ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಳಕಾಲ್ಮುರು: ಗಣಿ ಬಾಧಿತ ಗ್ರಾಮಗಳಲ್ಲಿ ‘ಸಂಚಾರ ಆರೋಗ್ಯ ಸೇವೆ’ ಭಾಗ್ಯ

ಜಿಲ್ಲೆಯಲ್ಲಿ 163 ಬಾಧಿತ ಗ್ರಾಮಗಳಲ್ಲಿ ಸೇವೆ; ಸಿಬ್ಬಂದಿ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿ
Published : 16 ಜುಲೈ 2023, 6:25 IST
Last Updated : 16 ಜುಲೈ 2023, 6:25 IST
ಫಾಲೋ ಮಾಡಿ
Comments

ಮೊಳಕಾಲ್ಮುರು: ಜಿಲ್ಲೆಯ ಗಣಿ ಬಾಧಿತ ಗ್ರಾಮಗಳ ಜನರ ಆರೋಗ್ಯ ತಪಾಸಣೆಗಾಗಿ ನೂತನವಾಗಿ ಸಂಚಾರ ಆರೋಗ್ಯ ಘಟಕ ಸೇವೆ ಜಾರಿಗೆ ತರಲಾಗಿದೆ. ಇದಕ್ಕಾಗಿ ಜಿಲ್ಲೆಯಲ್ಲಿನ ಮರಳು, ಕಲ್ಲು, ಕಬ್ಬಿಣ ಗಣಿಗಾರಿಕೆಯಿಂದ ಬಾಧಿತವಾಗಿರುವ ಗ್ರಾಮಗಳನ್ನು ಗುರುತಿಸಲಾಗಿದೆ.

ಜಿಲ್ಲಾ ಖನಿಜ ಪ್ರತಿಷ್ಠಾನದ ಮೂಲಕ ಈ ಸೇವೆಯನ್ನು ರಾಜ್ಯ ಸರ್ಕಾರ ಜಾರಿ ಮಾಡುತ್ತಿದೆ. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ, ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಸಂಯುಕ್ತವಾಗಿ ಮೇಲುಸ್ತುವಾರಿ ವಹಿಸಲಿವೆ.

ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ಓಬಳಾಪುರ, ಮೇಲಿನಕಣಿವೆ, ಕೃಷ್ಣರಾಜಪುರ, ಬಾಂಡ್ರಾವಿ, ಮಲ್ಲೇಹರವಿ, ರಾಜಾಪುರ, ಸಂತೇಗುಡ್ಡ, ಪಕ್ಕುರ್ತಿ, ಯರ್ರೇನಹಳ್ಳಿ, ಜಾಗೀರಬುಡ್ಡೇನಹಳ್ಳಿ, ಚಿಕ್ಕನಹಳ್ಳಿ, ವೆಂಟಕಾಪುರ, ದೇವಸಮುದ್ರ, ಮಾಚೇನಹಳ್ಳಿ, ವಿಠಲಾಪುರ, ಗೌರಸಮುದ್ರ, ವೀರಾಪುರ, ಹೆರೂರು ಮತ್ತು ರಾಮಸಾಗರ ಸೇರಿದಂತೆ ಒಟ್ಟು 19 ಗ್ರಾಮಗಳನ್ನು ಗುರುತಿಸಲಾಗಿದೆ.

‘ಬಹುತೇಕ ಗ್ರಾಮಗಳು ದೇವಸಮುದ್ರ ಹೋಬಳಿಯಲ್ಲಿವೆ. ಉಳಿದಂತೆ ಚಿತ್ರದುರ್ಗ ತಾಲ್ಲೂಕಿನ 30, ಹೊಳಲ್ಕೆರೆ ತಾಲ್ಲೂಕಿನ 24, ಹೊಸದುರ್ಗ ತಾಲ್ಲೂಕಿನಲ್ಲಿ 20, ಚಳ್ಳಕೆರೆ ತಾಲ್ಲೂಕಿನ 40, ಹಿರಿಯೂರು ತಾಲ್ಲೂಕಿನ 30 ಗಣಿಬಾಧಿತ ಗ್ರಾಮಗಳು ಸೇರಿದಂತೆ ಜಿಲ್ಲೆಯಲ್ಲಿ 163 ಗ್ರಾಮಗಳನ್ನು ಗುರುತಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಂಗನಾಥ್ ಮಾಹಿತಿ ನೀಡಿದರು.

‘ಆರಂಭವಾಗಲಿರುವ ಪ್ರತಿ ಸಂಚಾರಿ ಆರೋಗ್ಯ ಘಟಕದಲ್ಲಿ ಒಬ್ಬ ಎಂಬಿಬಿಎಸ್ ವೈದ್ಯ, ಒಬ್ಬರು ಶುಶ್ರೂಷಕಿ, ಒಬ್ಬ ಲ್ಯಾಬ್ ಟೆಕ್ನೀಷಿಯನ್, ಒಬ್ಬ ಜವಾನ, ಚಾಲಕ ಸಿಬ್ಬಂದಿ ಇರುತ್ತಾರೆ. ಎಚ್‌ಆರ್‌ಎಚ್ಎಂ ಯೋಜನೆಯಂತೆ ವೇತನ ನಿಗದಿಪಡಿಸಲಾಗಿದೆ. ವೈದ್ಯರಿಗೆ ಮಾಸಿಕ ₹ 60,000 ನಿಗದಿಪಡಿಸಲಾಗಿದೆ. ಸಾಮಾನ್ಯ ತಪಾಸಣೆ ಜತೆಗೆ ಲಸಿಕೆ ಕಾರ್ಯಕ್ರಮಗಳು, ಕ್ಷಯರೋಗ, ಕುಷ್ಠರೋಗಕ್ಕೂ ಇದರಲ್ಲಿ ಚಿಕಿತ್ಸೆ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ವಾಹನವು ವಾರದಲ್ಲಿ ಭಾನುವಾರ, ರಜಾ ದಿನ ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಬೆಳಿಗ್ಗೆ ಒಂದು, ಮಧ್ಯಾಹ್ನ ಒಂದು ಗ್ರಾಮದಂತೆ ದಿನಕ್ಕೆ 2 ಗ್ರಾಮದ ಸರದಿ ನೀಡಲಾಗುವುದು. ಸಿಬ್ಬಂದಿ ನೇಮಕ ಕಾರ್ಯ ಪ್ರಗತಿಯಲ್ಲಿದ್ದು, ಮೊಳಕಾಲ್ಮುರು ತಾಲ್ಲೂಕಿಗೆ ಮಾತ್ರ ಎಂಬಿಬಿಎಸ್ ವೈದ್ಯರ ನೇಮಕವಾಗಬೇಕಿದೆ. ಶೀಘ್ರ ತಾಲ್ಲೂಕು ಕೇಂದ್ರಗಳಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ’ ಎಂದು ತಿಳಿಸಿದರು.

‘ತಾಲ್ಲೂಕಿನಲ್ಲಿ ಗುರುತಿಸಿರುವ ಬಹುತೇಕ ಗ್ರಾಮಗಳು ಸಾರಿಗೆ ಅವ್ಯವಸ್ಥೆಯಿಂದ ಕೂಡಿದ್ದು ಆರೋಗ್ಯ ಸೇವೆ ಕೊರತೆ ಎದುರಿಸುತ್ತಿದ್ದವು. ಈ ಯೋಜನೆ ಈ ಗ್ರಾಮಸ್ಥರಿಗೆ ಎಷ್ಟರ ಮಟ್ಟಿಗೆ ಅನುಕೂಲ ಕಲ್ಪಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ’ ಎಂದು ಎಐಡಿಯುಸಿ ತಾಲ್ಲೂಕು ಸಂಚಾಲಕ ಡಿ. ಪೆನ್ನಯ್ಯ ಹೇಳಿದರು.

ತಾಲ್ಲೂಕಿನ ಗಡಿ ಬಾಧಿತ ಗ್ರಾಮಗಳ ಸಂಚಾರಿ ಆರೋಗ್ಯ ಘಟಕಕ್ಕೆ ಸಿಬ್ಬಂದಿ ನೇಮಕವಾಗಬೇಕಿದೆ. ನೇಮಕ ಆದ ತಕ್ಷಣ ಸೇವೆಗೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
– ಡಾ. ಮಧುಕುಮಾರ್ ತಾಲ್ಲೂಕು ವೈದ್ಯಾಧಿಕಾರಿ ಮೊಳಕಾಲ್ಮುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT