ಜಿಲ್ಲಾ ಪಂಚಾಯಿತಿ ವ್ಯಾಪ್ತಿ ವಿವಿಧ ಇಲಾಖೆಯಲ್ಲಿ 4,499 ಹುದ್ದೆ ಖಾಲಿ

7

ಜಿಲ್ಲಾ ಪಂಚಾಯಿತಿ ವ್ಯಾಪ್ತಿ ವಿವಿಧ ಇಲಾಖೆಯಲ್ಲಿ 4,499 ಹುದ್ದೆ ಖಾಲಿ

Published:
Updated:
Deccan Herald

ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 22 ಇಲಾಖೆಗಳ 13,592 ಮಂಜೂರು ಹುದ್ದೆಗಳ ಪೈಕಿ, 4,499 ಖಾಲಿ ಇವೆ. ಯೋಜನೆಗಳ ಅನುಷ್ಠಾನ, ಕಾಮಗಾರಿ, ಕಾರ್ಯಭಾರ ನಿರ್ವಹಣೆಗೆ ಸಿಬ್ಬಂದಿ ಕೊರತೆಯು ತೊಡಕಾಗಿ ಪರಿಣಮಿಸಿದೆ.

ಸಿಬ್ಬಂದಿ ಕೊರತೆಯು ಕಡತ ವಿಲೇವಾರಿ, ಅಭಿವೃದ್ಧಿ ಕಾಮಗಾರಿ, ಸವಲತ್ತು ವಿತರಣೆ ನಿಟ್ಟಿನಲ್ಲಿ ವಿಳಂಬಕ್ಕೆ ಎಡೆಮಾಡಿದೆ. ಕಾರ್ಯನಿರ್ವಾಹಕ ಅಧಿಕಾರಿಗಳು (ಇಒ), ವಿಷಯ ನಿರ್ವಾಹಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ), ವೈದ್ಯರು, ಗ್ರಾಮೀಣ ಕುಡಿಯುವ ನೀರು ಪೂರೈಕೆ ವಿಭಾಗದ ಎಂಜಿನಿಯರುಗಳ ಕೊರತೆಯಿಂದಾಗಿ ಆಡಳಿತ ಯಂತ್ರಕ್ಕೆ ಜಡ್ಡು ಹಿಡಿದಿದೆ.

ಸರ್ಕಾರಿ ಆಸ್ಪತ್ರೆಗಳ 21 ವೈದ್ಯರ ಹುದ್ದೆಗಳ ಪೈಕಿ 20 ಖಾಲಿ ಇವೆ. ಎಂಟು ತಾಲ್ಲೂಕುಗಳ ಪೈಕಿ ಐದು (ಚಿಕ್ಕಮಗಳೂರು, ಕೊಪ್ಪ, ಎನ್‌.ಆರ್‌.ಪುರ, ಮೂಡಿಗೆರೆ, ತರೀಕೆರೆ) ಐದು ತಾಲ್ಲೂಕುಗಳಲ್ಲಿ ಐದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗಳು ಖಾಲಿ ಇವೆ. ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಏಳು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ) ಹುದ್ದೆಗಳ ಪೈಕಿ ಆರು ಖಾಲಿ ಇವೆ.

ಜಿಲ್ಲೆಯಲ್ಲಿ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಒಬ್ಬರೇ ಎಇಇ ಇದ್ದಾರೆ. ಕುಡಿಯುವ ನೀರಿನ ಪೂರೈಕೆ, ಕಾಮಗಾರಿ ನಿರ್ವಹಣೆ ಸವಾಲಾಗಿ ಪರಿಣಮಿಸಿವೆ. ಹುದ್ದೆಗಳ ಭರ್ತಿಗೆ ಕೋರಿ ಈಗಾಗಲೇ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರ ಗಮನ ಸೆಳೆಯಲಾಗಿದೆ. ಆದರೆ, ಈವರೆಗೆ ಯಾವುದೇ ಪ್ರಯೋಜನ ಆಗಿಲ್ಲ.

‘ಹಲವಾರು ವರ್ಷಗಳಿಂದ ಸಿಬ್ಬಂದಿ ಸಮಸ್ಯೆ ಕಾಡುತ್ತಿದೆ. ಸಿಬ್ಬಂದಿ ಕೊರತೆಯಿಂದಾಗಿ ಕಾಮಗಾರಿಗಳು ಸರಿಯಾಗಿ ಆಗುತ್ತಿಲ್ಲ. ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವಂತಾಗಿದೆ. ಜಿಲ್ಲೆಯ ಅಭಿವೃದ್ಧಿ ವೇಗವನ್ನು ಕುಂಠಿತಗೊಳಿಸಿದೆ. ಸಿಬ್ಬಂದಿ ಸಮಸ್ಯೆಯ ಸಬೂಬು ನೀಡಿ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್‌.ಮಹೇಶ್‌ ಒಡೆಯರ್‌ ಹೇಳುತ್ತಾರೆ.

‘ಇದೇ ಜಿಲ್ಲೆಯವರನ್ನು ಜಿಲ್ಲಾ ಉಸ್ತುವಾರಿ ಸಚಿವರಾದರೆ ಇಂಥ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಒತ್ತು ನೀಡುತ್ತಾರೆ. ಕೆಲ ವರ್ಷಗಳಿಂದ ಈ ಜಿಲ್ಲೆಗೆ ಬೇರೆ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗುತ್ತಿದ್ದಾರೆ. ಸಮಸ್ಯೆ ಅರ್ಥೈಸಿ ಪರಿಹಾರ ಕಂಡುಕೊಳ್ಳುವಷ್ಟೊತ್ತಿಗೆ ಅವರು ಬದಲಾಗಿರುತ್ತಾರೆ, ಸಮಸ್ಯೆ ಹಾಗೆಯೇ ಉಳಿದಿರುತ್ತದೆ. ಈ ಜಿಲ್ಲೆಯವರಿಗೇ ಉಸ್ತುವಾರಿ ಸಚಿವರನ್ನಾಗಿ ಮಾಡಿದರೆ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುತ್ತದೆ’ ಎಂದು ಅವರು ಹೇಳುತ್ತಾರೆ.

‘ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಇಲ್ಲದಿರುವುದು ದೊಡ್ಡ ತೊಡಕು. ಗ್ರಾಮೀಣ ಪ್ರದೇಶಗಳಲ್ಲಿ ವಿಪರೀತ ತೊಂದರೆಯಾಗಿದೆ. ಖಾಸಗಿ ಆಸ್ಪತ್ರೆಗಳೇ ಗತಿ, ಆದರೆ ಅವು ಬಲು ದುಬಾರಿ. ವೈದ್ಯರ ನೇಮಕಾತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಕನಿಷ್ಠ ಪಕ್ಷ ಎರಡು ಆಸ್ಪತ್ರೆಗಳಿಗೆ ಒಬ್ಬರು ವೈದ್ಯರನ್ನಾದರೂ ನೇಮಿಸಬೇಕು’ ಎಂದು ಕಡೂರಿನ ಶಿಕ್ಷಕ ನಟರಾಜ್‌ ಒತ್ತಾಯಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !