ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 2.67 ಲಕ್ಷ ಮಕ್ಕಳಿಗೆ ಲಸಿಕೆ

ನಾಳೆಯಿಂದ ಸರ್ಕಾರಿ, ಖಾಸಗಿ ಶಾಲೆಗಳು, ಅಂಗನವಾಡಿಗಳಲ್ಲಿ ಮಕ್ಕಳಿಗೆ ಲಸಿಕೆ
Last Updated 10 ಡಿಸೆಂಬರ್ 2019, 11:02 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಮಕ್ಕಳನ್ನು ಕಾಡುವ ಗಂಟಲುಮಾರಿ, ಧನುರ್ವಾಯು ರೋಗಗಳನ್ನು ತಡೆಗಟ್ಟುವ ಡಿಪಿಟಿ ಬೂಸ್ಟರ್ ಹಾಗೂ ಟಿಡಿ ಲಸಿಕೆ ಹಾಕುವ ಶಾಲಾ ಲಸಿಕಾ ಅಭಿಯಾನವನ್ನು ಜಿಲ್ಲೆಯಾದ್ಯಂತ ಡಿ. 11ರಿಂದ 31ರ ವರೆಗೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ 2.67 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಜಿಲ್ಲೆಯ ಸರ್ಕಾರಿ ಅಥವಾ ಖಾಸಗಿ ಶಾಲೆಗಳು ಲಸಿಕೆ ಅಭಿಯಾನವನ್ನು ನಿರ್ಲಕ್ಷಿಸುವಂತಿಲ್ಲ’ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಆರೋಗ್ಯ ಇಲಾಖೆಯಿಂದ ಜಿಲ್ಲೆಯಲ್ಲಿ ವಿಶೇಷ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಡಿಪಿಟಿ ಬೂಸ್ಟರ್ ಹಾಗೂ ಟಿಡಿ ಲಸಿಕೆಯನ್ನು ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ ಶಾಲೆಗಳು, ಅಂಗನವಾಡಿಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕಲಾಗುವುದು’ ಎಂದರು.

‘ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ, ಶಾಲೆಗಳಲ್ಲಿ ತರಬೇತಿ ಹೊಂದಿದ ವ್ಯಾಕ್ಸಿನೇಟರ್ಸ್‌ಗಳು ಲಸಿಕೆ ನೀಡುತ್ತಾರೆ. ಪೋಷಕರು ತಪ್ಪದೆ ಮಕ್ಕಳಿಗೆ ಲಸಿಕೆ ಹಾಕಿಸಬೇಕು. ಯಾವುದೇ ಮಗು ಲಸಿಕೆಯಿಂದ ವಂಚಿತವಾಗಬಾರದು ಎಂಬುದು ಜಿಲ್ಲಾಡಳಿತದ ಆಶಯವಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಕುಮಾರಸ್ವಾಮಿ, ‘5ರಿಂದ 6 ವರ್ಷದೊಳಗಿನ ಮಕ್ಕಳಿಗೆ ಡಿಪಿಟಿ ಬೂಸ್ಟರ್ ಲಸಿಕೆ ಹಾಕಲಾಗುವುದು. ಜಿಲ್ಲೆಯಲ್ಲಿ ಇದಕ್ಕಾಗಿ 38,785 ಮಕ್ಕಳನ್ನು ಗುರುತಿಸಲಾಗಿದೆ’ ಎಂದರು.

‘7 ರಿಂದ 16 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಟಿಡಿ ಲಸಿಕೆಯನ್ನು ಹಾಕಲಾಗುತ್ತಿದ್ದು, ಜಿಲ್ಲೆಯಲ್ಲಿ 2,29,204 ಮಕ್ಕಳಿಗೆ ಈ ಲಸಿಕೆ ಹಾಕಲು ಗುರಿ ನಿಗದಿಪಡಿಸಲಾಗಿದೆ. ಇದೇ ಮೊದಲ ಬಾರಿಗೆ ಟಿಡಿ ಲಸಿಕೆಯನ್ನು ಶಾಲಾ ಮಕ್ಕಳಿಗೆ ಹಾಕಲಾಗುತ್ತಿದೆ’ ಎಂದರು.

‘ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಡಿ. 11ರಂದು ಬೆಳಿಗ್ಗೆ 10ಕ್ಕೆ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಲಸಿಕೆ ಕಾರ್ಯಕ್ರಮದ ಕುರಿತು ಈಗಾಗಲೇ ಶಿಕ್ಷಕರು, ವೈದ್ಯಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದೆ’ ಎಂದು ತಿಳಿಸಿದರು.

ಕಾರ್ಯಕ್ರಮ ಯಶಸ್ವಿಗೆ ವಿವಿಧ ಇಲಾಖೆಗಳ ಸಹಯೋಗ ಪಡೆದು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿಯೂ ಕಾರ್ಯಪಡೆ ಸಮಿತಿ ರಚಿಸಿ ಸಿದ್ಧತೆ ಕೈಗೊಳ್ಳಲಾಗಿದೆ. ಶಾಲಾ ಹಂತದಲ್ಲಿ ಪೋಷಕರೊಂದಿಗೆ ಸಭೆ ನಡೆಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT