ಎಸ್ಸೆಸ್ಸೆಲ್ಸಿ ಬಳಿಕ ಮುಂದೇನು ಗೊಂದಲ:ವಿದ್ಯಾರ್ಥಿಗಳಿಗೆ ಮೇ16ರಿಂದ ಮಾಹಿತಿ ಶಿಬಿರ

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಎಸ್ಸೆಸ್ಸೆಲ್ಸಿ ಬಳಿಕ ಮುಂದೇನು ಗೊಂದಲ:ವಿದ್ಯಾರ್ಥಿಗಳಿಗೆ ಮೇ16ರಿಂದ ಮಾಹಿತಿ ಶಿಬಿರ

Published:
Updated:
Prajavani

ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳ ಮುಂದಿನ ವ್ಯಾಸಂಗಕ್ಕೆ ಇರುವಂಥ ಶೈಕ್ಷಣಿಕ ಅವಕಾಶಗಳೇನು ಎಂಬುದನ್ನು ತಿಳಿಸಲಿಕ್ಕಾಗಿ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ತಾಲ್ಲೂಕುವಾರು ಮಾಹಿತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದರು.

ಪಿಯು ಫಲಿತಾಂಶ ವಿಶ್ಲೇಷಣೆ ಹಾಗೂ ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳಿಗೆ ಮಾಹಿತಿ ಶಿಬಿರ ಆಯೋಜಿಸುವ ಕುರಿತು ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆ ಉತ್ತಮ ಸಾಧನೆ ತೋರಿದ್ದು, ರಾಜ್ಯದಲ್ಲಿ 6ನೇ ಸ್ಥಾನ ಪಡೆದುಕೊಂಡಿದ್ದು, ಒಂದೆಡೆ ಸಂತೋಷವಾದರೆ, ದ್ವಿತೀಯ ಪಿಯು ಫಲಿತಾಂಶ ಗಮನಿಸಿದಾಗ, ಕೊನೆಯ ಸ್ಥಾನಕ್ಕೆ ಕುಸಿದಿರುವುದು ನೋವಿನ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ವಿಜ್ಞಾನ ವಿಷಯ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳ ಪೈಕಿ ಬಹಳಷ್ಟು ಮಂದಿ ಗಣಿತದಲ್ಲಿ, ಕಲಾ ವಿಭಾಗದ ವಿದ್ಯಾರ್ಥಿಗಳು ಅರ್ಥಶಾಸ್ತ್ರದಲ್ಲಿ ಅನುತ್ತೀರ್ಣರಾಗಿದ್ದಾರೆ. ಇದನ್ನು ಗಮನಿಸಿದಾಗ, ಪಿಯು ವಿಷಯ ಅಧ್ಯಯನ ಮಾಡುವುದಕ್ಕೂ ಪೂರ್ವದಲ್ಲಿ ಯಾವ ವಿಷಯದ ಅಧ್ಯಯನಕ್ಕೆ ಆಸಕ್ತಿ ಹಾಗೂ ಸಾಮರ್ಥ್ಯ ಇದೆ ಎಂಬ ಕುರಿತು ಯೋಚಿಸದೇ ಇರುವುದು ಒಂದು ರೀತಿಯಲ್ಲಿ ಕಾರಣ’ ಎಂದು ಅಭಿಪ್ರಾಯಪಟ್ಟರು.

‘ಕೇವಲ ವಿಜ್ಞಾನ ವಿಷಯ ಓದಿದರೆ ಮಾತ್ರ ಹೆಚ್ಚಿನ ಅವಕಾಶ ಎಂಬ ಕಲ್ಪನೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿದ್ದು, ಇತರೆ ವಿಷಯಗಳಲ್ಲಿಯೂ ಅಷ್ಟೇ ಪ್ರಮಾಣದ ಅವಕಾಶಗಳಿರುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಹಾಗೂ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಈ ಕುರಿತು ಗಮನಹರಿಸಿ’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಯಾವ ಕೋರ್ಸ್‌ ಅಧ್ಯಯನ ಮಾಡಿದರೆ, ಭವಿಷ್ಯದಲ್ಲಿ ಉತ್ತಮ ಅವಕಾಶ ದೊರೆಯಲಿವೆ ಎಂಬುದನ್ನು ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ, ಮನವರಿಕೆ ಮಾಡಿಕೊಡಲು ಜಿಲ್ಲೆಯ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಮಾಹಿತಿ ಶಿಬಿರ ಆಯೋಜಿಸಲು ನಿರ್ಧರಿಸಲಾಗಿದೆ’ ಎಂದರು.

‘ಮೇ 16ರಂದು ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ, 17ರಂದು ಚಳ್ಳಕೆರೆಯ ಬಿಎಂ ಸರ್ಕಾರಿ ಪ್ರೌಢಶಾಲೆ, 18ರಂದು ಹೊಳಲ್ಕೆರೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜು, 20ರಂದು ಹಿರಿಯೂರಿನ ಗುರುಭವನದಲ್ಲಿ, 21ರಂದು ಹೊಸದುರ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 22ರಂದು ಮೊಳಕಾಲ್ಮುರಿನ ಗುರುಭವನದಲ್ಲಿ ಮಾಹಿತಿ ಶಿಬಿರ ಆಯೋಜಿಸಲಾಗಿದೆ’ ಎಂದರು.

‘ಪ್ರತಿ ತಾಲ್ಲೂಕಿನಲ್ಲಿ ಕನಿಷ್ಟ 500ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ವಿದ್ಯಾರ್ಥಿಗಳೊಂದಿಗೆ ಸಂವಹನದಲ್ಲಿ ನುರಿತರಾಗಿರುವ ವಿಷಯ ತಜ್ಞರನ್ನೇ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಆಯ್ಕೆ ಮಾಡಬೇಕು. ವಿಷಯಾಧಾರಿತ, ಆಸಕ್ತಿ ಆಧಾರಿತ ವಿದ್ಯಾರ್ಥಿಗಳನ್ನು ವಿಷಯವಾರು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಬೇಕು’ ಎಂದು ಸೂಚನೆ ನೀಡಿದರು.

‘ವಿದ್ಯಾರ್ಥಿ ತನ್ನ ಪೋಷಕರೊಂದಿಗೆ ಈ ಮಾಹಿತಿ ಶಿಬಿರದಲ್ಲಿ ಭಾಗವಹಿಸಬಹುದು. ಯಾವ ವಿಷಯದ ಬಗ್ಗೆ ಆಸಕ್ತಿ ಇದೆಯೋ, ಆ ವಿಷಯದ ವಿಭಾಗದ ಬಗ್ಗೆ ಮಾಹಿತಿ ಪಡೆಯುವಂತಾಗಬೇಕು. ಅಗತ್ಯವಿದ್ದಲ್ಲಿ ಮಕ್ಕಳಿಗೆ ಆಸಕ್ತಿಯುತ, ಇಷ್ಟ-ಕಷ್ಟಗಳ ಬಗ್ಗೆ ಪೋಷಕರ ಸಮ್ಮುಖದಲ್ಲಿ ಸಂವಾದ ನಡೆಸಬೇಕು’ ಎಂದು ಸೂಚನೆ ನೀಡಿದರು.

‘ಈ ಬಾರಿ ಜಿಲ್ಲೆಯಲ್ಲಿ ಪಿಯು ಪರೀಕ್ಷಾ ಫಲಿತಾಂಶ ಉತ್ತಮಗೊಳ್ಳಬೇಕು. ಯಾವ ವಿದ್ಯಾರ್ಥಿ ಅನುತ್ತೀರ್ಣನಾಗಿ, ಶೈಕ್ಷಣಿಕವಾಗಿ ಹಿಂದುಳಿಯುವುದು ಬೇಡ. ಅದರ ಜೊತೆಗೆ ಶಾಲೆಯಿಂದ ವಿದ್ಯಾರ್ಥಿಗಳು ಹೊರಗುಳಿಯದಂತೆ, ಶಾಲೆಗಳು ಪ್ರಾರಂಭವಾದ ಕೂಡಲೇ ದಾಖಲಾತಿ ಆಂದೋಲನ ನಡೆಸಬೇಕು’ ಎಂದು ತಾಕೀತು ಮಾಡಿದರು.

ಡಿಡಿಪಿಐ ಆಂಥೋನಿ, ಶಿಕ್ಷಣಾಧಿಕಾರಿ ನರಸಿಂಹಪ್ಪ ಅವರೂ ಇದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !