿಯನ್ನು ಅನುಸರಿಸಲೇಬೇಕಾದ ಅನಿವಾರ್ಯದ ಕಡೆಗೆ ಗಮನ ಸೆಳೆದಿದ್ದಾರೆ. ರಾಜ್ಯ ಮಟ್ಟದಲ್ಲಿ ಉಪವಾಸ ‘ಕೈಂಕರ್ಯ’ದ ನೇತೃತ್ವವನ್ನು ವಹಿಸಿದ್ದಾರೆ. ಉಪವಾಸ ಮಾಡಿ ಆತ್ಮವಿಮರ್ಶೆ ಮಾಡಿಕೊಂಡು ಮತ್ತು ‘ಗಾಂಧಿ–ಹಳ್ಳಿ’ ಎಂಬ ಆರ್ಥಿಕ ನೀತಿಗೆ ಮರಳುವುದು ಈ ಹೊತ್ತಿನ ತುರ್ತು ಎಂಬ ಸಂದೇಶ ಸಾರುತ್ತೇವೆ ಎಂದು ಹೇಳಿದರು.

‘ಗಾಂಧಿ–ಅಂಬೇಡ್ಕರ್ ವಿಚಾರಧಾರೆಗಳಲ್ಲಿ ನಂಬಿಕೆಯುಳ್ಳ ಸಮಾನ ಮನಸ್ಕರು 10ರಂದು ಉಪವಾಸ ಆಚರಿಸಬೇಕು ಎಂಬುದು ನಮ್ಮ ಕೋರಿಕೆ. ಲಾಕ್‌ಡೌನ್‌ಗೆ ಧಕ್ಕೆಯಾಗದಂತೆ ಭೌತಿಕ (ಸಾಮಾಜಿಕ) ಅಂತರ ಕಾಯ್ದುಕೊಂಡು, ಮುಖಗವಸು ಧರಿಸಿಕೊಂಡು ಸಂಜೆವರೆಗೆ ಮನೆಗಳಲ್ಲೇ ಉಪವಾಸ ಮಾಡಬೇಕು. ಯುವಜನತೆ ಹೆಚ್ಚು ಪಾಲ್ಗೊಳ್ಳಬೇಕು ಎಂದು ವಿವರಿಸಿದರು.

‘ಭಾರತದಲ್ಲಿ 40 ಕೋಟಿ ಜನ ಬಡತನದ ದವಡೆಗೆ ಸಿಲುಕುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ವರದಿ ಹೇಳಿದೆ. ಲಾಕ್‌ಡೌನ್‌ ಆದ ಮೇಲೆ ಗುಳೆ, ವಲಸೆ ಸಮಸ್ಯೆಗಳು ಎದ್ದು ನಿಂತಿವೆ’ ಎಂದು ವಿಶ್ಲೇಷಿಸಿದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ‘ಕಟ್ಟಡ ಕಾರ್ಮಿಕ ಮಹಿಳೆ ಗಂಗಮ್ಮ ಎಂಬವರು ನಡೆದು ನಡೆದೂ ಮೃತಪಟ್ಟಿದ್ದಾರೆ. ಈ ಸಾವು ನೋವಿನ ಸಂಗತಿ. ಕೋವಿಡ್‌ ಪರಿಹಾರ ನಿಧಿಗೆ ‘ಪಿ.ಎಂ ಕೇರ್‌’ ಎಂದು ಹೆಸರಿಟ್ಟಿರುವುದು ಸರಿಯಲ್ಲ’ ಎಂದರು.

ಮುಖಂಡ ಕೆ.ಟಿ. ರಾಧಾಕೃಷ್ಣ ಮಾತನಾಡಿ, ‘ನಗರಸಭೆಯಿಂದ ನೀಡುವ ಹಾಲನ್ನು ಪಕ್ಷದ ಮುಖಂಡರು ತಮಗೆ ಬೇಕಾದವರಿಗೆ ಮಾತ್ರ ವಿತರಿಸಿ ತಾರತಮ್ಯ ಮಾಡುತ್ತಿದ್ದಾರೆ. ದಿನಸಿ ಕಿಟ್‌ಗಳ ವಿತರಣೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ’ ಎಂದು ದೂರಿದರು.

ಮುಖಂಡರಾದ ಗುರುಶಾಂತಪ್ಪ, ಎಚ್‌.ಎಚ್‌. ದೇವರಾಜ್‌, ಚಂದ್ರಪ್ಪ ಇತರರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು