ಶುಕ್ರವಾರ, ಮೇ 20, 2022
21 °C
ಕೂಡ್ಲಹಳ್ಳಿಯಲ್ಲಿ ಒಂದು ಎಕರೆ ಜಾಗದಲ್ಲಿ ರಾಗಿ ಹಾಕಿರುವ ಚಿದಾನಂದಸ್ವಾಮಿ

ರಾಗಿ ಬೆಳೆದವರಿಗೆ ನಷ್ಟ ಇಲ್ಲ

ಸುವರ್ಣಾ ಬಸವರಾಜ್ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ‘ರಾಗಿ ತಿಂದವರಿಗೆ ರೋಗವಿಲ್ಲ’ ಎಂದು ಕನಕದಾಸರು ತಮ್ಮ ರಾಮಧಾನ್ಯ ಚರಿತೆ ಕಾವ್ಯದಲ್ಲಿ ಹೇಳಿದ್ದು, ಅದರ ಮುಂದುವರಿದ ಭಾಗದ ಮಾತಾಗಿ ‘ರಾಗಿ ಬೆಳೆದವರಿಗೆ ನಷ್ಟ ಇಲ್ಲ’ ಎಂಬ ವಾಕ್ಯ ಸೇರಿಸಬಹುದು.

ಹಿರಿಯೂರು ತಾಲ್ಲೂಕಿನ ಕೂಡ್ಲಹಳ್ಳಿಯಲ್ಲಿ ಕೇವಲ ಒಂದು ಎಕರೆ ಜಾಗದಲ್ಲಿ ರಾಗಿ ಹಾಕಿರುವ ಚಿದಾನಂದಸ್ವಾಮಿ, ‘ರಾಗಿ ಬೆಳೆಯಿಂದ ಲಕ್ಷ ಲೆಕ್ಕದಲ್ಲಿ ಲಾಭ ಆಗದಿದ್ದರೂ ನಷ್ಟವಂತೂ ಇಲ್ಲ. ಇಂಡಾಫ್–6 ತಳಿಯ ರಾಗಿ ಹಾಕಿದ್ದು, ಎದೆಮಟ್ಟಕ್ಕೆ ಬೆಳೆದು ನಿಂತಿದೆ. ಎಕರೆಗೆ 25–30 ಕ್ವಿಂಟಲ್ ಇಳುವರಿ ಬರುವ ನಿರೀಕ್ಷೆ ಇದೆ. 2022ರ ಜನವರಿ 27ಕ್ಕೆ ಸಸಿ ನಾಟಿ ಮಾಡಿದ್ದೆ. ಮೇ ಮೊದಲ ವಾರ ಕೊಯ್ಲಿಗೆ ಬರುತ್ತದೆ. ಒಂದು ಎಕರೆ ರಾಗಿ ಬೆಳೆಯಲು ಬಿತ್ತನೆ ಬೀಜ, ಗೊಬ್ಬರ, ಕೂಲಿ ಎಲ್ಲ ಒಳಗೊಂಡು ₹ 8 ಸಾವಿರದಿಂದ –₹ 10 ಸಾವಿರ ಖರ್ಚಾಗಿದೆ’ ಎನ್ನುತ್ತಾರೆ.

‘ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ರಾಗಿಗೆ ₹ 3 ಸಾವಿರ ದರವಿದ್ದು, 25 ಕ್ವಿಂಟಲ್ ಇಳುವರಿ ಬಂದರೂ ಖರ್ಚು ತೆಗೆದು ಪ್ರತಿ ಎಕರೆಗೆ 60–65 ಸಾವಿರ ರೂಪಾಯಿ ಉಳಿಯುತ್ತದೆ. ಇದಕ್ಕಿಂತ ಮುಖ್ಯವಾಗಿ ರಾಗಿ ಹುಲ್ಲು ಎಮ್ಮೆ–ಹಸುಗಳಿಗೆ ಅತಿ ಹೆಚ್ಚು ಪೌಷ್ಟಿಕಾಂಶ ಇರುವ ಮೇವಾಗಿದೆ. ಒಂದು ಎಕರೆಯಲ್ಲಿನ ಮೇವು ಎಂಟ್ಹತ್ತು ರಾಸುಗಳಿಗೆ ಮೂರ್ನಾಲ್ಕು ತಿಂಗಳಿಗೆ ಸಾಲುತ್ತದೆ. ಕಾಳು ಕಟ್ಟಿದ ಸಮಯದಲ್ಲಿ ಮಳೆ–ಬಿರುಗಾಳಿ ಬಂದಲ್ಲಿ ಬೆಳೆ ಹಾಳಾಗುವ ಸಂಭವ ಇದೆ. ವಿಶೇಷವಾಗಿ ಬೇಸಿಗೆ ಬೆಳೆಗೆ ರಾಗಿ ಹೇಳಿ ಮಾಡಿಸಿದ್ದು. ಪ್ರಸ್ತುತ ಬೆಳೆದಿರುವ ರಾಗಿಯನ್ನು ಮನೆ ಬಳಕೆಗೆ ಇಟ್ಟುಕೊಳ್ಳುತ್ತೇವೆ. 2–3 ವರ್ಷ ಇಟ್ಟರೂ ರಾಗಿ ಹಾಳಾಗದು’ ಎಂದು ಚಿದಾನಂದಸ್ವಾಮಿ
ತಿಳಿಸಿದರು.

‘ನಮಗೆ ನೀರಿನ ತೊಂದರೆ ಇಲ್ಲ. ಭರಪೂರ ಫಸಲು ಬಿಡುವ ತೆಂಗಿನ ತೋಟವಿದೆ. ನೀರಿನ ಆಶ್ರಯದ 3 ಎಕರೆ ಖಾಲಿ ಜಮೀನಿನಲ್ಲಿ ಡಿಸಿಸಿ ಬ್ಯಾಂಕಿನಲ್ಲಿ ₹ 2 ಲಕ್ಷ ಸಾಲ ಪಡೆದು ರಾಗಿಗೂ ಮೊದಲು ಟೊಮೆಟೊ ಹಾಕಿದ್ದೆ. ಬಳ್ಳಿಯಿಂದ ಒಂದೇ ಒಂದು ಹಣ್ಣು ಕೀಳಲಿಲ್ಲ. ಬೇಸಾಯದ ಖರ್ಚೂ ಕೂಡ ಗಿಟ್ಟಲಿಲ್ಲ. ತರಕಾರಿ ಬೆಳೆಯುವುದು ಒಂದು ರೀತಿ ಜೂಜಿದ್ದಂತೆ. ಅದೃಷ್ಟ ಇದ್ದಲ್ಲಿ ಅಪರೂಪಕ್ಕೆ ಗೆಲ್ಲಬಹುದು. ಟೊಮೆಟೊ ತೆಗೆದ ಹೊಲದಲ್ಲಿ ರಾಗಿ ನಾಟಿ ಮಾಡಿದ್ದು, ಎದೆಮಟ್ಟಕ್ಕೆ ಬೆಳೆದಿರುವ ಬೆಳೆ ನನ್ನದೇ ದೃಷ್ಟಿ ತಾಗುವಂತಿದೆ’ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಸಿರಿಧಾನ್ಯಕ್ಕೆ ಬೇಕು ಪ್ರೋತ್ಸಾಹ: ‘ಕೃಷಿ ಇಲಾಖೆ, ಬಬ್ಬೂರು ಫಾರಂನ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಕೇವಲ ಸೂರ್ಯಕಾಂತಿ, ಮೆಕ್ಕೆಜೋಳ, ಕಡಲೆ, ಶೇಂಗಾ ಬೆಳೆಯುವ ರೈತರಿಗೆ ಬೆಳೆ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡು ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹಿಸಬೇಕು. ರಾಗಿ, ನವಣೆ, ಸಾಮೆ, ಸಜ್ಜೆ ಧಾನ್ಯಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಕಡಿಮೆ ನೀರಿನಲ್ಲಿ ಇವನ್ನೆಲ್ಲ ಬೆಳೆಯಬಹುದು. ಧಾನ್ಯವನ್ನು ಸ್ವಚ್ಛಗೊಳಿಸಿ ಒಂದು ಅಥವಾ ಎರಡು ಕೆ.ಜಿ ತೂಕದ ಪ್ಯಾಕೆಟ್ ಮಾಡಿ, ಯಾವುದಾದರೂ ಬ್ರಾಂಡ್ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದಲ್ಲಿ ಉತ್ತಮ ಲಾಭ ಪಡೆಯಬಹುದು ಎಂಬ ಸತ್ಯವನ್ನು ಅನುಭವದ ಮೂಲಕ ಕಂಡುಕೊಂಡಿದ್ದೇನೆ’ ಎಂದು ಚಿದಾನಂದಸ್ವಾಮಿ ಹೇಳಿದರು.

* ಟೊಮೆಟೊ, ಈರುಳ್ಳಿ ಬದಲಿಗೆ ಸಿರಿಧಾನ್ಯ ಬೆಳೆದಲ್ಲಿ ನಷ್ಟ ಆಗದ ರೀತಿ ಕೃಷಿ ಮುಂದುವರಿಸಬಹುದು. ಸಿರಿಧಾನ್ಯ ಬೆಳೆಯಿಂದ ಪಶುಗಳಿಗೆ ವರ್ಷಪೂರ್ತಿ ಮೇವು ದೊರೆಯುತ್ತದೆ. – ಚಿದಾನಂದಸ್ವಾಮಿ, ರೈತ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು