ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಡಕಟ್ಟು ಸಂಸ್ಕೃತಿಯಿಂದ ಸಾಮಾಜಿಕ ಪ್ರಜ್ಞೆ

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ
Last Updated 28 ಡಿಸೆಂಬರ್ 2019, 14:35 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಸಾಮಾಜಿಕ ಪ್ರಜ್ಞೆ ಬೆಳೆಯಲು ಬುಡಕಟ್ಟು ಸಂಸ್ಕೃತಿ ಅತ್ಯಂತ ಸಹಕಾರಿಯಾಗಿದೆ’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಹೇಳಿದರು.

ಎಸ್‌ಎಸ್‌ಕೆಎಸ್ ಸಮುದಾಯ ಭವನದಲ್ಲಿ ಶನಿವಾರ ಕರ್ನಾಟಕ ಜನಪದ ಪರಿಷತ್ತು ಜಿಲ್ಲಾ ಘಟಕದಿಂದ ಆಯೋಜಿಸಿದ್ದ ‘ಜಾನಪದ ಜ್ಞಾನ ಸಂಪದ ಹಾಗೂ ಡಾ.ಎಸ್.ಎಂ. ಮುತ್ತಯ್ಯ ಅವರ ಬುಡುಕಟ್ಟು ಜ್ಞಾನಪರಂಪರೆ’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ಕಲೆ, ಸಾಹಿತ್ಯವನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಪ್ರೇಕ್ಷಕರಿಗೆ ಉಣಬಡಿಸುವ ಬುಡಕಟ್ಟು ಸಮುದಾಯ ಸಮಾಜಕ್ಕೆ ಮೌಲ್ಯಯುತ ಸಂದೇಶ ನೀಡಿದೆ. ಕಾಯಿಲೆಗಳಿಗೆ ಗಿಡಮೂಲಿಕೆಗಳಿಂದ ಔಷಧ ಸಿದ್ಧಪಡಿಸುವ, ಪ್ರಾಣಿ ಸಾಕಾಣಿಕೆ ಮಾಡುವ ಪರಂಪರೆ ಹೊಂದಿದೆ. ಸಿರಿಯಜ್ಜಿಯ ಜನಪದ ಹಾಡುಗಳು, ಸಾಲುಮರದ ತಿಮ್ಮಕ್ಕ ಅವರ ಪರಿಸರ ಪ್ರೇಮ ಗಮನಿಸಿದರೆ ಜನಪದರು, ಬುಡಕಟ್ಟು ಸಂಸ್ಕೃತಿಯವರು ಅತ್ಯಂತ ಸಾಮರ್ಥ್ಯ ಉಳ್ಳವರು ಎಂಬುದು ಅರ್ಥವಾಗುತ್ತದೆ’ ಎಂದರು.

‘ಜನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜೆ. ಕರಿಯಪ್ಪ ಮಾಳಿಗೆ, ‘ಕಾಯಕ ಪ್ರಜ್ಞೆ, ನೀತಿ ತತ್ವ, ಧರ್ಮ ಭೋದನೆ, ಸಾಮರಸ್ಯ ಬದುಕು, ಸೌಹಾರ್ಧತೆಯ ಗುಣಗಳಿಂದಾಗಿ ಅನಾದಿ ಕಾಲದಿಂದ ಬೆಳೆದು ಬಂದ ಜನಪದ ಆಧುನಿಕ ಕಾಲದಲ್ಲೂ ಉಳಿದಿದೆ. ನಮ್ಮ ನಡುವಿನ ಸಮಸ್ಯೆ, ಸವಾಲುಗಳಿಗೂ ಇದರಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ’ ಎಂದರು.

ಜನಪದ ಚಿಂತಕ ಡಾ. ಅರುಣ್ ಜೋಳದ್ ಕೂಡ್ಲಗಿ, ‘ಶೈಕ್ಷಣಿಕ ಕ್ಷೇತ್ರದಲ್ಲೂ ಜನಪದ ಮುಂಚೂಣಿಯಲ್ಲಿ ಬರಬೇಕು. ದೇಶ ಮತ್ತು ಸಮಾಜದೊಳಗಿನ ಜಾತಿ, ವರ್ಗ, ಲಿಂಗ ತಾರತಮ್ಯ ಹೋಗಲಾಡಿಸುವಲ್ಲಿ ಜನಪದ ನೆರವಾಗಬೇಕು. ಅಷ್ಟರಮಟ್ಟಿಗೆ ಬುಡಕಟ್ಟು ಸಮುದಾಯದವರು ಬದಲಾಗಬೇಕು’ ಎಂದು ಸಲಹೆ ನೀಡಿದರು.

‘ದೇಸಿ ಜ್ಞಾನವನ್ನು ಉಣಬಡಿಸಲಿಕ್ಕಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಪರ್ಯಾಯ ಪಠ್ಯ ಅಥವಾ ಐಚ್ಛಿಕ ವಿಷಯವನ್ನಾಗಿ ಜನಪದಕ್ಕೆ ಆದ್ಯತೆ ನೀಡಬೇಕು. ಜತೆಗೆ ಉದ್ಯೋಗದಲ್ಲೂ ಜನಪದ ಕಲಿತವರಿಗೆ ಮೀಸಲಾತಿ ಕಲ್ಪಿಸುವ ವ್ಯವಸ್ಥೆ ಜಾರಿಯಾಗಬೇಕು’ ಎಂದು ಒತ್ತಾಯಿಸಿದರು.

ವೀರಗಾಸೆ ಕಲಾವಿದ ಬೊಮ್ಮಲಿಂಗಪ್ಪ, ತತ್ವಪದಗಾರ ಯುಗಧರ್ಮ ರಾಮಣ್ಣ, ಲಾವಣಿ ತತ್ವ ಪದಗಾರ ಗುರುಸಿದ್ಧನಾಯಕ, ಶ್ರೇಷ್ಠ ಜಾನಪದ ಗಾಯಕ ಆಯತೋಳ್ ವಿರೂಪಾಕ್ಷಪ್ಪ, ರಂಗಭೂಮಿ ಸಂಗೀತಗಾರ ವಿದ್ವಾನ್ ತಿಪ್ಪೇಸ್ವಾಮಿ, ಭರತನಾಟ್ಯ ಕಲಾವಿದೆ ಶ್ವೇತಾ ಭಟ್‌ ಅವರಿಗೆ ಲೋಕೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಡಿ.ಕೆ. ಶಿವಮೂರ್ತಿ, ಪ್ರಾಧ್ಯಾಪಕ ಡಾ.ಎಸ್.ಎಂ. ಮುತ್ತಯ್ಯ, ವಿದ್ಯಾವಿಕಾಸ ವಿದ್ಯಾಸಂಸ್ಥೆ ಕಾರ್ಯದರ್ಶಿ ವಿಜಯಕುಮಾರ್, ವಾಸವಿ ವಿದ್ಯಾಸಂಸ್ಥೆ ಕಾರ್ಯದರ್ಶಿ ರಾಮಲಿಂಗಶೆಟ್ಟಿ, ಮಾತೃಶ್ರೀ ವಿದ್ಯಾಸಂಸ್ಥೆ ಕಾರ್ಯದರ್ಶಿ ವಿ.ಎಲ್. ಪ್ರಶಾಂತ್, ವಕೀಲ ವೈ. ತಿಪ್ಪೇಸ್ವಾಮಿ, ಗಾಯಕ ಡಿ.ಒ. ಮುರಾರ್ಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT