ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಜಪೇಯಿ ನಿಧನ ವಿಶ್ವಕ್ಕೆ ನಷ್ಟ: ಎಚ್.ಹನುಮಂತಪ್ಪ

ವಾಜಪೇಯಿ ಅವರೊಂದಿಗಿನ ಒಡನಾಟ ಹಂಚಿಕೊಂಡ ರಾಜ್ಯಸಭಾ ಮಾಜಿ ಸದಸ್ಯ
Last Updated 10 ಸೆಪ್ಟೆಂಬರ್ 2018, 14:07 IST
ಅಕ್ಷರ ಗಾತ್ರ

ಚಿತ್ರದುರ್ಗ: ನಾನೊಂದು ದಿನ ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡಲು ಹೋಗಿದ್ದೆ. ಆಗ ಪ್ರಧಾನಿಯಾಗಿದ್ದ ವಾಜಪೇಯಿ ಅವರು ಹನುಮಂತಪ್ಪ ಅವರೇ ನೀವು ನಮ್ಮವರೇ ಹೀಗೇಕೆ ಮಾಡುತ್ತಿದ್ದೀರಿ. ನಮ್ಮ ಜತೆಗೆ ಇರಬೇಕು...

ಇಲ್ಲಿನ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಸೋಮವಾರ ಸಮಗ್ರ ವಿಕಾಸ ಸಮಿತಿ ಟ್ರಸ್ಟ್‌ನಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ವಾಜಪೇಯಿ ಅವರೊಂದಿಗಿನ ತಮ್ಮ ಒಡನಾಡವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು,ರಾಜ್ಯಸಭಾ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಎಚ್.ಹನುಮಂತಪ್ಪ.

ನನಗಷ್ಟೇ ಅಲ್ಲ, ಅನೇಕ ರಾಜಕಾರಣಿಗಳಿಗೆ ಅವರು ಮಾರ್ಗದರ್ಶಕರಾಗಿದ್ದರು. ವಾಜಪೇಯಿ ನಿಧನದಿಂದ ದೇಶಕ್ಕೆ ಮಾತ್ರವಲ್ಲ. ಇಡೀ ವಿಶ್ವಕ್ಕೆ ತುಂಬಲಾರದ ನಷ್ಟವಾಗಿದೆ. ನಿಜಕ್ಕೂ ಅಂತಹ ದೊಡ್ಡ ವ್ಯಕ್ತಿಯ ಜತೆ ರಾಜ್ಯಸಭೆಯಲ್ಲಿ ಕೆಲಸ ಮಾಡುವ ಭಾಗ್ಯ ದೊರೆತಿದ್ದು, ನನ್ನ ಅದೃಷ್ಟ ಎಂದರು.

ಅವರು ಉತ್ತಮ ವಾಗ್ಮಿ. ತಮ್ಮ ಮಾತಿನ ಮೂಲಕವೇ ವಿರೋಧ ಪಕ್ಷದವರ ಮನಸನ್ನು ಗೆಲ್ಲುವ ತಾಕತ್ತು ಉಳ್ಳವರಾಗಿದ್ದರು. ಅಪ್ಪಟ ದೇಶಪ್ರೇಮಿಯಾಗಿದ್ದ ಅವರಿಗೆ ರಾಜಕೀಯ ಜೀವನದುದ್ದಕ್ಕೂ ಶತ್ರುಗಳೇ ಇರಲಿಲ್ಲ. ಈ ಕಾರಣದಿಂದಾಗಿಯೇ ಅಜಾತ ಶತ್ರು ಆಗಿದ್ದಾರೆ. ಪ್ರಸ್ತುತ ರಾಜಕೀಯಕ್ಕೆ ಹೋಲಿಸಿಕೊಂಡರೆ ಅಂತಹ ಮೇರು ವ್ಯಕ್ತಿತ್ವವುಳ್ಳ ರಾಜಕಾರಣಿಯೇ ಇಲ್ಲ ಎಂದು ಬಣ್ಣಿಸಿದರು.

ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್‌.ಎ.ರವೀಂದ್ರನಾಥ್ ಮಾತನಾಡಿ, 1971 ರಲ್ಲಿ ತುಮಕೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ವಾಜಪೇಯಿ ಅವರನ್ನು ನೋಡಲು ಎಂಟು ಜನ ಸ್ನೇಹಿತರೊಂದಿಗೆ ಹೋಗಿದ್ದೆ. ಅವರ ಭಾಷಣ ಕೇಳಿದ ಮರುಕ್ಷಣವೇ ಜನಸಂಘಕ್ಕೆ ಸೇರಿದೆ ಎಂದು ಸ್ಮರಿಸಿಕೊಂಡರು.

ವಿದೇಶಾಂಗ ಸಚಿವರ ಕಾರ್ಯವೈಖರಿ ಏನು ಎಂಬುದನ್ನು ದೇಶಕ್ಕೆ ಪರಿಚಯಿಸಿಕೊಟ್ಟ ಮೊದಲಿಗರು ಅಟಲ್‌ ಬಿಹಾರಿ ವಾಜಪೇಯಿ. 1977 ರಲ್ಲಿ ಅಂದಿನವಿದೇಶಾಂಗ ಸಚಿವರಾಗಿದ್ದಾಗ ಸ್ಥಾನಕ್ಕೆ ಗೌರವ ತಂದುಕೊಟ್ಟಿದ್ದಷ್ಟೇ ಅಲ್ಲದೆ, ವಿದೇಶ ಪ್ರವಾಸ ಪ್ರಧಾನಿಗಳಿಗಷ್ಟೇ ಸೀಮಿತವಲ್ಲ ಎಂದು ತೋರಿಸಿಕೊಟ್ಟವರು ಎಂದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ವಾಜಪೇಯಿಯಾಗಲಿ, ಆಡ್ವಾಣಿಯಾಗಲಿ ರಾಜಕೀಯಕ್ಕಾಗಿ, ಅಧಿಕಾರದ ಆಸೆಗಾಗಿ ಪಕ್ಷ ಕಟ್ಟಿದವರಲ್ಲ. ದೇಶದ ಅಭಿವೃದ್ಧಿಗಾಗಿ ಶೂನ್ಯಾವಸ್ಥೆಯಲ್ಲಿದ್ದ ಬಿಜೆಪಿಯನ್ನು ರಾಷ್ಟ್ರದಲ್ಲೇ ದೊಡ್ಡ ಪಕ್ಷವಾಗಿ ಹೊರಹೊಮ್ಮುವಂತೆ ಮಾಡಿದವರು. ಈ ಹಿಂದೆ ನಾನೂ ಕಾಂಗ್ರೆಸ್‌ನಲ್ಲಿ ಇದ್ದರು ಕೂಡ ಅವರನ್ನು ತುಂಬಾ ಇಷ್ಟ ಪಡುತ್ತಿದ್ದೆ. ಅದಕ್ಕಾಗಿಯೇ ಒಮ್ಮೆ ಶಿವಮೊಗ್ಗಕ್ಕೆ ಭಾಷಣ ಕೇಳಲು ಹೋಗಿದ್ದೆ ಎಂದು ನೆನಪಿಸಿಕೊಂಡರು.

ನಮ್ಮ ದೇಶದ ವಿರುದ್ಧ ವಿದೇಶಗಳಲ್ಲಿ ಮಾತನಾಡುವ ಕೆಲ ಕೀಳುಮಟ್ಟದ ರಾಜಕಾರಣಿಗಳು ಇರುವಂಥ ದಿನಗಳಲ್ಲಿ ದೇಶದ ಕುರಿತು ಮಾತನಾಡಲು ವಿದೇಶಕ್ಕೆ ಹೋಗುತ್ತಿದ್ದೇನೆ ಎಂಬುದಾಗಿ ಹೆಮ್ಮೆಯಿಂದ ಹೇಳಿಕೊಂಡ ದೇಶಪ್ರೇಮಿ ವಾಜಪೇಯಿ. ದಲಿತ ಸಮುದಾಯದ ಬಾಬು ಜಗಜೀವನರಾಂ ಅವರು ಪ್ರಧಾನಿ ಆಗಬೇಕು ಎಂದು ಹೇಳಿದ ಕೀರ್ತಿ ಬಿಜೆಪಿ ಪಕ್ಷಕ್ಕೆ ಹಾಗೂ ವಾಜಪೇಯಿ ಅವರಿಗೆ ಸಲ್ಲುತ್ತದೆ ಎಂದರು.

ಹೊಳಲ್ಕೆರೆ ಶಾಸಕ ಚಂದ್ರಪ್ಪ ಮಾತನಾಡಿ, ದೇಶ ಮತ್ತು ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ ಮಹಾನ್ ವ್ಯಕ್ತಿ ವಾಜಪೇಯಿ. ಬಹುಮತ ಸಾಬೀತು ಪಡಿಸುವ ಸಂದರ್ಭದಲ್ಲಿ ಕೇವಲ ಒಂದು ಮತದಿಂದ ಸೋತರೂ ಜನಾಶೀರ್ವಾದದಿಂದ ಮತ್ತೊಮ್ಮೆ ಪ್ರಧಾನಿಯಾಗಿ ಉತ್ತಮ ಸೇವೆ ಸಲ್ಲಿಸಿದರು. ಅಂತಹ ನಿಸ್ವಾರ್ಥ ಸೇವಾ ಮನೋಭಾವ ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಸಮಗ್ರ ವಿಕಾಸ ಟ್ರಸ್ಟ್‌ನ ಉಪಾಧ್ಯಕ್ಷ ಬಿ.ರಾಮದಾಸ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ನವೀನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT