ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗೀರಥ ಶ್ರೀ ಪಟ್ಟಾಧಿಕಾರ ರಜತ ಮಹೋತ್ಸವ: ಸಕಲ ಸಿದ್ಧತೆ

Published 8 ಫೆಬ್ರುವರಿ 2024, 14:53 IST
Last Updated 8 ಫೆಬ್ರುವರಿ 2024, 14:53 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಬ್ರಹ್ಮವಿದ್ಯಾನಗರದ ಭಗೀರಥ ಗುರುಪೀಠದ ಪೀಠಾಧ್ಯಕ್ಷ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರ ಪಟ್ಟಾಧಿಕಾರ ರಜತ ಮಹೋತ್ಸವಕ್ಕೆ ಸಿದ್ಧತೆಗಳು ಬಿರುಸಿನಿಂದ ಸಾಗಿವೆ.

ಪ್ರಕೃತಿ ಮಡಿಲಿನಲ್ಲಿರುವ ಭಗೀರಥ ಪೀಠ ಸುತ್ತಲೂ ಗುಡ್ಡಗಳಿಂದ ರಕ್ಷಣೆ ಪಡೆದಿದೆ. ಮಹೋತ್ಸವಕ್ಕೆ ಶ್ರೀಮಠ ಮದುವಣಗಿತ್ತಿಯಂತೆ ಅಲಂಕೃತಗೊಂಡಿದೆ. 

ಹೊಸದುರ್ಗದಿಂದ ಮಧುರೆ ಸೇರಿದಂತೆ ಹಲವೆಡೆ ಮಹೋತ್ಸವದ ಅಂಗವಾಗಿ ಬ್ಯಾನರ್‌ಗಳು ರಾರಾಜಿಸುತ್ತಿವೆ. ಗಣ್ಯರನ್ನು ಹಾಗೂ ಮಠದ ಭಕ್ತರನ್ನು ಸ್ವಾಗತಿಸಲು ಮಧುರೆಯಿಂದ ಬ್ರಹ್ಮ ವಿದ್ಯಾನಗರದವರೆಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಕೇಸರಿ ಬಣ್ಣದ ವಸ್ತ್ರಗಳಿಂದ ಮಠವನ್ನು ಅಲಂಕರಿಸಲಾಗಿದೆ.

ಭಗೀರಥ ದೇವಾಲಯ, ಆಂಜನೇಯ ಸೇರಿದಂತೆ ಮಠದ ಆವರಣದಲ್ಲಿನ ಎಲ್ಲಾ ದೇವಾಲಯಗಳಿಗೆ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಬೃಹತ್ ವೇದಿಕೆ ಸಿದ್ಧವಾಗುತ್ತಿದ್ದು, ವೇದಿಕೆಗೆ ‘ಸಗರ ಚಕ್ರವರ್ತಿ ಮಹಾಮಂಟಪ’ ಎಂದು ಹೆಸರಿಡಲಾಗಿದೆ. ಬರುವ ಜನರಿಗೆ ಮೂರು ದಿನಗಳ ಕಾಲ ನಿರಂತರ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ. ಶುಕ್ರವಾರದ ಊಟಕ್ಕೆ ಲಡ್ಡು ತಯಾರಿಸಲಾಗಿದೆ.

30,000 ಜನರು ಸೇರುವ ನಿರೀಕ್ಷೆ:

ರಜತ ಮಹೋತ್ಸವ ಕಾರ್ಯಕ್ರಮಕ್ಕೆ ವಿವಿಧೆಡೆಯ ಭಕ್ತರು ಭಾಗವಹಿಸಲಿದ್ದು, 30,000 ಜನರು ಭಾಗವಹಿಸುವ ನಿರೀಕ್ಷೆಯಿದೆ. ಈಗಾಗಲೇ ಐದು ಸಾವಿರ ಜನ ಬಂದಿದ್ದು, ಅವರಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಮಠದ ಸುರೇಶ್‌ ವಿವರಿಸಿದರು.

‘2000ರ ಫೆ.10ರಂದು ಬ್ರಹ್ಮವಿದ್ಯಾನಗರದ ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನದ ಭಗೀರಥ ಗುರುಪೀಠಕ್ಕೆ 13ನೇ ಜಗದ್ಗುರುಗಳಾಗಿ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಪಟ್ಟಾಭಿಷೇಕವಾಗಿದೆ. ಲೇಪಾಕ್ಷಿ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ನಡೆದು, ಕೃಷಿ, ಧಾರ್ಮಿಕ, ಆಧ್ಯಾತ್ಮಿಕ, ಶಿಕ್ಷಣದ ಸಮಾಜದ ಅಭಿವೃದ್ಧಿಗೆ ಸ್ವಾಮೀಜಿ ಶ್ರಮಿಸಿದ್ದಾರೆ. ಕೃಷಿ ಕಾಯಕದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು, ತೆಂಗು, ದಾಳಿಂಬೆ ಕೃಷಿ ಜೊತೆಯಲ್ಲಿ ಸಿರಿಧಾನ್ಯ ಬೆಳೆಗಳನ್ನು ಬೆಳೆದು, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಪುರುಷೋತ್ತಮಾನಂದ ಪುರಿ ಸ್ವಾಮೀಜಿ ನಾಡಿನ ಎಲ್ಲಾ ಮಠಾಧೀಶರೊಂದಿಗೆ ಉತ್ತಮ ಸಂಬಂಧ ಹೊಂದಿದ್ದು, ಸಾಮರಸ್ಯ ಕಾಪಾಡುವಲ್ಲಿ ನಿಪುಣರಾಗಿದ್ದಾರೆ. ಅವರ ಪಟ್ಟಾಧಿಕಾರ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ’ ಎಂದು ಅವರು ತಿಳಿಸಿದರು.

ಹೊಸದುರ್ಗ ತಾಲ್ಲೂಕಿನ ಬ್ರಹ್ಮವಿದ್ಯಾನಗರದ ಭಗೀರಥ ಗುರುಪೀಠ
ಹೊಸದುರ್ಗ ತಾಲ್ಲೂಕಿನ ಬ್ರಹ್ಮವಿದ್ಯಾನಗರದ ಭಗೀರಥ ಗುರುಪೀಠ
ಮಹೋತ್ಸವಕ್ಕೆ ಸಿದ್ಧಗೊಂಡಿರುವ ಬೃಹತ್ ವೇದಿಕೆ
ಮಹೋತ್ಸವಕ್ಕೆ ಸಿದ್ಧಗೊಂಡಿರುವ ಬೃಹತ್ ವೇದಿಕೆ
ಪುರುಷೋತ್ತಮಾನಂದ ಪುರಿ ಸ್ವಾಮೀಜಿ
ಪುರುಷೋತ್ತಮಾನಂದ ಪುರಿ ಸ್ವಾಮೀಜಿ

ಮೀಸಲಾತಿಗೆ ಒತ್ತಾಯ

ಶ್ರೀಮಠದ ಆವರಣದಲ್ಲಿ 60 ಅಡಿ ಎತ್ತರದ ಭಗೀರಥ ಏಕಶಿಲಾ ಮೂರ್ತಿ ನಿರ್ಮಾಣ ಕಲ್ಲಿನ ಭುವನೇಶ್ವರಿ ದೇವಿ ರಥ ನಿರ್ಮಾಣ ಉತ್ತರ ಭಾರತದ ಗಂಗಾನದಿ ದಡದಲ್ಲಿ ಭಗೀರಥ ಮೂರ್ತಿ ನಿರ್ಮಾಣದ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಉಪ್ಪಾರ ಕುಲಶಾಸ್ತ್ರೀಯ ಅಧ್ಯಯನದ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಮಹೋತ್ಸವದಲ್ಲಿ ಮೀಸಲಾತಿಗಾಗಿ ಒತ್ತಾಯಿಸಲಾಗುವುದು ಎಂದು ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT