ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಗೆ ಬಿದ್ದ ಅಸ್ಸಾಂ ಕಾರ್ಮಿಕರ ಮಕ್ಕಳು

Last Updated 29 ನವೆಂಬರ್ 2015, 8:59 IST
ಅಕ್ಷರ ಗಾತ್ರ

ಬೆಳಿಗ್ಗೆ 8 ಗಂಟೆ ಸಮಯ. ಕಾರ್ಮಿಕರು ಕೂಲಿಗಾಗಿ ಎಸ್ಟೇಟ್‌ಗಳಿಗೆ ತೆರಳುತ್ತಿದ್ದಂತೆ ಮಕ್ಕಳ ಸೈನ್ಯ ಉಳಿದ ಎಸ್ಟೇಟ್ ಕಾರ್ಮಿಕರ ಮನೆಗಳಿಗೆ ತೆರಳಿ ಅಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗುತ್ತಾರೆ. ತೋಟದಲ್ಲಿ ಬೆಳೆಯುವ ಹಣ್ಣುಗಳು ಇವರ ಪಾಲಾಗುತ್ತವೆ. ಈ ಮಕ್ಕಳಿಗೆ ಹಣ್ಣುಗಳೇ ಮಧ್ಯಾಹ್ನದ  ಬಿಸಿಯೂಟ. ವಯಸ್ಸಿನಲ್ಲಿ ಸ್ವಲ್ಪ ದೊಡ್ಡ ಮಕ್ಕಳು ಸೌದೆ ಸಂಗ್ರಹಕ್ಕಾಗಿ ಅಕ್ಕ ಪಕ್ಕದ ಜಮೀನಿಗೆ ಲಗ್ಗೆ ಇಟ್ಟರೆ ಉಳಿದವರು ಅವರನ್ನು ಹಿಂಬಾಲಿಸುತ್ತಾರೆ.

ಇದು ಬಾಳೆ ಹೊನ್ನೂರು ತಾಲ್ಲೂಕಿನಲ್ಲಿ ಬಹುತೇಕ ಕಾಫಿ ತೋಟಗಳಲ್ಲಿ ದುಡಿಯುವ ಕಾರ್ಮಿಕರ ಮಕ್ಕಳ ಸ್ಥಿತಿ ಇದು. ಶಿಕ್ಷಣ ಇಲಾಖೆ ಇವರನ್ನು ಗುರುತಿಸಿಲ್ಲ ಎಂಬಂತೆ ಕಾಣಿಸುತ್ತದೆ. ಕಾಫಿ ತೋಟಗಳಲ್ಲಿ ದುಡಿಯುತ್ತಿರುವ ಅಸ್ಸಾಂ ಮೂಲದ ಕಾರ್ಮಿಕರ ಸಾವಿರಾರು ಮಕ್ಕಳು  ಕಡ್ಡಾಯ ಶಿಕ್ಷಣದಿಂದ  ವಂಚಿತರಾಗುತ್ತಿರುವುದು ಬೆಳಕಿಗೆ ಬಂದಿದೆ.

ಮಲೆನಾಡಿನ ಕಾಫಿ ತೋಟಗಳಲ್ಲಿ ಕಾರ್ಮಿಕರ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಅಸ್ಸಾಂ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿತ್ತು. ಅಲ್ಲಿಂದ ಮಧ್ಯವರ್ತಿಗಳ ಮೂಲಕ ಕಾಫಿ ತೋಟಕ್ಕೆ ಸಾವಿರಾರು ಕಾರ್ಮಿಕರು ಕೂಲಿ ಅರಸಿ ಬಂದಿದ್ದು, ಅವರ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಕಾನೂನು ತೊಡಕು ಉಂಟಾಗಿದ್ದರ ಪರಿಣಾಮ ಶಾಲೆಯಿಂದ ಹೊರಗುಳಿಯುವಂತಾಗಿದೆ.

ಜಿಲ್ಲೆಯಲ್ಲಿ   30 ಸಾವಿರಕ್ಕೂ ಅಧಿಕ ಅಸ್ಸಾಂ ಕಾರ್ಮಿಕರು ವಿವಿಧ ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ಸೇರಿಕೊಂಡಿದ್ದಾರೆ. ಅವರ ಮೂಲ ಭಾಷೆ ಅಸ್ಸಾಮಿಯಾಗಿದ್ದು ಬೆರಳೆಣಿಕೆಯಷ್ಟು ಜನ ಮಾತ್ರ ಹಿಂದಿ ಮಾತನಾಡುತ್ತಾರೆ. ಬಾಳೆಹೊನ್ನೂರು ಸಮೀಪದ ದೂಬಳ ಕಾಫಿ ತೋಟದಲ್ಲಿ ಸುಮಾರು 40 ಕ್ಕೂ ಅಧಿಕ ಅಸ್ಸಾಂ ರಾಜ್ಯದ ಕೂಲಿ ಕಾರ್ಮಿಕರಿದ್ದು, ಹಸುಗೂಸುಗಳು ಸೇರಿದಂತೆ ಹತ್ತು ವರ್ಷದೊಳಗಿನ ಸುಮಾರು 30ಕ್ಕೂ ಅಧಿಕ ಮಕ್ಕಳಿದ್ದಾರೆ.

ಇಲ್ಲಿನ ವಾತಾವಾರಣ ಮತ್ತು ಭಾಷೆಯ ಅರಿವಿಲ್ಲದ ಕಾರ್ಮಿಕರು ಅವರ ಮಕ್ಕಳನ್ನು ಸ್ಥಳೀಯ ಸರ್ಕಾರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ಪೋಷಕರ ಬಳಿ ಮತದಾರರ ಗುರುತಿನ ಚೀಟಿ ಹೊರತುಪಡಿಸಿ ಬೇರೇನೂ ದಾಖಲೆಗಳಿಲ್ಲ. ಮಕ್ಕಳು ಶಾಲೆಗೆ ದಾಖಲಾಗಲು ಹುಟ್ಟಿದ ದಿನಾಂಕ ದೃಢಪಡಿಸುವ ಯಾವುದೇ ದಾಖಲೆಗಳನ್ನು ಅವರು ಹೊಂದಿಲ್ಲ. ಅಲ್ಲದೆ, ಸರ್ಕಾರಿ ಶಾಲೆಗಳಿಗೆ ಅಸ್ಸಾಂ ಮಕ್ಕಳು ಸೇರ್ಪಡೆಗೊಂಡಲ್ಲಿ ಸ್ಥಳೀಯ ಮಕ್ಕಳೊಂದಿಗೆ ಹೊಂದಿಕೊಳ್ಳುವುದಿಲ್ಲ ಎಂಬ ಆಪಾದನೆಯೂ ಕೇಳಿಬಂದಿದೆ. ಪ್ರಮುಖವಾಗಿ ಭಾಷೆಯ ಸಮಸ್ಯೆಯಿಂದಾಗಿ ಶಿಕ್ಷಕರ ಮಾತನ್ನು ಅಸ್ಸಾಂ ವಿದ್ಯಾರ್ಥಿಗಳು ಪಾಲಿಸುವುದಿಲ್ಲ. ಕಲಿಕೆಯ ಮಾತಂತೂ ಇನ್ನೂ ದೂರ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಶಿಕ್ಷಕ.

ಇದರಿಂದಾಗಿ ಜಿಲ್ಲೆಯಲ್ಲಿ ಸಾವಿರಾರು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು ಕನಿಷ್ಠ ಅಕ್ಷರ ಜ್ಞಾನವನ್ನೂ ಪಡೆಯದೆ ಅನಕ್ಷರಸ್ಥ ಎಂಬ ಪಟ್ಟದತ್ತ ಸಾಗುತ್ತಿದ್ದಾರೆ. ಪೋಷಕರು ನಿತ್ಯ ಬೆಳಿಗ್ಗೆ 8 ಗಂಟೆ ವೇಳೆಗೆ ತೋಟದ ಕೂಲಿಗೆ ತೆರಳಿದರೆ ಈ ಮಕ್ಕಳು ಮನೆ ಬಿಟ್ಟು ಕಾಫಿ ತೋಟ, ಕಾಡುಮೇಡು ಅಲೆಯುತ್ತಿದ್ದಾರೆ. ಬೆಳಿಗ್ಗೆ ಪೋಷಕರು ಮಾಡಿಡುವ ಅಡುಗೆಯನ್ನೇ ತಿಂದು ಮುಗಿಸುವ ಇವರು ಮಧ್ಯಾಹ್ನದ ಊಟ ಸಿಗದೆ ಹಸಿವಿನಲ್ಲೆ ಕಾಲ ಕಳೆಯುತ್ತಾರೆ.

ಮೂರು ವರ್ಷದ ಮಕ್ಕಳು ಎಲ್ಲೆಂದರಲ್ಲಿ ತಿರುಗಾಡಿಕೊಂಡಿರುವ ಕಾರಣ ಅಂಗನವಾಡಿಗೆ ತೆರಳಲು ಸಾಧ್ಯವಾಗಿಲ್ಲ. ಇಡೀ ಜಿಲ್ಲೆಯಲ್ಲಿ ಅಂದಾಜು 5 ಸಾವಿರಕ್ಕೂ ಅಧಿಕ ಮಕ್ಕಳು ಶಿಕ್ಷಣ ವಂಚಿತರಾಗಿದ್ದು ಮುಂದಿನ ದಿನಗಳಲ್ಲಿ ಜಿಲ್ಲಾಡಳಿತಕ್ಕೆ ದೊಡ್ಡ ತಲೆ ನೋವಾಗುವು
ದರಲ್ಲಿ ಸಂಶಯವಿಲ್ಲ. ಇದು ಕೇವಲ ದೂಬಳದ ಸಮಸ್ಯೆ ಮಾತ್ರವಲ್ಲ ಜಿಲ್ಲೆಯ ಎಲ್ಲ ಕಡೆಗಳಲ್ಲೂ ಇದೇ ಪರಿಸ್ಥಿತಿ ಇದೆ ಎನ್ನುತ್ತಾರೆ ಅಸ್ಸಾಂ ಕಾರ್ಮಿಕರನ್ನು ಕಾಫಿ ತೋಟಗಳಿಗೆ ಪೂರೈಸುವ ಮಧ್ಯವರ್ತಿ ರಮೇಶ. ಇದನ್ನು ಮನಗಂಡ ಶಿಕ್ಷಣ ಇಲಾಖೆಯ ಸಿಆರ್‌ಪಿ ಸುರೇಶ್ ಎಂಬ ಶಿಕ್ಷಕರ ನೇತೃತ್ವದಲ್ಲಿ ಕೊಪ್ಪ ತಾಲ್ಲೂಕಿನ ವೀರಗಲ್ಲು ಮಕ್ಕಿ ಶಾಲೆಯ ರಂಗಮಂದಿರದಲ್ಲಿ  ತಾತ್ಕಾಲಿಕವಾಗಿ ಟೆಂಟ್ ಶಾಲೆಯನ್ನು ಸೆಪ್ಟೆಂಬರ್ ತಿಂಗಳಲ್ಲಿ ಆರಂಭಿಸಲಾಗಿತ್ತು. ಸುಮಾರು 40 ಮಕ್ಕಳು ಹಾಜರಾಗಿದ್ದರು. ಆದರೆ, ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಆಹಾರ ಪೂರೈಕೆ, ಶಿಕ್ಷಕರ ನೇಮಕ ಸೇರಿದಂತೆ ಯಾವುದೇ ಕ್ರಮಕ್ಕೂ ಮುಂದಾಗದ ಕಾರಣ ಆರಂಭಗೊಂಡ ಎರಡು ದಿನದಲ್ಲೆ ಶಾಲೆ ಮುಚ್ಚಲಾಗಿದೆ. ಇದೀಗ ಮತ್ತೆ ನೂರಾರು ಪುಟ್ಟ ಮಕ್ಕಳು ಬೀದಿಗೆ ಬಿದ್ದಿದ್ದು , ಅಕ್ಷರದ ಕನಸು ನುಚ್ಚು ನೂರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT