ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಸಂತರ ಮೇಲಿನ ಹಲ್ಲೆ ಸಹಿಸಲಾಗದು: ಗೋಪಾಲ್ ಆಕ್ರೋಶ

Last Updated 26 ಜನವರಿ 2023, 5:38 IST
ಅಕ್ಷರ ಗಾತ್ರ

ಚಿತ್ರದುರ್ಗ: ದೇಶದಲ್ಲಿ ಸಾಧು, ಸಂತರ ಮೇಲೆ ಹಲ್ಲೆ ನಡೆಯುತ್ತಿದೆ. ಲವ್ ಜಿಹಾದ್ ಮೂಲಕ ಯುವತಿಯರನ್ನು ವಂಚಿಸಲಾಗುತ್ತಿದೆ. ಇದನ್ನು ಸಹಿಸಲಾಗದು ಎಂದು ವಿಶ್ವ ಹಿಂದೂ ಪರಿಷತ್ ಅಖಿಲ ಭಾರತೀಯ ಸಹ ಕಾರ್ಯದರ್ಶಿ, ಅಯೋಧ್ಯೆ ರಾಮ ಮಂದಿರ ನಿರ್ಮಾಣ ಉಸ್ತುವಾರಿ ಗೋಪಾಲ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಬುಧವಾರ ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಆಯೋಜಿಸಿದ್ದ ‘ಶೌರ್ಯ ಯಾತ್ರೆ’ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಅನಾವಶ್ಯಕವಾಗಿ ನಾವು ಯಾರ ಮೇಲೆಯೂ ಆಕ್ರಮಣ ಮಾಡುವುದಿಲ್ಲ. ಆದರೆ, ಹಿಂದೂ ಸಮಾಜಕ್ಕೆ ಅನ್ಯಾಯ ಮಾಡುವ ಯಾರನ್ನೂ ಬಿಡುವುದಿಲ್ಲ’ ಎಂದು ಎಚ್ಚರಿಸಿದರು.

‘ಉಚ್ಛ, ನೀಚ, ಸ್ಪೃಶ್ಯ, ಅಸ್ಪೃಶ್ಯ ಎನ್ನುವ ಎಲ್ಲ ಭಾವಗಳನ್ನು ತೊರೆದು ಹಿಂದೂ ಸಮಾಜ ಒಂದಾಗಬೇಕು. ಪ್ರತಿ ಹಿಂದೂವಿನ ಉನ್ನತಿ ನನ್ನ ಉನ್ನತಿ ಎಂದು ಭಾವಿಸಬೇಕು. ಹುಟ್ಟಿದ ಜಾತಿಯಿಂದ ಮೇಲು, ಕೀಳು ಎಂದು ಕಾಣುವುದು ಅನ್ಯಾಯ. ಹಾಗೇ ಮಾಡಬಾರದು’ ಎಂದರು.

‘ದೇಶದ ಪ್ರತಿ ಮೂಲೆ ಮೂಲೆಗಳಲ್ಲಿ ಭಗವಾಧ್ವಜ ಹಾರಾಡಬೇಕು. ಭಾರತ ಸಂಪೂರ್ಣ ಕೇಸರಿಮಯವಾಗಬೇಕು. ದೇಶದಲ್ಲಿ ನಡು ರಾತ್ರಿಯಲ್ಲಿ ತರುಣಿಯರು ಆಭರಣದೊಂದಿಗೆ ನಿರಾತಂಕವಾಗಿ ಓಡಾಡುವಂತಾಗಬೇಕು. ಇದು ನಮ್ಮ ಕನಸು’ ಎಂದು ತಿಳಿಸಿದರು.

‘ದೇಶದ ಆಧ್ಯಾತ್ಮದ ಕೇಂದ್ರ ಬಿಂದು ದೇವತೆಗಳು. ಒಂದು ಕೈಯಲ್ಲಿ ಆಶೀರ್ವಾದ ಮಾಡಿದರೆ, ಮತ್ತೊಂದು ಕೈಯಲ್ಲಿ ಶಸ್ತ್ರ ಹಿಡಿದಿದ್ದಾರೆ. ಸಜ್ಜನರಾಗಿ ಬಂದರೆ ಅಪ್ಪಿಕೊಳ್ಳುತ್ತೇವೆ. ದುಷ್ಟತೆ, ಅನ್ಯಾಯ ಮಾಡಿದರೆ ಶಿಕ್ಷೆ ಕೊಡಬೇಕು ಎನ್ನುವುದನ್ನು ದೇವತೆಗಳು ಸಾರಿದ್ದಾರೆ’ ಎಂದರು.

‘ಇಂತಹ ಒಂದು ಸಂಗತಿಯನ್ನು ಹಿಂದೂ ಸಮಾಜ ಮರೆತಿದೆ. ಬದಲಾಗಿ ಕೃಷ್ಣನನ್ನು ಬೆಣ್ಣೆ ಕಳ್ಳ, ಗೋಪಿಕೃಷ್ಣ ಎಂದೆವು. ಶಿವನನ್ನು ಭೋಲೇನಾಥ ಎಂದೆವು. ಹಿಂದೂ ಸಮಾಜದಲ್ಲಿ ಪರಾಕ್ರಮ ಮತ್ತೆ ಜಾಗೃತವಾಗಬೇಕು. ಈ ನಿಟ್ಟಿನಲ್ಲಿ ಶೌರ್ಯ ಯಾತ್ರೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ಕಬೀರಾನಂದ ಮಠದ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ‘ಗೋಮಾತೆ ರಕ್ಷಿಸುವ ನಾಡಿನಲ್ಲಿ ಎಂದೂ ಬರ ಬರುವುದಿಲ್ಲ. ಬಜರಂಗದಳ ಕಾರ್ಯಕರ್ತರು ಕಸಾಯಿಖಾನೆಗೆ ಹೋಗುವ ಸಾಕಷ್ಟು ಗೋವುಗಳನ್ನು ರಕ್ಷಣೆ ಮಾಡಿ ತಂದು ನಮ್ಮ ಗೋಶಾಲೆಗೆ ಬಿಟ್ಟಿದ್ದಾರೆ. ಈ ಕಾರ್ಯ ಸದಾ ಸ್ಮರಣಿಯವಾದುದು’ ಎಂದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಕನಕ ವೃತ್ತದಿಂದ ಹಳೆ ಮಾಧ್ಯಮಿಕ ಶಾಲಾ ಆವರಣದವರೆಗೆ ಸಾವಿರಕ್ಕೂ ಹೆಚ್ಚು ಸಮವಸ್ತ್ರಧಾರಿ ಬಜರಂಗದಳ ಕಾರ್ಯಕರ್ತರು ಶೌರ್ಯ ಯಾತ್ರೆ ನಡೆಸಿದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮುರುಳಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್, ಬಿಜೆಪಿ ಮುಖಂಡ ಜಿ.ಎಸ್.ಅನಿತ್, ಬಜರಂಗದಳ ಪ್ರಾಂತ ಸಹ ಸಂಚಾಲಕ ಪ್ರಭಂಜನ್, ವಿಎಚ್‌ಪಿ ವಿಭಾಗ ಕಾರ್ಯದರ್ಶಿ ಷಡಾಕ್ಷರಪ್ಪ, ಜಿಲ್ಲಾ ಉಪಾಧ್ಯಕ್ಷ ಡಿ.ಎಂ.ಈಶ್ವರಪ್ಪ, ಜಿಲ್ಲಾ ಕಾರ್ಯದರ್ಶಿ ರುದ್ರೇಶ್, ಬಜರಂಗದಳ
ವಿಭಾಗ ಸಹ ಸಂಯೋಜಕ ರಾಜೇಶ್ ಗೌಡ, ಜಿಲ್ಲಾ ಸಂಯೋಜಕ ಸಂದೀಪ್ ಇದ್ದರು.

***

ಹಿಂದೂ ಸಮಾಜಕ್ಕೆ ಉತ್ಸಾಹ ತುಂಬಲು ಶೌರ್ಯ ಯಾತ್ರೆಯನ್ನು ರಾಷ್ಟ್ರೀಯ ಉತ್ಸವವನ್ನಾಗಿ ಆಚರಿಸುತ್ತಿ ದ್ದೇವೆ. ಸ್ವಾತಂತ್ರ್ಯಾ ನಂತರ ವಿಶ್ವ ಹಿಂದೂ ಪರಿಷತ್ ಈ ಹೋರಾಟ ಕೈಗೆತ್ತಿಕೊಂಡಿದೆ.

ಕೆ.ಆರ್.ಸುನೀಲ್, ಬಜರಂಗದಳ ಪ್ರಾಂತ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT