ಬುಧವಾರ, ಜುಲೈ 28, 2021
21 °C

ಸಾಮಾನ್ಯ ಜ್ವರಕ್ಕೆ ಭಯ ಬೇಡ: ಕೋವಿಡ್‌ ಗೆದ್ದ 28 ವರ್ಷದ ಯುವಕನ ಸಲಹೆ

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ‘ಜೀವನದಲ್ಲಿ ಮೊದಲ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದೆ. ಆರಂಭದಲ್ಲಿ ನನಗೂ ಭಯವಿತ್ತು. ಇದೊಂದು ಸಾಮಾನ್ಯ ಜ್ವರ ಎಂಬುದು ಮನವರಿಕೆಯಾದ ಬಳಿಕ ಆತಂಕ ನಿವಾರಣೆಯಾಯಿತು. ಬೇಗ ಗುಣಮುಖನಾಗಲು ಸಾಧ್ಯವಾಯಿತು...’

ಹಿರಿಯೂರು ತಾಲ್ಲೂಕಿನ ಧರ್ಮಪುರ ಕೋವಿಡ್‌ ಕೇರ್‌ ಸೆಂಟರ್‌ನಿಂಗ ಗುಣಮುಖರಾದ 28 ವರ್ಷದ ಯುವಕನ ಅನುಭವ ಇದು. ಗೃಹ ಕ್ವಾರಂಟೈನ್‌ನಲ್ಲಿರುವ ಇವರು ಕೋವಿಡ್‌ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು. ಸೋಂಕಿನಿಂದ ಗುಣಮುಖರಾಗಿ ಜಿಲ್ಲಾ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾದ 59 ವರ್ಷದ ತಂದೆಯೂ ಕ್ವಾರಂಟೈನ್‌ನಲ್ಲಿ ಜೊತೆಗಿದ್ದಾರೆ.

‘ಸೋಂಕು ಪತ್ತೆಯಾದಾಗ ಏನೂ ತೋಚಲಿಲ್ಲ. ಸಮಾಜ ಹೇಗೆ ಸ್ವೀಕರಿಸುತ್ತದೆ ಎಂಬ ಬಗ್ಗೆ ಚಿಂತೆ ಶುರುವಾಯಿತು. ಆರಂಭದ ಎರಡು ದಿನ ನಿದ್ದೆ ಕೂಡ ಬರಲಿಲ್ಲ. ವೈದ್ಯ ಡಾ.ವಿಜಯಕುಮಾರ್ ಹಾಗೂ ಸಿಬ್ಬಂದಿ ಚೆನ್ನಾಗಿ ಆರೈಕೆ ಮಾಡಿದರು. ಕೋವಿಡ್‌ ಎದುರಿಸುವ ಮಾನಸಿಕ ಸಿದ್ಧತೆಗೆ ಸಲಹೆ ನೀಡಿದರು. 11 ದಿನಗಳಲ್ಲಿ ಗುಣಮುಖನಾಗಿ ಆಸ್ಪತ್ರೆಯಿಂದ ಹೊರಬಂದೆ’ ಎಂದು ಅನುಭವ ಬಿಚ್ಚಿಟ್ಟರು.

ಸಂಬಂಧಿಕರ ಮನೆಗೆ ತೆರಳಿದ್ದ ತಾಯಿಯನ್ನು ಕರೆತರಲು ಹೋಗಿದ್ದಾಗ ಇವರಿಗೆ ಸೋಂಕು ಅಂಟಿತ್ತು. ಸಂಬಂಧಿಕರ ಮನೆಯ ಸೋಂಕಿತರ ಪ್ರಾಥಮಿಕ ಸಂರ್ಪಕಿತರಲ್ಲಿ ಯುವಕ ಕೂಡ ಸೇರಿದ್ದರು. ಸಂಬಂಧಿಕರ ಮನೆಯಲ್ಲಿ ಹೆಚ್ಚು ಸಮಯ ಕಳೆದಿದ್ದ ಯುವಕನ ತಾಯಿಗೆ ಸೋಂಕು ಅಂಟಿರಲಿಲ್ಲ. ಯುವಕನ ಪ್ರಾಥಮಿಕ ಸಂಪರ್ಕಿತರ ಪೈಕಿ ತಂದೆಯಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿತ್ತು.

‘ಜೂನ್‌ 26ರಂದು ಕೋವಿಡ್‌ ಕೇರ್‌ ಸೆಂಟರ್‌ ಸೇರಿದೆ. ಐಮಂಗಲ ಪೊಲೀಸ್‌ ತರಬೇತಿ ಶಾಲೆಯ ಕಾನ್‌ಸ್ಟೆಬಲ್‌ ಗುಣಮುಖರಾಗಿ ಕೇರ್‌ ಸೆಂಟರ್‌ನಿಂದ ಬಿಡುಗಡೆಯಾಗಿದ್ದರು. ಆರಂಭದ ಕೆಲ ದಿನಗಳನ್ನು ಕಳೆಯುವುದು ಕಷ್ಟವಾಯಿತು. ಸ್ನೇಹಿತರು, ಸಂಬಂಧಿಕರೊಂದಿಗೆ ದೂರವಾಣಿ ಮೂಲಕ ಮಾತನಾಡುತ್ತ ಚಿಕಿತ್ಸೆಗೆ ಹೊಂದಿಕೊಂಡೆ’ ಎಂದು ಹೇಳಿದರು.

ಯುವಕ ಹಾಗೂ ಅವರ ತಂದೆಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಕೆಮ್ಮು, ಶೀತ, ಜ್ವರ, ಸುಸ್ತು, ಗಂಟಲು ಸಮಸ್ಯೆ ಕೂಡ ಇರಲಿಲ್ಲ. ಗಂಟಲು ದ್ರವದ ಮಾದರಿಯ ಪರೀಕ್ಷೆಯಲ್ಲಿ ಪಾಸಿಟಿವ್‌ ಇರುವುದು ಗೊತ್ತಾದಾಗ ವರದಿಯನ್ನೇ ಅನುಮಾನಿಸಿದ್ದರು. ವೈದ್ಯಕೀಯ ಪದವೀಧರೆಯೂ ಆಗಿರುವ ಯುವಕನ ಸಹೋದರಿಗೆ ಸೋಂಕು ಅಂಟಿರಲಿಲ್ಲ.

‘ಸೋಂಕು ಯಾರಿಗೆ ಬರುತ್ತದೆ ಎಂಬುದನ್ನು ಹೇಳುವುದು ಅಸಾಧ್ಯ. ಒಂದು ವೇಳೆ ಸೋಂಕು ಅಂಟಿದರೆ ಪರಿಸ್ಥಿತಿಯನ್ನು ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಅಗತ್ಯ ಮಾನಸಿಕ ಸಿದ್ಧತೆ ಇದ್ದರೆ ಮಾತ್ರ ಕೋವಿಡ್‌ ಸುಲಭವಾಗಿ ಗೆಲ್ಲಬಹುದು. ಆತಂಕದಿಂದಲೇ ನೋಡುತ್ತಿದ್ದ ನೆರೆಹೊರೆಯವರಿಗೂ ಇದು ಮನವರಿಕೆಯಾಗಿದೆ. ಕುಟುಂಬದ ಎಲ್ಲರೊಂದಿಗೆ ಚೆನ್ನಾಗಿದ್ದಾರೆ’ ಎಂದರು.

14 ದಿನಗಳ ಕ್ವಾರಂಟೈನ್‌ ಅವಧಿಯಲ್ಲಿ ಇನ್ನೂ ಒಂದು ದಿನ ಬಾಕಿ ಇದೆ. ಗುಣಮುಖರಾದ ಇಬ್ಬರು ಮನೆಯಲ್ಲಿದ್ದಾರೆ. ತಾಯಿ, ತಂಗಿಯೂ ಜೊತೆಗಿದ್ದಾರೆ. ಪ್ರತಿಯೊಬ್ಬರು ಅಂತರ ಕಾಯ್ದುಕೊಂಡು, ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಬಳಸುತ್ತಿದ್ದಾರೆ. ಊಟದ ತಟ್ಟೆ, ಲೋಟವನ್ನು ತಾವೇ ತೊಳೆದುಕೊಳ್ಳುತ್ತಿದ್ದಾರೆ. ಕೋವಿಡ್‌ ದೊಡ್ಡ ಸಮಸ್ಯೆಯೇ ಅಲ್ಲ ಎಂಬುದು ಈ ಕುಟುಂಬದ ಅನುಭವ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು