ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಬಸವಾದಿತ್ಯ ದೇವರು 21ನೇ ಪೀಠಾಧಿಪತಿ

ಪಾಳೆಗಾರರ ಆಶ್ರಯದಲ್ಲಿ ಬೆಳೆದ ಮುರುಘಾ ಮಠಕ್ಕಿದೆ ವಿಶಿಷ್ಟ ಪರಂಪರೆ
Last Updated 28 ಮೇ 2022, 3:50 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಜಾಶ್ರಯದಲ್ಲಿ ಬೆಳೆದ ರಾಜ್ಯದ ಕೆಲವೇ ಮಠಗಳಲ್ಲಿ ಮುರುಘಾ ಮಠದ್ದು ಪ್ರಮುಖ ಸ್ಥಾನ. ಪಾಳೆಗಾರರ ಒತ್ತಾಸೆಯಂತೆ 17ನೇ ಶತಮಾನದಲ್ಲಿ ಸ್ಥಾಪನೆಯಾದ ಮಠ ಬೆಳೆದುಬಂದ ಪರಿ ವಿಶಿಷ್ಟವಾಗಿದೆ. ಈ ಮುರುಘಾ ಪರಂಪರೆಯ ಮಠಕ್ಕೆ ಬಸವಾದಿತ್ಯ ದೇವರು 21ನೇ ಪೀಠಾಧಿಪತಿಯಾಗಲಿದ್ದಾರೆ.

ಮುರಿಗಿ ಶಾಂತವೀರ ದೇಶಿಕರು 17ನೇ ಶತಮಾನದ ಅಂತ್ಯದಲ್ಲಿ ಮುರುಘಾ ಮಠದ ಮೊದಲ ಪೀಠಾಧಿಪತಿಯಾದರು. ಅಲ್ಲಿಂದ ಆರಂಭವಾದ ಮುರುಘಾ ಪರಂಪರೆ 20ನೇ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರವರೆಗೆ ಮುಂದುವರಿದಿದೆ. ಬಸವತತ್ವ ಪ್ರಚಾರ, ಧರ್ಮ ರಕ್ಷಣೆ, ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಮಠ ಮಾಡಿದ ಕೆಲಸದ ಬಗ್ಗೆ ಭಕ್ತರಲ್ಲಿ ಅಪಾರ ಗೌರವವಿದೆ. ಜಾತ್ಯತೀತವಾಗಿ ಎಲ್ಲ ಸಮುದಾಯದ ಜನರು ಈ ಮಠದ ಭಕ್ತರು.

ಪಾಳೆಗಾರರು ಚಿತ್ರದುರ್ಗದಲ್ಲಿ ಆಳ್ವಿಕೆ ನಡೆಸುವುದಕ್ಕೂ ಮುರುಘಾ ಮಠದ ಸ್ಥಾಪನೆಗೂ ಅವಿನಾಭಾವ ಸಂಬಂಧವಿದೆ. ಇದು ಜನಪದ ಕಥೆಯಾಗಿ ಜನರ ಬಾಯಿಂದ ಬಾಯಿಗೆ ಹರಿದಾಡಿದೆ. ಈ ಮಠ ಆರಂಭವಾದ ಕುತೂಹಲಕಾರಿ ಸಂಗತಿಯನ್ನು ಡಾ.ಶಿವಮೂರ್ತಿ ಮುರುಘಾ ಶರಣರ ಶೂನ್ಯ ಪೀಠಾರೋಹಣದ ಬೆಳ್ಳಿಹಬ್ಬದ ಅಂಗವಾಗಿ ರಚನೆಯಾದ ಸಂಭಾವನಾ ಗ್ರಂಥ ‘ಶರಣಶ್ರೀ’ಯಲ್ಲಿ ಇತಿಹಾಸ ಸಂಶೋಧಕ ಡಾ.ಬಿ. ರಾಜಶೇಖರಪ್ಪ ಉಲ್ಲೇಖಿಸಿದ್ದಾರೆ.

‘ಚಿತ್ರದುರ್ಗದ ಬಿಳಿಚೋಡ ಎಂಬ ಗ್ರಾಮದ ಸಮೀಪ ದನಗಾಹಿಯೊಬ್ಬ ಮರದ ಕೆಳಗೆ ಮಲಗಿದ್ದ. ನಾಗರಹಾವೊಂದು ಅವನ ತಲೆಯ ಮೇಲೆ ಹೆಡೆ ಅರಳಿಸಿ ನಿಂತಿತ್ತು. ಲೋಕಸಂಚಾರ ಮಾಡುತ್ತಿದ್ದ ಮುರಿಗಿ ಶಾಂತವೀರ ದೇಶಿಕರು ಇಲ್ಲಿಗೆ ಬಂದರು. ಹಾವು ನಿಧಾನವಾಗಿ ಕಣ್ಮರೆಯಾಯಿತು. ಆ ಯುವಕನನ್ನು ಎಬ್ಬಿಸಿ ‘ನಿನಗೆ ಶಿವನ ಕೃಪೆ ಆಗಿದೆ. ನೀನು ದುರ್ಗದ ದೊರೆಯಾಗುತ್ತೀಯ’ ಎಂದು ಹರಸಿ ಮುನ್ನಡೆದರು. ಆ ಯುವಕನೇ ಮುಂದೆ ಬಿಚ್ಚುಗತ್ತಿ ಭರಮಣ್ಣನಾಯಕನಾಗಿ ಚಿತ್ರದುರ್ಗದಲ್ಲಿ ಆಳ್ವಿಕೆ ಆರಂಭಿಸಿದ’ ಎಂದು ಕೃತಿ ಹೇಳುತ್ತದೆ.

ಭರಮಣ್ಣನಾಯಕನ ಒತ್ತಾಸೆಯ ಮೇರೆಗೆ ಲೋಕಸಂಚಾರಿಯಾಗಿದ್ದ ಮುರಿಗಿ ಶಾಂತವೀರ ದೇಶಿಕರು ಚಿತ್ರದುರ್ಗದಲ್ಲಿ ನೆಲೆ ನಿಂತರು. ಕಲ್ಲಿನಕೋಟೆಯ ಅರಮನೆ ಸಮೀಪದಲ್ಲೇ ಮಠವನ್ನು ನಿರ್ಮಿಸಲಾಯಿತು. ಈ ಕಲ್ಲಿನ ಮಠವನ್ನು ಕೋಟೆಯಲ್ಲಿ ಇಂದಿಗೂ ಕಾಣಬಹುದಾಗಿದೆ. ವರ್ಷಕ್ಕೊಮ್ಮೆ ರಾಜವಂಶಸ್ಥರು ಮುರುಘಾ ಮಠದ ಪೀಠಾಧಿಪತಿಗೆ ಭಕ್ತಿ ಸಮರ್ಪಿಸುವ ಪರಂಪರೆ ಈಗಲೂ ಬೆಳೆದುಬಂದಿದೆ.

ಮುರುಘಾ ಮಠದ ಪೀಠಾಧಿಪತಿಗಳು

1. ಮುರಿಗಿ ಶಾಂತವೀರ ದೇಶಿಕರು

2. ಗುರುಸಿದ್ಧ ಸ್ವಾಮೀಜಿ (ಇಮ್ಮಡಿ ಮುರಿಗಿ ಸ್ವಾಮೀಜಿ)

3. ಸ್ವಾದಿ ಚನ್ನಬಸವ ಸ್ವಾಮೀಜಿ

4. ಶಿರಹಟ್ಟಿ ಸಿದ್ಧಲಿಂಗ ಸ್ವಾಮೀಜಿ

5. ದೊಡ್ಡ ಗುರುಪಾದ ಸ್ವಾಮೀಜಿ

6. ಮೂರು ಸಾವಿರದ ಗುರುಪಾದ ಸ್ವಾಮೀಜಿ

7. ಮೂರು ಸಾವಿರದ ಸಿದ್ಧಲಿಂಗ ಸ್ವಾಮೀಜಿ

8. ಒಪ್ಪೊತ್ತಿನ ಚೆನ್ನವೀರ ಸ್ವಾಮೀಜಿ

9. ವ್ಯಾಕರಣ ಸಿದ್ಧಲಿಂಗ ಸ್ವಾಮೀಜಿ

10. ನೈಘಂಟಿನ ಸಿದ್ಧಬಸವ ಸ್ವಾಮೀಜಿ

11. ಸಣ್ಣ ಬರಹದ ರಾಚವಟ್ಟಿ ಸ್ವಾಮೀಜಿ

12. ಸಾವಳಿಗೆ ಗುರುಶಾಂತ ಸ್ವಾಮೀಜಿ

13. ಸಣ್ಣಪಾದದ ಚನ್ನವೀರ ಸ್ವಾಮೀಜಿ

14. ಶಿರಸಂಗಿ ಮಹಾಲಿಂಗ ಸ್ವಾಮೀಜಿ

15. ಹೆಬ್ಬಾಳು ರುದ್ರಸ್ವಾಮೀಜಿ

16. ಬ್ಯಾಡಗಿ ಮುಪ್ಪಿನ ಸ್ವಾಮೀಜಿ

17. ಜಯದೇವ ಸ್ವಾಮೀಜಿ

18. ಜಯವಿಭವ ಸ್ವಾಮೀಜಿ

19. ಮಲ್ಲಿಕಾರ್ಜುನ ಸ್ವಾಮೀಜಿ

20. ಡಾ.ಶಿವಮೂರ್ತಿ ಮುರುಘಾ ಶರಣರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT