ಶನಿವಾರ, ಮಾರ್ಚ್ 25, 2023
30 °C
‘ಶ್ರೀ ಶಿವಕುಮಾರ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಸಾಣೇಹಳ್ಳಿಶ್ರೀ

ರಂಗಭೂಮಿ ಸಮಾಜಕ್ಕೆ ಹಿಡಿದ ಕನ್ನಡಿ: ಸಾಣೇಹಳ್ಳಿಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಣೇಹಳ್ಳಿ (ಹೊಸದುರ್ಗ): ‘ರಂಗಭೂಮಿ ನಿಂತ ನೀರಲ್ಲ. ಅದು ಜಂಗಮಶೀಲ. ಸಮಾಜದ ಮುಖಕ್ಕೆ ಹಿಡಿದ ಕನ್ನಡಿ ರಂಗಭೂಮಿ. 24 ವರ್ಷಗಳಿಂದ ಕನ್ನಡಿ ಹಿಡಿಯುವ ಕಾರ್ಯವನ್ನು ಶಿವಸಂಚಾರ ವ್ಯವಸ್ಥಿತವಾಗಿ ಮಾಡುತ್ತ ಬಂದು ಬೆಳ್ಳಿಹಬ್ಬಕ್ಕೆ ಕಾಲಿಟ್ಟಿದೆ’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಲ್ಲಿ ಭಾನುವಾರ ಸಂಜೆ ನಡೆದ ‘ಶ್ರೀ ಶಿವಕುಮಾರ ಪ್ರಶಸ್ತಿ’ ಪ್ರದಾನ ಹಾಗೂ ಶಿವಸಂಚಾರ ನಾಟಕೋತ್ಸವ ಬೆಳ್ಳಿಹಬ್ಬ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಪ್ರತಿವರ್ಷ ನಾಟಕೋತ್ಸವದ ಸಂದರ್ಭದಲ್ಲಿ ‘ಶ್ರೀ ಶಿವಕುಮಾರ ಪ್ರಶಸ್ತಿ’ಯನ್ನು ವಿತರಿಸುತ್ತ ಬರಲಾಗಿದೆ. ಈ ವರ್ಷ ಪ್ರಶಸ್ತಿಗೆ ಭಾಜನರಾಗಿರುವ ಕೆ.ವಿ.ನಾಗರಾಜಮೂರ್ತಿಯವರು ತಮ್ಮ ರಂಗಚಟುವಟಿಕೆ, ಅಭಿನಯ, ಸಂಘಟನೆಯ ಮೂಲಕವೇ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶನಿವಾರದ ಕಾರ್ಯಕ್ರಮದಲ್ಲಿ ನಾವು ಆಡಿದ ಮಾತುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಕೆಲವು ದುಷ್ಟರು ವಾಟ್ಸ್ಆ್ಯಪ್‌ನಲ್ಲಿ ನಮ್ಮ ಬಗ್ಗೆ ಹಗುರವಾಗಿ ಬರೆದುಕೊಂಡಿದ್ದಾರೆ. ಅವರನ್ನು ಪಾಪಿಗಳೆಂದು ಕರೆಯುತ್ತೇವೆ. ಮನುಷ್ಯತ್ವವನ್ನೇ ಕಳೆದುಕೊಂಡಿರುವ ಇಂತಹ ಪಾಪಿಗಳಿಂದ ಸಮಾಜದ ಪರಿವರ್ತನೆ ಆಗಲಾರದು’ ಎಂದು ಬೇಸರ ವ್ಯಕ್ತಪಡಿಸಿದರು.

‘ಶಿವಸಂಚಾರ ನಾಟಕೋತ್ಸವದ 25 ವರ್ಷಗಳ ಸಿಂಹಾವಲೋಕನ ಮಾಡಿದರೆ ನೋವು, ನಲಿವು ಎರಡೂ ಸಮಸಮವಾಗಿ ಕಂಡುಬರುತ್ತದೆ. ನೋವಿಗೆ ಅಂಜದೆ, ನಲಿವಿಗೆ ಹಿಗ್ಗದೆ ಮಾಡುವ ಕಾರ್ಯವನ್ನು ಒಂದು ಕಾಯಕ ಎಂದು ಭಾವಿಸಿಕೊಂಡು ಶ್ರದ್ಧೆಯಿಂದ ಮಾಡುತ್ತ ಬಂದಿದ್ದೇವೆ. ಈ ಕಾರಣದಿಂದಾಗಿ ಇಂದು ಸಾಣೇಹಳ್ಳಿ ರಂಗಭೂಮಿಯ ಪ್ರಮುಖ ಕೇಂದ್ರ ಎನ್ನುವಂತಾಗಿದೆ. ವರ್ಷದಿಂದ ವರ್ಷಕ್ಕೆ ನಮ್ಮ ಜವಾಬ್ದಾರಿಯೂ ಹೆಚ್ಚುತ್ತಲಿದೆ. ಬೆಳ್ಳಿ ಹಬ್ಬದ ನಿಮಿತ್ತ ವರ್ಷದುದ್ದಕ್ಕೂ ಹಲವಾರು ಜನಪರ ಚಟುವಟಿಕೆ ಹಮ್ಮಿ
ಕೊಳ್ಳಬೇಕೆಂಬ ಸದಾಶಯ ನಮ್ಮದಾಗಿದೆ’ ಎಂದು ತಿಳಿಸಿದರು.

ಪ್ರಶಸ್ತಿ ಪುರಸ್ಕೃತ ಕೆ.ವಿ.ನಾಗರಾಜಮೂರ್ತಿ, ‘ಸಾಣೇಹಳ್ಳಿ ರಂಗ ಚಟುವಟಿಕೆಗೆ ಸೇರುವಷ್ಟು ಜನರು ಜಗತ್ತಿನಲ್ಲಿ ಎಲ್ಲಿಯೂ ಸೇರುವುದಿಲ್ಲ. ರಂಗಭೂಮಿ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಏಕೈಕ ಸ್ವಾಮೀಜಿ ಪಂಡಿತಾರಾಧ್ಯಶ್ರೀ ಆಗಿದ್ದಾರೆ. ಬಸವಾದಿ ಶಿವಶರಣ ತತ್ವಸಿದ್ಧಾಂತವನ್ನು 21ನೇ ಶತಮಾನದಲ್ಲಿ ಪ್ರಚಾರ ಮಾಡುತ್ತಿರುವುದು ಮೆಚ್ಚುಗೆಯ ಸಂಗತಿ. ಅಡ್ಡಪಲ್ಲಕ್ಕಿ ಉತ್ಸವ ಮಾಡು ಅಂತ ಹೇಳುವ ಸ್ವಾಮೀಜಿಗಳಿಗಿಂತ ಸಾಣೇಹಳ್ಳಿಶ್ರೀ ಶ್ರೇಷ್ಠ ಕಾಯಕ ಮಾಡುತ್ತಿದ್ದಾರೆ. ರಂಗ ಶಿಕ್ಷಣ ನೀಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ. ಸುಳ್ಳನ್ನೇ ಹತ್ತಾರು ಬಾರಿ ತೋರಿಸುವ ಟಿವಿ ಮಾಧ್ಯಮ ಸುಳ್ಳುಗಾರರನ್ನೇ ಸೃಷ್ಟಿಸಿದೆ. ಇಂತಹ ಕಾಲದಲ್ಲಿ ಸತ್ಯವಾದ ವಿಚಾರ ಬಿತ್ತರಿಸುವ ಕೆಲಸವನ್ನು ರಂಗಭೂಮಿ ಮಾಡುತ್ತಿದೆ. ಜನರ ಬದುಕಿಗೆ ಬೆಳಕು ತೋರಿಸುವ ದೇವರ ಕೆಲಸವನ್ನು ಇಲ್ಲಿನ ಸ್ವಾಮೀಜಿ ಮಾಡುತ್ತಿದ್ದಾರೆ. ಮನುಷ್ಯರ ಮನಸ್ಸಿಗೆ ಬೆಂಕಿ ಹಚ್ಚುವ ಪ್ರಶಸ್ತಿ ನನಗೆ ಬೇಕಿಲ್ಲ ಅಂತ ಹಲವು ಪ್ರಶಸ್ತಿಗಳನ್ನು ತಿರಸ್ಕರಿಸಿದ್ದೇನೆ. ‘ಶ್ರೀ ಶಿವಕುಮಾರ ಪ್ರಶಸ್ತಿ’ ನೀಡಿರುವುದು ಸಂತಸ ತಂದಿದೆ’ ಎಂದು ತಿಳಿಸಿದರು.

ಮಾಜಿ ಸಚಿವೆ ಲೀಲಾದೇವಿ ಆರ್‌. ಪ್ರಸಾದ್‌, ‘ಕೆ.ವಿ.ನಾಗರಾಜಮೂರ್ತಿ ಅವರಂತೆ ರಾಜ್ಯದಲ್ಲಿ 10 ಮಂದಿ ಸಾಂಸ್ಕೃತಿಕ ರಾಯಭಾರಿಗಳಿದ್ದರೆ ನಾಡು ಸಾಂಸ್ಕೃತಿಕವಾಗಿ ಬಲಿಷ್ಠವಾಗುತ್ತದೆ. ಗೊಡ್ಡು ಸಂಪ್ರದಾಯಗಳ ನಿವಾರಣೆಗೆ ಸಾಣೇಹಳ್ಳಿಶ್ರೀ ಸಾಣೆ ಹಿಡಿಯುವ ಕಾಯಕ ಮಾಡುತ್ತಿರುವುದು ಅಭಿನಂದನಾರ್ಹ’ ಎಂದು ತಿಳಿಸಿದರು.

ಕೆ.ವಿ.ನಾಗರಾಜಮೂರ್ತಿಯವರ ಕುರಿತು ಸಾಹಿತಿ ಗೊ.ರು. ಚನ್ನಬಸಪ್ಪ ಮಾತನಾಡಿದರು.

ಶಾಸಕರಾದ ಗೂಳಿಹಟ್ಟಿ ಡಿ.ಶೇಖರ್, ಎಂ.ಚಂದ್ರಪ್ಪ, ಎಸ್‌.ವಿ. ರಾಮಚಂದ್ರಪ್ಪ, ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ, ಜಯರಾಂ ರಾಯಪುರ, ಬಿಗ್‌ಬಾಸ್‌ ವಿಜೇತ ಮಂಜು ಪಾವಗಡ ಮಾತನಾಡಿದರು.

ಶಿವಸಂಚಾರದ ಸಿದ್ಧರಾಮ ಕೇಸಾಪುರ, ಕೆ.ಜ್ಯೋತಿ, ಕೆ.ದಾಕ್ಷಾಯಣಿ, ಎಚ್.ಎಸ್.ನಾಗರಾಜ್ ಮತ್ತು ತಬಲ ಸಾಥಿ ಶರಣ್ ತಂಡ ವಚನಗೀತೆ, ಭಾವಗೀತೆ, ಜನಪದಗೀತೆ, ತತ್ವಪದಗಳು, ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರು. ಸಾಣೇಹಳ್ಳಿಯ ಗುರುಪಾದೇಶ್ವರ ಪ್ರೌಢಶಾಲೆ ಮತ್ತು ಶಿವಕುಮಾರ ಸ್ವಾಮೀಜಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನೃತ್ಯ ರೂಪಕ ಪ್ರಸ್ತುತಪಡಿಸಿದರು. ಡಾ.ರಾಜಶೇಖರ ಹನುಮಲಿ ರಚನೆ, ವೈ.ಡಿ.ಬದಾಮಿ ನಿರ್ದೇಶನದ ‘ಮಹಾಬೆಳಗು’ ನಾಟಕವನ್ನು ಸಾಣೇಹಳ್ಳಿ ಶಿವಕುಮಾರ ಕಲಾ ಸಂಘದ ಕಲಾವಿದರು ಅಭಿನಯಿಸಿದರು.

ಬೆಳ್ಳಿಹಬ್ಬದ ಸಂಭ್ರಮಕ್ಕೆ ತೆರೆ

ಸಾಣೇಹಳ್ಳಿ (ಹೊಸದುರ್ಗ): ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಶಿವಕುಮಾರ ಕಲಾ ಸಂಘದ ವತಿಯಿಂದ ‘ಒಕ್ಕಲಿಗ ಒಕ್ಕದಿರೆ ಜಗವೆಲ್ಲ ಬಿಕ್ಕುವುದು’ ಧ್ಯೇಯ ವಾಕ್ಯದಡಿ 6 ದಿನಗಳಿಂದ ನಡೆದ ಶಿವಸಂಚಾರ ನಾಟಕೋತ್ಸವ ಬೆಳ್ಳಿಹಬ್ಬ ಸಮಾರಂಭ ಭಾನುವಾರ ರಾತ್ರಿ ವಿದ್ಯುಕ್ತವಾಗಿ ತೆರೆ ಕಂಡಿತು.

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನವೆಂಬರ್‌ 2ರಿಂದ ಪ್ರತಿದಿನ ಬೆಳ್ಳಿಗ್ಗೆ 8ರಿಂದ ರಾತ್ರಿಯವರೆಗೂ ನಾಟಕೋತ್ಸವದಲ್ಲಿ ಸಾಮೂಹಿಕ ಪ್ರಾರ್ಥನೆ, ಶಿವಮಂತ್ರ ಲೇಖನ, ಚಿಂತನ, ಕನ್ನಡ ರಾಜ್ಯೋತ್ಸವ, ವಿಚಾರ ಮಾಲಿಕೆ, ವಿಚಾರ ಸಂಕಿರಣ, ವಚನಗೀತೆ, ನೃತ್ಯರೂಪಕ, ಉಪನ್ಯಾಸ, ಆಶೀರ್ವಚನ, ನಾಟಕ ಪ್ರದರ್ಶನ, ಕೃಷಿ, ತೋಟಗಾರಿಕೆ, ಹೈನುಗಾರಿಕೆ ವಸ್ತು ಪ್ರದರ್ಶನ ಕಾರ್ಯಕ್ರಮಗಳು ಜರುಗಿದವು.

ಕೋವಿಡ್‌ ನಡುವೆಯೂ ನಾಟಕೋತ್ಸವಕ್ಕೆ ಕಳೆದ ವರ್ಷಗಳಿಗಿಂತಲೂ ಹೆಚ್ಚಿನ ರಂಗ ಪ್ರಿಯರು ಭಾಗವಹಿಸಿದ್ದರು. 6 ದಿನಗಳ ಕಾಲ ನಡೆದ ರಂಗಜಾತ್ರೆಯ ಅದ್ದೂರಿ ಸಮಾರಂಭಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು, ನಟರು, ಸಾಹಿತಿಗಳು ಸೇರಿ ಸಾಣೇಹಳ್ಳಿ ಅಕ್ಕಪಕ್ಕದ ಹತ್ತಾರು ಹಳ್ಳಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಬೆಂಗಳೂರು ಸೇರಿ ಹೊರ ರಾಜ್ಯಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ಸಮಾರಂಭ ಕಳೆಗಟ್ಟಿತು.

ಶಿವಸಂಚಾರ ನಾಟಕೋತ್ಸವ ಬೆಳ್ಳಿಹಬ್ಬ ಕಾರ್ಯಕ್ರಮದ ಸ್ಮರಣಾರ್ಥ ಸಿಜಿಕೆ ನುಡಿ–ಚಿತ್ರ ಟಂಕಸಾಲೆ ಲೋಕಾರ್ಪಣೆಗೊಂಡಿತು. ಪ್ರಥಮವಾಗಿ ಸ್ಥಳೀಯ ಅಕ್ಕನ ಬಳಗದವರಿಗೆ ವಚನಗಾಯನ ಮಾಡಲು, ಭಜನೆ ಕಲಾವಿದರು ಭಜನೆ ಪ್ರದರ್ಶಿಸಲು ಅವಕಾಶ ನೀಡಿದ್ದು ಈ ಬಾರಿ ನಾಟಕೋತ್ಸವದ ವಿಶೇಷ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು