ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು: ಮರಳಿ ಗೂಡು ಸೇರಿದ ತಿಪ್ಪೇಸ್ವಾಮಿಗೆ ಟಿಕೆಟ್‌?

ಬಿಜೆಪಿಗೆ ಸೇರ್ಪಡೆ; ಮತ್ತೆ ಒಂದಾದ ಒಡನಾಡಿಗಳು
Last Updated 27 ಫೆಬ್ರುವರಿ 2023, 4:38 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಕೆಲ ದಿನಗಳಿಂದ ನಿಗೂಢವಾಗಿದ್ದ ಮಾಜಿ ಶಾಸಕ ನೇರ್ಲಗುಂಟೆ ಎಸ್‌. ತಿಪ್ಪೇಸ್ವಾಮಿ ಅವರ ಮುಂದಿನ ರಾಜಕೀಯ ನಡೆ ಭಾನುವಾರ ಅವರು ಬಿಜೆಪಿ ಸೇರ್ಪಡೆಯಾಗುವ ಮೂಲಕ ಅಂತ್ಯಕಂಡಿದೆ.

ತಾಲ್ಲೂಕಿನ ಪ್ರಭಾವಿ ರಾಜಕಾರಣಗಳ ಪೈಕಿ ನೇರ್ಲಗುಂಟೆ ತಿಪ್ಪೇಸ್ವಾಮಿ ಒಬ್ಬರು. ನೆರೆಯ ಚಳ್ಳಕೆರೆ ತಾಲ್ಲೂಕಿನ ನೇರ್ಲಗುಂಟೆ ಗ್ರಾಮದ ತಿಪ್ಪೇಸ್ವಾಮಿ ಮೂಲತಃ ಕಾಂಗ್ರೆಸ್ಸಿಗರು. ಕಾಂಗ್ರೆಸ್‌ನಿಂದ ಚಳ್ಳಕೆರೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದರು. ಶಾಸಕ ಎನ್.ವೈ. ಗೋಪಾಲಕೃಷ್ಣ ಅವರ ಜತೆ ವೈಮನಸ್ಸು ಉಂಟಾದ ನಂತರ 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. 2013ರ ವಿಧಾನಸಬೆ ಚುನಾವಣೆಯಲ್ಲಿ ಬಿ.ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು.

ನಂತರದ ವಿದ್ಯಮಾನಗಳಿಂದಾಗಿ ಬಿಎಸ್ಆರ್ ಕಾಂಗ್ರೆಸ್‌ ಬಿಜೆಪಿಯೊಂದಿಗೆ ವಿಲೀನವಾದ ಕಾರಣ ಮತ್ತೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. 2018ರಲ್ಲಿ ಬಿಜೆಪಿ ಟಿಕೆಟ್ ತಪ್ಪಿ‌ದರಿಂದ ಪಕ್ಷೇತರರಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆಗ 41,152 ಮತ ಪಡೆದು 3ನೇ ಸ್ಥಾನಕ್ಕೆ ತೃಪ್ತರಾಗಿದ್ದರು.

2019ರ ಲೋಕಸಭಾ ಚುನಾವಣೆ ವೇಳೆ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಮಧ್ಯಸ್ಥಿಕೆಯಲ್ಲಿ ತಿಪ್ಪೇಸ್ವಾಮಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಅಂದಿನಿಂದ ಕಾಂಗ್ರೆಸ್‌ನಲ್ಲಿ ಮುಂದಾಳತ್ವ ಮತ್ತು ಟಿಕೆಟ್‌ಗಾಗಿ ಬಿ.ಯೋಗೇಶ್ ಬಾಬು ಮತ್ತು ನೇರ್ಲಗುಂಟೆ ತಿಪ್ಪೇಸ್ವಾಮಿ ಮಧ್ಯೆ ಪೈಪೋಟಿ ನಡೆದಿದ್ದವು. ಬಹಿರಂಗವಾಗಿಯೇ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು. ‘ಭಾರತ್ ಜೋಡೋ ಯಾತ್ರೆ’ಯ ಬಹಿರಂಗ ಸಭೆಯಲ್ಲಿ ರಾಹುಲ್ ಗಾಂಧಿ ಸಮಕ್ಷಮದಲ್ಲಿ ಇಬ್ಬರನ್ನೂ ಒಂದುಮಾಡಿದ್ದ ಡಿ.ಕೆ. ಶಿವಕುಮಾರ್, ‘ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಒಮ್ಮತವಾಗಿ ಪಕ್ಷಕ್ಕೆ ಕೆಲಸ ಮಾಡಬೇಕು’ ಎಂದು ಸೂಚಿಸಿದ್ದರು.

ಫೆ.6ರಂದು ಪಟ್ಟಣಕ್ಕೆ ಬಂದಿದ್ದ ಕಾಂಗ್ರೆಸ್ ‘ಪ್ರಜಾಧ್ವನಿ’ ಯಾತ್ರೆಯಲ್ಲಿ ತಿಪ್ಪೇಸ್ವಾಮಿ ಮತ್ತು ಯೋಗೇಶ್ ಬಾಬು ಅವರ ಅಭಿಮಾನಿಗಳು ಮಾಡಿದ ವೈಯಕ್ತಿಕ ಅಬ್ಬರಕ್ಕೆ ಡಿ.ಕೆ. ಶಿವಕುಮಾರ್, ‘ಇದಕ್ಕೆಲ್ಲಾ ಮಣೆ ಹಾಕುವುದಿಲ್ಲ. ಅಳೆದು ತೂಗಿ ಟಿಕೆಟ್ ನೀಡಲಾಗುವುದು’ ಎಂದು ಭಾಷಣದಲ್ಲಿ ಹೇಳಿದ್ದರು. ತಿಪ್ಪೇಸ್ವಾಮಿ ಬಿಜೆಪಿ ಸೇರ್ಪಡೆ ಮೂಲಕ ಕಾಂಗ್ರೆಸ್ ಟಿಕೆಟ್ ಪೈಪೋಟಿಯಲ್ಲಿ ಕೇಳಿಬರುತ್ತಿದ್ದ 3 ಹೆಸರುಗಳ ಪೈಕಿ ಈಗ ವಿ.ಎಸ್. ಉಗ್ರಪ್ಪ ಹಾಗೂ ಯೋಗೇಶ್ ಬಾಬು ಮಾತ್ರ ಉಳಿದುಕೊಂಡಿದ್ದಾರೆ ಎನ್ನಲಾಗಿದೆ. ತಿಪ್ಪೇಸ್ವಾಮಿ ಪಕ್ಷ ತೊರೆದಿರುವುದರಿಂದ ಕಾಂಗ್ರೆಸ್ ಯಾರಿಗೆ ಮಣೆ ಹಾಕುತ್ತದೆ ಎಂಬ ಚರ್ಚೆಯೂ ತೀವ್ರವಾಗಿ ನಡೆಯುತ್ತಿದೆ.

2018 ಚುನಾವಣೆಯಲ್ಲಿ ಬಿ. ಶ್ರೀರಾಮುಲು ವಿರುದ್ಧ ತೀವ್ರ ವಾಗ್ದಾಳಿ ನಡೆಸುವ ಮೂಲಕ ತಿಪ್ಪೇಸ್ವಾಮಿ ಗಮನ ಸೆಳೆದಿದ್ದರು. ನಂತರ ಶ್ರೀರಾಮುಲು ಹಾಗೂ ಆಪ್ತ ಸಹಾಯಕರ ವಿರುದ್ಧ ನಿರಂತರವಾಗಿ ಅನೇಕ ಆರೋಪಗಳನ್ನು ಮಾಡಿದ್ದರು. ಶ್ರೀರಾಮುಲು ಮೊಳಕಾಲ್ಮುರಿನಿಂದಲೇ ಸ್ಪರ್ಧಿಸುವುದಾಗಿ ಹೇಳಿದ ವೇಳೆ ಅವರ ವಿರುದ್ಧ ತಿಪ್ಪೇಸ್ವಾಮಿ ಸ್ಪರ್ಧಿಸಿದಲ್ಲಿ ಚುನಾವಣೆ ರಂಗೇರಲಿದೆ ಎಂದು ಹಲವರು ಅನಿಸಿಕೆ ವ್ಯಕ್ತಪಡಿಸಿದ್ದರು. ಆದರೆ, ಈಗ ಆಗಿರುವ ಅನಿರೀಕ್ಷಿತ ಬೆಳೆವಣಿಗೆ ಎಲ್ಲವನ್ನೂ ಉಲ್ಟಾ ಮಾಡಿದೆ.

ಅಭ್ಯರ್ಥಿ ಕೊರತೆ: ಮೇಲ್ನೋಟಕ್ಕೆ ಬಿಜೆಪಿಯಲ್ಲಿ ಸೂಕ್ತ ಅಭ್ಯರ್ಥಿ ಕೊರತೆ ಕಾಡುತ್ತಿತ್ತು ಎನ್ನಲಾಗಿದೆ. ಪ್ರಭಾವಿ ನಾಯಕ ಎಂದು ಗುರುತಿಕೊಂಡಿರುವ ಶ್ರೀರಾಮುಲು ಕ್ಷೇತ್ರ ಬಿಟ್ಟು ಹೋಗುವುದು ಖಚಿತವಾಗಿದೆ. ಅಂತೆಯೇ ಶ್ರೀರಾಮುಲು ತಮ್ಮ ಹಳೆಯ ಒಡನಾಡಿ ತಿಪ್ಪೇಸ್ವಾಮಿ ಅವರನ್ನು ಪಕ್ಷಕ್ಕೆ ಮರು ಕರೆತಂದಿದ್ದಾರೆ ಎಂಬ ಮಾತು ಕೇಳಿಬಂದಿದೆ.

ತಿಪ್ಪೇಸ್ವಾಮಿ ಬೇಷರತ್ ಆಗಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಹಲವರು ಟಿಕೆಟ್ ಆಕಾಂಕ್ಷಿಗಳಿದ್ದು, ಪಕ್ಷವು ಮುಂದಿನ ದಿನಗಳಲ್ಲಿ ಎಲ್ಲವನ್ನೂ ಪರಿಗಣಿಸಿ ತೀರ್ಮಾನ ಕೈಗೊಳ್ಳಲಿದೆ ಎಂದು ಬಿಜೆಪಿ ಮಂಡಲಾಧ್ಯಕ್ಷ ಡಾ.ಪಿ.ಎಂ. ಮಂಜುನಾಥ್ ‘ಪ್ರಜಾವಾಣಿ’ ತಿಳಿಸಿದ್ದಾರೆ.

ಫೆ.6ರಂದು ಪಟ್ಟಣದಲ್ಲಿ ನಡೆದಿದ್ದ ಕೆಎಸ್ಆರ್‌ಟಿಸಿ ಬಸ್ ಡಿಪೊ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಚಿವ ಬಿ. ಶ್ರೀರಾಮುಲು ಬಗ್ಗೆ ತಿಪ್ಪೇಸ್ವಾಮಿ ಮೃದು ಧೋರಣೆಯಲ್ಲಿ ಮಾತನಾಡಿದ್ದರು. ಇದು ಮುಂದಿನ ರಾಜಕೀಯ ಊಹಾಪೋಹಕ್ಕೆ ಕಾರಣವಾಗಿದೆ ಎಂದು ‘ಪ್ರಜಾವಾಣಿ’ ಸುದ್ದಿ ಪ್ರಕಟಿಸಿತ್ತು. 15 ದಿನಗಳಲ್ಲಿ ತಿಪ್ಪೇಸ್ವಾಮಿ ಅವರು ಬಿಜೆಪಿ ಸೇರ್ಪಡೆಯಾಗುವ ಮೂಲಕ ಇದು ನಿಜವಾಗಿದೆ.

**

ಕಾಂಗ್ರೆಸ್‌ನಲ್ಲಿನ ವಾತಾವರಣ ಹೊಂದಾಣಿಕೆಯಾಗದ ಕಾರಣ ಸ್ವ ಇಚ್ಛೆಯಿಂದ ಬಿಜೆಪಿ ಸೇರ್ಪಡೆಯಾಗಿದ್ದೇನೆ. ಕ್ಷೇತ್ರವನ್ನು ಮಾದರಿಯಾಗಿಸುವುದು ನನ್ನ ಗುರಿ.

-ಎಸ್. ತಿಪ್ಪೇಸ್ವಾಮಿ, ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT