ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳೇ ಸರ್ವಾಧ್ಯಕ್ಷ, ಉದ್ಘಾಟಕ!

ರಾಮನಗರ ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನ
Last Updated 13 ಫೆಬ್ರುವರಿ 2019, 12:45 IST
ಅಕ್ಷರ ಗಾತ್ರ

ರಾಮನಗರ: ‘ಸಾಹಿತ್ಯ ಎನ್ನುವುದು ಒಂದು ಸಂದರ್ಭಕ್ಕೆ ಸೀಮಿತ ಆಗಬಾರದು. ಅದು ಸಾರ್ವಕಾಲಿಕ ಸತ್ಯ ಆಗಿರಬೇಕು. ಆಗ ಅದರ ಶ್ರೇಷ್ಠತೆ ಹೆಚ್ಚುತ್ತದೆ’

–ಹೀಗೆಂದು ಸಾಹಿತ್ಯ ರಚನೆ ಮತ್ತದರ ಉದ್ದೇಶದ ಕುರಿತು ಸಲಹೆ ನೀಡಿದ್ದು ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು. ವಿದ್ಯಾರ್ಥಿ ಎ.ಎಂ. ಆನಂದ. ಇಲ್ಲಿನ ಜಿಜಿಎಸ್ ಅಂಧರ ಶಾಲೆ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರು ತಮ್ಮ ಕಾಳಜಿಯುಕ್ತ ಮಾತುಗಳ ಮೂಲಕ ಎಲ್ಲರ ಗಮನ ಸೆಳೆದರು.

‘ಮೊಬೈಲ್‌, ಕಂಪ್ಯೂಟರ್ ಬಂದ ಮೇಲೆ ನಮ್ಮ ಬರವಣಿಗೆ ಹಾಳಾಗಿದೆ. ಬರೆದದ್ದೆಲ್ಲ ಸಾಹಿತ್ಯ ಎಂಬಂತೆ ಆಗಿದೆ. ವ್ಯಾಕರಣ, ಭಾಷೆ, ಛಂದಸ್ಸು ಮೊದಲಾದವುಗಳು ತಮ್ಮ ಮಹತ್ವ ಕಳೆದುಕೊಳ್ಳುತ್ತಿವೆ’ ಎಂದು ಆನಂದ ವಿಷಾದಿಸಿದರು.

‘ಬರವಣಿಗೆಗೆ ಇಂತಹದ್ದೇ ಗುರಿ, ಉದ್ದೇಶ ಎಂದು ಇರಬಾರದು. ಅದರಿಂದ ಸಮಾಜಕ್ಕೆ ಒಳಿತಾಗಬೇಕು. ಈಚೆಗೆ ಪ್ರಶಸ್ತಿಗಾಗಿ ಬರೆಯುವವರು ಹೆಚ್ಚುತ್ತಿದ್ದಾರೆ. ಆದರೆ ಯಾವುದೇ ಆಸೆ, ಆಕಾಂಕ್ಷೆಗಳನ್ನು ಇಟ್ಟುಕೊಂಡು ಬರೆಯಬಾರದು. ಕುವೆಂಪು ಪ್ರಶಸ್ತಿ–ಪುರಸ್ಕಾರಗಳನ್ನು ಕೀರ್ತಿ ಶನಿ ಎಂದು ಜರಿದರು. ಶಿವರಾಮ ಕಾರಂತರು ತಮಗೆ ಒಲಿದು ಬಂದ ಪದ್ಮಶ್ರೀ ಪುರಸ್ಕಾರವನ್ನೇ ತಿರಸ್ಕರಿಸಿದರು. ಅವರ ನಡೆ ನಮಗೆಲ್ಲ ಮಾದರಿ ಆಗಬೇಕು’ ಎಂದು ಹಿರಿಯ ಸಾಹಿತಿಗಳನ್ನು ತರಾಟೆಗೆ ತೆಗೆದುಕೊಂಡರು.

‘ರೇಷ್ಮೆ ನಾಡು ಜನಪದದ ತವರು. ಶಿವಕುಮಾರ ಶ್ರೀಗಳು, ಬಾಲಗಂಗಾಧರನಾಥ ಸ್ವಾಮೀಜಿ. ಕೆಂಗಲ್‌ ಹನುಮಂತಯ್ಯ, ಜಿ.ಪಿ. ರಾಜರತ್ನಂ, ದೇ. ಜವರೇಗೌಡ ಮೊದಲಾದ ಮಹಾನ್‌ ಚೇತನಗಳು ಇಲ್ಲಿನವರು. ನಮ್ಮ ನೆಲದ ಪರಂಪರೆಯನ್ನು ನೆನೆಯುವ, ಇಲ್ಲಿನ ಜಾನಪದ ಸೊಗಡನ್ನು ಉಳಿಸುವ ಕೆಲಸ ಆಗಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ಕ್ಯಾಸಾಪುರದ ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಪಿ. ರಾಜೇಶ್‌ ಸಮ್ಮೇಳವನ್ನು ಉದ್ಘಾಟಿಸಿದರು. ಆದಿಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದರು. ಅಂಧರ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.

ಸಮ್ಮೇಳಾಧ್ಯಕ್ಷರ ಪರಿಚಯ
‘ರತ್ನಾತನಯಾನಂದ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಎ.ಎಂ. ಆನಂದ್‌ ರಾಮನಗರ ಜಿಲ್ಲೆಯ ಮೊದಲ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದರು.

16 ವರ್ಷ ವಯಸ್ಸಿನ ಆನಂದ್ ಸದ್ಯ ಪ್ರಥಮ ಪಿ.ಯು. ವಿದ್ಯಾರ್ಥಿ. ಆದರೆ ಸಾಹಿತ್ಯ ಕೃಷಿಯ ಮೂಲಕ ಈಗಾಗಲೇ ಹೆಸರು ಮಾಡಿದ್ದಾರೆ. ಭಾವಸಿರಿ, ಉಲಿಯುತಾವ ಎಂಬ ಕವನ ಸಂಕಲನಗಳು, ರೇಷ್ಮೆನಾಡ ಗರಿಗಳು ಎಂಬ ಪ್ರವಾಸ ಕಥನ, ನ್ಯಾಯಲತಾ, ಜೋಗಯ್ಯನ ಜಂಜಾಟ ಎಂಬ ಲಲಿತ ಪ್ರಬಂಧ, ಸೀನಪ್ಪನ ಕಸರತ್ತು ಎಂಬ ಸಣ್ಣಕಥೆ, ಚಂದ್ರಕಾಂತ ಎಂಬ ನಾಟಕ, ಇದರೊಟ್ಟಿಗೆ ವಚನಮಾಲೆ, ಕೀರ್ತನೆ ಸಾರ, ಸುಭಾಷಿತಗಳನ್ನೂ ಅವರು ಬರೆದಿದ್ದಾರೆ.

ಕ್ಯಾಸಾಪುರ ಪ್ರೌಢಶಾಲೆಯಲ್ಲಿ ಒಂಭತ್ತನೇ ತರಗತಿಯಲ್ಲಿ ಇದ್ದಾಗಲೇ ‘ಪ್ರತಿಭಾ ಸಮ್ಮಾನ್‌’ ಪುರಸ್ಕಾರ ಪಡೆದ ಆನಂದ್‌ ನಂತರ ಹಲವು ಸನ್ಮಾನಗಳಿಗೆ ಪಾತ್ರರಾಗಿದ್ದಾರೆ. ಹಲವು ಕವಿಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದಾರೆ.

ಅಧ್ಯಕ್ಷರು, ಉದ್ಘಾಟಕರ ಮೆರವಣಿಗೆ
ಸಾಹಿತ್ಯ ಸಮ್ಮೇಳನಗಳಲ್ಲಿ ನಡೆಯುವಂತೆ ಇಲ್ಲಿಯೂ ಸಮ್ಮೇಳನದ ಸರ್ವಾಧ್ಯಕ್ಷರು ಹಾಗೂ ಉದ್ಘಾಟಕರನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಲಾಯಿತು.

ಜಾನಪದ ಲೋಕದ ಮುಂಭಾಗದಿಂದ ಆರಂಭಗೊಂಡ ಮೆರವಣಿಗೆಯು ಅಂಧರ ಶಾಲೆ ಆವರಣದವರೆಗೂ ಸಾಗಿಬಂತು. ಡೊಳ್ಳು, ಕಂಸಾಳೆ ಮೊದಲಾದ ಕಲಾ ತಂಡಗಳು ಮೆರವಣಿಗೆಗೆ ರಂಗು ತುಂಬಿದವು. ಬಾಲ ಕಲಾವಿದರೂ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT