ಬುಧವಾರ, ಜೂನ್ 16, 2021
23 °C
ಬಸವ ಜಯಂತಿ: ವಾಟ್ಸ್‌ಆ್ಯಪ್‌ನಲ್ಲೇ ಶುಭಾಶಯ * ಎತ್ತುಗಳನ್ನು ಸಿಂಗರಿಸಿ ಆಚರಿಸಲು ರೈತರಲ್ಲಿಲ್ಲ ಆಸಕ್ತಿ  

ಬಸವ ಜಯಂತಿ: ದೇಗುಲ, ಮಠ–ಮನೆಗಳಲ್ಲೂ ಸರಳ ಆಚರಣೆ

ಕೆ.ಎಸ್.ಪ್ರಣವಕುಮಾರ್ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಬಸವ ಜಯಂತಿ ಹಬ್ಬದಂದು ಜಿಲ್ಲೆಯ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಎತ್ತುಗಳ ಸಿಂಗಾರ ಬಲು ಜೋರು. ಬಸವೇಶ್ವರರ ಭಾವಚಿತ್ರ ಮೆರವಣಿಗೆಗಳು ಅದ್ದೂರಿಯಾಗಿ ನಡೆಯುತ್ತಿದ್ದವು. ಆದರೆ, ಕೋವಿಡ್ ಎರಡನೇ ಅಲೆ ಶರವೇಗದಲ್ಲಿ ಹರಡುತ್ತಿರುವ ಕಾರಣ ಸಡಗರ ಇಲ್ಲದೆಯೇ ಅತ್ಯಂತ ಸರಳವಾಗಿ ಜಯಂತಿ ನಡೆಯಲಿದೆ.

ಒಂದು ದಿನ ಮುಂಚಿತವಾಗಿಯೇ ಶಿವ, ಬಸವಣ್ಣ ಸೇರಿ ಹಲವು ದೇಗುಲಗಳು ವಿದ್ಯುತ್ ದೀಪ, ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದ್ದವು. ಲಾಕ್‌ಡೌನ್‌ ಕಾರಣಕ್ಕೆ ಭಕ್ತರಿಗೆ ದೇಗುಲ ಪ್ರವೇಶ ನಿರ್ಬಂಧ ಇರುವುದರಿಂದ ಅರ್ಚಕರು ಮಾತ್ರ ದೇಗುಲಕ್ಕೆ ತೆರಳಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸುವುದಕ್ಕೆ ನಿರ್ಧರಿಸಿದ್ದಾರೆ.

ಬೇಸಿಗೆ ಅವಧಿಯಲ್ಲಿ ಹಬ್ಬ ಬರುವುದರಿಂದ ದೇಹ ತಂಪಾಗಲಿ ಎಂಬ ಉದ್ದೇಶದಿಂದ ಭಕ್ತರಿಗೆ ಪಾನಕ, ಕೋಸುಂಬರಿ, ಮಜ್ಜಿಗೆ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಇದ್ಯಾವುದಕ್ಕೂ ಈಗ ಅವಕಾಶ ಇಲ್ಲವಾಗಿದೆ.

ಬಸವ ಅನುಯಾಯಿಗಳು, ಬಸವ ಭಕ್ತರ ಮನೆಗಳು ತಳಿರು, ತೋರಣಗಳಿಂದ ಸಿಂಗಾರಗೊಳ್ಳುತ್ತಿದ್ದವು. ಆದರೆ, ಯಾವುದೇ ರೀತಿಯ ಸಡಗರ ಇಲ್ಲವಾಗಿದೆ. ಮನೆ–ಮನದಲ್ಲೇ ಮಹಾ ಮಾನವತಾವಾದಿ ಬಸವಣ್ಣ ಅವರನ್ನು ಶ್ರದ್ಧಾಭಕ್ತಿಯಿಂದ ಸ್ಮರಿಸಲು ಜನರು ತೀರ್ಮಾನಿಸಿದ್ದಾರೆ.

ಜಿಲ್ಲೆಯಲ್ಲಿನ ವಿವಿಧ ಮಠಗಳಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಗೌರವ ಸಮರ್ಪಿಸಲು ತೀರ್ಮಾನಿಸಿವೆ. ಕೋವಿಡ್ ಮಾರ್ಗಸೂಚಿ ಅನುಸರಿಸುವ ಮೂಲಕ ಸರಳ ಆಚರಣೆಗೆ ಒತ್ತು ನೀಡಿವೆ. ಮನೆಗಳಲ್ಲೇ ಆಚರಿಸುವಂತೆ ಈಗಾಗಲೇ ಕೆಲ ಮಠಗಳು ಸಂದೇಶ ರವಾನಿಸಿವೆ. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಸೇರಿ ಇತರೆ ಸಾಮಾಜಿಕ ಜಾಲತಾಣಗಳಲ್ಲೇ ಶುಭಾಶಯ ವಿನಿಮಯ ಮಾಡಿಕೊಳ್ಳಲು ಸಲಹೆ ನೀಡಿವೆ.

ಇನ್ನೂ ಬಸವ ಜಯಂತಿ ಶುಭದ ಸಂಕೇತ ಎಂಬ ಭಾವನೆ ಅನೇಕರಲ್ಲಿದೆ. ಜಯಂತಿಯಂದೇ ಹಲವು ಮದುವೆ, ಗೃಹಪ್ರವೇಶಗಳು ನಡೆಯುತ್ತಿದ್ದವು. ನಿಯಮಾನುಸಾರ ಇಲ್ಲಿಯೂ ಹೆಚ್ಚು ಜನ ಸೇರುವಂತಿಲ್ಲ. ವಾಹನ ಸಂಚಾರಕ್ಕೂ ಅವಕಾಶವಿಲ್ಲ. ಈ ಕಾರಣಕ್ಕೆ ಸಂಬಂಧಿಕರನ್ನು ಕರೆಯದೇ ಕುಟುಂಬದವರೇ ಸರಳವಾಗಿ ಆಚರಿಸಲು ಒಂದಿಷ್ಟು ಸಿದ್ಧತೆ ಮಾಡಿಕೊಳ್ಳುತ್ತಿರುವುದು ಕೆಲವೆಡೆ ಕಂಡುಬಂದಿದೆ.

ಗ್ರಾಮೀಣ ಭಾಗಗಳಲ್ಲಿ ಎತ್ತುಗಳನ್ನು ಅಲಂಕರಿಸಿ ವಿಶೇಷವಾಗಿ ಜಯಂತಿ ಆಚರಿಸುವ ಸಂಪ್ರದಾಯ ಅನೇಕ ದಶಕಗಳಿಂದ ರೂಢಿಯಲ್ಲಿದೆ. ಪ್ರಸಕ್ತ ವರ್ಷವೂ ಆ ಉತ್ಸಾಹ ರೈತರಲ್ಲಿ ಇಲ್ಲ. ಬೆಳೆಗಳಿಗೆ ಸೂಕ್ತ ಬೆಲೆ ಸಿಗದೇ ಹಲವರು ಕಂಗಾಲಾಗಿದ್ದಾರೆ. ದುಡಿಮೆ ಇಲ್ಲದೆ ಕೆಲವರು ನಲುಗಿದ್ದಾರೆ. ಹಾಕಿದ ಬಂಡವಾಳ ಹಿಂದಿರುಗುವ ವಿಶ್ವಾಸವೂ ತರಕಾರಿ, ಹೂ ಬೆಳೆಗಾರರಲ್ಲಿ ಇಲ್ಲವಾಗಿದೆ. ಇತ್ತೀಚೆಗೆ ಕೋವಿಡ್‌ನಿಂದಾಗಿ ಹೆಚ್ಚು ಸಾವು–ನೋವು ಸಂಭವಿಸುತ್ತಿವೆ. ಹೀಗಾಗಿ ಮನೆಗಳಲ್ಲಿ ಇರುವಂಥ ಎತ್ತುಗಳನ್ನು ಸಿಂಗರಿಸಿ ಸಂಭ್ರಮಿಸುವ ಮನಸ್ಸು ಅನೇಕರಲ್ಲಿ ಇಲ್ಲ.

ಅಕ್ಷಯ ತೃತೀಯಕ್ಕೂ ಅಡ್ಡಿ 

ಅಕ್ಷಯ ತೃತೀಯ ಕೂಡ ಮೇ 14ರಂದೇ ಇದೆ. ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದ ಚಿನ್ನದ ಅಂಗಡಿ ಮಾಲೀಕರಿಗೆ ನಿರಾಸೆ ಮೂಡಿಸಿದೆ. ಲಾಕ್‌ಡೌನ್‌ ಕಾರಣಕ್ಕೆ ಗ್ರಾಹಕರೂ ಬೇಸರದಲ್ಲಿದ್ದಾರೆ.

‘ನಮ್ಮಲ್ಲಿ ಆನ್‌ಲೈನ್‌ ಕಾಯ್ದಿರಿಸುವಿಕೆ ಸೌಲಭ್ಯವಿಲ್ಲ. ಬೆರಳೆಣಿಕೆಯಷ್ಟು ಅಂಗಡಿಯವರು ವಾಟ್ಸ್‌ಆ್ಯಪ್‌ ಮೂಲಕ ಕಾಯ್ದಿರಿಸುವಿಕೆ ಪ್ರಕ್ರಿಯೆ ಮಾಡುತ್ತಿರಬಹುದು. ಆದರೆ, ಇದು ಕೂಡ ಕಡಿಮೆ’ ಎಂದು ಇಲ್ಲಿನ ಬಂಗಾರ–ಬೆಳ್ಳಿ ವ್ಯಾಪಾರಿ ಶಿವಣ್ಣ ತಿಳಿಸಿದರು.

‘ಪ್ರತಿ ವರ್ಷ ಅಕ್ಷಯ ತೃತೀಯ ದಿನದಂದು ಚಿನ್ನದ ಆಭರಣಗಳನ್ನು ಗ್ರಾಹಕರು ಖರೀದಿಸುತ್ತಿದ್ದರು. ಹಿಂದಿನ ವರ್ಷದಂತೆ ಈ ಬಾರಿಯೂ ವ್ಯಾಪಾರವಿಲ್ಲ. ಲಾಕ್‌ಡೌನ್‌ಗೂ ಮುನ್ನ ಕೆಲವರು ಕಾಯ್ದಿರಿಸಿದ್ದರು. ಅಂಗಡಿ ತೆರೆಯದ ಕಾರಣ ಯಾರು ಬರುವುದಿಲ್ಲ. ವ್ಯಾಪಾರ ಮೊದಲಿನಂತೆ ಸಹಜ ಸ್ಥಿತಿಗೆ ಮರಳಲು ಕೆಲ ತಿಂಗಳು ಬೇಕಾಗಬಹುದು’ ಎನ್ನುತ್ತಾರೆ ಅವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು