ಸೋಮವಾರ, ಏಪ್ರಿಲ್ 19, 2021
31 °C
ಅಮೃತ ಮಹೋತ್ಸವದ ಉಪನ್ಯಾಸದಲ್ಲಿ ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ

ಸ್ವಾತಂತ್ರ್ಯಹೋರಾಟದಲ್ಲಿ ಚಿತ್ರದುರ್ಗ ಕೊಡುಗೆ ಸ್ಮರಣೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕಿನ ರಂಗಾಪುರದಲ್ಲಿ ಸಾವಿರಾರು ರೈತರು ಸಭೆ ಸೇರಿ ಸ್ವಾತಂತ್ರ್ಯ ಹೋರಾಟದ ರೂಪರೇಷೆ ಸಿದ್ಧಪಡಿಸಿದ್ದರು. ಇದು ಜಿಲ್ಲೆಯಲ್ಲಿ ನಡೆದ ಮೊದಲ ಹೋರಾಟವಾಗಿದ್ದು, ಜಿಲ್ಲೆಯ ಕೊಡುಗೆ ಅವಿಸ್ಮರಣೀಯವಾಗಿದೆ’ ಎಂದು ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ ಹೇಳಿದರು.

ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗcವಾಗಿ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸ್ವಾತಂತ್ರ್ಯ ಹೋರಾಟದಲ್ಲಿ ಚಿತ್ರದುರ್ಗದ ಕೊಡುಗೆ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

‘1939ರಲ್ಲಿ ತುರುವನೂರಿನಲ್ಲಿ ಕರ ನಿರಾಕರಣೆ ಚಳವಳಿ ಹಾಗೂ ಈಚಲು ಮರದ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಅದರ ನೇತೃತ್ವವನ್ನು ರಾಷ್ಟ್ರನಾಯಕ ಎಸ್. ನಿಜಲಿಂಗಪ್ಪ ವಹಿಸಿದ್ದರು. ಸ್ವಾತಂತ್ರ್ಯ ಹೋರಾಟಕ್ಕೆ ಮುಂದಾದವರನ್ನು ಆ ವೇಳೆ ಬ್ರಿಟಿಷರು ಬಂಧಿಸಿದ್ದರು’ ಎಂದು ಸ್ಮರಿಸಿಕೊಂಡರು.

‘ಜಿಲ್ಲೆಯಲ್ಲಿ ಭೀಮಪ್ಪನಾಯಕ, ಎಸ್.ವಾಸುದೇವರಾಂ, ಎಸ್.ನಿಜಲಿಂಗಪ್ಪ, ನಾಗರತ್ನಮ್ಮ ಹಿರೇಮಠ್, ರಾಮರೆಡ್ಡಿ, ಕೊಟ್ರೆ ನಂಜಪ್ಪ, ಬಳ್ಳಾರಿ ಸಿದ್ದಮ್ಮ ಸೇರಿ ಅನೇಕ ಮಂದಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಘಟಿತರಾಗಿ ಹೋರಾಟ ಮಾಡಿದ ಮಹನೀಯರಾಗಿದ್ದಾರೆ’ ಎಂದರು.

‘ಇನ್ನೂ ಕರ್ನಾಟಕ ಏಕೀಕರಣ ಚಳವಳಿಯಲ್ಲೂ ಎಸ್. ನಿಜಲಿಂಗಪ್ಪ ಅವರ ಪಾತ್ರ ಮಹತ್ವದ್ದಾಗಿದೆ. ಆಚಾರ್ಯ ಬಿ.ಎಂ.ಶ್ರೀಕಂಠಯ್ಯ, ಕುವೆಂಪು ಅವರಿಂದ ಹಾಡುಗಳನ್ನು ಹಾಡಿಸುವ ಮೂಲಕ ಕನ್ನಡಿಗರನ್ನು ಒಂದುಗೂಡಿಸಿ, ಚಳವಳಿಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದ್ದರು. ದೇಶಕ್ಕಾಗಿ ಸಾವಿರಾರು ಜನ ಪ್ರಾಣತ್ಯಾಗ ಮಾಡಿದ್ದಾರೆ. ಅಂಥವರನ್ನು ನಾವು ಎಂದಿಗೂ ಮರೆಯಬಾರದು’ ಎಂದು ಹೇಳಿದರು.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ‘ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ, ಬಲಿದಾನ ಮಾಡಿದ ಕೆಲವರ ಹೆಸರುಗಳು ಮಾತ್ರ ನಮಗೆ ಗೊತ್ತಿದೆ. ಆದರೆ, ಗ್ರಾಮೀಣ ಪ್ರದೇಶದ ಸಾವಿರಾರು ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ದುಡಿದಿದ್ದಾರೆ. ಸ್ವತಂತ್ರ ದೇಶವಾಗಲು ಶ್ರಮಿಸಿದ ಮಹನೀಯರು ನಮಗೆ ಸ್ಫೂರ್ತಿಯಾಗಿದ್ದಾರೆ. ರಾಷ್ಟ್ರಭಕ್ತಿ ಮೂಡಲು ಕಾರಣೀಭೂತರು ಆಗಿದ್ದಾರೆ’ ಎಂದು ಬಣ್ಣಿಸಿದರು.

‘ಸ್ವಾತಂತ್ರ್ಯ ದೊರೆತು 75 ವರ್ಷಗಳಾಗುತ್ತಿವೆ. ಇಂತಹ ಸುಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಲು ಹಾಗೂ ದೇಶದ ಸಂಸ್ಕೃತಿ, ಇಲ್ಲಿನ ಜನರ ನಡೆ-ನುಡಿ, ಆಚಾರ-ವಿಚಾರಗಳ ಕುರಿತು ಯುವಜನರಲ್ಲಿ ಅಭಿಮಾನ ಹಾಗೂ ಜ್ಞಾನ ಬೆಳೆಸಬೇಕೆಂಬ ಉದ್ದೇಶದಿಂದ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ’ ಎಂದರು.

ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಶೋಭಾ, ಕಾಲೇಜಿನ ಪ್ರಾಂಶುಪಾಲ ಎಚ್.ಸುಗೇಂದ್ರ ಇದ್ದರು.

****

ಸ್ವಾತಂತ್ರ್ಯದ ಇತಿಹಾಸ ಯುವ ಜನಾಂಗಕ್ಕೆ ತಿಳಿಸಬೇಕು. ದೇಶದ ಏಕತೆ ಮತ್ತು ಅಭಿವೃದ್ಧಿಗೆ ಕೈಜೋಡಿಸಬೇಕು. ಅದಕ್ಕಾಗಿ ಸರ್ಕಾರ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಿದೆ.

ಬಿ. ಧನಂಜಯಪ್ಪ, ಜಿಲ್ಲಾ ವಾರ್ತಾಧಿಕಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು