ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋನಾಪುರ: 32 ಮಕ್ಕಳು ಮರಳಿ ಶಾಲೆಗೆ

ಜಿಲ್ಲಾಧಿಕಾರಿ ಜ್ಯೋತ್ಸ್ನಾ ವಾಸ್ತವ್ಯ
Last Updated 25 ಜೂನ್ 2018, 17:15 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನ ದೇವಸಮುದ್ರ ಹೋಬಳಿ ಕೋನಾಪುರಲ್ಲಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ನೇತೃತ್ವದಲ್ಲಿ ನಡೆಯುತ್ತಿರುವ ‘ವಿದ್ಯಾಶಕ್ತಿ–ದುರ್ಗದ ಚಿತ್ತ ಶಾಲೆಯತ್ತ’ ಕಾರ್ಯಕ್ರಮದಲ್ಲಿ 32 ಮಕ್ಕಳನ್ನು ಮರಳಿ ಶಾಲೆಗೆ ಕರೆತರಲಾಗಿದೆ.

ಹಲವು ಸಾಮಾಜಿಕ ಕಾರಣಗಳಿಂದ ಹಿಂದುಳಿದಿದ್ದ ಕೋನಾಪುರ ಗ್ರಾಮವನ್ನು ಜಿಲ್ಲಾಧಿಕಾರಿ ವಾಸ್ತವ್ಯಕ್ಕೆ ಆಯ್ಕೆ ಮಾಡಿದ್ದರು. ಭಾನುವಾರ ರಾತ್ರಿ ಗ್ರಾಮದಲ್ಲಿ ಸಭೆ ನಡೆಸಿ ಮಕ್ಕಳು ಶಾಲೆ ಬಿಡುತ್ತಿರುವುದಕ್ಕೆ ಕಾರಣಗಳನ್ನು ಪತ್ತೆ ಹಚ್ಚಿದರು. ಇದರಲ್ಲಿ ಬಡತನ, ಶಿಕ್ಷಣದ ಮಹತ್ವದ ಅರಿವಿನ ಕೊರತೆ ಪ್ರಮುಖ ಕಾರಣ ಎಂಬುದನ್ನು ಕಂಡುಕೊಂಡರು.

ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಸೋಮವಾರ ತೆರಳಿದ ಜಿಲ್ಲಾಧಿಕಾರಿಗಳು ಶಾಲೆ ಬಿಟ್ಟ ಮಕ್ಕಳ ಮನೆಗಳಿಗೆ ತೆರಳಿ ಪೋಷಕರಿಗೆ ಶಿಕ್ಷಣ ಮಹತ್ವವನ್ನು ಮನದಟ್ಟು ಮಾಡಿ ಮರಳಿ ಮುಖ್ಯವಾಹಿನಿಗೆ ಸೇರಿಸುವಲ್ಲಿ ಯಶಸ್ವಿಯಾದರು. ಈ ಗ್ರಾಮದಲ್ಲಿ ಮಕ್ಕಳು ಶಾಲೆಗೆ ಚಕ್ಕರ್ ಹಾಕಿ ಬೇವಿನ ಬೀಜ ಆರಿಸಿ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು.

‘ಕೋನಾಪುರ ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಬಾಲಕಾರ್ಮಿಕ ಪದ್ಧತಿ, ಶಾಲೆ ಬಿಡುವುದು, ಬಾಲ್ಯವಿವಾಹ ಪದ್ಧತಿ ಆಚರಣೆ ಪ್ರಕರಣ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳಿಗೆ ವಸತಿ ಶಾಲೆಯಲ್ಲಿ ಆದ್ಯತೆ ನೀಡಿ ನಿರಂತರ ಭೇಟಿಯ ಮೂಲಕ ಮತ್ತೆ ಶಾಲೆ ಬಿಡದಂತೆ ನೋಡಿಕೊಳ್ಳಲಾಗುವುದು. ಸಿಆರ್‌ಪಿಯಿಂದ ಬಿಇಒವರೆಗಿನ ತಂಡ ನಿರಂತರವಾಗಿ ಶಾಲೆಗೆ ಭೇಟಿ ನೀಡಲಿದ್ದಾರೆ’ ಎಂದು ಬಿಇಒ ಸೋಮಶೇಖರ್‌ ತಿಳಿಸಿದರು.

‘ತಾಲ್ಲೂಕಿನಲ್ಲಿ ಶಾಲೆ ಬಿಟ್ಟ 125 ಮಕ್ಕಳನ್ನು ಗುರುತಿಸಿದ್ದು, ಈ ಪೈಕಿ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ಕರೆ ತರಲಾಗಿದೆ’ ಎಂದು ಅವರು ತಿಳಿಸಿದರು.

ಉಪ ವಿಭಾಗಾಧಿಕಾರಿ ವಿಜಯಕುಮಾರ್‌, ಜಿಲ್ಲಾ ಪಂಚಾಯಿತಿ ಸಿಇಒ ರವೀಂದ್ರ, ತಹಶೀಲ್ದಾರ್ ಕೊಟ್ರೇಶ್‌, ಡಿವೈಎಸ್‌ಪಿ ರೋಷನ್‌ ಜಮೀರ್‌, ಡಿಡಿಪಿಐ ಎ.ಜೆ. ಆಂಥೋನಿ, ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ್, ಸಿಡಿಪಿಒ ಹೊನ್ನಪ್ಪ, ಬಿಆರ್‌ಸಿ ಹನುಮಂತಪ್ಪ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಬಿಆರ್‌ಪಿಗಳು, ಸಿಆರ್‌ಪಿಗಳು ಇದ್ದರು.

ಮರಳಿ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ದಾಖಲೆ ಇಡುವ ಮೂಲಕ ಅವರ ಪೂರ್ಣ ಮಾಹಿತಿ ಸಂಗ್ರಹಕ್ಕೆ ಇಲಾಖೆ ಕ್ರಮ ಕೈಗೊಳ್ಳಲಿದೆ
- ಹನುಮಂತಪ್ಪ, ಬಿಆರ್‌ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT