ಶುಕ್ರವಾರ, ಅಕ್ಟೋಬರ್ 2, 2020
21 °C

ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿ: ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಮೀಸಲಾತಿ ಸೌಲಭ್ಯಕ್ಕಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಬ್ರಾಹ್ಮಣ ಸಮುದಾಯದ ಹಿಂದುಳಿದವರು ಅರ್ಜಿ ಸಲ್ಲಿಸಲು ಮುಂದಾಗಿ’ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಪಿ.ಸಿ. ಶ್ರೀನಿವಾಸ್ ಭಟ್ ಸಲಹೆ ನೀಡಿದರು.

‘ತಾಲ್ಲೂಕು ಕಚೇರಿ, ನಾಡ ಕಚೇರಿ ಹಾಗೂ ಅಟಲ್‌ ಜನಸ್ನೇಹಿ ಸೇವಾ ಕೇಂದ್ರದಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದರೆ, ನಿಮಗೆ ಪ್ರಮಾಣ ಪತ್ರ ಕಳುಹಿಸಲಿದ್ದಾರೆ. ಸೌಲಭ್ಯ ಪಡೆಯಲಿಚ್ಛಿಸುವ ಆಸಕ್ತರು ತಡಮಾಡದೇ ಅರ್ಜಿ ಸಲ್ಲಿಸಿ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜನತೆಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶೇ 10ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಿದೆ. ದೇಶದ ಒಂಬತ್ತು ರಾಜ್ಯಗಳಲ್ಲಿ ಈಗಾಗಲೇ ಇದು ಅನುಷ್ಠಾನವಾಗಿದೆ. ನಮ್ಮ ರಾಜ್ಯದಲ್ಲೂ ಸಮರ್ಪಕ ಅನುಷ್ಠಾನಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಪ್ಪಿಗೆ ನೀಡಿದ್ದಾರೆ. ಇದರಿಂದ 144 ಜಾತಿ, ಉಪಜಾತಿಯವರಿಗೆ ಅನುಕೂಲವಾಗಲಿದೆ’ ಎಂದರು.

‘ಶಿಕ್ಷಣ, ಉದ್ಯೋಗ, ಕೌಶಲಾಭಿವೃದ್ಧಿ, ಸ್ವಯಂ ಉದ್ಯೋಗ, ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಸೇರಿ ಇತರೆ ಸೌಲಭ್ಯಗಳೊಂದಿಗೆ ಯೋಜನೆ ಜಾರಿಗೊಳಿಸುವ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪಿಸಿದೆ. ಜಾತಿ, ಆದಾಯ ಪ್ರಮಾಣ ಪತ್ರ ಪಡೆದಲ್ಲಿ ಕೇಂದ್ರ ಸರ್ಕಾರದ ನಾಗರಿಕ ಹುದ್ದೆಗಳು ಸಿಗುವ ಸಾಧ್ಯತೆ ಇದೆ’ ಎಂದು ಹೇಳಿದರು.

‘ಬ್ರಾಹ್ಮಣ ಸಮುದಾಯ ರಾಜ್ಯದಲ್ಲಿ ಶೇ 3ರಷ್ಟು ಇದೆ ಎಂಬ ಮಾಹಿತಿ ಇದೆ. ಜನಸಂಖ್ಯೆ ಎಷ್ಟಿದೆ ಎಂಬ ನಿಖರ ಮಾಹಿತಿ ಪಡೆಯಲಿಕ್ಕಾಗಿ ಸರ್ವೆ ನಡೆಸಲು ಮಂಡಳಿ ತೀರ್ಮಾನಿಸಿದೆ. ನಾವು ಬೇರೆಯವರ ಮೀಸಲಾತಿ ಕಿತ್ತುಕೊಳ್ಳುತ್ತಿಲ್ಲ. ಮೇಲ್ವರ್ಗದ ಇತರೆ ಸಮುದಾಯಗಳಿಗೂ ಶೇ 6ರಿಂದ 7ರಷ್ಟು ಸೌಲಭ್ಯ ದೊರೆಯಲಿದೆ’ ಎಂದರು.

‘ರಾಜ್ಯ ಸರ್ಕಾರ ಈಗಾಗಲೇ ಮಂಡಳಿಗೆ ₹ 25 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಸಮುದಾಯದಲ್ಲಿ ಅತ್ಯಂತ ಬಡತನದಲ್ಲಿ ಇರುವ ಅರ್ಹರನ್ನು ಗುರುತಿಸಿ ಪ್ರತಿ ವಿಧಾನಸಭಾ ಕ್ಷೇತ್ರವಾರು ತಲಾ 20 ಮನೆ ನಿರ್ಮಿಸಿಕೊಡುವ ಗುರಿ ಹೊಂದಿದ್ದೇವೆ’ ಎಂದು ತಿಳಿಸಿದರು.

‘ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾದ 41 ಸಾವಿರ ಜನರಿಗೆ ಆಹಾರ ಕಿಟ್ ನೀಡಿದ್ದೇವೆ. ಬ್ರಾಹ್ಮಣ ಸಮುದಾಯದ ಅಡುಗೆ ಭಟ್ಟ ಹಾಗೂ ಅರ್ಚಕ ವೃತ್ತಿಯಲ್ಲಿ ಇರುವವರಿಗೆ ಒಂದಿಷ್ಟು ನೆರವು ನೀಡಲಾಗಿದೆ. ಸಮುದಾಯದ ಅಭಿವೃದ್ಧಿಗೆ ಹಂತ ಹಂತವಾಗಿ ಶ್ರಮಿಸಲಾಗುವುದು’ ಎಂದರು.

ಬ್ರಾಹ್ಮಣ ಸಂಘದ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಪ್ರಾಣೇಶ್, ಲಕ್ಷ್ಮಿನಾರಾಯಣ, ವಿನಾಯಕ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು