ಸೋಮವಾರ, ಮೇ 16, 2022
24 °C
ಅನುಮತಿ ಕಡ್ಡಾಯಗೊಳಿಸಿದ ಸಣ್ಣ ನೀರಾವರಿ ಇಲಾಖೆ

ಕೆರೆಯ ಹೂಳು ತೆಗೆಯಲು ನಿರ್ಬಂಧ: ಕೃಷಿಗೆ ಅಡ್ಡಿ

ವಿ. ಧನಂಜಯ ನಾಯಕನಹಟ್ಟಿ Updated:

ಅಕ್ಷರ ಗಾತ್ರ : | |

Prajavani

ನಾಯಕನಹಟ್ಟಿ: ಸಾರ್ವಜನಿಕ ಕೆರೆಗಳಲ್ಲಿ ನೈಸರ್ಗಿಕವಾಗಿ ಸಂಗ್ರಹವಾಗಿರುವ ಫಲವತ್ತಾದ ಕೆರೆಯ ಹೂಳನ್ನು ಯಾರಾದರೂ ಬಳಸಿಕೊಂಡರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ತಹಶೀಲ್ದಾರ್ ಹೇಳಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಒಂದು ವಾರದಿಂದ ನಾಯಕನಹಟ್ಟಿ ಚಿಕ್ಕಕೆರೆಯಲ್ಲಿ ಕೆರೆ ಹೂಳು ತುಂಬುವ ಟ್ರ್ಯಾಕ್ಟರ್ ಮತ್ತು ಜೆಸಿಬಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕೆರೆ ಹೂಳು ತುಂಬದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಜಮೀನುಗಳ ಫಲವತ್ತತೆಯನ್ನು ನೈಸರ್ಗಿಕವಾಗಿ ಹೆಚ್ಚಿಸುವ ಕೆರೆಯ ಮಣ್ಣು ಸಿಗದೇ ಕೃಷಿ ಚಟುವಟಿಕೆಗೆ ಅಡ್ಡಿಯಾಗುತ್ತಿದೆ ಎಂಬ ಚಿಂತೆಯಲ್ಲಿ ರೈತರಿದ್ದಾರೆ.

ನಾಯಕನಹಟ್ಟಿ ಹೋಬಳಿಯು ಶಾಶ್ವತ ಬರಪೀಡಿತ ಪ್ರದೇಶವಾಗಿದೆ. ಹೋಬಳಿಯಾದ್ಯಂತ ಯಾವುದೇ ನೀರಾವರಿ ಯೋಜನೆಯ ಚಾನಲ್‌
ಗಳಿಲ್ಲ. ಇಲ್ಲಿ 24 ಸಾವಿರ ಹೆಕ್ಟೇರ್ ಕೃಷಿ ಪ್ರದೇಶವಿದೆ. ಇಲ್ಲಿಯ ರೈತರು 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಳೆಯಾಶ್ರಿತ ಕೃಷಿ ಚಟುವಟಿಕೆಯಲ್ಲಿ ತೊಡಗಿದರೆ, 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೊಳವೆಬಾವಿ ಮೂಲಕ ಸಿಗುವ ನೀರಿನಲ್ಲಿ ನೀರಾವರಿ ಪದ್ಧತಿಯಲ್ಲಿ ತರಕಾರಿ ಹೂ–ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಇಲ್ಲಿಯ ಬಹುತೇಕ ರೈತರು ತಮ್ಮ ಜಮೀನುಗಳಲ್ಲಿ ಮಣ್ಣಿನ ಫಲವತ್ತತೆ ಕಾಪಾಡಲು ಪ್ರತಿ ವರ್ಷಕೊಮ್ಮೆ ಕೆರೆಯ ಹೂಳನ್ನು ಜೆಸಿಬಿ, ಟ್ರ್ಯಾಕ್ಟರ್‌ಗಳ ಮೂಲಕ ತುಂಬಿಸಿ ತಮ್ಮ ಜಮೀನುಗಳಿಗೆ ಬಳಸಿಕೊಳ್ಳುವುದು ವಾಡಿಕೆ.

ಆದರೆ, ಈಚೆಗೆ ಕೆರೆ ಅಭಿವೃದ್ಧಿ ಪ್ರಾಧಿಕಾರ ಜಾರಿಗೆ ಬಂದ ಕಾರಣ ಕೆರೆಯಲ್ಲಿ ಜಲಮೂಲಗಳ ರಕ್ಷಣೆ, ಕೆರೆ ಒತ್ತುವರಿ ತೆರವು ಸೇರಿದಂತೆ ಹಲವು ನಿಯಮಗಳನ್ನು ಜಾರಿಗೆ ತಂದಿದೆ. ಆ ನಿಯಮಗಳಲ್ಲಿ ಕೆರೆ ಹೂಳು ತೆಗೆಯುವುದು ಅಪರಾಧ ಎಂದು ಇದೆ. ಇದರ ಪ್ರಕಾರ ಕೆರೆಯಲ್ಲಿ ಒಂದು ಹಿಡಿ ಮಣ್ಣನ್ನೂ ತೆಗೆಯುವಂತಿಲ್ಲ. ಹಾಗೇನಾದರೂ ತೆಗೆದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಹಲವು ಸವಾಲುಗಳ
ಮಧ್ಯೆ ಕೃಷಿಯಲ್ಲಿ ತೊಡಗಿದ ಹೋಬಳಿಯ ರೈತರಿಗೆ ಅಧಿಕಾರಿಗಳ ಕ್ರಮವು  ಆಘಾತವನ್ನು ಉಂಟು ಮಾಡಿದೆ. ಹೋಬಳಿಯ ಬಹುತೇಕ ನೀರಾವರಿ ರೈತರು ಕೆರೆಗಳ ಹೂಳನ್ನು ನಂಬಿಕೊಂಡು ಕೃಷಿಯಲ್ಲಿ ತೊಡಗುತ್ತಿದ್ದಾರೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಫಾಲಾಕ್ಷಪ್ಪ, ಸರೊಜವ್ವನಹಳ್ಳಿ ರೈತ ಸಣ್ಣಓಬಯ್ಯ ತಿಳಿಸಿದರು.

‘ನಾಯಕನಹಟ್ಟಿ ಚಿಕ್ಕಕೆರೆಯು 389 ಎಕರೆ ವಿಸ್ತೀರ್ಣವಿದೆ. 14 ಅಡಿ ಎತ್ತರವಿದ್ದು, ಅದರಲ್ಲಿ 8ರಿಂದ 10 ಅಡಿಗಳಷ್ಟು ಹೂಳು ತುಂಬಿದೆ. ಇದರ ಪರಿಣಾಮವಾಗಿ ಕೆರೆಗೆ ನೀರು ಹರಿದು ಬರುತ್ತಿಲ್ಲ. ಕೆರೆಯಲ್ಲಿ ಹತ್ತಾರು ವರ್ಷಗಳಿಂದ ಸಾಕಷ್ಟು ಪ್ರಮಾಣದಲ್ಲಿ ಹೂಳು ಸಂಗ್ರಹವಾಗಿದೆ. ಈ ಹೂಳನ್ನು ತೆಗೆಯಲು ಹಿಂದಿನ ಸರ್ಕಾರಗಳು ಕೆರೆ ಸಂಜೀವಿನಿ ಎಂಬ ಯೋಜನೆ ಜಾರಿಗೆ ತಂದು ಎಲ್ಲ ಜಿಲ್ಲೆಗಳಿಗೆ ಕೋಟ್ಯಂತರ ರೂಪಾಯಿಗಳ ಅನುದಾನ ನೀಡಿವೆ. ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ತಮ್ಮ ವ್ಯಾಪ್ತಿಯ ಕೆರೆಗಳಲ್ಲಿ ಮಾನವ ಸಂಪನ್ಮೂಲ ಹಾಗೂ ಯಂತ್ರಗಳನ್ನು ಬಳಸಿಕೊಂಡು ಕೆರೆ ಹೂಳು ತೆಗೆಸಿದ ಪ್ರಸಂಗಗಳು ಕಣ್ಣೆದುರೇ ಇವೆ. ಈ ಹೂಳನ್ನು ಯಾವುದೇ ವಾಣಿಜ್ಯ ಕಾರಣಗಳಿಗೆ ಬಳಸಲು ಆಗುವುದಿಲ್ಲ. ಇದು ಕೇವಲ ಕೃಷಿಗೆ ಮಾತ್ರ ಬಳಕೆ
ಯಾಗುತ್ತದೆ. ಅದರಲ್ಲೂ ಈರುಳ್ಳಿ ಬೆಳೆಯಲು ಕೆರೆಯ ಹೂಳು ಸಹಕಾರಿ. ಇಂತಹ ಸನ್ನಿವೇಶದಲ್ಲಿ ಅಧಿಕಾರಿಗಳು ಕೆರೆ ಹೂಳು ತೆಗೆಯಬಾರದು ಎಂದು ಹೇಳುತ್ತಿರುವುದು ವಿಪರ್ಯಾಸದ ಸಂಗತಿ. ಇಂಥ ಕಠಿಣ ನಿಯಮ ಜಾರಿಗೆ ತಂದರೆ ಈ ಭಾಗದಲ್ಲಿ ರೈತರು ಕೆಲವೇ ವರ್ಷಗಳಲ್ಲಿ ನೀರಾವರಿ ಕೃಷಿಯಿಂದ ವಿಮುಖರಾಗುವ ಸಂಭವವಿದೆ’ ಎಂದು ರಾಷ್ಟ್ರೀಯ ಕಿಸಾನ್‌ ಸಂಘದ ಹೋಬಳಿ ಅಧ್ಯಕ್ಷ ಬಿ.ಟಿ. ಪ್ರಕಾಶ್ ಅಭಿಪ್ರಾಯಪಟ್ಟರು.

ಅನುಮತಿ ಪಡೆದು ಹೂಳು ತೆಗೆಯಬಹುದು

ಸಾರ್ವಜನಿಕ ಕೆರೆಯಲ್ಲಿ ಯಾವುದೇ ರೀತಿಯ ಮಣ್ಣು, ಮರಳು, ಹೂಳು ತೆಗೆಯುವಂತಿಲ್ಲ. ಹಾಗೊಂದು ವೇಳೆ ರೈತರಿಗೆ ಕೃಷಿ ಚಟುವಟಿಕೆಗೆ ಕೆರೆ ಹೂಳು ಬೇಕೆಂದರೆ ಸಣ್ಣ ನೀರಾವರಿ ಇಲಾಖೆಯಿಂದ ಅನುಮತಿ ಪಡೆದು ವೈಜ್ಞಾನಿಕ ಮಾದರಿಯಲ್ಲಿ ತುಂಬಿಕೊಳ್ಳಬಹುದು.

– ಎನ್. ರಘುಮೂರ್ತಿ, ತಹಶೀಲ್ದಾರ್

ಅಲೆದಾಡುವ ಸ್ಥಿತಿ ಬೇಡ

‘ರೈತರು ಕೆರೆ ಹೂಳನ್ನು ಬಳಸಿಕೊಳ್ಳಲು 2 ತಿಂಗಳು ಮುಂಚಿತವಾಗಿ ಸಣ್ಣ ನೀರಾವರಿ ಇಲಾಖೆಗೆ ಅನುಮತಿಗಾಗಿ ಅರ್ಜಿ ಸಲ್ಲಿಸಬೇಕೆಂಬುದು ಸರಿಯಾದ ನಿಯಮವಲ್ಲ. ಇದರಿಂದ ರೈತರು ಅನುಮತಿಗಾಗಿ ಕಚೇರಿಗೆ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ರೈತರಿಗೆ ಸರಾಗವಾಗಿ ಕೆರೆ ಹೂಳು ತುಂಬಿಕೊಳ್ಳಲು ಬಿಡಬೇಕು.

– ಬಿ.ಟಿ. ಪ್ರಕಾಶ್, ರಾಷ್ಟ್ರೀಯ ಕಿಸಾನ್‌ ಸಂಘದ ಹೋಬಳಿ ಘಟಕದ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು