ಗುರುವಾರ , ಜೂನ್ 17, 2021
22 °C
ಜಿಲ್ಲಾ ಮಟ್ಟದ ಬೇಡ ಜಂಗಮ ಸಮಾವೇಶ, ಪ್ರತಿಭಾ ಪುರಸ್ಕಾರ

ಬೇಡ ಜಂಗಮ ಅಭಿವೃದ್ಧಿಗೆ ಪ್ರತ್ಯೇಕ ನಿಗಮ: ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹಿರಿಯೂರು: ‘ಪ್ರಾಚೀನ ಪರಂಪರೆ ಹೊಂದಿರುವ ಬೇಡ ಜಂಗಮ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ–ಮಂಡಳಿಯ ಅಗತ್ಯವಿದ್ದು, ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಅದನ್ನು ಈಡೇರಿಸುತ್ತೇವೆ’ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಭರವಸೆ ನೀಡಿದರು.

ನಗರದಲ್ಲಿ ಭಾನುವಾರ ಜಿಲ್ಲಾ ಮತ್ತು ತಾಲ್ಲೂಕು ಬೇಡ ಜಂಗಮ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಬೇಡ ಜಂಗಮ ಸಮಾವೇಶ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

’ಚಿತ್ರದುರ್ಗದಲ್ಲಿ ಜಂಗಮ ಸಮುದಾಯ ಭವನ ನಿರ್ಮಿಸಲು ಶಾಸಕರ ಅನುದಾನದಲ್ಲಿ ₹ 10 ಲಕ್ಷ ಅನುದಾನ ನೀಡುತ್ತೇನೆ. ಸಮುದಾಯದವರು ಜಂಗಮ ವೃತ್ತಿಯ ಜತೆಗೆ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು’ ಎಂದು ಸಲಹೆ ನೀಡಿದರು.

ಸಮುದಾಯದ ಮಹಿಳಾ ಘಟಕ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ಎನ್. ಚಂದ್ರಪ್ಪ ಮಾತನಾಡಿ, ‘ಜಂಗಮ ಸಮಾಜವು ಅನಾದಿ ಕಾಲದಿಂದ ದಲಿತ, ಹಿಂದುಳಿದ, ಕೆಳಹಂತದ ಸಮುದಾಯದವರಿಗೆ ಆಶೀರ್ವಚನ ನೀಡುತ್ತ, ಮಾರ್ಗದರ್ಶನ ಮಾಡುತ್ತ ಬಂದಿದ್ದು, ಈ ಪರಂಪರೆ ಮುಂದುವರಿಯಬೇಕು. ಸಮುದಾಯದವರು ಜಾಗ ಪಡೆದರೆ ಸಮುದಾಯ ಭವನ ನಿರ್ಮಾಣಕ್ಕೆ ಸಂಸದರ ಅನುದಾನದಲ್ಲಿ ₹10 ಲಕ್ಷ ನೀಡುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವರ ಜತೆ ಭದ್ರಾ ಮೇಲ್ದಂಡೆ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿದ್ದು, ಬರುವ ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ’ ಎಂದು ಹೇಳಿದರು.

ಕುಪ್ಪೂರು ಗದ್ದಿಗೆ ಮಠದ ಡಾ. ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಂದುಳಿದಿರುವ ಜಂಗಮ ಸಮಾಜದ ಅಭಿವೃದ್ಧಿಗೆ ಸರ್ಕಾರದ ನೆರವು ಪಡೆಯಲು ಜಂಗಮರು ಸಂಘಟಿತರಾಗಬೇಕು ಎಂದರು.

ವೇಣುಕಲ್ಲುಗುಡ್ಡದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿಯ ಕೇದಾರಲಿಂಗ ಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಸೋಮಶೇಖರ ಮಂಡಿಮಠ, ಎಚ್.ಎಂ. ಬಸವರಾಜ್, ಮಲ್ಲಿಕಾರ್ಜುನಸ್ವಾಮಿ, ಷಡಾಕ್ಷರಯ್ಯ, ಕೆ.ಎಂ. ವಿಶ್ವನಾಥ್, ಕೆ.ಎಂ. ವೀರೇಶ್, ವಿಶ್ವನಾಥಸ್ವಾಮಿ, ಸಿ.ಎಂ. ಸ್ವಾಮಿ, ಸೌಭಾಗ್ಯವತಿದೇವರು, ಉಮೇಶ್ ಗುಡಾಣಮಠ್, ಕೆ.ಎಂ. ತಿಪ್ಪೇಸ್ವಾಮಿ, ಮಮತಾ ಭುವನೇಶ್, ಸಹನಾ ಸ್ವಾಮಿ, ಎಚ್.ಟಿ. ಚಂದ್ರಶೇಖರಯ್ಯ ಇದ್ದರು.

ಸಮಾರಂಭಕ್ಕೂ ಮೊದಲು ತೇರುಮಲ್ಲೇಶ್ವರ ದೇಗುಲದಿಂದ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ನಡೆಯಿತು.

ರಾಮಯ್ಯ, ಟಿ.ಚಂದ್ರಶೇಖರ್, ರಾಜೇಶ್ವರಿ, ಪ್ರೇಮ್‌ಕುಮಾರ್, ನಟರಾಜ್, ಚಿರಂಜೀವಿ, ಡಿಷ್ ಮಂಜು, ಶ್ರೀದೇವಿ, ವನಿತಾ, ಮಂಜುಳ, ಮುರಳಿ, ವೆಂಕಟೇಶ್, ಕೇಶವಮೂರ್ತಿ, ಗಂಗಾಧರ್, ವೀರೇಂದ್ರಪಾಟೀಲ್, ಎಂ. ಜಗದೀಶ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು