ಚಾಲಕನ ಮೇಲೆ ಹಲ್ಲೆಗೆ ಖಂಡನೆ

7

ಚಾಲಕನ ಮೇಲೆ ಹಲ್ಲೆಗೆ ಖಂಡನೆ

Published:
Updated:
Prajavani

ಹಿರಿಯೂರು: ನಗರದ ಹರಿಶ್ಚಂದ್ರಘಾಟ್ ಬಡಾವಣೆಯಲ್ಲಿ ಕಸ ತುಂಬಲು ಹೋಗಿದ್ದ ವಾಹನದ ಚಾಲಕನ ಮೇಲೆ ಬುಧವಾರ ನಾಗರಿಕರೊಬ್ಬರು ಹಲ್ಲೆ ನಡೆಸಿರುವುದನ್ನು ಖಂಡಿಸಿ ಎಲ್ಲ ಪೌರ ಕಾರ್ಮಿಕರು ನಗರ ಪೊಲೀಸ್ ಠಾಣೆ ಎದುರು ಬುಧವಾರ ಧರಣಿ ನಡೆಸಿದರು.

ಕಸದ ವಾಹನ ಚಿಕ್ಕದಿರುವ ಕಾರಣ ಮನೆ ಮುಂದೆ ಕಡಿದ ಮರದ ತುಂಡುಗಳನ್ನು ಹಾಕಲು ಸಾಧ್ಯವಿಲ್ಲ. ಟ್ರ್ಯಾಕ್ಟರ್ ಬಂದಾಗ ಅದಕ್ಕೆ ತುಂಬಿ ಎಂದು ಚಾಲಕ ವೀರೇಂದ್ರ ಹೇಳಿದರೂ ಕೇಳದೆ ಮಾತಿಗೆ ಮಾತು ಬೆಳೆಸಿ ಜಯಣ್ಣ ಎಂಬುವವರು ಮನೆಯವ ಜತೆ ಸೇರಿ ಹಲ್ಲೆ ನಡೆಸಿದ್ದಾರೆ. ಪದೇ ಪದೇ ಪೌರನೌಕರರ ಮೇಲೆ ಇಂತಹ ಹಲ್ಲೆಗಳು ನಡೆಯುತ್ತಲೇ ಇವೆ. ರಕ್ಷಣೆಯೇ ಇಲ್ಲವಾಗಿದೆ ಎಂದು ಪೌರನೌಕರರ ಸಂಘದ ಅಧ್ಯಕ್ಷ ಕದುರಪ್ಪ ಆರೋಪಿಸಿದರು.

ಸ್ಥಳಕ್ಕೆ ಬಂದ ನಗರಸಭೆ ಅಧ್ಯಕ್ಷೆ ಮಂಜುಳಾ, ‘ಈ ರೀತಿ ಹಲ್ಲೆ ನಡೆಸುವುದು ಸರಿಯಲ್ಲ. ಸಿಬ್ಬಂದಿಗೆ ರಕ್ಷಣೆ ನೀಡಬೇಕು. ಆರೋಪಿಯನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ಧರಣಿ ನಿರತರ ಜತೆ ಮಾತನಾಡಿದ ಪಿಎಸ್ಐ ಮಂಜುನಾಥ್, ‘ಆರೋಪಿಯನ್ನು ಬಂಧಿಸಲು ಪೊಲೀಸರನ್ನು ಕಳಿಸಿದ್ದೇನೆ. ತಕ್ಷಣ ಪ್ರಕರಣ ದಾಖಲು ಮಾಡುತ್ತೇನೆ. ಠಾಣೆಯ ಮುಂದೆ ಧರಣಿ ಸರಿಯಲ್ಲ. ನಿಮ್ಮ ಹಿತ ಕಾಯಲು ನಾವು ಬದ್ಧ’ ಎಂದು ಭರವಸೆ ನೀಡಿದ್ದರಿಂದ, ಠಾಣೆ ಬಳಿ ಪ್ರತಿಭಟನೆ ಕೈಬಿಟ್ಟು ನಗರಸಭೆ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.

ಹಿಂದೆಯೂ ನಾಲ್ಕೈದು ಬಾರಿ ಇಂತಹ ಹಲ್ಲೆಗಳು ನಡೆದಿವೆ ಎಂದು ಟ್ರ್ಯಾಕ್ಟರ್ ಚಾಲಕ ರವಿ ಹೇಳಿದರು.

ಹಲ್ಲೆ ಆರೋಪಿಯನ್ನು ಬಂಧಿಸುವವರೆಗೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಸಂಘದ ಅಧ್ಯಕ್ಷ ಕದುರಪ್ಪ ಎಚ್ಚರಿಸಿದರು. ಪೌರ ಸಿಬ್ಬಂದಿ ಹೋರಾಟಕ್ಕೆ ಕಚೇರಿ ಸಿಬ್ಬಂದಿ ಬೆಂಬಲ ವ್ಯಕ್ತಪಡಿಸಿದರು.

‘ಸಿಬ್ಬಂದಿಯ ಮೇಲೆ ವಿನಾಕಾರಣ ಹಲ್ಲೆ ನಡೆದಿರುವುದು ದುರದೃಷ್ಟಕರ. ಕೆಲವು ದಿನಗಳಿಂದ ರಾತ್ರಿ ವೇಳೆಯೂ ಪಾಳಿಯಲ್ಲಿ ಸ್ವಚ್ಛತಾ ಕಾರ್ಯ ಮಾಡಿಸುತ್ತಿದ್ದೇವೆ. ಅಂತಹ ಅವೇಳೆಯಲ್ಲಿ ಹಲ್ಲೆಗಳು ನಡೆದರೆ ಹೇಗೆ? ಎಂದು ನೌಕರರು ಕೇಳುತ್ತಿದ್ದಾರೆ. ಪೊಲೀಸರು ಕ್ರಮ ಕೈಗೊಳ್ಳಬೇಕು’ ಎಂದು ಪೌರಾಯುಕ್ತ ಮಹಾಂತೇಶ್ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !