‘ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿ’

ಮರಳವಾಡಿ (ಕನಕಪುರ): ಮಕ್ಕಳಿಗೆ ಎದುರಾಗಬಹದಾದ ಸಮಸ್ಯೆಗಳ ಬಗ್ಗೆ ಪೋಷಕರಿಗೆ ತಿಳಿಸಿಕೊಡಲು ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ನಡೆಸಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ರಾಮಯ್ಯ ತಿಳಿಸಿದರು.
ತಾಲ್ಲೂಕಿನ ಮರಳವಾಡಿ ಹೋಬಳಿ ಟಿ.ಹೊಸಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ 2018-19ನೇ ಸಾಲಿನ ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ನೀಡುವುದರ ಜತೆಗೆ ಉತ್ತಮ ಭವಿಷ್ಯ ರೂಪಿಸಬೇಕಾದುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
‘ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು. ಮನೆಯಲ್ಲಿ ನಾವೆಷ್ಟು ಪೌಷ್ಠಿಕ ಆಹಾರ ನೀಡುತ್ತಿದ್ದೇವೆ ಎಂಬುದನ್ನು ವಾರ್ಷಿಕವಾಗಿ ಮಕ್ಕಳ ತೂಕದ ಮೂಲಕ ಅರಿತುಕೊಳ್ಳಬೇಕು. ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸಿ ಶಿಕ್ಷಣ ಕೊಡಿಸಬೇಕಿದೆ’ ಎಂದು ತಿಳಿಸಿದರು.
15 ವರ್ಷದವರೆಗೂ ಕಡ್ಡಾಯವಾಗಿ ಶಾಲೆಗೆ ಕಳಿಸಬೇಕು. ಜೀತ ಪದ್ಧತಿ ಹಾಗೂ ಕೃಷಿ ಕಾರ್ಮಿಕ ವೃತ್ತಿಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವಂತಿಲ್ಲ. ಇದು ಶಿಕ್ಷಾರ್ಹ ಎಂದು ಹೇಳಿದರು.
ಹೆಣ್ಣುಮಕ್ಕಳ ಪೋಷಣೆ ಮತ್ತು ರಕ್ಷಣೆ ಪ್ರತಿ ಕುಟುಂಬದ ಕರ್ತವ್ಯ. ಬಾಲ್ಯ ವಿವಾಹ ಮಾಡುವಂತಿಲ್ಲ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವಾಗದಂತೆ ತಡೆಗಟ್ಟಬೇಕೆಂದು ಕರೆ ನೀಡಿದರು.
ಮಕ್ಕಳು ಸ್ವಚ್ಛತೆಯ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸಬೇಕು. ಶೌಚಾಲಯವನ್ನು ಕಡ್ಡಾಯವಾಗಿ ಬಳಸುವಂತೆ ಪೋಷಕರನ್ನು ಒತ್ತಾಯಿಸಬೇಕು ಎಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.
ಪಂಚಾಯಿತಿ ನೋಡಲ್ ಅಧಿಕಾರಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮುನಿಯಪ್ಪ ಮಾತನಾಡಿದರು. ಪಡುವಣಗೆರೆ ಪ್ರೌಢಶಾಲಾ ಶಿಕ್ಷಕ ರಮೇಶ್ ಮಕ್ಕಳ ಹಕ್ಕು ಮತ್ತು ಪೋಷಣೆಯ ಬಗ್ಗೆ ಉಪನ್ಯಾಸ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಮ್ಮ ಮರಿಯಪ್ಪ, ಉಪಾಧ್ಯಕ್ಷೆ ರೇಖಾ ದುರ್ಗೇಗೌಡ, ಸದಸ್ಯರಾದ ಸಿದ್ದರಾಜು, ಹೊಂಬಾಳೇಗೌಡ, ಅಗರ ಕುಮಾರ್, ಚಂದ್ರೇಗೌಡ, ರೇಖಾ ಸದಾನಂದ ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.