ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿ ರೋಗ ಪತ್ತೆಗಿಲ್ಲ ಪ್ರಯೋಗಾಲಯ: ರಾಜ್ಯ ಸರ್ಕಾರದ ನಿರ್ಲಕ್ಷ

Last Updated 20 ನವೆಂಬರ್ 2019, 20:00 IST
ಅಕ್ಷರ ಗಾತ್ರ

ಚಿತ್ರದುರ್ಗ: ಕುರಿ ಸೇರಿ ಇತರ ಜಾನುವಾರುಗಳ ರೋಗ ಪತ್ತೆಗೆ ಜಿಲ್ಲೆಯಲ್ಲಿ ಪ್ರಯೋಗಾಲಯವೇ ಇಲ್ಲ. ಇದರಿಂದ ರೋಗ ಪರೀಕ್ಷೆ ಹಾಗೂ ಚಿಕಿತ್ಸೆಯಲ್ಲಿ ಉಂಟಾಗುತ್ತಿರುವ ವಿಳಂಬ ‘ನೀಲಿ ನಾಲಿಗೆ ರೋಗ’ದಿಂದ ಬೆಳಕಿಗೆ ಬಂದಿದೆ.

ಕುರಿ ಸಾಕಣೆಯಲ್ಲಿ ಚಿತ್ರದುರ್ಗ ರಾಜ್ಯದಲ್ಲೇ ಪ್ರಮುಖ ಸ್ಥಾನದಲ್ಲಿದೆ. ಜಿಲ್ಲೆಯ ಹವಾಗುಣ ಕುರಿ ಸಾಕಣೆಗೆ ಅನುಕೂಲಕರವಾಗಿದೆ. ಹೀಗಾಗಿ, ರಾಜ್ಯದಲ್ಲಿ ಅತಿ ಹೆಚ್ಚು ಕುರಿಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಚಿತ್ರದುರ್ಗ ಮೊದಲ ಸ್ಥಾನದಲ್ಲಿದೆ. ಕುರಿ ಸಾಕಣೆಯೇ ಇಲ್ಲಿನ ಬಹುತೇಕರ ಕಸುಬಾಗಿದೆ. ಆದರೆ, ಕುರಿಗಳಿಗೆ ಬರುವ ರೋಗಗಳ ಪತ್ತೆಗೆ ಸುಸಜ್ಜಿತವಾದ ಕೇಂದ್ರ ಇಲ್ಲ.

ಹವಾಗುಣ ಚೆನ್ನಾಗಿದೆ ಎಂಬ ಕಾರಣಕ್ಕೆ ಕುರಿ ಸಾಕಣೆಯನ್ನು ಉತ್ತೇಜಿಸಲು ಮೈಸೂರು ಅರಸರು ಕೂಡ ಪ್ರಯತ್ನಿಸಿದ್ದರು. ಕುರಿ ಸಂವರ್ಧನ ಕೇಂದ್ರವನ್ನು ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪಿಸಿದ್ದರು. ಚಳ್ಳಕೆರೆ ತಾಲ್ಲೂಕಿನ ಕುದಾಪುರ ಸಮೀಪದ ಈ ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ಸೊರಗಿ ಹೋಗಿದೆ. ಕುರಿ ಸಂವರ್ಧನಾ ಕೇಂದ್ರಕ್ಕೆ ಸರ್ಕಾರ ಸರಿಯಾದ ಉತ್ತೇಜನ ನೀಡಿದ್ದರೆ ರೋಗ ಪತ್ತೆ ಕೇಂದ್ರ ಸೌಲಭ್ಯವಾಗದರೂ ಇರುತ್ತಿತ್ತು.

ಜಾನುವಾರು ರೋಗ ಪತ್ತೆ ಪ್ರಯೋಗಾಲಯವನ್ನು ಪ್ರತಿ ಜಿಲ್ಲೆಯಲ್ಲಿ ತೆರೆಯುವಂತೆ ಸರ್ಕಾರ ಆದೇಶ ಹೊರಡಿಸಿ ಮೂರು ವರ್ಷ ಕಳೆದಿದೆ. ಪ್ರತಿ ವರ್ಷ ಮೂರು ಜಿಲ್ಲೆಗಳಲ್ಲಿ ರೋಗ ಪತ್ತೆ ಕೇಂದ್ರ ಸ್ಥಾಪನೆಗೆ ಅನುದಾನ ಬಿಡುಗಡೆ ಆಗುತ್ತಿದೆ. ಸರ್ಕಾರದಲ್ಲಿರುವ ಪ್ರಭಾವಿ ಸಚಿವರು ಪ್ರಯೋಗಾಲಯಕ್ಕೆ ಲಾಬಿ ಮಾಡುತ್ತಿದ್ದಾರೆ. ಹೀಗಾಗಿ, ಹೆಚ್ಚು ಜಾನುವಾರು ಹೊಂದಿರುವ ಕೋಟೆ ನಾಡಿಗೆ ಈವರೆಗೆ ರೋಗ ಪತ್ತೆ ಕೇಂದ್ರ ಸಿಕ್ಕಿಲ್ಲ.

ದಾವಣಗೆರೆ ಜಿಲ್ಲೆಯಲ್ಲಿರುವ ಪ್ರಯೋಗಾಲಯದ ವ್ಯಾಪ್ತಿಗೆ ಚಿತ್ರದುರ್ಗ ಜಿಲ್ಲೆಯನ್ನು ಸೇರಿಸಲಾಗಿದೆ. ರೋಗ ಪತ್ತೆಗೆ ರಕ್ತದ ಮಾದರಿ, ಮೂತ್ರದ ಮಾದರಿಗಳನ್ನು ಪಶುಸಂಗೋಪನಾ ಇಲಾಖೆ ಸಿಬ್ಬಂದಿ ದಾವಣಗೆರೆಗೆ ತೆಗೆದುಕೊಂಡು ಹೋಗುತ್ತಾರೆ. ಪ್ರಯೋಗಾಲಯದ ತಜ್ಞರು ಆಗಾಗ ಜಿಲ್ಲೆಗೆ ಭೇಟಿ ನೀಡಿ ಕುರಿಗಳನ್ನು ಪರೀಕ್ಷೆ ಮಾಡುತ್ತಿದ್ದಾರೆ. ಆದರೆ, ಈ ಪ್ರಕ್ರಿಯೆಯಲ್ಲಿ ಉಂಟಾಗುತ್ತಿರುವ ವಿಳಂಬವನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಇಲಾಖೆಯ ಅಧಿಕಾರಿಗಳ ಕೊರಗು.

‘ಕುರಿ ಸೇರಿದಂತೆ ಜಾನುವಾರುಗಳಿಗೆ ಬರುವ ರೋಗಗಳು ವೈದ್ಯಕೀಯ ತಪಾಸಣೆಯ ವೇಳೆ ಪತ್ತೆಯಾಗುತ್ತವೆ. ರೋಗ ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಪ್ರಯೋಗಾಲಯದ ನೆರುವು ಪಡೆಯುವ ಅಗತ್ಯವಿದೆ. ಜಿಲ್ಲೆಯಲ್ಲಿ ಪ್ರಯೋಗಾಲಯ ಸ್ಥಾಪನೆಯಾದರೆ ರಕ್ತ ಹಾಗೂ ಮೂತ್ರದ ಮಾದರಿಗಳನ್ನು ದಾವಣಗೆರೆಗೆ ಕಳುಹಿಸುವುದು ತಪ್ಪುತ್ತದೆ’ ಎನ್ನುತ್ತಾರೆ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಟಿ.ಕೃಷ್ಣಪ್ಪ.

ಪಶುಸಂಗೋಪನಾ ಪಾಲಿಟೆಕ್ನಿಕ್‌ ಕಾಲೇಜು ಸ್ಥಾಪನೆಗೂ ಜಿಲ್ಲೆಯಿಂದ ಒತ್ತಡವಿದೆ. ಕುರಿ, ಮೇಕೆ ಸಾಕಣೆ, ಜಾನುವಾರು ರಕ್ಷಣೆ ಹಾಗೂ ಹೈನುಗಾರಿಕೆಗೆ ಸಂಬಂಧಿಸಿದಂತೆ ಕಾಲೇಜಿನಲ್ಲಿ ಡಿಪ್ಲೊಮಾ ಕೋರ್ಸ್‌ಗಳಿವೆ. ಬರಪೀಡಿತ ಜಿಲ್ಲೆಯಲ್ಲಿ ಹೈನುಗಾರಿಕೆ ಹಾಗೂ ಕುರಿಸಾಕಣೆಯೇ ಜನರ ಕೈಹಿಡಿದಿವೆ. ಡಿಪ್ಲೊಮಾ ಕಾಲೇಜು ಸ್ಥಾಪನೆಯಾದರೆ ಪ್ರಯೋಗಾಲಯ ಕೂಡ ಬರಲಿದೆ. ಜಾನುವಾರುಗಳಿಗೆ ಅಗತ್ಯ ಔಷಧವೂ ಲಭ್ಯವಾಗಲಿದೆ ಎಂಬುದು ಕುರಿ ಸಾಕಣೆದಾರರ ನಿರೀಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT